ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ 2-ಎ ಬೇಡಿಕೆಗೆ ತಡೆ ಕೋರಿ ಪಿಐಎಲ್: ಜನವರಿಗೆ ವಿಚಾರಣೆ ಮುಂದೂಡಿಕೆ

Last Updated 29 ಡಿಸೆಂಬರ್ 2022, 8:42 IST
ಅಕ್ಷರ ಗಾತ್ರ

ಬೆಂಗಳೂರು: 'ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ನೀಡಬೇಕು ಎಂಬ ಬೇಡಿಕೆಗೆ ಸಂಬಂಧಿಸಿದ ಮಧ್ಯಂತರ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದು, ಈ ವರದಿ ಸರ್ಕಾರದ ಪರಿಶೀಲನೆಯಲ್ಲಿದೆ ಹಾಗೂ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ವರದಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕಾಲಾವಕಾಶ ನೀಡಬೇಕು'ಎಂದು ಅಡ್ವೊಕೇಟ್ ಜನರಲ್, ಹೈಕೋರ್ಟ್‌ಗೆ ಮನವಿ ಮಾಡಿದರು.

'ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ನೀಡಬಾರದು' ಎಂದು ಕೋರಿ ಬೆಂಗಳೂರಿನ ಜ್ಞಾನಭಾರತಿಯ ಮೃತ್ಯುಂಜಯ ನಗರದ ನಿವಾಸಿ ಡಿ.ಜಿ ರಾಘವೇಂದ್ರ ಬಿನ್ ಸೂರ್ಯ ದೇವಾಡಿಗ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ನ್ಯಾಯಮೂರ್ತಿ ಪಿ.ಎಂ.ನವಾಜ್ ನೇತೃತ್ವದ ರಜಾಕಾಲದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಈ ಕುರಿತಂತೆ ನ್ಯಾಯಪೀಠಕ್ಕೆ ವಿವರಿಸಿ ವರದಿ ಸಲ್ಲಿಕೆಗೆ ಕಾಲಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು 2023ರ ಜನವರಿ ಮೊದಲ ವಾರಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್.ವಿ.ಮಂಜುನಾಥ್, 'ಮೀಸಲಾತಿ ಸಿಗುವುದು ಖಚಿತ ಎಂದು ಬಿಜೆಪಿ ಶಾಸಕ ಹಾಗೂ ಪಂಚಮಸಾಲಿ ಸಮುದಾಯದ ನೇತಾರ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಸರ್ಕಾರ ಮೀಸಲಾತಿ ಬಗ್ಗೆ ತರಾತುರಿಯಲ್ಲಿ ತೀರ್ಮಾನಿಸುವ ಸಾಧ್ಯತೆ ಇದೆ' ಎಂಬ ಪತ್ರಿಕಾ ವರದಿಯನ್ನು ಓದುವ ಮೂಲಕ ನ್ಯಾಯಪೀಠದ ಗಮನಕ್ಕೆ ತಂದರು.

ಮಂಗಳವಾರವಷ್ಟೇ (ಡಿ.27) ಪಿಐಎಲ್ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ನೇತೃತ್ವದ ರಜಾಕಾಲದ ವಿಭಾಗೀಯ ನ್ಯಾಯಪೀಠ ಪ್ರಕರಣದ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಗೆನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಗುರುವಾರಕ್ಕೆ (ಡಿ.29) ಮುಂದೂಡಿತ್ತು.

ಅಂತೆಯೇ, 'ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ'ಎಂದೂ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಅರ್ಜಿದಾರರ ಕೋರಿಕೆಯೇನು?:'ನಾನು ದೇವಾಡಿಗ ಸಮುದಾಯಕ್ಕೆ ಸೇರಿದವನಾಗಿದ್ದು ಹಿಂದುಳಿದ ವರ್ಗಗಳಿಗೆ ದೊರೆಯುವ 2-ಎ ಮೀಸಲಾತಿಯ ಫಲಾನುಭವಿಯಾಗಿದ್ದೇನೆ‌. ಇತ್ತೀಚೆಗೆ ಲಿಂಗಾಯತ-ವೀರಶೈವ ಪಂಚಮಸಾಲಿ ಸಮುದಾಯ ಹಾಗೂ ಒಕ್ಕಲಿಗರು ತಮ್ಮ ಸಮುದಾಯಗಳನ್ನೂ ಪ್ರವರ್ಗ 2-ಎಗೆ ಸೇರಿಸಬೇಕು ಎಂ‌ಬ ಬೇಡಿಕೆಯನ್ನು ಮಂಡಿಸಿವೆ. ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮುದಾಯವನ್ನು 2-ಎಗೆ ಸೇರ್ಪಡೆ ಮಾಡುವುದನ್ನು ಖಚಿತಪಡಿಸಿದ್ದು ಅದಕ್ಕಾಗಿ ಡಿ.29ರ ಗಡುವು ನೀಡಿದ್ದರು. ಒಂದು ವೇಳೆ ಈ ಬಲಾಢ್ಯ ಹಾಗೂ ಮುಂದುವರಿದ ಸಮುದಾಯವನ್ನು 2-ಎಗೆ ಸೇರ್ಪಡೆ ಮಾಡಿದರೆ ಹಿಂದುಳಿದ ವರ್ಗಗಳಿಗೆ ಭರಿಸಲಾಗದ ಅನ್ಯಾಯ ಉಂಟಾಗಲಿದೆ. ಹಾಗೂ ಈ ಅರ್ಜಿ ಇತ್ಯರ್ಥವಾಗುವತನಕ ಯಾವುದೇ ಜಾತಿ, ಉಪಜಾತಿ, ಸಮುದಾಯ ಬುಡಕಟ್ಟುಗಳು ಮೀಸಲು ಮಾರ್ಪಾಡು ಮಾಡುವಂತೆ ಕೋರುವ ವೈಯಕ್ತಿಕ ಬೇಡಿಕೆಗಳನ್ನು ರಾಜ್ಯ ಸರ್ಕಾರ ಪ್ರೋತ್ಸಾಹಿಸದಂತೆ ಮಧ್ಯಂತರ ತಡೆ ನೀಡಬೇಕು'ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT