ಬೆಂಗಳೂರು: ‘ಗದಗದ ವೀರೇಶ್ವರ ಪುಣ್ಯಾಶ್ರಮದಲ್ಲಿ 12 ವರ್ಷ ಸಂಗೀತ ಅಭ್ಯಾಸ ಮಾಡಿ, ಗುರು ದಕ್ಷಿಣೆ ನೀಡಿದ್ದು ₹ 65 ಮಾತ್ರ. ಸಂಗೀತ ಕ್ಷೇತ್ರದ ಈ ಸಾಧನೆಗೆ ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಗಳೇ ಕಾರಣ’ ಎಂದು ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಶನಿವಾರ ಹೇಳಿದರು.
ಬೆಂಗಳೂರು ಕಿಡ್ನಿ ಫೌಂಡೇಶನ್ (ಬಿಕೆಎಫ್) ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬಿಕೆಎಫ್ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಪ್ರಶಸ್ತಿ ₹ 2 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.
‘ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಗಳು ಅಂಧರಾಗಿದ್ದರೂ ಪುಣ್ಯಾಶ್ರಮದಲ್ಲಿ ಸಾವಿರಾರು ಅನಾಥ, ಅಂಧ ಮಕ್ಕಳಿಗೆ ಸಂಗೀತ ಹೇಳಿಕೊಟ್ಟಿದ್ದಾರೆ. ‘ಜಾತಿಯಲ್ಲ, ನೀತಿ ಮುಖ್ಯ’ ಎಂದು ಹೇಳುತ್ತಿದ್ದರು. ಸಂಗೀತದ ಜತೆ ಸಂಸ್ಕಾರ ಕಲಿಸಿದರು’ ಎಂದು ತಿಳಿಸಿದರು.
‘ಜಾತಿ, ಧರ್ಮ ನೋಡದೆ ನೂರಾರು ಮಕ್ಕಳಿಗೆ ಗವಾಯಿಗಳು ಉಚಿತ ಊಟ ನೀಡಿ, ವಿದ್ಯೆಯನ್ನು ಧಾರೆ ಎರೆದಿದ್ದಾರೆ. ಬೆಂಗಳೂರು ಕಿಡ್ನಿ ಫೌಂಡೇಷನ್‌ಗೆ ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡಲಾಗುವುದು’ ಎಂದರು.
ಶಿಕ್ಷಣ ತಜ್ಞ ಗುರುರಾಜ ಕರಜಗಿ ಮಾತನಾಡಿ, ‘ಸಣ್ಣ ಪ್ರಶಸ್ತಿ ಬಂದರೂ ಕೆಲವರ ವರ್ತನೆಯಲ್ಲಿ ಬದಲಾವಣೆ ಕಾಣುತ್ತೇವೆ. ಆದರೆ ಮಲ್ಲಿಕಾರ್ಜುನ್ ಮನ್ಸೂರ್ ಅವರು ಪದ್ಮವಿಭೂಷಣ ಪ್ರಶಸ್ತಿ ಬಂದರೂ ಮಣ್ಣಿನ ವಾಸನೆ ಮರೆಯಲಿಲ್ಲ. ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’..ಎಂಬ ಅವರ ಗಾಯನ ಕೇಳಿ ಕಣ್ಣು ತುಂಬಿ ಬಂದಿತ್ತು’ ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ವೆಂಕಟೇಶ್ ಕುಮಾರ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.