ಮಗಳನ್ನು ಹುಡುಕಿಕೊಡಿ: ಟ್ವಿಟರ್‌ನಲ್ಲಿ ಪೋಷಕರ ಮನವಿ
ಬೆಂಗಳೂರು: ‘ಅರೆ ಪ್ರಜ್ಞಾವಸ್ಥೆಯಲ್ಲಿ ಆತ್ಮಗಳ ಜೊತೆ ಮಾತನಾಡುತ್ತೇವೆ ಎಂದು ಹೇಳಿಕೊಳ್ಳುವ ಪಂಥದೆಡೆ ಆಕರ್ಷಿತಳಾಗಿದ್ದಾಳೆ’ ಎನ್ನಲಾಗಿದ್ದ ಬಾಲಕಿಯೊಬ್ಬಳು ಮನೆಯಿಂದ ನಾಪತ್ತೆಯಾಗಿದ್ದು, ಹುಡುಕಿಕೊಡುವಂತೆ ಆಕೆಯ ಪೋಷಕರು ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.
ಸುಬ್ರಹ್ಮಣ್ಯನಗರದಲ್ಲಿ ಪೋಷಕರೊಂದಿಗೆ ವಾಸವಿದ್ದ 17 ವರ್ಷದ ಅನುಷ್ಕಾ, ಅಕ್ಟೋಬರ್ 31ರಂದು ಮನೆಯಿಂದ ಕಾಣೆಯಾಗಿದ್ದಳು. ಈ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಒಬ್ಬಳೇ ಮಗಳು ಮನೆಬಿಟ್ಟು ಹೋಗಿ ಎರಡು ತಿಂಗಳಾಗಿದ್ಗು, ಸುಳಿವು ಸಿಕ್ಕಿಲ್ಲ. ಅಸಹಾಯಕರಾಗಿರುವ ಪೋಷಕರು ಈಗ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.
‘ಎರಡು ಜೊತೆ ಬಟ್ಟೆ, ₹2,500 ನಗದಿನೊಂದಿಗೆ ಹೋಗಿದ್ದ ಮಗಳು ಇನ್ನೂ ಪತ್ತೆಯಾಗಿಲ್ಲ. ಆಕೆ ನಮ್ಮನ್ನು ತುಂಬಾ ಪ್ರೀತಿಸುತ್ತಿದ್ದಳು. ಎಲ್ಲೇ ಇದ್ದರೂ ಮನೆಗೆ ಮರಳುತ್ತಾಳೆ’ ಎಂದು ಅನುಷ್ಕಾ ಅವರ ತಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಆಕೆಯ ವರ್ತನೆಯಲ್ಲಿ ಬದಲಾವಣೆಯಾಗಿತ್ತು. ಕೊಠಡಿಯಲ್ಲಿ ಏಕಾಂತದಲ್ಲೇ ಇರಲು ಬಯಸುತ್ತಿದ್ದಳು. ನಮ್ಮ ಜೊತೆ ಏನನ್ನೂ ಹಂಚಿಕೊಳ್ಳುತ್ತಿರಲಿಲ್ಲ. ಗಾಬರಿಗೊಂಡು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮನೋವೈದ್ಯರ ಬಳಿ ಕರೆದೊಯ್ದಿದ್ದೆವು’ ಎಂದು ಅನುಷ್ಕಾ ಅವರ ತಂದೆ ಅಭಿಷೇಕ್ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣಳಾಗಿದ್ದ ಆಕೆ, ಅಧ್ಯಾತ್ಮದತ್ತ ಆಕರ್ಷಿತಳಾಗಿದ್ದಳು. ಅದಕ್ಕೆ ಸಂಬಂಧಿಸಿದ ವಿಡಿಯೊಗಳನ್ನೇ ಹೆಚ್ಚಾಗಿ ವೀಕ್ಷಿಸುತ್ತಿದ್ದಳು ಎಂದು ಹೇಳಲಾಗಿದೆ.
‘ಬಾಲಕಿ ಸುಬ್ರಹ್ಮಣ್ಯನಗರದಿಂದ ಆಟೊ ಹಿಡಿದು ಹೊರಮಾವು ಬಳಿ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲಿಂದ ಆಕೆ ಎಲ್ಲಿ ಹೋಗಿದ್ದಾಳೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನ.1ರಂದು ಪೋಷಕರು ದೂರು ನೀಡಿದ್ದರು. ತನಿಖೆ ನಡೆಸುತ್ತಿದ್ದೇವೆ‘ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.