ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: ಎಡಿಬಿಯೊಂದಿಗೆ ₹3,643 ಕೋಟಿ ಸಾಲ ಒಪ್ಪಂದ

Last Updated 19 ಆಗಸ್ಟ್ 2021, 20:50 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ' ಎರಡನೇ ಹಂತದಲ್ಲಿ ಸಿಲ್ಕ್ ಬೋರ್ಡ್ - ಕೆ.ಆರ್. ಪುರ (2ಎ ಹಂತ) ಹಾಗೂ ಕಸ್ತೂರಿ ನಗರ- ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ‌ ನಿಲ್ದಾಣ (2ಬಿ ಹಂತ) ಮೆಟ್ರೊ‌ ಮಾರ್ಗ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೊ ನಿಗಮವು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನೊಂದಿಗೆ ₹ 3,643 ಕೋಟಿ ಸಾಲ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ.‌

ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಜತ್ ಕುಮಾರ್ ಮಿಶ್ರಾ ಹಾಗೂ ಎಡಿಬಿಯ ಭಾರತ ಶಾಖೆಯ ನಿರ್ದೇಶಕ ಟಕೆಯೊ ಕೊನಿಶಿ ಒಪ್ಪಂದಕ್ಕೆ ಸಹಿ ಹಾಕಿದರು.

58.19 ಕಿ.ಮೀ. ಉದ್ದದ ಈ ಮಾರ್ಗಕ್ಕೆ ಒಟ್ಟು ₹ 14,788 ಕೋಟಿ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರವು 2021ರ ಜೂನ್‌ನಲ್ಲಿ ಈ ಯೋಜನೆಗೆ ಅನುಮೋದನೆ ನೀಡಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರವು ಈಕ್ವಿಟಿ ಮತ್ತು ಅಧೀನ ಸಾಲದ ರೂಪದಲ್ಲಿ ₹ 3,973 ಕೋಟಿಯನ್ನು ಯೋಜನೆಗೆ ನೀಡಲಿವೆ. ಇನ್ನು, ರಾಜ್ಯ ಸರ್ಕಾರವು ₹ 2,762 ಕೋಟಿ ಭೂಸ್ವಾಧೀನ ವೆಚ್ಚವನ್ನು ಭರಿಸಲಿದೆ.‌

ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಯೊಂದಿಗೂ (ಜೈಕಾ) ನಿಗಮವು ₹ 2,317 ಕೋಟಿ ಮೊತ್ತದ ಸಾಲದ ಒಪ್ಪಂದವನ್ನು ಮಾಡಿಕೊಂಡಿದೆ.‌

ಉಳಿದ ₹ 5,960 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಹಣ ಹೂಡಿಕೆ ಸಂಸ್ಥೆಗಳೊಂದಿಗೆ ಸಾಲ ಒಪ್ಪಂದದ ಮೂಲಕ ವ್ಯವಸ್ಥೆ ಮಾಡಿಕೊಳ್ಳುವ ಉದ್ದೇಶವನ್ನು ಬಿಎಂಆರ್‌ಸಿಎಲ್ ಹೊಂದಿದೆ.

ರೀಚ್ 2ಎ ಮತ್ತು 2ಬಿಯಲ್ಲಿ ಒಟ್ಟು 30 ಮೆಟ್ರೊ ನಿಲ್ದಾಣಗಳು ಬರಲಿವೆ. ಈ ಸಾಲ ಒಪ್ಪಂದದೊಂದಿಗೆ ಮಾರ್ಗ ನಿರ್ಮಾಣಕ್ಕೆ ಹಣದ ಹರಿವು ಸರಾಗವಾಗಲಿದೆ. ಗಡುವಿನೊಳಗೆ ಯೋಜನೆ ಪೂರ್ಣಗೊಳಿಸಲು ಅನುಕೂಲವಾಗಲಿದೆ. ಅಲ್ಲದೆ, ಈ ಮಾರ್ಗದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆಯೂ ತಗ್ಗಲಿದೆ ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT