ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ, ಮಾಲ್‌, ಚಿತ್ರಮಂದಿರ ಪ್ರವೇಶಕ್ಕೆ ಲಸಿಕೆ ಕಡ್ಡಾಯ: ತಜ್ಞರ ಶಿಫಾರಸು

ಉದ್ಯಾನ, ಮಾಲ್‌, ಚಿತ್ರಮಂದಿರ ಪ್ರವೇಶಕ್ಕೆ ಲಸಿಕೆ ಕಡ್ಡಾಯ * ಪ್ರತಿ ತಿಂಗಳು ಶೇ 10 ರಷ್ಟು ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ
Last Updated 1 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್ ಸೇರಿದಂತೆ ಇನ್ನಿತರ ರೂಪಾಂತರಿಗಳು ಹರಡದಂತೆ ಪೂರ್ವಸಿದ್ಧತೆ ‌ಮಾಡಿಕೊಳ್ಳಬೇಕು ಎಂದು ಬಿಬಿಎಂಪಿಯ ಕೋವಿಡ್‌ ತಜ್ಞರ ಸಮಿತಿ ಸಲಹೆ ನೀಡಿದೆ.

ಕೋವಿಡ್ ರೂಪಾಂತರಗೊಂಡ ವೈರಾಣುಗಳು ಹರಡುವುದನ್ನು ತಡೆಯುವ ಸಲುವಾಗಿ ಉದ್ಯಾನ, ಚಿತ್ರಮಂದಿರ, ಮಾಲ್ ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಿಗೆ ಕೋವಿಡ್‌ನ ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡಬೇಕು. ಶಾಲೆಗಳಲ್ಲಿ ತಿಂಗಳಿಗೊಮ್ಮೆ ಶೇ 10 ರಷ್ಟು ವಿದ್ಯಾರ್ಥಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ. ತಜ್ಞರ ಸಮಿತಿಯ ಶಿಫಾರಸುಗಳ ಬಗ್ಗೆ ಸರ್ಕಾರದ ನಿರ್ದೇಶನ ಪಡೆದು ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ.

ಕೋವಿಡ್ ರೂಪಾಂತರಿ ವೈರಾಣು ನಿಯಂತ್ರಣಕ್ಕಾಗಿ ನಗರದಲ್ಲಿ ಯಾವ ರೀತಿ ಕಾರ್ಯೋನ್ಮುಖರಾಬೇಕು, ಯಾವೆಲ್ಲಾ ಬದಲಾವಣೆ ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಕೋವಿಡ್ ತಜ್ಞರ ಸಮಿತಿ ಜೊತೆ ಬುಧವಾರ ಸಮಾಲೋಚನೆ ನಡೆಸಿದರು. ತಜ್ಞರು ನೀಡಿರುವ ಸಲಹೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿಯೊಬ್ಬ ಅರ್ಹ ಫಲಾನುವಿಗಳೂ ಕಡ್ಡಾಯವಾಗಿ ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆಯುವ ಸಂಬಂಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಆರ್‌ಡಬ್ಲ್ಯುಎ), ಹೋಟೆಲ್‌ ಮಾಲೀಕರ ಸಂಘ, ವರ್ತಕರ ಸಂಘಗಳೂ ಸೇರಿ ವಿವಿಧ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸುವಂತೆ ಹಾಗೂ ಕೋವಿಡ್‌ ನಿಯಂತ್ರಣಕ್ಕೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲು ಕ್ರಮ ಕೈಗೊಳ್ಳುವಂತೆ ವಿಶೇಷ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಅವರಿಗೆ ಸೂಚನೆ ನೀಡಿದರು.

ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್, ನಿರ್ಮಲಾ ಬುಗ್ಗಿ ಉಪಸ್ಥಿತರಿದ್ದರು.

ತಜ್ಞರ ಸಮಿತಿಯು ಪ್ರಮುಖ ಸಲಹೆಗಳು

* ವಿದೇಶದಿಂದ ಬರುವವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು. ಕ್ವಾರಂಟೈನ್ ಮಾಡಲು ಕ್ರಮ ಕೈಗೊಳ್ಳಬೇಕು

* ಸಂಗ್ರಹಿಸಿರುವ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು

* ನಗರದ ಕಂಟೈನ್ಮೆಂಟ್ ವಲಯಗಳ ಹಾಗೂ ಕ್ಲಸ್ಟರ್‌ಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು

* ಸಭೆ-ಸಮಾರಂಭ, ಔತಣಕೂಟದಂತಹ ಕಾರ್ಯಕ್ರಮಗಳಲ್ಲಿ ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಜನ ಭಾಗವಹಿಸುವಂತೆ ನೋಡಿಕೊಳ್ಳಬೇಕು

* ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಂತ್ರಣ ನಿಯಮ ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ಕ್ರಮವಹಿಸಬೇಕು

* ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT