ಬಿಬಿಎಂಪಿಯಲ್ಲೂ ‘ಆಪರೇಷನ್‌ ಕಮಲ’ದ ಸದ್ದು

7
ಮೈತ್ರಿ ಉಳಿಸಿಕೊಳ್ಳಲು ಕಾಂಗ್ರೆಸ್‌ ಪ್ರತಿತಂತ್ರ

ಬಿಬಿಎಂಪಿಯಲ್ಲೂ ‘ಆಪರೇಷನ್‌ ಕಮಲ’ದ ಸದ್ದು

Published:
Updated:

ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಶತ ಪ್ರಯತ್ನ ಹಾಕುತ್ತಿದೆ ಎಂಬ ಆಪಾದನೆಗಳ ಮಧ್ಯೆಯೇ, ಬಿಬಿಎಂಪಿ ಚುಕ್ಕಾಣಿ ಹಿಡಿಯಲು ‘ಆಪರೇಷನ್‌ ಕಮಲ’ದ ಯತ್ನವೂ ಆರಂಭವೂ ಆಗಿದೆ.

ಇದನ್ನು ಮಣಿಸಲು ಮುಂದಾಗಿರುವ ಕಾಂಗ್ರೆಸ್‌, ಎಲ್ಲ ಏಳು ಮಂದಿ ಪಕ್ಷೇತರರಿಗೆ ಹಾಗೂ ಎಸ್‌ಡಿಪಿಐ ಸದಸ್ಯನಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳ ಆಮಿಷ ಒಡ್ಡುವ ಮೂಲಕ ಪಾಲಿಕೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಪ್ರತಿತಂತ್ರ ರೂಪಿಸಿದೆ.

2019ರಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಪಾಲಿಕೆಯಲ್ಲಿ ಅಧಿಕಾರ ಹಿಡಿದರೆ ಪಕ್ಷಕ್ಕೆ ಅನುಕೂಲವಾಲಿದೆ ಎಂಬ ಕಾರಣಕ್ಕೆ ಪಕ್ಷೇತರ ಸದಸ್ಯರನ್ನು ಸೆಳೆಯಲು ಬಿಜೆಪಿ ಮುಂದಡಿ ಇಟ್ಟಿದೆ. ಇದರ ಭಾಗವಾಗಿ ಶಾಸಕ ಆರ್‌.ಅಶೋಕ ಹಾಗೂ ಪಾಲಿಕೆಯ ವಿರೋಧಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಪಕ್ಷೇತರ ಸದಸ್ಯರ ಜೊತೆ ಶುಕ್ರವಾರ ಗುಟ್ಟಾಗಿ ಸಭೆ ನಡೆಸಿದ್ದರು.

‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಿದ್ದು ಹೋಗಲಿದೆ. ಹಾಗಾಗಿ ನಮ್ಮ ಜತೆ ಬಂದರೆ ಒಳಿತಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಉಪಮೇಯರ್‌ ಸ್ಥಾನ ಹಾಗೂ ಕೆಲವು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಬಗ್ಗೆಯೂ ಭರವಸೆ ನೀಡಿದ್ದರು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಕ್ಷೇತರ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್‌ ಮುಖಂಡರು ಪಕ್ಷೇತರರನ್ನು ತಮ್ಮ ಜತೆಯೇ ಉಳಿಸಿಕೊಳ್ಳಲು ಕಸರತ್ತು ನಡೆಸಿದರು. ಪಕ್ಷೇತರ ಸದಸ್ಯರ ಜೊತೆ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ (ಕೆಪಿಸಿಸಿ) ದಿನೇಶ್‌ ಗುಂಡೂರಾವ್‌ ಶನಿವಾರ ಸಭೆ ನಡೆಸಿದರು. ಸಚಿವ ಕೆ.ಜೆ.ಜಾರ್ಜ್‌, ಶಾಸಕರಾದ ರಾಮಲಿಂಗಾ ರೆಡ್ಡಿ, ಎನ್‌.ಎ.ಹ್ಯಾರಿಸ್‌, ಪಾಲಿಕೆ ಆಡಳಿತ ಪಕ್ಷದ ಅಧ್ಯಕ್ಷ ಎಂ.ಶಿವರಾಜ್‌, ಸದಸ್ಯ ಆರ್‌.ಎಸ್‌.ಸತ್ಯನಾರಾಯಣ ಅವರೂ ಪಕ್ಷೇತರ ಸದಸ್ಯರ ಮನವೊಲಿಸುವ ಪ್ರಯತ್ನ ನಡೆಸಿದರು.

‘ಇತ್ತೀಚಿನ ವರ್ಷಗಳಲ್ಲಿ ಸರ್ಕಾರದಿಂದ ಬರುವ ಅನುದಾನ ಬಳಕೆಗೆ ಸಂಬಂಧ ಸ್ಥಾಯಿ ಸಮಿತಿಗಳ ಅಧಿಕಾರಕ್ಕೆ ಕತ್ತರಿ ಹಾಕಲಾಗಿತ್ತು. ಈ ಬಗ್ಗೆ ಪಕ್ಷೇತರ ಸದಸ್ಯರು ಸಭೆಯಲ್ಲಿ ಒಕ್ಕೊರಲಿನಿಂದ ಅಸಮಾಧಾನ ವ್ಯಕ್ತಪಡಿಸಿದರು. ಅವರ ಸಿಟ್ಟನ್ನು ಶಮನಗೊಳಿಸಲು ಮುಂದಾದ ಕಾಂಗ್ರೆಸ್‌ ಸದಸ್ಯರು, ಮೊಟಕುಗೊಂಡ ಅಧಿಕಾರಗಳನ್ನು ಮತ್ತೆ ಕೊಡಿಸುವ ಭರವಸೆಯನ್ನೂ ನೀಡಿದರು’ ಎಂದು ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

‘ರಾಜ್ಯ ಸರ್ಕಾರವನ್ನು ಉರುಳಿಸುವ ಪ್ರಯತ್ನಗಳು ಈಡೇರುವುದು ಕನಸಿನ ಮಾತು. ಹಾಗಾಗಿ ಬಿಜೆಪಿಯವರ ಮಾತು ನಂಬಿ ಅವರ ಹಿಂದೆ ಹೋದರೆ ಪಶ್ಚಾತ್ತಾಪ ಪಡಬೇಕಾದೀತು. ಒಂದು ವೇಳೆ ಪಾಲಿಕೆಯ ಒಂದಷ್ಟು ಮಂದಿ ಪಕ್ಷೇತರ ಸದಸ್ಯರು ಬಿಜೆಪಿ ಜೊತೆ ಹೋದರೂ, ಅಧಿಕಾರ ಹಿಡಿಯಲು ಅಗತ್ಯವಿರುವಷ್ಟು ಸಂಖ್ಯಾಬಲ ಅವರಿಗೆ ಸಿಗುವುದಿಲ್ಲ. ಹಾಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗುವ ಅವಕಾಶ ಕಳೆದುಕೊಳ್ಳಬೇಡಿ’ ಎಂದೂ ಕಾಂಗ್ರೆಸ್‌ ಪ್ರಮುಖರು ಕಿವಿಮಾತು ಹೇಳಿದರು’ ಎಂದು ಅವರು ಹೇಳಿದರು.

‘ಬಿಜೆಪಿ ಮುಖಂಡರು ಕರೆದ ಸಭೆಗೆ ನಾನಂತೂ ಹೋಗಿಲ್ಲ. ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಯನ್ನೇ ಬೆಂಬಲಿಸಲು ನಿರ್ಧರಿಸಿದ್ದೇನೆ. ಬಹುತೇಕ ಎಲ್ಲ ಪಕ್ಷೇತರ ಸದಸ್ಯರೂ ಇದೇ ನಿಲುವನ್ನು ಹೊಂದಿದ್ದಾರೆ’ ಎಂದು ಕೆಂಪಾಪುರ ಅಗ್ರಹಾರ ವಾರ್ಡ್‌ನ ಸದಸ್ಯೆ ಎಂ.ಗಾಯತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷೇತರ ಸದಸ್ಯರೆಲ್ಲರೂ ಒಂದೇ ಅಭಿಪ್ರಾಯ ಹೊಂದಿದ್ದೇವೆ. ಸ್ಥಾಯಿ ಸಮಿತಿ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ವಿಚಾರದಲ್ಲಿ ಆಗಿರುವ ತಪ್ಪನ್ನು ಸರಿಪಡಿಸಲು ಕಾಂಗ್ರೆಸ್‌ ಮುಖಂಡರು ಒಪ್ಪಿದ್ದಾರೆ. ಹಾಗಾಗಿ ನಾವು ಈ ಬಾರಿಯೂ ಮೈತ್ರಿಕೂಟವನ್ನು ಬೆಂಬಲಿಸಲಿದ್ದೇವೆ’ ಎಂದು ದೊಮ್ಮಲೂರು ವಾರ್ಡ್‌ನ ಪಕ್ಷೇತರ ಸದಸ್ಯ ಸಿ.ಆರ್‌.ಲಕ್ಷ್ಮೀನಾರಾಯಣ ತಿಳಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಪಾಲಿಕೆಯ ಎಲ್ಲ ಪಕ್ಷೇತರ ಸದಸ್ಯರು, ಎಸ್‌ಡಿಪಿಐ ಸದಸ್ಯ ಮತ ಚಲಾಯಿಸಿದರೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಕೂಟಕ್ಕೆ (ಸಂಸದರು ಹಾಗೂ ಶಾಸಕರ ಮತಗಳನ್ನು ಸೇರಿಸಿ) ಒಟ್ಟು 135 ಮತಗಳು ಲಭಿಸಲಿವೆ. ಬಿಜೆಪಿ 123 ಮತಗಳನ್ನು ಹೊಂದಿದ್ದು, ಮ್ಯಾಜಿಕ್‌ ಸಂಖ್ಯೆ ತಲುಪಲು ಏಳು ಮತಗಳ ಕೊರತೆ ಎದುರಿಸುತ್ತಿದೆ.

ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಹಾಗೂ ಬಿಜೆಪಿ ಶತಾಯಗತಾಯ ಪ್ರಯತ್ನ ಮುಂದುವರಿಸಿವೆ. ಮತದಾನದ ವೇಳೆ ಕೆಲವು ಸದಸ್ಯರು ಗೈರಾದರೆ ಸಂಖ್ಯಾಬಲದಲ್ಲಿ ಏರುಪೇರಾಗಲಿದೆ. ಹಾಗಾಗಿ, ಗೆಲುವು ಯಾರಿಗೆ ಎಂಬುದು ಇನ್ನೂ ನಿಗೂಢ. ಇದೇ 28 ರಂದು ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಗಳಿಗೆ ಮತದಾನ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !