ನರಕ ಸದೃಶ ಬದುಕಿನ ದರ್ಶನ!

7
ಬೆಂಗಳೂರು ನಗರಾಭಿವೃದ್ಧಿ ಸಚಿವ ಪರಮೇಶ್ವರ ಅವರಿಂದ ನಗರ ಪ್ರದಕ್ಷಿಣೆ

ನರಕ ಸದೃಶ ಬದುಕಿನ ದರ್ಶನ!

Published:
Updated:
Deccan Herald

ಬೆಂಗಳೂರು: ಕೊಳೆಗೇರಿಯ ನರಕ ಸದೃಶ ಬದುಕಿನ ‘ಪರಮ’ದರ್ಶನ ಮಂಗಳವಾರ ಉಪಮುಖ್ಯಮಂತ್ರಿಯವರಿಗೆ ಆಯಿತು.

ನಗರಾಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರ ನಗರ ಪ್ರದಕ್ಷಿಣೆ ಕಾರ್ಯಕ್ರಮದಲ್ಲಿ ಶಿವಾಜಿನಗರ ಕ್ಷೇತ್ರದ ಕೆಲವು ವಾರ್ಡ್‌ಗಳಿಗೆ ಭೇಟಿ ನೀಡಿದರು. ಹಲಸೂರು ಬಳಿ ಬಡಾವಣೆ, ಓಣಿಗಳ ಪುಟ್ಟ ದಾರಿಯಲ್ಲಿ ನಡೆದ ಪರಮೇಶ್ವರ ಮತ್ತವರ ದಂಡಿಗೆ ಅಲ್ಲಿನ ಜನರು ಅಹವಾಲುಗಳ ಸಾಲನ್ನೇ ಮುಂದಿಟ್ಟರು. 

ಹಲಸೂರು ಕಾಲುವೆಯ ಚರಂಡಿ ನೀರಿನ ಕಾರಣದಿಂದ ಇಲ್ಲಿ ಬದುಕಲಾಗದ ಸ್ಥಿತಿ ಇದೆ. ಮನೆಗಳು ಈಗಲೋ ಆಗಲೋ ಬೀಳುವ ಹಂತದಲ್ಲಿವೆ ಎಂದ ಜನ, ಸಾಮೂಹಿಕ ಶೌಚಾಲಯವನ್ನು ಕಣ್ಣಾರೆ ನೋಡಬೇಕು ಎಂದು ಸಚಿವರನ್ನು ಒತ್ತಾಯಿಸಿ ಬಲವಂತವಾಗಿ ಕರೆದೊಯ್ದರು. ಸಚಿವರ ತಂಡದಲ್ಲಿದ್ದ ಬಹುತೇಕರು ಮೂಗು ಮುಚ್ಚಿಕೊಂಡೇ ಈ ಪ್ರದೇಶದಲ್ಲಿ ಓಡಾಡಿದರು.

ಬೀಳುವ ಸ್ಥಿತಿಯಲ್ಲಿರುವ ಶೌಚಾಲಯ, ದುರ್ಬಲ ಮನೆಗಳು, ಸ್ವಚ್ಛತೆ ಇಲ್ಲದಿರುವುದು ಎಲ್ಲವನ್ನೂ ಸೂಕ್ಷ್ಮವಾಗಿ ಸಚಿವರು ಗಮನಿಸಿದರು.

ಹಲಸೂರಿನ ಎಂ.ವಿ.ಗಾರ್ಡನ್‌ ಬಡಾವಣೆಯಲ್ಲಿ ಆಕ್ರೋಶಗೊಂಡಿದ್ದ ವ್ಯಕ್ತಿಯೊಬ್ಬರು ಪೊಲೀಸ್‌ ಭದ್ರತೆಯನ್ನು ಭೇದಿಸಿ ಸಚಿವರನ್ನು ನೇರವಾಗಿ ಭೇಟಿಯಾಗಲು ಮುಂದಾದರು. ‘ಬಿಬಿಎಂಪಿಗೆ ನಮ್ಮ ಸಮಸ್ಯೆಗಳ ಕುರಿತಾಗಿ ಸಾಕಷ್ಟು ಅರ್ಜಿ ಬರೆದಿದ್ದೇನೆ ನೋಡಿ. ಒಂದಕ್ಕೂ ಸ್ಪಂದಿಸಿಲ್ಲ. ಈಗ ನೀವೇ ಬಂದಿದ್ದೀರಿ. ನೀವೇ ಈ ಅರ್ಜಿಗಳನ್ನು ಇಟ್ಟುಕೊಳ್ಳಿ’ ಎಂದು ಪ್ಯಾಕೆಟ್‌ನಲ್ಲಿದ್ದ ಅರ್ಜಿಗಳ ಕಂತೆಯನ್ನೇ ಸಚಿವರ ಮುಂದೆ ಒಡ್ಡಿದರು.

ಅವರನ್ನು ಸಮಾಧಾನಪಡಿಸುತ್ತಲೇ ಸಮಸ್ಯೆಗಳತ್ತ ಗಮನಹರಿಸಿದರು. ಹಲಸೂರು ವಾರ್ಡ್ 81ರಲ್ಲಿನ ಸಾರ್ವಜನಿಕ ಗ್ರಂಥಾಲಯ, ಕೌಶಲ ಕೇಂದ್ರ, ವ್ಯಾಯಾಮ ಶಾಲೆ, ಶಿಶುವಿಹಾರ ಕೇಂದ್ರಗಳಿಗೆ ಭೇಟಿ ನೀಡಿದರು. ಎಲ್ಲವೂ ಕಾಯಕಲ್ಪದ ನಿರೀಕ್ಷೆಯಲ್ಲಿದ್ದವು.

ಬ್ರಾಡ್ ವೇ ರಸ್ತೆಯಲ್ಲಿರುವ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಶಿಥಿಲಾವಸ್ಥೆ ತಲುಪಿದ ಪೊಲೀಸ್‌ ವಸತಿಗೃಹವನ್ನು ಪರಿಶೀಲಿಸಿದರು. ಸಂಪೂರ್ಣ ನಶಿಸಿರುವ ಕಟ್ಟಡವನ್ನು‌ ಕೆಡವಿ ನೂತನ ಕಟ್ಟಡ ನಿರ್ಮಿಸುವ ಕುರಿತು ನಗರ ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಿದರು.

ಬಳಿಕ ಶಿವಾಜಿ ನಗರದಲ್ಲಿ ನಿರ್ಮಿಸಲಾಗಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಯಾರಂಭಕ್ಕೆ ಬಾಕಿ ಇರುವ ಕೆಲಸಗಳನ್ನು ಪರಿಶೀಲಿಸಿದರು.

ಪ್ರದಕ್ಷಿಣೆ ಆರಂಭದಲ್ಲಿ ಹಲಸೂರು ಗುರುದ್ವಾರ ಮಂದಿರದ ಬಳಿ ಸಿಖ್‌ ಸಮುದಾಯದ ಮುಖಂಡರು ಸಚಿವರನ್ನು ಸ್ವಾಗತಿಸಿದರು. ಅಲ್ಲಲ್ಲಿ ಬೆಂಬಲಿಗರು ದೊಡ್ಡ ಗಾತ್ರದ ಹೂಗುಚ್ಛ ಕೊಡುವುದು, ಹಾರ ಅರ್ಪಿಸುವುದು ಸಾಮಾನ್ಯವಾಗಿತ್ತು.

ಪರಿಹಾರವೇನು?: ಪ್ರದಕ್ಷಿಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ, ‘ಹಲಸೂರು, ಎಂ.ವಿ.ಗಾರ್ಡನ್‌ ಪ್ರದೇಶದ ಕೊಳೆಗೇರಿಯಲ್ಲಿ ಶಿಥಿಲ ಮನೆಗಳನ್ನು ಕೆಡವಿ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬಿಡಿಎ ಸೇರಿ ಹೊಸ ಮನೆಗಳನ್ನು ಕಟ್ಟುವ ಬಗ್ಗೆ ಯೋಜನೆ ತಯಾರಿಸುವಂತೆ ಹೇಳಿದ್ದೇನೆ. ಮಳೆ ನೀರು ಕಾಲುವೆ, ಚರಂಡಿ, ಆಸ್ಪತ್ರೆ, ಸಮುದಾಯ ಭವನಗಳ ಅವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹೇಳಿದ್ದೇನೆ’ ಎಂದರು.

‘ಶಿವಾಜಿನಗರದಲ್ಲಿರುವ ಸರ್ಕಾರಿ ರಹಮಾನಿಯಾ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ತರಬೇತಿ ಕೇಂದ್ರ ಪೂರ್ಣ ಶಿಥಿಲಾವಸ್ಥೆ ತಲುಪಿರುವುದನ್ನು ಗಮನಿಸಿದ್ದೇನೆ. ಶಾಲೆಯನ್ನು ಅಭಿವೃದ್ಧಿಪಡಿಸಲು ನನ್ನ ವಿವೇಚನಾ ನಿಧಿಯಿಂದ ₹ 5 ಕೋಟಿ ನೆರವು ನೀಡುತ್ತೇನೆ. ಬೆಂಗಳೂರಿನ ಎಲ್ಲ 28 ವಿಧಾನಸಭಾ ಕ್ಷೇತ್ರಗಳಿಗೆ ಒಮ್ಮೆ ಭೇಟಿ ನೀಡಿ ಪ್ರತಿ ಕ್ಷೇತ್ರದಲ್ಲಿ ಅರ್ಧ ದಿನ ಕಳೆಯುತ್ತೇನೆ. ಅಲ್ಲಿ ನಗರಾಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಕೆಲಸಗಳು ಬಾಕಿ ಇದ್ದರೆ ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ’ ಎಂದರು.

ನಗರೋತ್ಥಾನ ವಿಶೇಷ ಯೋಜನೆ ಅಡಿ ಕೈಗೆತ್ತಿಕೊಂಡಿರುವ ₹ 279 ಕೋಟಿ ಮೊತ್ತದ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ. ಕಾಮಗಾರಿಗಳೂ ಕಳಪೆಯಾಗಿವೆ ಎಂದು ಶಾಸಕ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ, ‘ಆ ಪತ್ರವನ್ನು ತರಿಸಿಕೊಂಡು ಪರಿಶೀಲಿಸುತ್ತೇನೆ. ಕಳಪೆ ಕಾಮಗಾರಿಯಾಗಿದ್ದರೆ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಶಾಸಕ ರೋಷನ್ ಬೇಗ್, ಮೇಯರ್ ಸಂಪತ್ ರಾಜ್, ಬಿವಿಎಂಪಿ ಆಯುಕ್ತ  ಎನ್‌. ಮಂಜುನಾಥ್ ಪ್ರಸಾದ್, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಇದ್ದರು.

**

ಇಂಧನ ಬೆಲೆ: 14ರಂದು ಪ್ರತಿಭಟನೆ

ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಪೆಟ್ರೋಲ್‌, ಡೀಸೆಲ್‌ ಬೆಲೆ 16 ಬಾರಿ ಏರಿಕೆಯಾಗಿದೆ. ತೈಲ ಬೆಲೆ ಅಂತರರಾಷ್ಟ್ರೀಯ ದರಗಳ ಮೇಲೆ ನಿರ್ಣಯವಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಇಳಿದಾಗ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು.

ಆದರೆ, ಮೋದಿ ಸರ್ಕಾರ ಹಾಗೆ ಮಾಡಿಲ್ಲ. ಇಂಧನ ಬೆಲೆ ಏರಿಕೆಯಿಂದ ಕಾರುಗಳಲ್ಲಿ ಓಡಾಡುವವರಿಗೆ ಮಾತ್ರವಲ್ಲ ಬಸ್‌ ಪ್ರಯಾಣಿಕರು, ರೈತರು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ. ಇದನ್ನು ಖಂಡಿಸಿ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಸೆ. 14ರಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.

**

ಎಲ್ಲೆಲ್ಲಿ ಪರಿಶೀಲನೆ?

* ಶಿವಾಜಿನಗರ ಗುರುದ್ವಾರದ ಬಳಿ ಇರುವ ಮಳೆ ನೀರು ಕಾಲುವೆ

* ಹಲಸೂರು ಕೆರೆ, ಕೆರೆ ಅಭಿವೃದ್ಧಿಯ ನೀಲ ನಕಾಶೆ

* ಬಿಬಿಎಂಪಿ ಹೆರಿಗೆ ಆಸ್ಪತ್ರೆ

* ಶಿವಾಜಿ ರಸ್ತೆಯಲ್ಲಿರುವ ಸರ್ಕಾರಿ ವಿಕೆಒ ಶಾಲೆ

* ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಂಡ ಕಟ್ಟಡಗಳು

* ಪೊಲೀಸ್‌ ವಸತಿಗೃಹಗಳು

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !