ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಟ್ಟೆಚ್ಚರ: ಮೌನವಾದ ಪಾದರಾಯನಪುರ

Last Updated 22 ಏಪ್ರಿಲ್ 2020, 20:13 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ತೆರಳಿದ ಅಧಿಕಾರಿಗಳು ತೆರಳಿದ ವೇಳೆ ದಾಂದಲೆ ನಡೆದಿದ್ದ ಪಾದರಾಯನಪುರ ಬುಧವಾರ ಸಂಪೂರ್ಣ ಮೌನವಾಗಿತ್ತು.

ವಾರ್ಡ್‌ನ ಮೂಲೆ ಮೂಲೆಗಳಲ್ಲೂ ಪೊಲೀಸರೇ ಕಾಣಿಸುತ್ತಿದ್ದಾರೆ. ನಿತ್ಯ ಹಾಲು, ದಿನಸಿಗಾಗಿ ಹೊರ ಬರುತ್ತಿದ್ದವರೂ, ಪೊಲೀಸ್‌ ಸರ್ಪಗಾವಲು ಗಮನಿಸಿ ಮನೆಯ ಒಳಗಿನಿಂದಲೇ ಇಣುಕಿ ನೋಡುತ್ತಿದ್ದರು.

ಬುಧವಾರ ಕೂಡ ಪೊಲೀಸ್ ಪಡೆ ಮೂರು ಸುತ್ತು ಪಥ ಸಂಚಲನ ನಡೆಸಿದೆ. ಪೊಲೀಸ್‌ ಕಮಿಷನರ್‌ ಸೀಲ್‌ಡೌನ್‌ ಆಗಿರುವ ವಾರ್ಡ್‌ಗಳಲ್ಲಿ ಪ್ರತಿ ದಿನ ಮೂರು ಸುತ್ತು ಗಸ್ತು ತಿರುಗುತ್ತಿದ್ದಾರೆ.

ಡಿಸಿಪಿ, ಎಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆಗೂ ಕಮಿಷನರ್‌ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಪಾದರಾಯನಪುರ ಸುತ್ತಮುತ್ತಲಿನ ಭದ್ರತೆಗೆ ಉತ್ತರ ಮತ್ತು ಪಶ್ಚಿಮ ಡಿಸಿಪಿ ವಿಭಾಗದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಕ್ಷಿಣ ಡಿಸಿಪಿ ವಿಭಾಗದ 15 ಠಾಣೆಗಳಿಂದ ತಲಾ ಒಬ್ಬ ಸಬ್ ಇನ್‌ಸ್ಪೆಕ್ಟರ್, ಒಬ್ಬ ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಒಬ್ಬ ಕಾನ್‌ಸ್ಟೆಬಲ್‌ ಕರೆಸಿಕೊಳ್ಳಲಾಗಿದೆ.

ಪಾದರಾಯನಪುರ ಮತ್ತು ಬಾಪೂಜಿನಗರ ವಾರ್ಡ್‌ಗಳಿಗೆ ಬಿಬಿಎಂಪಿ ವತಿಯಿಂದ ಅಗತ್ಯ ವಸ್ತುಗಳನ್ನು ತಲುಪಿಸಲಾಗುತ್ತಿದೆ.

ಪಾದರಾಯನಪುರ: ತನಿಖೆಗೆ ಮಹಮ್ಮದೀಯರ ವೇದಿಕೆ ಆಗ್ರಹ

ಬೆಂಗಳೂರು: ಪಾದರಾಯನಪುರಲ್ಲಿ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿಯ ಆತ್ಮಸ್ಥೈರ್ಯ ಕುಗ್ಗಿಸಲು ಕೆಲವರು ಮಾಡಿದ ಪ್ರಯತ್ನವನ್ನು ಮುಲಾಜಿಲ್ಲದೆ ಬಗ್ಗುಬಡಿಯಬೇಕು ಎಂದು ಅಖಿಲ ಕರ್ನಾಟಕ ಮಹಮದ್ದೀಯರ ಕನ್ನಡ ವೇದಿಕೆ ಆಗ್ರಹಿಸಿದೆ.

‘ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಈ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ವೇದಿಕೆ ಅಧ್ಯಕ್ಷ ಸಮಿಉಲ್ಲಾಖಾನ್ ಒತ್ತಾಯಿಸಿದ್ದಾರೆ.

‘ಮುಸ್ಲಿಂ ಸುಮದಾಯದವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಕಿವಿಗೊಡಬಾರದು. ಎಲ್ಲಾ ನಾಗರಿಕರ ಹಿತ ರಕ್ಷಣೆಗಾಗಿ ಸರ್ಕಾರ ಪ್ರಯತ್ನಿಸುತ್ತಿದೆಯೇ ಹೊರತು ಸಮುದಾಯದ ವಿರುದ್ಧ ಅಲ್ಲ. ತಪಾಸಣೆಗೆ ಬರುವ ಆರೋಗ್ಯ ಕಾರ್ಯಕರ್ತರ ಜೊತೆ ಸೌಜನ್ಯದಿಂದ ವರ್ತಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಪತಿ ಅಮಾಯಕ ಬಿಟ್ಟುಬಿಡಿ– ಪೊಲೀಸರ ಎದುರು ಪತ್ನಿಯರ ಕಣ್ಣೀರು

‘ಯಾವುದೇ ಗಲಾಟೆಯಲ್ಲಿ ಭಾಗಿಯಾಗದಿದ್ದರೂ ನಮ್ಮ ಪತಿಯನ್ನು ಬಂಧಿಸಲಾಗಿದೆ’ ಎಂದು ಪಾದರಾಯನಪುರದ ಅರಫತ್‌ ನಗರದ ಮುಸ್ಲಿಂ ಸಮುದಾಯದ ಕೆಲವು ಮಹಿಳೆಯರು ಜೆ.ಜೆ ನಗರ ಠಾಣೆಯ ಎದುರು ಬುಧವಾರ ಅಲವತ್ತುಕೊಂಡಿದ್ದಾರೆ.

‘ನಾವು ಬಳ್ಳಾರಿಯ ಹೊಸಪೇಟೆಯಿಂದ ಕೂಲಿ ಅರಸಿಕೊಂಡು ಬಂದವರು. ನಮ್ಮ ಮನೆಯವರನ್ನು ಬಿಟ್ಟು ಬಿಡಿ’ ಎಂದೂ ಪೊಲೀಸರ ಎದುರು ಕೆಲವರು ಕಣ್ಣೀರು ಹಾಕಿದರು.

‘ಇಡೀ ಪ್ರದೇಶದಲ್ಲಿ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆ ವಿಧಿಸಲಾಗಿದೆ. ಹೀಗಾಗಿ, ಗುಂಪು ಸೇರಲು ಅವಕಾಶ ಇಲ್ಲ. ಇಲ್ಲಿಂದ ಹೊರಟು ಹೋಗಿ‘ ಎಂದು ಈ ಮಹಿಳೆಯರನ್ನು ಪೊಲೀಸರು ವಾಪಸು ಕಳುಹಿಸಿದರು.‘ಗಲಾಟೆಯಲ್ಲಿ ಭಾಗಿಯಾದವರನ್ನು ಸಾಕ್ಷ್ಯಾಧಾರಗಳ ಆಧಾರದಲ್ಲಿ ಬಂಧಿಸಲಾಗಿದೆ. ಭಾಗಿ ಆಗದವರನ್ನೂ ಬಂಧಿಸಲಾಗಿದೆ ಅಥವಾ ಅಮಾಯಕರೂ ಜೈಲು ಸೇರಿದ್ದಾರೆ ಎಂದಾದರೆ ಕಾನೂನು ರೀತಿಯಲ್ಲಿ ಹೋರಾಟ ಮಾಡಿ‘ ಎಂದೂ ಈ ಮಹಿಳೆಯರನ್ನು ಪೊಲೀಸರು ಮನವೊಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT