ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗೀಕರಣವಾದರೆ ಯಾರಿಗೂ ಮೀಸಲಾತಿ ಇರಲ್ಲ- ಡಾ. ಎಲ್. ಹನುಮಂತಯ್ಯ

ಉದ್ಯೋಗಿಗಳು ಗುಲಾಮರಾಗಲಿದ್ದಾರೆ
Last Updated 1 ಮಾರ್ಚ್ 2021, 21:12 IST
ಅಕ್ಷರ ಗಾತ್ರ

ಬೆಂಗಳೂರು: ’ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಕೊಡಲಾಗುತ್ತಿದೆ. ಈಗ ಎಲ್ಲ ವರ್ಗದವರು ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಖಾಸಗೀಕರಣವಾದರೆ ಯಾವ ವರ್ಗದವರಿಗೂ ಮೀಸಲಾತಿ ಸೌಲಭ್ಯ ಇರುವುದಿಲ್ಲ' ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಹೇಳಿದರು.

ಖಾಸಗೀಕರಣ ವಿರೋಧಿ ವೇದಿಕೆಯು ಸಾರ್ವಜನಿಕ ರಂಗ ಮತ್ತು ಅಭಿವೃದ್ಧಿ ಕುರಿತು ಸೋಮವಾರ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಕೊಟ್ಟು, ಗುತ್ತಿಗೆ ಕಾರ್ಮಿಕ ಪದ್ಧತಿ ತರುತ್ತಾರೆ. ಆಗ ಕಾರ್ಮಿಕರು ಗುಲಾಮರಂತಾಗಲಿದ್ದಾರೆ’ ಎಂದರು.

‘ಆತ್ಮವಿಶ್ವಾಸದಿಂದ ದೇಶ ಕಟ್ಟಿ ‌ಎಂದು ಪ್ರಧಾನಿ ಹೇಳುತ್ತಾರೆ. ಮತ್ತೊಂದೆಡೆ ಲಾಭದಲ್ಲಿರುವ ಸರ್ಕಾರಿ ಸಂಸ್ಥೆಗಳನ್ನು ಮಾರುವ ಮೂಲಕ ತದ್ವಿರುದ್ಧ ನೀತಿ ಅನುಸರಿಸುತ್ತಿದ್ದಾರೆ’ ಎಂದು ಟೀಕಿಸಿದರು.

'ಅನುಕಂಪದ ಆಧಾರದಲ್ಲಿ ಉದ್ಯೋಗ ಕೊಡುವಂತಹ ಸೌಲಭ್ಯವಾಗಲಿ, ಉದ್ಯೋಗ ಭದ್ರತೆಯಾಗಲಿ ಇರುವುದಿಲ್ಲ. ಕಾರ್ಮಿಕರು ಅಥವಾ ಉದ್ಯೋಗಿಗಳು ನಿಧನರಾದರೆ ಅವರ ಕುಟುಂಬ ಬೀದಿಗೆ ಬೀಳಲಿದೆ. ಖಾಸಗೀಕರಣದ ವಿರುದ್ಧ ಕಾರ್ಮಿಕರಲ್ಲದೆ, ಅವರ ಕುಟುಂಬದವರೂ ಹೋರಾಟಕ್ಕೆ ಧುಮುಕಬೇಕು' ಎಂದರು.

‘ಜವಹರಲಾಲ್ ನೆಹರೂ ದೂರದೃಷ್ಟಿಯ ಫಲವಾಗಿ ಸಾರ್ವಜನಿಕ ಉದ್ದಿಮೆಗಳನ್ನು (ಪಿಎಸ್‌ಯು) ಸ್ಥಾಪಿಸಲಾಯಿತು. ಇವುಗಳ ಉದ್ದೇಶ ಲಾಭ ಮಾಡುವುದಲ್ಲ, ನಮ್ಮ ದೇಶದ ಜನರಿಗೆ ಉದ್ಯೋಗ ಕಲ್ಪಿಸುವುದಾಗಿತ್ತು ಎಂಬುದನ್ನು ಗಮನಿಸಬೇಕು’ ಎಂದರು.

'ಬ್ಯಾಂಕುಗಳ ವ್ಯವಹಾರ ಶ್ರೀಮಂತರಿಗೆ ಮಾತ್ರ ಎಂಬಂತಿತ್ತು. ಇಂದಿರಾಗಾಂಧಿಯವರ ಕಾಲದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದಾಗ ಬಡವರು, ರೈತರು ಕೂಡ ಬ್ಯಾಂಕ್ ಖಾತೆ ತೆರೆದು ವ್ಯವಹರಿಸಲು ಸಾಧ್ಯವಾಯಿತು‌. ಆದರೆ ಈಗ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಬ್ಯಾಂಕ್‌ಗಳನ್ನೂ ಖಾಸಗೀಕರಣ ಮಾಡಲಾಗುತ್ತಿದೆ’ ಎಂದು ದೂರಿದರು.

ವೇದಿಕೆಯ ಉಪಸಂಚಾಲಕ ಮೀನಾಕ್ಷಿ ಸುಂದರಂ, ‘ಸಾರ್ವಜನಿಕ ವಲಯದ ಯಾವುದೇ ಸಂಸ್ಥೆಯು ಶೇ 9ಕ್ಕಿಂತ ಹೆಚ್ಚು ಲಾಭ ಗಳಿಸಬಾರದು ಎಂದು ಸರ್ಕಾರವೇ ನಿರ್ಬಂಧ ಹಾಕುತ್ತದೆ. ಬಿಇಎಲ್‌, ಬಿಇಎಂಲ್‌, ಎಚ್‌ಎಎಲ್‌ನಂತಹ ಸಂಸ್ಥೆಗಳು ಲಾಭಾಂಶ ಮತ್ತು ತೆರಿಗೆಯ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ ₹2,100 ಕೋಟಿ ನೀಡುತ್ತಿವೆ. ಇಂತಹ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಸರ್ಕಾರ ದೇಶದ್ರೋಹ ಎಸಗುತ್ತಿದೆ. ಆದರೆ, ಇದನ್ನೇ ದೇಶಭಕ್ತಿ ಎಂದು ಬಿಂಬಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಾರ್ವಜನಿಕ ಉದ್ಯಮಗಳೇ ಉನ್ನತ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ಬಿಇಎಂಎಲ್‌ ಚಾಲಕ ರಹಿತ ಮೆಟ್ರೊ ರೈಲು ಬೋಗಿಗಳನ್ನು ಅಭಿವೃದ್ಧಿ ಪಡಿಸಿದೆ. ಈಗ ಇದರ ವೆಚ್ಚ ಒಂದು ಬೋಗಿಗೆ ₹1 ಕೋಟಿಯಷ್ಟು ಕಡಿಮೆಯಾಗಿದೆ. ಆದರೆ, ಪಿಎಸ್‌ಯುಗಳಲ್ಲಿ ಕೆಲಸ ಮಾಡುವವರು ಕೌಶಲ ಹೊಂದಿರುವುದಿಲ್ಲ ಎನ್ನುವ ಮೂಲಕ ಅವರಿಗೆ ಅವಮಾನ ಮಾಡಲಾಗುತ್ತಿದೆ’ ಎಂದರು.

ಚಲನಚಿತ್ರ ನಿರ್ದೇಶಕ ಬಿ.ಸುರೇಶ್, ‘ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ಇಂತಹ ಸುಳ್ಳುಗಾರ ಮೋದಿ ಬಗ್ಗೆ ಜನರಲ್ಲಿ ಮಾತ್ರವಲ್ಲದೆ, ಮಕ್ಕಳಲ್ಲಿಯೂ ಜಾಗೃತಿ ಮೂಡಿಸಬೇಕಾಗಿದೆ’ ಎಂದರು.

ರೈತ ಮುಖಂಡರಾದ ಜಿ.ಸಿ. ಬಯ್ಯಾರೆಡ್ಡಿ, ಬಡಗಲಪುರ ನಾಗೇಂದ್ರ, ಕಾರ್ಮಿಕ ಮುಖಂಡರಾದ ಆರ್.ಎಚ್. ಲಕ್ಷ್ಮೀಪತಿ, ಕರ್ನಾಟಕ ರಣಧೀರ ಪಡೆಯ ಬೈರಪ್ಪ ಹರೀಶ್‌ಕುಮಾರ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT