ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಕಿಂಗ್‌ ನೀತಿ ಮರು ಪರಿಶೀಲನೆ

ಇಂದು ನಿರ್ಧಾರ? l ಮನೆ ಮುಂದೆ ಸರ್ಕಾರಿ ಜಾಗದಲ್ಲಿ ವಾಹನ ನಿಲ್ಲಿಸುವುದಕ್ಕೆ ಶುಲ್ಕ
Last Updated 30 ನವೆಂಬರ್ 2020, 21:52 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ರೂಪಿಸಿದ್ದ ‘ವಾಹನ ನಿಲುಗಡೆ ನೀತಿ’ಯಲ್ಲಿರುವ ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತವಾಗಿರುವುದರಿಂದ ಈ ನೀತಿಯ ಪುನರ್‌ ಪರಿಶೀಲನೆಗೆ ಸರ್ಕಾರ ಮುಂದಾಗಿದೆ.

ಹೊಸ ಪಾರ್ಕಿಂಗ್‌ ನೀತಿ ಬಗ್ಗೆ ಸಮಾಲೋಚಿಸಿ ಸೂಕ್ತ ತಿದ್ದುಪಡಿ ಅಳವಡಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹಿರಿಯ ಅಧಿಕಾರಿಗಳ ಸಭೆಯನ್ನು ಮಂಗಳವಾರ ನಡೆಸಲಿದ್ದಾರೆ.

ಪಾರ್ಕಿಂಗ್‌ ನೀತಿಯ ಕರಡನ್ನು ಡಲ್ಟ್‌ 2020ರ ಮಾರ್ಚ್‌ನಲ್ಲಿ ಸಾರ್ವಜನಿಕರ ಮುಂದಿಟ್ಟಿತ್ತು. ಇದಕ್ಕೆ ಸರ್ಕಾರೇತರ ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಗಳು (ಆರ್‌ಡಬ್ಲ್ಯುಎ) ಹಾಗೂ ನಾಗರಿಕರಿಂದ 60ಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿದ್ದವು. ಒಟ್ಟು 360 ಸಲಹೆಗಳನ್ನು ಡಲ್ಟ್‌ ಸ್ವೀಕರಿಸಿತ್ತು. ಸಲಹೆ, ಆಕ್ಷೇಪಣೆಗಳನ್ನು ಪರಿಗಣಿಸಿ ಅಂತಿಮ ರೂಪ ನೀಡಿದೆ.

‘ಕರಡಿನಲ್ಲಿದ್ದ ಪ್ರಮುಖ ಅಂಶಗಳು ಹಾಗೆಯೇ ಇವೆ. ಸಾರಿಗೆ ಆಧರಿತ ಅಭಿವೃದ್ಧಿ ನೀತಿಗೆ ಅನುಗುಣವಾಗಿ ಈ ನೀತಿ ಇರಬೇಕು ಎಂಬ ಕಾರಣಕ್ಕೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ’ ಎಂದು ಡಲ್ಟ್‌ನ ಅಧಿಕಾರಿಯೊಬ್ಬರು ತಿಳಿಸಿದರು.

ನೀತಿಯಲ್ಲೇನೇನಿದೆ?: ನಗರದಲ್ಲಿ ಪ್ರದೇಶವಾರು ಪಾರ್ಕಿಂಗ್‌ ಯೋಜನೆ ರೂಪಿಸುವುದು, ಇದರ ಅನುಷ್ಠಾನಕ್ಕೆ ಪ್ರತಿ ಬಿಬಿಎಂಪಿಯ ವಲಯಕ್ಕೊಂದು ಕಾರ್ಯಪಡೆ ಹೊಂದುವ ಪ್ರಸ್ತಾವಗಳು ಈ ನೀತಿಯಲ್ಲಿವೆ. ಖಾಸಗಿ ವಾಹನ ಬಳಕೆಯನ್ನು ಕಡಿಮೆ ಮಾಡಿ, ಸಾರ್ವಜನಿಕ ವಾಹನ ಬಳಕೆಗೆ ಉತ್ತೇಜನ ನೀಡುವ ಆಶಯದಿಂದ ಈ ಪಾರ್ಕಿಂಗ್‌ ನೀತಿಯನ್ನು ರೂಪಿಸಲಾಗಿದೆ. ಮನೆ ಮುಂದಿನ ರಸ್ತೆಗಳಲ್ಲಿ ವಾಹನ ನಿಲ್ಲಿಸುವುದಕ್ಕೆ ನಿಗದಿತ ಶುಲ್ಕ ಪಾವತಿಸಿ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸುವುದು, ಮನೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದಿದ್ದರೆ ವಾಹನ ಖರೀದಿಗೆ ಅವಕಾಶ ಕಲ್ಪಿಸದಿರುವುದು ಸೇರಿದಂತೆ ಅನೇಕ ಮಹತ್ತರ ಅಂಶಗಳನ್ನು ಇದು ಒಳಗೊಂಡಿದೆ.

ಕಾರ್ಯಪಡೆಗೇನು ಕೆಲಸ: ಪ್ರದೇಶವಾರು ಪಾರ್ಕಿಂಗ್‌ ಬೇಡಿಕೆಗಳನ್ನು ಆಧರಿಸಿ ಅಲ್ಲಿ ಲಭ್ಯ ಇರುವ ಸಂಪನ್ಮೂಲ ಬಳಸಿ ವಾಹನ ನಿಲುಗಡೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೂ ಇದಕ್ಕೆ ಅಗತ್ಯ ವ್ಯವಸ್ಥೆರೂಪಿಸಿ ಜಾರಿಗೊಳಿಸುವ ಸಂಪೂರ್ಣ ಹೊಣೆಯನ್ನು ವಲಯ ಕಾರ್ಯಪಡೆಗೆ ವಹಿಸಲಾಗಿದೆ. ಪಾಲಿಕೆಯ ವಲಯ ಆಯುಕ್ತರು ಕಾರ್ಯಪಡೆಯ ಮುಖ್ಯಸ್ಥರಾಗಿರುತ್ತಾರೆ. ಆಯಾ ವಲಯದ ಸಂಚಾರ ಪೊಲೀಸ್‌ ಇಲಾಖೆಯ ಡಿಸಿಪಿ ಅಥವಾ ಎಸಿಪಿ ದರ್ಜೆಯ ಅಧಿಕಾರಿ ಮತ್ತು ಸಾರಿಗೆ ಇಲಾಖೆ ಅಧಿಕಾರಿ (ಆರ್‌ಟಿಒ/ ಎಆರ್‌ಟಿಒ) ಇದರ ಸದಸ್ಯರಾಗಿರುತ್ತಾರೆ. ಪಾರ್ಕಿಂಗ್‌ ವ್ಯವಸ್ಥೆಯನ್ನು ಆಗಾಗ ಪರಿಶೀಲಿಸಿ ಸೂಕ್ತ ಮಾರ್ಪಾಡುಗಳನ್ನು ಮಾಡುವ ಜವಾಬ್ದಾರಿಯೂ ಕಾರ್ಯಪಡೆಯದ್ದಾಗಿರಲಿದೆ.

ಉನ್ನತ ಸಮಿತಿ: ನಗರದ ಪಾರ್ಕಿಂಗ್‌ ವ್ಯವಸ್ಥೆಗೆ ಸಂಬಂಧಿಸಿದ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ಯೋಜನೆ ರೂಪಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ನೇತೃತ್ವದಲ್ಲಿ ಉನ್ನತ ಸಮಿತಿಯನ್ನು ರಚಿಸುವ ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ಸಂಚಾರ ಪೊಲೀಸ್‌ ಇಲಾಖೆ ಹೆಚ್ಚುವರಿ ಕಮಿಷನರ್‌ ಅವರನ್ನು ಸಮಿತಿ ಸದಸ್ಯರನ್ನಾಗಿ ನೇಮಿಸುವ ಪ್ರಸ್ತಾವ ಕರಡಿನಲ್ಲಿತ್ತು. ಈಗ ಈ ಸಮಿತಿಗೆ ಬಿಡಿಎ ಆಯುಕ್ತರನ್ನು ಸೇರ್ಪಡೆ ಮಾಡಲಾಗಿದೆ. ಡಲ್ಟ್‌ ಆಯುಕ್ತರು ಈ ಸಮಿತಿಯ ಸಂಚಾಲಕ ಸದಸ್ಯರಾಗಿರುತ್ತಾರೆ. ಪಾರ್ಕಿಂಗ್‌ ಶುಲ್ಕ ಪರಿಷ್ಕರಣೆ, ಸೇವೆ ನೀಡುವ ಏಜೆನ್ಸಿಗಳ ಜೊತೆ ಸಮನ್ವಯ ಈ ಸಮಿತಿಯ ಹೊಣೆ.

ಉನ್ನತ ಸಮಿತಿಯು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ) ಅಥವಾ ಏಕೀಕೃತ ಮಹಾನಗರ ಸಾರಿಗೆ ಪ್ರಾಧಿಕಾರ (ಯುಎಂಟಿಎ) ರಚನೆಯಾಗುವವರೆಗೆ ಮಾತ್ರ ಉನ್ನತ ಸಮಿತಿ ಅಸ್ತಿತ್ವದಲ್ಲಿರಲಿದೆ. ನಂತರ ಆ ಪ್ರಾಧಿಕಾರವೇ ಉನ್ನತ ಸಮಿತಿಯ ಜವಾಬ್ದಾರಿ ನಿಭಾಯಿಸಲಿದೆ ಎಂದು ಕರಡಿನಲ್ಲಿ ಸ್ಪಷ್ಟಪಡಿಸಲಾಗಿತ್ತು.

‘ಮನೆ ಮುಂದಿನ ರಸ್ತೆಯಲ್ಲಿ ವಾಹನ ನಿಲ್ಲಿಸುವುದಕ್ಕೆ ಶುಲ್ಕ ವಿಧಿಸುವುದು, ಮನೆಯಲ್ಲಿ ಜಾಗ ಇಲ್ಲದವರು ವಾಹನ ಖರೀದಿಸುವುದನ್ನು ನಿರ್ಬಂಧಿಸುವಂತಹ ಅಂಶಗಳು ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಹೊಡೆತ ನೀಡಬಹುದು ಎಂಬ ಆತಂಕ ಸರ್ಕಾರಕ್ಕಿದೆ. ಹಾಗಾಗಿ ಈ ನಿಬಂಧನೆಗಳನ್ನು ಸಡಿಲಗೊಳಿಸಲು ಸರ್ಕಾರ ಮುಂದಾಗಿದೆ’ ಎನ್ನಲಾಗಿದೆ.

***

ಪಾರ್ಕಿಂಗ್‌ ನೀತಿಯ ಧ್ಯೇಯೋದ್ದೇಶಗಳು

* ಅಸ್ತವ್ಯಸ್ತ ಪಾರ್ಕಿಂಗ್ ಬದಲು ವಾಹನಗಳನ್ನು ಅಚ್ಚುಕಟ್ಟಾಗಿ ನಿಲುಗಡೆ ಮಾಡುವ ವ್ಯವಸ್ಥೆ ರೂಪಿಸುವುದು

* ವಾಹನಗಳನ್ನು ಎಲ್ಲೆಂದರಲ್ಲಿ ಉಚಿತವಾಗಿ ನಿಲ್ಲಿಸುವ ಪ್ರವೃತ್ತಿಗೆ ಕಡಿವಾಣ ಹಾಕಿ, ಹಣ ಪಾವತಿಸಿ ವಾಹನ ನಿಲ್ಲಿಸುವ ವ್ಯವಸ್ಥೆಯನ್ನು ಉತ್ತೇಜಿಸುವುದು

* ಪಾರ್ಕಿಂಗ್‌ ತಾಣಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಪಿಪಿಪಿ/ ಖಾಸಗಿ ಸಹಭಾಗಿತ್ವ ಉತ್ತೇಜಿಸುವುದು

* ಪಾರ್ಕಿಂಗ್‌ ನಿಯಮಗಳ ಸಕ್ರಿಯ ನಿರ್ವಹಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT