ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರಕ್ಕೆ ಆರೋಪಿಗಳ ಸ್ಥಳಾಂತರ: ವಾಕ್ಸಮರ

ಪಾದರಾಯನಪುರ ಆರೋಪಿಗಳನ್ನು ಸ್ಥಳಾಂತರಿಸಿದ್ದರಲ್ಲಿ ತಪ್ಪಾಗಿಲ್ಲ: ಬೊಮ್ಮಾಯಿ
Last Updated 25 ಏಪ್ರಿಲ್ 2020, 2:41 IST
ಅಕ್ಷರ ಗಾತ್ರ

ಬೆಂಗಳೂರು: ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿದ ವಿಷಯ ಸರ್ಕಾರ ಮತ್ತು ವಿರೋಧ ಪಕ್ಷಗಳ ನಾಯಕರ ಮಧ್ಯೆ ತೀವ್ರ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ.

‘ಸ್ಥಳಾಂತರ ಮಾಡಿದ್ದರಲ್ಲಿ ಸರ್ಕಾರದಿಂದ ಯಾವುದೇ ಪ್ರಮಾದವಾಗಿಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.

ಸರ್ಕಾರದ ಬೇಜವಾಬ್ದಾರಿಯಿಂದಲೇ ಕೊರೊನಾ ಸೋಂಕು ವಿಷಯದಲ್ಲಿ ಹಸಿರು ವಲಯವಾಗಿದ್ದ ರಾಮನಗರ ಕೆಂಪು ವಲಯವಾಗುವಂತಾಗಿದೆ ಎಂದು ಜೆಡಿಎಸ್‌ ಮತ್ತು ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ.

‘ಕೊರೊನಾ ಹೋರಾಟದಲ್ಲಿ ಬೇರೆ ಬೇರೆ ಆಯಾಮಗಳು ಬರುತ್ತಿರುತ್ತವೆ. ಸಂದರ್ಭಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅಧಿಕ ಸಂಖ್ಯೆಯಲ್ಲಿ ಕೈದಿಗಳು ಇರುವಲ್ಲಿಗೆ ದೊಡ್ಡ ಸಂಖ್ಯೆಯಲ್ಲಿ ಕೈದಿಗಳನ್ನು ಸೇರಿಸಬಾರದು ಎಂಬ ಸುಪ್ರೀಂ ಕೋರ್ಟ್ ಸೂಚನೆಯಂತೆ ಪಾದರಾಯನಪುರ ಕೈದಿಗಳನ್ನು ರಾಮನಗರಕ್ಕೆ ಕರೆದೊಯ್ಯಲಾಗಿತ್ತು. ಇದೀಗ ಅವರನ್ನು ಬೆಂಗಳೂರಿನ‌ ಹಜ್ ಭವನಕ್ಕೆ ಸ್ಥಳಾಂತರಿಸಲಾಗಿದೆ. ಜೈಲು ಸಿಬ್ಬಂದಿಗೂ ಪರೀಕ್ಷೆ ಮಾಡಿ ಕ್ವಾರಂಟೈನ್ ಮಾಡುತ್ತೇವೆ. ಅಗತ್ಯವಿದ್ದರೆ ಪೊಲೀಸರಿಗೂ ಕ್ವಾರಂಟೈನ್ ಮಾಡುತ್ತೇವೆ’ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

'ಯಾರು ಸಲಹೆ ಕೊಡುತ್ತಾರೆ ಅನ್ನುವುದು ಮುಖ್ಯವಲ್ಲ. ಆಹೊತ್ತಿನ‌ ಸಂದರ್ಭದಲ್ಲಿ ಆರೋಪಿಗಳನ್ನು ಜೈಲಲ್ಲಿ ಇಡಲೇಬೇಕಿತ್ತು. ಏನೇ ಮಾಡಿದರೂ ಆಪಾದನೆ ಬಂದೇ ಬರುತ್ತದೆ. ಆರೋಪಿಗಳನ್ನು ಜೈಲಿನ ಬದಲು ಆಸ್ಪತ್ರೆಯಲ್ಲಿ ಇಡುತ್ತಿದ್ದರೂ ಟೀಕೆ ಬರುತ್ತಿತ್ತು. ಸಂದರ್ಭ, ಸಮಯ‌ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದರು.

‘ರಾಮನಗರದ ಜೈಲಿನಲ್ಲಿ ಆರೋಪಿಗಳಿಗೆ ಸೋಂಕು ಕಂಡುಬಂದರೆ ಸ್ಥಳಾಂತರ ಮಾಡುತ್ತೇವೆ ಎಂದು ಮೊದಲೇ ಹೇಳಿದ್ದೆವು. ಇದನ್ನು ಕುಮಾರಸ್ವಾಮಿ ಅವರಿಗೂ ತಿಳಿಸಲಾಗಿತ್ತು. ರಾಮನಗರದ ಜೈಲಿನಲ್ಲಿರುವ ಎಲ್ಲರನ್ನೂ ಪರೀಕ್ಷೆ ಒಳಪಡಿಸುತ್ತೇವೆ. ಅಲ್ಲಿನ ಜನ ಹೆದರಬೇಕಾಗಿಲ್ಲ’ ಎಂದು ಭರವಸೆ ನೀಡಿದರು.

‘ಯಾರ ಮೇಲೂ ದ್ವೇಷ ಇಲ್ಲ’

'ಹಸಿರು ವಲಯ ರಾಮನಗರವನ್ನು ಕೆಂಪು ವಲಯ ಮಾಡುವ ದುರುದ್ದೇಶ ಇರಲಿಲ್ಲ. ಅಲ್ಲಿನ ಜನಪ್ರತಿನಿಧಿಗಳ ಮೇಲಿನ ದ್ವೇಷದಿಂದ ಹೀಗೆ ಮಾಡಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದೊಡ್ಡ ಸಂಖ್ಯೆಯ ಕೈದಿಗಳು ಇರುವುದರಿಂದ ಸಮೀಪದ ರಾಮನಗರ ಜೈಲಿಗೆ ಸಾಗಿಸುವ ನಿರ್ಧಾರಕ್ಕೆ ಬರಲಾಗಿತ್ತು' ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

‘ಪಾದರಾಯನಪುರದಲ್ಲಿ ಗಲಭೆ ನಡೆಸಿದವರ ತಪಾಸಣೆ ನಡೆಸಿಯೇ ರಾಮನಗರ ಜೈಲಿಗೆ ಕಳುಹಿಸಲಾಗಿತ್ತು. ಈ ಪೈಕಿ ಐವರಲ್ಲಿ ಕೋವಿಡ್-19 ದೃಢಪಟ್ಟಿದೆ, ಅವರೆಲ್ಲರನ್ಬೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದರು.

ಬೀದಿಗಿಳಿಯುವೆ–ಅನಿತಾ ಎಚ್ಚರಿಕೆ

‘ಪಾದರಾಯನಪುರದ ಗಲಭೆಕೋರನ್ನು ರಾಮನಗರ ಕಾರಾಗೃಹಕ್ಕೆ ಸ್ಥಳಾಂತರಿಸುವ ಮೂಲಕ ರಾಜ್ಯ ಸರ್ಕಾರ ಅಕ್ಷಮ್ಯ ಅಪರಾಧ ಎಸಗಿದೆ. ಸರ್ಕಾರದ ಬೇಜವಾಬ್ದಾರಿತನವನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹರಡದಂತೆ ಅಗತ್ಯ ವೈದ್ಯಕೀಯ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಜನರ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಬೀದಿಗಿಳಿದು ಹೋರಾಟ ಅನಿವಾರ್ಯವಾಗಲಿದೆ’ ಎಂದು ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಮಲ್ಲೇಶ್ವರದಲ್ಲೇ ಇಡಬಹುದಿತ್ತು?

‘ಪಾದರಾಯನಪುರದಲ್ಲಿ ಗಲಭೆ ಮಾಡಿದವರನ್ನು ಹಸಿರು ವಲಯ ರಾಮನಗರಕ್ಕೆ ಏಕೆ ತಂದಿರಿ? ಮಲ್ಕೇಶ್ವರದಲ್ಲೇ ಇಡಬಹುದಿತ್ತಲ್ಲ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

‘ಉಪಮುಖ್ಯಮಂತ್ರಿಯವರಿಗೆ ನಮ್ಮ ಮೇಲೆ ಅದೇನು ಕೋಪ ಇದೆಯೋ ಗೊತ್ತಿಲ್ಲ, ಮಲ್ಲೇಶ್ವರಂ ಸುರಕ್ಷಿತವಾಗಿರಬೇಕು ಎಂದು ಹೇಳಿ ರಾಮನಗರವನ್ನು ಕೊರೊನಾ ಸೋಂಕು ಪೀಡಿತರಿಂದ ತುಂಬುವ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ತುಘಲಕ್ ಸರ್ಕಾರ’

'ರಾಜ್ಯದಲ್ಲಿ ತುಘಲಕ್ ಸರ್ಕಾರ ಅಸ್ಥಿತ್ವದಲ್ಲಿದ್ದು ಕೊರೊನಾ ಸೋಂಕು ಶಂಕಿತರನ್ನು ರಾಮನಗರಕ್ಕೆ ಕರೆತಂದು ಹುಡುಗಾಟ ಪ್ರದರ್ಶನ ಮಾಡಿದೆ' ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

‘ರಾಮನಗರ ಕಾರಾಗೃಹಕ್ಕೆ ಕರೆತಂದಿದ್ದ ಐವರಲ್ಲಿ ಕೋವಿಡ್ 19 ಪತ್ತೆಯಾಗಿದೆ. ಆದರೆ ಮೂವರ ಪ್ರಕರಣ ಮುಚ್ಚಿ ಹಾಕಲು ಸರ್ಕಾರವೇ ಯತ್ನಿಸಿದೆ. ಕೋವಿಡ್ ಪ್ರಕರಣಗಳಲ್ಲಿ ಸರ್ಕಾರ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಗೊಳಿಸುತ್ತೇನೆ' ಎಂದರು.

‘ಕೊರೊನಾ ಸೋಂಕು ಮುಕ್ತ ಹಸಿರು ವಲಯದಲ್ಲಿದ್ದ ರಾಮನಗರ ಜಿಲ್ಲೆಯನ್ನು ಕೊರೊನಾ ಪೀಡಿತ ಕೆಂಪು ವಲಯವನ್ನಾಗಿ ಪರಿವರ್ತಿಸಿದ ಅಸೀಮ ನಿರ್ಲಕ್ಷದ ಹೊಣೆಯನ್ನು ಯಾರು ಹೊರುತ್ತಾರೆ?’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT