ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಾಮುಂಡಿ’ ಕೋಪಕ್ಕೆ ಬೆದರಿ ಬಾದಾಮಿಗೆ

ಮೇಲ್ಜಾತಿ ಮತಗಳ ಧ್ರುವೀಕರಣ: ಸಿದ್ದರಾಮಯ್ಯ ಆತಂಕಕ್ಕೆ ಕಾರಣ
Last Updated 22 ಏಪ್ರಿಲ್ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶ ಗೆದ್ದ ಹಮ್ಮಿನಲ್ಲಿರುವ ಬಿಜೆಪಿಯನ್ನು ಮಣಿಸಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುತ್ತೇನೆ’ ಎಂದು ಸಾರುತ್ತಿರುವ, ‘ನುಡಿದಂತೆ ನಡೆದಿದ್ದೇವೆ’ ಎಂದು ಬೀಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದಾಗಿ ಬಾದಾಮಿಗೂ ಲಗ್ಗೆ ಇಟ್ಟಿದ್ದಾರೆಯೇ?

ಇಂತಹದೊಂದು ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಗಹನವಾಗಿ ನಡೆಯುತ್ತಿದೆ. ‘ಕಳೆದ ನಲವತ್ತು ವರ್ಷಗಳಲ್ಲಿ ಯಾವುದೇ ಮುಖ್ಯಮಂತ್ರಿ ಐದು ವರ್ಷದ ಪೂರ್ಣಾವಧಿಯನ್ನು ಪೂರೈಸಿರಲಿಲ್ಲ. ಆ ಭಾಗ್ಯವನ್ನು ಕನ್ನಡಿಗರು ಕೊಟ್ಟಿದ್ದಾರೆ. ರಾಜ್ಯದಲ್ಲಿ ಎಲ್ಲಿಯೂ ಆಡಳಿತ ವಿರೋಧಿ ಅಲೆ ಇಲ್ಲ; ಇರುವುದೆಲ್ಲ ಕಾಂಗ್ರೆಸ್ ಅಲೆ’ ಎಂದು ‘ವಿಶ್ವಾಸ’ದಿಂದ ಪ್ರತಿಪಾದಿಸುವ ಸಿದ್ದರಾಮಯ್ಯ, ಇದ್ದಕ್ಕಿದ್ದಂತೆ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ಅವರಲ್ಲಿನ ಪುಕ್ಕಲುತನ ಕಾರಣವೇ ಎಂಬ ಪ್ರಶ್ನೆಯ ಸುತ್ತಲೂ ಜಿಜ್ಞಾಸೆ ಗಿರಕಿ ಹೊಡೆಯುತ್ತಿದೆ.

ಐದು ವರ್ಷಗಳಲ್ಲಿ ಬದಲಾಗಿರುವ ಮೈಸೂರು ರಾಜಕಾರಣ, ಹಿಂಬಾಲಕರ ದಬ್ಬಾಳಿಕೆ, ಲಿಂಗಾಯತರು ಮತ್ತು ಒಕ್ಕಲಿಗ ಸಮುದಾಯದಲ್ಲಿ ಹುರಿಗೊಂಡ ಆಕ್ರೋಶಗಳನ್ನು ಕಂಡ ಸಿದ್ದರಾಮಯ್ಯ, ಒಂದು ಕ್ಷೇತ್ರದಲ್ಲಿ ಗೆಲುವು ಸಲೀಸಲ್ಲ; ಸೋತರೆ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಮುಂದುವರಿಯಲು ಸಾಧ್ಯವೇ ಇಲ್ಲ ಎಂಬ ಆತಂಕದಿಂದ ‘ಬಾದಾಮಿ’ಯನ್ನೂ ಆರಿಸಿಕೊಂಡರು. ಎಷ್ಟೇ ಅಡೆತಡೆ ಎದುರಾ
ದರೂ ಗೆದ್ದೇ ಗೆಲ್ಲುವೆ ಎಂಬ ಭರವಸೆ ಇದ್ದರೆ, ‘ಯಶಸ್ವಿ’ ಮುಖ್ಯಮಂತ್ರಿ ಎನಿಸಿಕೊಂಡವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಪ್ರಮೇಯವೇ ಇರಲಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದರು.

ಜೆಡಿಎಸ್‌ ತೊರೆದ ಬಳಿಕ 2006ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ‘ರಾಜಕೀಯ ಭವಿಷ್ಯ’ಕ್ಕಾಗಿ ಪರದಾಡಿದ್ದರು. ಸಾಮಾನ್ಯ ಗುತ್ತಿಗೆದಾರರಾಗಿದ್ದ ಶಿವಬಸಪ್ಪ ಎಂಬುವವರನ್ನು ಜೆಡಿಎಸ್‌ನಿಂದ ಕಣಕ್ಕೆ ಇಳಿಸಿದ್ದ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಅಭ್ಯರ್ಥಿ ಲೆಕ್ಕವೇ ಇಲ್ಲ ಎಂಬ ಗೈರತ್ತು ತೋರಿದ್ದ ಸಿದ್ದರಾಮಯ್ಯ ಕೇವಲ 257 ಮತಗಳಿಂದ ಗೆದ್ದು, ಇನ್ನೆಂದೂ ಚುನಾವಣೆಯೇ ಬೇಡ, ಉಸ್ಸಪ್ಪಾ ಎಂದು ನಿಟ್ಟುಸಿರು ಬಿಟ್ಟಿದ್ದರು.

2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ವಿ. ಶ್ರೀನಿವಾಸ ಪ್ರಸಾದ್ ಜತೆಗಿದ್ದಾರೆ ಎಂಬ ನಂಬುಗೆಯಲ್ಲಿ ‘ಸುರಕ್ಷಿತ’ ಕ್ಷೇತ್ರ ವರುಣಾಕ್ಕೆ ಸ್ಥಳಾಂತರಗೊಂಡು ಗೆದ್ದಿದ್ದರು. 2013ರಲ್ಲೂ ಅಲ್ಲಿಂದಲೇ ಸ್ಪರ್ಧಿಸಿ ವಿಧಾನಸಭೆಗೆ ಮತ್ತೆ ಪ್ರವೇಶಿಸಿ ಮುಖ್ಯಮಂತ್ರಿಯಾದರು. ಬಳಿಕ ವರುಣಾ ನಾಲೆಯಲ್ಲಿ ಸಾಕಷ್ಟು ನೀರು ಹರಿದಿದ್ದು, ರಾಜಕೀಯ ಅಂಗಳದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಿವೆ.

ವರುಣಾವನ್ನು ತಮ್ಮ ಪುತ್ರ ಡಾ.ಯತೀಂದ್ರ ಅವರಿಗೆ ಬಿಟ್ಟುಕೊಟ್ಟಿರುವ ಅವರು, ಈ ಬಾರಿ ಚಾಮುಂಡೇಶ್ವರಿ ಕೃಪೆ ಬಯಸಿ, ಅಲ್ಲಿಯೇ ನಿಲ್ಲುವುದಾಗಿ ಪದೇ ಪದೇ ಹೇಳಿದ್ದರು. ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿ ಹತ್ತಿರವಾಗುತ್ತಿದ್ದಂತೆ, ಅವರು ಸ್ವಲ್ಪ ವಿಚಲಿತರಾದರು. ಬಾಗಲಕೋಟೆ ಜಿಲ್ಲೆಯ ಬಾದಾಮಿ, ಕೊಪ್ಪಳ ಜಿಲ್ಲೆಯ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಬರುತ್ತಿದೆ ಎಂದು ಅವರ ಆಪ್ತರೇ ಸುದ್ದಿ ಹರಿಯಬಿಟ್ಟರು.

ಹೆಪ್ಪುಗಟ್ಟಿದ ಸಿಟ್ಟು: ಮುಖ್ಯಮಂತ್ರಿಯಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಗೆಲುವು ನಿರಾಯಾಸ ಎಂಬ ಆಲೋಚನೆ ಅವರಲ್ಲಿತ್ತು. ಆದರೆ, ಕ್ಷೇತ್ರದ ಜಾತಿ ರಾಜಕಾರಣ, ಮತದಾರರ ಭಾವನೆಗಳನ್ನು ಒರೆಗೆ ಹಚ್ಚುತ್ತಿದ್ದಂತೆ ಐದು ವರ್ಷದ ತಪ್ಪಿನ ಹಾದಿಯ ಅರಿವಾಗುತ್ತಾ ಹೋಯಿತು. ಆಗ ಎಚ್ಚೆತ್ತುಕೊಂಡ ಸಿದ್ದರಾಮಯ್ಯ, ತಮ್ಮ ಬಳಿ ಇರುವ ಗುಪ್ತಚರ ವಿಭಾಗವನ್ನು ಬಳಸಿಕೊಂಡು ಸರಣಿ ಸಮೀಕ್ಷೆ ನಡೆಸಿದರು. ಗೃಹ ಸಚಿವರ ಭದ್ರತಾ ಸಲಹೆಗಾರ ಕೆಂಪಯ್ಯ ಉಸ್ತುವಾರಿಯಲ್ಲಿ ವಾರಕ್ಕೆ ಎರಡು ಸಮೀಕ್ಷೆಗಳು ನಡೆದವು.

ತಮ್ಮ ಹಿಂಬಾಲಕರ ಪಡೆ ನಡೆಸಿದ ದಬ್ಬಾಳಿಕೆ, ಅಧಿಕಾರದ ಅಹಂನಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಟ್ಟ ತಪ್ಪು ಹೆಜ್ಜೆಗಳು ಇಡೀ ಜಿಲ್ಲೆಯ ಒಕ್ಕಲಿಗ, ಲಿಂಗಾಯತರಲ್ಲಿ ಸಿಟ್ಟನ್ನು ಹೆಪ್ಪುಗಟ್ಟುವಂತೆ ಮಾಡಿರುವುದು ಗೋಚರವಾಯಿತು. ಇದರ ಜತೆಗೆ, ತಮ್ಮ ರಾಜಕಾರಣದುದ್ದಕ್ಕೂ ಬೆನ್ನಿಗೆ ನಿಂತವರನ್ನು ಕೈಬಿಟ್ಟು, ‘ಆಪ್ತ’ರಾದ ಕೆಲವರ ಕೂಟವನ್ನೇ ಸಲುಹಿದ್ದರ ಅಡ್ಡ ಪರಿಣಾಮ ಚುನಾವಣೆಯ ಫಲಿತಾಂಶದ ಮೇಲೆ ಕರಿಛಾಯೆ ಬೀಸಿರು
ವುದು ಸ್ಪಷ್ಟವಾಯಿತು. ಆಗ ಮತ್ತೊಂದು ಕ್ಷೇತ್ರದ ಮೇಲೆ ಕಣ್ಣಿಟ್ಟರು ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿದೆ.

ಚುನಾವಣೆಯಲ್ಲಿ ‘ನಿರ್ಣಾಯಕ’ ಪಾತ್ರ ವಹಿಸುವವರು ಗುತ್ತಿಗೆದಾರರು ಹಾಗೂ ಸರ್ಕಾರಿ ನೌಕರರು. ಐದು ವರ್ಷದ ಸಿದ್ದರಾಮಯ್ಯನವರ ‘ಆಳ್ವಿಕೆ’ಯಲ್ಲಿ ಮೇಲ್ಜಾತಿಯ ನೌಕರರಿಗೆ ಆಯಕಟ್ಟಿನ ಹುದ್ದೆ ಕೊಟ್ಟಿಲ್ಲ, ಗುತ್ತಿಗೆದಾರರಿಗೆ ಲಾಭಕಟ್ಟಿನ ಕಾಮಗಾರಿಗಳನ್ನು ನೀಡಿಲ್ಲ ಎಂಬ ಅಸಮಾಧಾನ ಇದೆ. ಕುರುಬ ಸಮುದಾಯದ ಮೈಸೂರಿನ ನಾಯಕರು ವ್ಯವಸ್ಥಿತವಾಗಿ ತಮ್ಮ ಹಿತಕಾಯುವವರನ್ನು ‘ಕಾಪಾಡಿ’
ಕೊಂಡು ಬಂದರು. ಮೇಲ್ಜಾತಿಯವರನ್ನು ಸಂಪೂರ್ಣ ಕಡೆಗಣಿಸಿದರು. ಅತೃಪ್ತಿ ಹೊರಹಾಕುತ್ತಿದ್ದ ಮೇಲ್ಜಾತಿಯವರನ್ನು ತಮ್ಮತ್ತ ಬರಸೆಳೆದು, ಓಲೈಸುವ ಕೆಲಸ ಮಾಡಲು ಮುಂದಾಗದ ಸಿದ್ದರಾಮಯ್ಯ, ‘ಜಾತಿವಾದಿ’ಗಳಾದ ಕೆಲವು ಅಧಿಕಾರಿಗಳಿಗೆ ತವರಿನ ಜವಾಬ್ದಾರಿ ಕೊಟ್ಟು ಮೈಮರೆತರು. ವಿಧಾನಸೌಧದ ಮೂರನೇ ಮಹಡಿಯಲ್ಲಿ ಆಸೀನರಾಗಿದ್ದ ಅವರ ಕಿವಿಗೆ ವರುಣಾದ ನೋವು, ಆಕ್ರಂದನ, ಸಿಟ್ಟಿನ ಕಿಡಿನುಡಿಗಳು ಅಪ್ಪಳಿಸಲೇ ಇಲ್ಲ. ಹೀಗೆ ವೈರಿ ಪಡೆ ಬಲವಾಗುತ್ತಲೇ ಹೋಯಿತು ಎಂಬ ಅಭಿಪ್ರಾಯವೂ ಬಲವಾಗಿದೆ.

ಅಹಿಂದ ಎನ್ನುವ ಸಿದ್ದರಾಮಯ್ಯನವರದ್ದು ‘ಕುಹಿಂದ’. ಅಲ್ಲಿ ಕುರುಬರಲ್ಲದ ಬೇರೆ ಹಿಂದುಳಿದ ಸಮುದಾಯದವರಿಗೆ ಆದ್ಯತೆಯೇ ಸಿಕ್ಕಿಲ್ಲ ಎಂದು ಎಚ್.ವಿಶ್ವನಾಥ್‌ ಕಿಡಿಕಾರಿದ್ದುಂಟು. ಒಕ್ಕಲಿಗರು, ಲಿಂಗಾಯತರು ಮಾತ್ರವಲ್ಲದೇ ಇತರೆ ಹಿಂದುಳಿದವರಲ್ಲೂ ಅಸಮಾಧಾನ ಇದೆ ಎಂದು ಹೇಳಲಾಗುತ್ತಿದೆ.

ಐಎಎಸ್ ಅಧಿಕಾರಿಗಳಾದ ರಶ್ಮಿ ಅವರ ಮೇಲೆ ನಡೆದ ಹಲ್ಲೆ, ಸಿ. ಶಿಖಾ ಅವರ ಮೇಲೆ ಮರೀಗೌಡ ನಡೆಸಿದ ದಬ್ಬಾಳಿಕೆ, ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ ಅಕಾಲಿಕ ವರ್ಗಾವಣೆ ಪ್ರಕರಣಗಳೂ ಅಧಿಕಾರಿಗಳ ಮನಸ್ಸುಗಳನ್ನು ಕದಡಿದವು. ಒಳ್ಳೆಯ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎಂಬ ಅಭಿಮತ ನೌಕರ ವರ್ಗದಲ್ಲಿ ಬೇರೂರತೊಡಗಿತು. ಇದು ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಕೋಪವನ್ನು ತಾಪವಾಗಿಸಿತು.

‘ಸಿದ್ದರಾಮಯ್ಯ ಸರ್ಕಾರದಲ್ಲಿ ‘ಜಿಲೇಬಿ’(ಗೌಡ,ಲಿಂಗಾಯತ, ಬ್ರಾಹ್ಮಣ)ಗೆ ಯಾವುದೇ ಕಿಮ್ಮತ್ತಿಲ್ಲ. ಜಿಲೇಬಿಗೆ ಸೇರಿದ ಕಡತ ಬಂದರೆ, ಕಣ್ಣೆತ್ತಿಯೂ ನೋಡುವುದಿಲ್ಲ’ಎಂದು ವಿರೋಧ ಪಕ್ಷದನಾಯಕ ಜಗದೀಶ ಶೆಟ್ಟರ್ ಅವರು, ವಿಧಾನಸಭಾ ಅಧಿವೇಶನದಲ್ಲೇ ಟೀಕಿಸಿದ್ದುಂಟು. ಆದರೆ, ಅದು ಹೀಗೆ ಒಳಪೆಟ್ಟು ನೀಡುತ್ತದೆ ಎಂಬುದು ಮುಖ್ಯಮಂತ್ರಿಗೆ ಹೊಳೆಯಲೇ ಇಲ್ಲ ಎಂದು ಒಕ್ಕಲಿಗ ನಾಯಕರೊಬ್ಬರು ಹೇಳಿದರು.

ತಮ್ಮ ಬೆನ್ನಿಗೆ ನಿಂತು ವರುಣಾ ಕ್ಷೇತ್ರದಲ್ಲಿ ಗೆಲ್ಲಿಸಿದ್ದ ಕಳೆದ ಕಾಲದ ಸಖ, ದಲಿತ ನಾಯಕ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಕಡೆಗಣಿಸಿದರು. ‘ಇದೇ ನನ್ನ ಕೊನೆಯ ರಾಜಕಾರಣ, ಮತ್ತೆ ನಿವೃತ್ತನಾಗುವೆ’ ಎಂದು ಪ್ರತಿಪಾದಿಸುತ್ತಿದ್ದ ಪ್ರಸಾದ್ ಅವರ ಗಮನಕ್ಕೂ ತರದೇ ಸಚಿವ ಸಂಪುಟದಿಂದ ಕಿತ್ತೊಗೆಯಲಾಯಿತು. ಪ್ರಸಾದ್‌ ಅವರನ್ನು ಅವಮಾನಕಾರಿಯಾಗಿ ನಡೆಸಿಕೊಂಡಿದ್ದು ದಲಿತ ಮತದಾರರ ಮೇಲೆ ದೊಡ್ಡ ಪರಿಣಾಮ ಬೀರಿದೆ.

ಇದರ ಜತೆಗೆ, ತಮ್ಮ ಆಪ್ತಕೂಟದಲ್ಲಿದ್ದ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್, ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪ್ರಸಾದ್ ರಾಜೀನಾಮೆ ನೀಡಿದ್ದರಿಂದಾಗಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬೋಸ್ ತಯಾರಿ ನಡೆಸಿದ್ದರು. ಆದರೆ, ಆಗ ಟಿಕೆಟ್ ಕೊಡಲಿಲ್ಲ. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಮಹದೇವಪ್ಪ ಮತ್ತು ಬೋಸ್ ಮತ್ತೆ ಯತ್ನ ನಡೆಸಿದರು. ಆದರೆ, ತಮ್ಮ ಪುತ್ರ ಯತೀಂದ್ರ ಅವರಿಗೆ ಭವಿಷ್ಯದಲ್ಲಿ ಸ್ಪರ್ಧೆ ಒಡ್ಡಬಹುದು ಎಂಬ ಕಾರಣಕ್ಕೆ ಬೋಸ್‌ಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಮುಂದಾಗಲಿಲ್ಲ. 2013ರಲ್ಲಿ ದಲಿತ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದ ಸಿದ್ದರಾಮಯ್ಯ, ಈಗ ಶ್ರೀನಿವಾಸ ಪ್ರಸಾದ್ ಅವರನ್ನು ಹೊರಗೆ ದಬ್ಬಿದರು, ಸುನೀಲ್ ಬೋಸ್ ಭವಿಷ್ಯಕ್ಕೆ ಕಲ್ಲು ಹಾಕಿದರು ಎಂಬ ಸಿಟ್ಟು ದಲಿತರಲ್ಲಿ ಸಹಜವಾಗಿ ಮೂಡಿದೆ. ಇದು ಕೂಡ ಚಾಮುಂಡೇಶ್ವರಿಯಲ್ಲಿ ಸಿಟ್ಟಾಗಿ ಹೊರಹೊಮ್ಮಿದೆ ಎಂಬ ಅಭಿಪ್ರಾಯ ಪ್ರಬಲವಾಗಿದೆ.

ಅಭಿವೃದ್ಧಿ ವಿಷಯಕ್ಕೆ ಬಂದರೆ ಹುಂಡಿಗಳು (ಕುರುಬರು ವಾಸಿಸುವ ಪ್ರದೇಶ) ಸಾಕಪ್ಪಾ ಕಾಮಗಾರಿ ಎನಿಸುವಷ್ಟು ಫಳಫಳ ಹೊಳೆಯುತ್ತಿವೆ.ಅದೇ ಕೊಪ್ಪಲು (ಒಕ್ಕಲಿಗರ ಜನವಸತಿ ಪ್ರದೇಶ), ಲಿಂಗಾಯತರ ಜನವಸತಿಗಳು ಮಾತ್ರ ರಸ್ತೆಯಿಲ್ಲದೇ ಕಳೆಗುಂದಿವೆ.

ನಂಜನಗೂಡು, ಗುಂಡ್ಲುಪೇಟೆಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ ಪರೋಕ್ಷವಾಗಿ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಗಳು ಸುಲಭವಾಗಿ ಗೆದ್ದಿದ್ದರು. ಗೆದ್ದ ಬಳಿಕ ಗೆಲುವಿಗೆ ನಾನೇ ಕಾರಣ ಎಂದು ಸಿದ್ದರಾಮಯ್ಯ ಬಿಂಬಿಸಿಕೊಂಡಿದ್ದರು. ಇದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕಣ್ಣು ಕೆಂಪಾಗಿಸಿತು. ಚಾಮುಂಡೇಶ್ವರಿಯಲ್ಲಿ ಜಿ.ಟಿ. ದೇವೇಗೌಡರನ್ನು ಗೆಲ್ಲಿಸಲು ದೊಡ್ಡಗೌಡರು ಪಂಥಕ್ಕೆ ಬೀಳಲು ಇದು ಕಾರಣವಾಯಿತು. ಅಲ್ಲಿಯೂ ಸಿದ್ದರಾಮಯ್ಯ ಎಚ್ಚರ ತಪ್ಪಿದರು.

ಈ ಎಲ್ಲವೂ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಗೆಲುವಿಗೆ ತೊಡಕಾಗಲು ಆರಂಭವಾದವು. ಅದಕ್ಕಾಗಿ, ಬಾದಾಮಿಗೂ ಕಾಲಿಟ್ಟರು ಎಂದು ಹೇಳಲಾಗುತ್ತಿದೆ.

ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಲು ತಂತ್ರ

ಚಾಮುಂಡೇಶ್ವರಿಯಲ್ಲಿನ ‘ಅಭದ್ರತೆ’ಯ ಏಣಿಯನ್ನು ಬಳಸಿಕೊಂಡ ಸಿದ್ದರಾಮಯ್ಯ ಬಾದಾಮಿಗೆ ಲಾಗ ಹಾಕಿದ್ದಾರೆ. ಇದರ ಹಿಂದೆ ಎರಡನೇ ಅವಧಿಗೆ ಮುಖ್ಯಮಂತ್ರಿ ಗಾದಿಗೆ ಏರುವ ತಂತ್ರಗಾರಿಕೆ ಇದೆ ಎಂದೂ ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ಚುನಾವಣೆ ಬಳಿಕ ಕಾಂಗ್ರೆಸ್‌ಗೆ ಬಹುಮತ ಬಂದರೆ ಹಳೆ ಮೈಸೂರು ಭಾಗದ ಶಾಸಕರ ಪೈಕಿ ಬಹುತೇಕರು ಸಿದ್ದರಾಮಯ್ಯನವರ ಪರವಾಗಿ ನಿಲ್ಲುತ್ತಾರೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಉತ್ತರ ಕರ್ನಾಟಕ ಭಾಗದವರ ಬೆಂಬಲವೂ ಬೇಕಾಗುತ್ತದೆ. ಬಾದಾಮಿಯಲ್ಲಿ ನಿಂತರೆ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಭಾವ ಬೀರಿ, ಅಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರಬಹುದು. ಅದು ಸಾಧ್ಯವಾದರೆ ಬಹುಸಂಖ್ಯಾತ ಶಾಸಕರು ತಮ್ಮ ಕಡೆ ನಿಲ್ಲುತ್ತಾರೆ. ಹೀಗೆ ಮಾಡುವ ಮುಖೇನ ದಲಿತ ಮುಖ್ಯಮಂತ್ರಿ, ಒಕ್ಕಲಿಗ ಮುಖ್ಯಮಂತ್ರಿ ಎಂಬ ಕೂಗು ಏಳಲು ಆಸ್ಪದವೇ ಇಲ್ಲದಂತೆ ನೋಡಿಕೊಳ್ಳುವುದು ಸಿದ್ದರಾಮಯ್ಯನವರ ‘ಕಾರ್ಯತಂತ್ರ ಮತ್ತು ಯುದ್ಧತಂತ್ರ’. ಇದಕ್ಕಾಗಿಯೇ ಪಕ್ಷದ ವರಿಷ್ಠರೂ ಸೇರಿ ಎಲ್ಲರೂ ವಿರೋಧ ವ್ಯಕ್ತಪಡಿಸಿದರೂ ಕೂಡ, ಉತ್ತರ ಕರ್ನಾಟಕದ ಭಾಗದ ನಾಯಕರ ಒತ್ತಡದ ನೆವವೊಡ್ಡಿ ಬಾದಾಮಿಗೂ ಅಡಿಯಿಟ್ಟಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಬಾದಾಮಿಯಲ್ಲಿ ಕುರುಬರ ಮತಗಳಿಗಿಂತ ಲಿಂಗಾಯತರ ಮತಗಳು ಹೆಚ್ಚಿವೆ. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಲು ಶಿಫಾರಸು ಮಾಡಿದ ‘ಊರುಗೋಲು’ ಬಳಸಿ ಆ ಸಮುದಾಯದ ನಾಯಕರಾಗಲೂ ಅವರು ಹೊರಟಿದ್ದಾರೆ. ಬಾದಾಮಿಯಲ್ಲಿ ಗೆದ್ದರೆ ಲಿಂಗಾಯತರೂ ನನ್ನ ಪರ ಇದ್ದಾರೆ ಎಂದು ಬಿಂಬಿಸಿಕೊಳ್ಳುವುದು ಅವರ ಉದ್ದೇಶ ಎನ್ನಲಾಗುತ್ತಿದೆ.

ಒಂದೇ ಕುಟುಂಬಕ್ಕೆ ಮೂರು ಟಿಕೆಟ್!

ಒಂದೇ ಕುಟುಂಬಕ್ಕೆ ಮೂರು ಟಿಕೆಟ್ ಗಿಟ್ಟಿಸಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿದ್ದವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಪರಂಪರೆಗೂ ನಾಂದಿ ಹಾಡಿದ್ದಾರೆ.

1983ರಲ್ಲಿ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಆರ್. ಗುಂಡೂರಾವ್ ಅಂದು ಚಿತ್ತಾಪುರ ಹಾಗೂ ಕುಶಾಲನಗರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಅಂದು ಕಾಂಗ್ರೆಸ್ ನಾಯಕಿಯಾಗಿದ್ದ, ಪ್ರಧಾನಿ ಇಂದಿರಾಗಾಂಧಿ ಅವರು, ಚಿತ್ತಾಪುರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ. ಕುಶಾಲನಗರ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಎದುರಾಳಿಯಾಗಿದ್ದ ಜೀವಿಜಯ ಎದುರು ಗುಂಡೂರಾವ್ ಸೋಲು ಕಂಡಿದ್ದರು.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿದ್ದರು. ಅವರಿಗೆ ಟಿಕೆಟ್ ನೀಡಲು ವರಿಷ್ಠರು ನಿರಾಕರಿಸಿದರು.
ಆದರೆ, ಸಿದ್ದರಾಮಯ್ಯ ತಮಗೆ ಎರಡು, ಪುತ್ರನಿಗೆ ಒಂದು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವುದು ಪಕ್ಷದ ನಾಯಕರ ಹುಬ್ಬೇರಿಸುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT