ಪೀಣ್ಯ ದಾಸರಹಳ್ಳಿ: ‘ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಎರಡೂ ಮಹತ್ವದ ಕಾವ್ಯಗಳು. ಕನ್ನಡದ ಅಪರೂಪ ಎನಿಸುವಂತಹ ಕಾವ್ಯಗಳು' ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜು ಅಭಿಪ್ರಾಯಪಟ್ಟರು.
ಹಾವನೂರು ಬಡಾವಣೆಯ ಭೂಮಿಕ ಸೇವಾ ಫೌಂಡೇಶನ್ ಸಭಾಂಗಣದಲ್ಲಿ 'ಪರಸ್ಪರ– ಎಂಟನೇ ಮೈಲಿ’ ವತಿಯಿಂದ ಆಯೋಜಿಸಿದ್ದ 'ಪಂಪ ಭಾರತ: ಒಂದು ಅವಲೋಕನ’ ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು.
‘ಆದಿಪುರಾಣ ಜೈನ ಪೂರ್ವ ಪುರಾಣವನ್ನು ಹಿನ್ನೆಲೆಯಾಗಿ ಇಟ್ಟುಕೊಂಡರೆ, ವಿಕ್ರಮಾರ್ಜುನ ವಿಜಯವು ವೈದಿಕ ಪರಂಪರೆಯನ್ನು ಹಿನ್ನೆಲೆಯಾಗಿ ಒಳಗೊಂಡಿದೆ’ ಎಂದು ಹೇಳಿದರು.
‘ಪಂಪ ಒಂದು ಸಾವಿರ ವರ್ಷಗಳ ಹಿಂದೆ ಎರಡು ಮಹಾಕಾವ್ಯಗಳನ್ನು ಬರೆದರೂ, ಅವು ನಮಗೆ ಸಿಕ್ಕಿದ್ದು 126 ವರ್ಷಗಳ ಹಿಂದೆಯಷ್ಟೆ. ಅಲ್ಲಿಯವರೆಗೂ ಕನ್ನಡಿಗರು ಕಾವ್ಯವನ್ನು ಮುಟ್ಟಿಯೂ ನೋಡಿರಲಿಲ್ಲವೇನೊ? ಎಂಬಂತಹ ಪರಿಸ್ಥಿತಿ ಇತ್ತು’ ಎಂದರು.
‘ಶಾಸನ ತಜ್ಞ ಬಿ.ಎಲ್.ರೈಸ್, ತಾಳೆಗರಿಯಲ್ಲಿದ್ದ ಪಂಪ ಭಾರತವನ್ನು ವಿದ್ವಾಂಸರ ಮೂಲಕ ಪರಿಶೋಧಿಸಿ, ಗ್ರಂಥ ಸಂಪಾದನೆ ಮಾಡಿದರು. ಇದೇ ಸಂದರ್ಭದಲ್ಲಿ ಹೆಸರಘಟ್ಟದ ಪ್ರೈಮರಿ ಶಾಲೆಯ ನಂಜಪ್ಪ ಎಂಬ ಶಿಕ್ಷಕರು ಹರಿಹರನ ಗಿರಿಜಾ ಕಲ್ಯಾಣವನ್ನು ಪರಿಷ್ಕರಿಸಿದರು’ ಎಂದು ತಿಳಿಸಿದರು.
ಪತ್ರಕರ್ತರಾದ ಬಿ.ಎಂ. ಹನೀಫ್, ರಘುನಾಥ ಚ.ಹ. ದಾಸರಹಳ್ಳಿ ಕ್ಷೇತ್ರ ಘಟಕ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ವೈ.ಬಿ.ಎಚ್. ಜಯದೇವ್, ಕನ್ನಡ ಸೇನೆ ಖಜಾಂಚಿ ರಾಜೇಂದ್ರ ಕೊಣ್ಣೂರ, ಕವಿ ಕೆ.ಸಿ. ಶಿವರೆಡ್ಡಿ ಮತ್ತು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.