ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಶೀಟರ್‌ಗೆ ಪೊಲೀಸ್‌ ಗುಂಡೇಟು

ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ
Last Updated 23 ಜೂನ್ 2019, 19:34 IST
ಅಕ್ಷರ ಗಾತ್ರ

ಬೆಂಗಳೂರು: ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಶಿವಾಜಿನಗರ ನಿವಾಸಿ, ರೌಡಿ ಶೀಟರ್ ಅಮೀರ್ ಖಾನ್ ಅಲಿಯಾಸ್ ಪಪ್ಪು (34) ಎಂಬಾತನನ್ನು ಕಾಲಿಗೆ ಗುಂಡು ಹೊಡೆದು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಈತ ಕುಖ್ಯಾತ ರೌಡಿ ಕೋಳಿ ಫಯಾಜ್‌ನ ಪುತ್ರ. ಎರಡು ಕೊಲೆ ಪ್ರಕರಣಗಳಲ್ಲಿ ಅಮೀರ್‌ ಭಾಗಿಯಾಗಿದ್ದ. ಅಲ್ಲದೆ ಆತನ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ, ಹಲ್ಲೆ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 22ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಶಿವಾಜಿನಗರ ಪೊಲೀಸರು ಈತನ ವಿರುದ್ಧ ರೌಡಿ ಪಟ್ಟಿ ತೆರೆದಿದ್ದರು.

ಕೊತ್ತನೂರು ಸೇರಿ ನಗರದ ವಿವಿಧ ಕಡೆಗಳಲ್ಲಿ ರಾತ್ರಿ ವೇಳೆಯಲ್ಲಿ ಒಬ್ಬಂಟಿಯಾಗಿ ಓಡಾಡುವವರನ್ನು ಗುರಿ ಯಾಗಿಸಿ ಮಾರಕಾಸ್ತ್ರಗಳಿಂದ ಬೆದರಿಸಿ ಈತ ಸುಲಿಗೆ ಮಾಡುತ್ತಿದ್ದ. ಈ ವಿಷಯ ಸಿಸಿಬಿ ಪೊಲೀಸರ ಗಮನಕ್ಕೆ ಬಂದಿತ್ತು.

ಕೊತ್ತನೂರಿನ ದೊಡ್ಡಗುಬ್ಬಿ ಬಳಿ ಭಾನುವಾರ ಮಧ್ಯಾಹ್ನ ಬೈಕ್‌ನಲ್ಲಿ ಅಮೀರ್‌ ಓಡಾಡುತ್ತಿರುವ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಸಿಸಿಬಿ ವಿಭಾಗದ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತ್ ನೇತೃತ್ವದ ಪೊಲೀಸರ ತಂಡ ಅಮೀರ್‌ನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.

ಆತನನ್ನು ಬೆನ್ನತ್ತಿದ ಪೊಲೀಸರು, ಅಲ್ಲಿನ ಸ್ಮಶಾನದೊಳಗೆ ತೆರಳಿ ಬೈಕ್ ಅಡ್ಡಗಟ್ಟಿದ್ದರು. ಕಾನ್‌ಸ್ಟೆಬಲ್‌ ಉಮೇಶ್ ಆತನನ್ನು ಬಂಧಿಸಲು ಮುಂದಾದಾಗ ತನ್ನ ಬಳಿಯಿದ್ದ ಡ್ರ್ಯಾಗರ್‌ನಿಂದ ಅವರ ಕೈಗೆ ಇರಿದಿದ್ದ.

ಇದನ್ನು ಗಮನಿಸಿದ ಲಕ್ಷ್ಮೀಕಾಂತ್ ಅವರು, ತಮ್ಮ ಪಿಸ್ತೂಲ್‌ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಅದಕ್ಕೆ ಬಗ್ಗದ ಅಮೀರ್, ತನ್ನ ಕೈಯಲ್ಲಿದ್ದ ಆಯುಧವನ್ನು ಬೀಸಿದ್ದ. ಆಗ ತಮ್ಮ ಹಾಗೂ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಲಕ್ಷ್ಮೀಕಾಂತ್, ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡು ತಾಗುತ್ತಿದ್ದಂತೆ ಸ್ಥಳದಲ್ಲೇ ಕುಸಿದುಬಿದ್ದ ಅಮೀರ್‌ನನ್ನು ಸಿಸಿಬಿ ಪೊಲೀಸರು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿರುವ ಉಮೇಶ್ ಚಿಕಿತ್ಸೆ
ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಮಶಾನದೊಳಗೆ ಬೈಕ್ ನುಗ್ಗಿಸಿದ

ಪೊಲೀಸರು ತನ್ನನ್ನು ಬೆನ್ನಟ್ಟಿ ಬರುತ್ತಿರುವುದನ್ನು ಗಮನಿಸಿದ ಅಮೀರ್, ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಹೊಯ್ಸಳ ವಾಹನದಲ್ಲಿ ಹಿಂಬಾಲಿಸಿದ ಪೊಲೀಸರು, ಅಮೀರ್‌ಗೆ ನಿಲ್ಲುವಂತೆ ಸೂಚನೆ ನೀಡಿದರೂ ಆತ ಕಿವಿಗೊಟ್ಟಿರಲಿಲ್ಲ. ಅಲ್ಲದೆ, ನೇರವಾಗಿ ದೊಡ್ಡಗುಬ್ಬಿ ಸ್ಮಶಾನದ ಒಳಗೆ ತನ್ನ ಬೈಕ್ ನುಗ್ಗಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT