ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿ.ವಿ ಜಾಗ ಹಸ್ತಾಂತರಕ್ಕೆ ವಿರೋಧ

ಯಾವುದೇ ಸಂಸ್ಥೆಗಳಿಗೆ ನೀಡುವುದು ಬೇಡ: ಸಂಘಟನೆಗಳ ಒತ್ತಾಯ
Last Updated 17 ಆಗಸ್ಟ್ 2022, 21:38 IST
ಅಕ್ಷರ ಗಾತ್ರ

ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯದ ಜಾಗವನ್ನು ಗುತ್ತಿಗೆ ಆಧಾರದ ಮೇಲೆ ಯಾವುದೇ ಸಂಸ್ಥೆಗಳಿಗೂ ನೀಡಬಾರದು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.

ವಿಶ್ವವಿದ್ಯಾಲಯದ ಶಿಕ್ಷಕರ ಪರಿಷತ್‌, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಿಕ್ಷಕರ ಸಂಘ, ಶಿಕ್ಷಕೇತರ ನೌಕರರ ಸಂಘ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಿಕ್ಷಕೇತರ ನೌಕರ ಸಂಘಗಳ ಒಕ್ಕೂಟವು ಈ ಬಗ್ಗೆ ಕುಲಪತಿ ಅವರಿಗೆ ಮನವಿ ಸಲ್ಲಿಸಿವೆ.

ಬೆಂಗಳೂರು ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಅಡಿಯಲ್ಲಿ ಈ ಸಂಘಟನೆಗಳು ಒಕ್ಕೊರಲ ಆಗ್ರಹ ಮಾಡಿವೆ.

ಯೋಗ ವಿಜ್ಞಾನ ಅಂತರ ವಿಶ್ವ ವಿದ್ಯಾಲಯ ಕೇಂದ್ರಕ್ಕೆ 15 ಎಕರೆ, ವಾಸ್ತುಶಿಲ್ಪ ಪರಿಷತ್‌ ಮತ್ತು ಅಭಿವೃದ್ಧಿ ಪ್ರಾದೇಶಿಕ ಕೇಂದ್ರಕ್ಕೆ ಎರಡು ಎಕರೆ, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಗೆ ಒಂದು ಎಕರೆ ಪ್ರದೇಶವನ್ನು ನೀಡಲು ಉದ್ದೇಶಿಸಲಾಗಿದೆ. ವಿಶ್ವವಿದ್ಯಾಲಯ ಈ ಮನವಿಯನ್ನು ಪರಿಗಣಿಸದಿದ್ದರೆ ಹೋರಾಟ ಅನಿವಾರ್ಯಎಂದು ಸಂಘಟನೆಗಳ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸರ್ಕಾರ ಮಂಜೂರು ಮಾಡಿದ್ದ 1112 ಎಕರೆ ಜಾಗದಲ್ಲಿ ಈಗಾಗಲೇ ಬಿಎಎಸ್‌ಇಗೆ 40 ಎಕರೆ, ಕಲಾಗ್ರಾಮಕ್ಕೆ 20 ಎಕರೆ ಸೇರಿ 297 ಎಕರೆ ಜಾಗವನ್ನು ಇತರೆ ಸಂಸ್ಥೆಗಳಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿದೆ. ಮೂಲಗಳ ಪ್ರಕಾರ ಸುಮಾರು 139 ಎಕರೆ ಒತ್ತುವರಿಯಾಗಿದೆ. 307 ಎಕರೆ ಜಾಗದಲ್ಲಿ ಬಯೋ–ಪಾರ್ಕ್‌ ಇದೆ. ಇದರಿಂದ, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಳಸಲು ಉಳಿಯುವುದು ಕೇವಲ 269 ಎಕರೆ ಜಾಗ ಎಂದು ವಿವರಿಸಿದ್ದಾರೆ.

ವಿಶ್ವವಿದ್ಯಾಲಯದ ಜಾಗವನ್ನು ಯಾವುದೇ ಸಂಸ್ಥೆಗಳಿಗೆ ಮಂಜೂರು ಮಾಡಬಾರದು ಎಂದು 2017ರ ಮೇ 17ರಂದು ನಡೆದ ಸಿಂಡಿಕೇಟ್‌ ಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಜಾಗ ಪಡೆದುಕೊಂಡ ಸಂಸ್ಥೆಗಳು, ವಿಶ್ವವಿದ್ಯಾ ಲಯದ ಜತೆ ಒಡಂಬಡಿಕೆ ಮಾಡಿ ಕೊಂಡ ಸಂದರ್ಭದಲ್ಲಿ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳಿಗೆ ಮತ್ತು ನೌಕರರಿಗೆ ತಮ್ಮ ಸೌಲಭ್ಯಗಳನ್ನು ಬಳಸಲು ಅನುವು ಮಾಡಿಕೊಡುವುದಾಗಿ ತಿಳಿಸಿವೆ. ಆದರೆ, ಈ ಯಾವುದೇ ಸಂಸ್ಥೆಗಳು ತಮ್ಮ ಸೌಲಭ್ಯಗಳನ್ನು ಬಳಸಲು ವಿಶ್ವವಿದ್ಯಾಲಯಕ್ಕೆ ಅವಕಾಶ ನೀಡಿಲ್ಲ ಎಂದು ದೂರಿದ್ದಾರೆ.

ವಿಶ್ವವಿದ್ಯಾಲಯದ ಅಶೋಕ ಭವ ನದಲ್ಲಿಯೇ (ಸುಮಾರು ಒಂದು ಎಕರೆ ಜಾಗ) ನಾಲ್ಕು ದೊಡ್ಡ ವಿಭಾಗಗಳು (ಇತಿಹಾಸ ವಿಭಾಗ, ರಾಜ್ಯಶಾಸ್ತ್ರ ವಿಭಾಗ, ಗ್ರಾಮೀಣ ಅಭಿವೃದ್ಧಿ ಕೇಂದ್ರ ಮತ್ತು ಆಂಗ್ಲ ವಿಭಾಗ) ಕಾರ್ಯನಿರ್ವಹಿಸುತ್ತಿವೆ. ಈ ವಿಭಾಗಗಳಲ್ಲಿ ಒಂದು ಕೊಠಡಿಯಲ್ಲಿ ಮೂರು ಅಧ್ಯಾಪಕರು ಆಸೀನರಾಗಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಎಸ್‌–ವ್ಯಾಸ ಯೋಗ ವಿಶ್ವವಿದ್ಯಾಲಯ ಆನೇಕಲ್‌ ಬಳಿಯ 100 ಎಕರೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರು ವಿಶ್ವವಿದ್ಯಾಲ ಯದ ಯೋಗ ವಿಭಾಗವು ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ತನ್ನದೇ ಆದ ಕಟ್ಟಡವಿಲ್ಲ. ವಿಶ್ವವಿದ್ಯಾಲಯದ ಯೋಗ ವಿಭಾಗವು ಎರಡು ಕೊಠಡಿಗಳಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಜಾಗದ ಬೆಲೆ ಮಾರುಕಟ್ಟೆಯಲ್ಲಿ ಎಕರೆಗೆ ಸುಮಾರು ₹70 ಕೋಟಿಯಷ್ಟಿದೆ. 18 ಎಕರೆ ಜಾಗದ ಒಟ್ಟು ಮಾರುಕಟ್ಟೆ ಬೆಲೆ ₹1260 ಕೋಟಿ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT