ಬುಧವಾರ, ನವೆಂಬರ್ 20, 2019
27 °C
ಪ್ರತ್ಯೇಕ ಬಸ್ ಪಥಕ್ಕೆ ಹಲವು ತೊಡಕು

ಪುರದಲ್ಲಿ ಅಂಕೆಗೆ ಸಿಗದ ದಟ್ಟಣೆ

Published:
Updated:
Prajavani

ಬೆಂಗಳೂರು: ಅಂಕೆಗೆ ಸಿಗದೆ ಬೆಳೆಯುತ್ತಿರುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕೂಡ ಅಷ್ಟೇ ದೊಡ್ಡದಾಗಿ ಬೆಳೆಯುತ್ತಿದೆ. ಹೊರವರ್ತುಲ ರಸ್ತೆಯಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಿಸುವ ಯೋಜನೆಗೂ ಹಲವು ತೊಡಕುಗಳು ಕಾಡಲಾರಂಭಿಸಿವೆ.

ನಗರದಲ್ಲಿ ಅನಗತ್ಯವಾಗಿ ಟ್ರಕ್‌ಗಳು ಪ್ರವೇಶಿಸದಂತೆ ತಡೆದು ಹೊರಗಿನಿಂದ ಅವುಗಳನ್ನು ಸಾಗಹಾಕಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿದ ಹೊರವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಬಿಡಿಸಲಾರದ ಕಗ್ಗಂಟಾಗಿ ಬಿಬಿಎಂಪಿಯನ್ನು ಕಾಡುತ್ತಿದೆ.

ವರ್ತುಲ ರಸ್ತೆಯ ಮಾರತಹಳ್ಳಿ–ಸರ್ಜಾಪುರ ಭಾಗ ಸದಾ ವಾಹನಗಳಿಂದ ಗಿಜಿಗುಡಲು ಅಲ್ಲಿ ಕಿಕ್ಕಿರಿದ ಐಟಿ ಕಂಪನಿಗಳೇ ಕಾರಣ. ಈ ಪ್ರದೇಶದಲ್ಲಿ ‘ಎ’ ಶ್ರೇಣಿ ಕಚೇರಿ ಕಟ್ಟಡಗಳು ತುಂಬಿಹೋಗಿವೆ. ಐಟಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಟೆಕಿಗಳು ಇಲ್ಲಿಯೇ ನೆಲೆಸಿದ್ದಾರೆ. ಇಬ್ಬಲೂರು ಆರ್ಮಿ ಕ್ಯಾಂಪ್‌ ಕೂಡ ಇದೇ ಭಾಗದಲ್ಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಒಆರ್‌ಆರ್‌ ಅತ್ಯಂತ ಸಂಚಾರ ದಟ್ಟಣೆ ರಸ್ತೆಯಾಗಿ ಪರಿಣಮಿಸಿದೆ.

ಈ ದಟ್ಟಣೆ ಅಲ್ಲಿನ ಐಟಿ ಕಂಪನಿಗಳ ವರಮಾನಕ್ಕೂ ನಷ್ಟ ಉಂಟು ಮಾಡಿವೆ. ₹33 ಸಾವಿರ ಕೋಟಿ ವರಮಾನ ಖೋತಾ ಆಗುತ್ತಿದೆ ಎಂದು ಹೊರವರ್ತುಲ ರಸ್ತೆ ಕಂಪನಿಗಳ ಸಂಘ ಅಂದಾಜಿಸಿದೆ.

ಹೊಸ ಸಮಸ್ಯೆ: ‌ಈ ರಕ್ಕಸ ಸಂಚಾರ ಭೇದಿಸಲು ಬಿಬಿಎಂಪಿ ಮತ್ತು ಬಿಎಂಟಿಸಿ ನಡೆಸಿದ ಪ್ರತ್ಯೇಕ ಬಸ್ ಪಥದ ಯೋಜನೆ ನವೆಂಬರ್ 1ರ ಗಡುವಿನೊಳಗೆ ಪೂರ್ಣಗೊಂಡಿಲ್ಲ. ಒಂದು ಭಾಗದಲ್ಲಿ 4–5 ಕಿ.ಮೀ.ನಲ್ಲಿ ಬಿಬಿಎಂಪಿ ಅಳವಡಿಸಿದ್ದ ಕಬ್ಬಿಣದ ತಡೆ ಕಂಬಗಳು (ಬೊಲ್ಲಾರ್ಡ್) ಹೊಸ ಸಮಸ್ಯೆಗಳನ್ನು ತಂದೊಡ್ಡಿವೆ.

ಬೊಲ್ಲಾರ್ಡ್‌ಗಳಿಗೆ ವಾಹನಗಳು ಡಿಕ್ಕಿ ಹೊಡೆಯುವ ಸಂಖ್ಯೆಯೂ ಹೆಚ್ಚಾಗಿದ್ದು, ಬಿಬಿಎಂಪಿ ಅಧಿಕಾರಿಗಳಿಗೆ ಹೊಸ ತಲೆನೋವನ್ನು ತರಿಸಿದೆ. ಸದ್ಯಕ್ಕೆ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಅಳವಡಿಸಿದ ಬೊಲ್ಲಾರ್ಡ್‌ಗಳೇ ಅಪಘಾತಗಳಿಗೆ ಕಾರಣವಾಗುತ್ತಿವೆ. ರಸ್ತೆ ಮಧ್ಯದಲ್ಲಿ ಬೊಲ್ಲಾರ್ಡ್‌ಗಳನ್ನು ಅಳವಡಿಸಿದ್ದೇ ಅವೈಜ್ಞಾನಿಕ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಶಾಸಕರು ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಯೂ ಮನಸು ಮಾಡಿಲ್ಲ. ಕೇವಲ ಭರವಸೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ’ ಎಂಬುದು ಸ್ಥಳೀಯರು ಆಕ್ರೋಶ.

15 ದಿನ ಮುಂದಕ್ಕೆ: ಅನಿಲ್‌ಕುಮಾರ್

‘ಅಪಘಾತ ಹೆಚ್ಚಳ ಮತ್ತು ಮಳೆಯ ಕಾರಣದಿಂದ ನವೆಂಬರ್‌ 1ರ ಗಡುವಿನಲ್ಲಿ ಅಂದುಕೊಂಡಷ್ಟು ಕಾಮಗಾರಿ ಪೂರ್ಣಗೊಳಿಸಲು ಆಗಿಲ್ಲ. ಹೀಗಾಗಿ, ಪ್ರತ್ಯೇಕ ಬಸ್‌ ಪಥದ ಗಡುವನ್ನು 15 ದಿನ ವಿಸ್ತರಿಸಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್ ತಿಳಿಸಿದರು.

‘ರಸ್ತೆಯ ಒಂದು ಪಥಕ್ಕೆ ಬಣ್ಣ ಬಳಿಯವ ಕೆಲಸಕ್ಕೆ ಮಳೆ ಅಡ್ಡಿಯಾಗಿದೆ. ಮತ್ತೊಂದೆಡೆ, ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಹೊಸ ಸವಾಲು ಎದುರಾಗಿದೆ. ಏನು ಮಾಡಬೇಕು ಎಂಬ ಆಲೋಚನೆ ಮಾಡುತ್ತಿದ್ದೇವೆ. ಇದರ ನಡುವೆಯೂ ಪ್ರತ್ಯೇಕ ಪಥದಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ’ ಎಂದು ‘‍‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬಿಎಂಟಿಸಿ ಸಿದ್ಧ: ಶಿಖಾ

‘ಪ್ರತ್ಯೇಕ ಪಥದಲ್ಲಿ ಬಸ್‌ಗಳ ಕಾರ್ಯಾಚರಣೆಯನ್ನು ಈಗಾಗಲೇ ಆರಂಭಿಸಲಾಗಿದ್ದು, ಬಿಎಂಟಿಸಿ ಎಲ್ಲಾ ರೀತಿಯಿಂದಲೂ ಸಿದ್ಧವಾ
ಗಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಹೇಳಿದರು.

‘ಪ್ರತ್ಯೇಕ ಪಥದಲ್ಲಿ ಸಾಗುವ 15 ಬಸ್‌ಗಳ ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಈ ಪಥದಲ್ಲಿ ಬೇರೆ ಬಸ್‌ಗಳು ಬಂದರೆ ಗುರುತಿಸಿ ದಂಡ ವಿಧಿಸಲು ಇದರಿಂದ ಸಹಾಯವಾಗಲಿದೆ’ ಎಂದು ತಿಳಿಸಿದರು.

ಒಂದೇ ಪಥದಲ್ಲಿ ಬಸ್‌ಗಳು ಸಂಚರಿಸುವಂತೆ ನೋಡಿಕೊಳ್ಳಲು 50 ಸಂಚಾರ ನಿಯಂತ್ರಕರನ್ನೂ ಈ ಮಾರ್ಗಕ್ಕೆ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರತ್ಯೇಕ ಬಸ್‌ ಪಥಕ್ಕೆ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಗಿದೆ. ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಸದ್ಯಕ್ಕೆ ಮುಕ್ತಿ ದೊರೆಯುವ ಲಕ್ಷಣಗಳಿಲ್ಲ
–ನವೀನ್‌ಕುಮಾರ್, ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ

ಪ್ರತಿಕ್ರಿಯಿಸಿ (+)