ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಗಳ ಬಳಿಕ ಭರ್ತಿಯಾದ ರವೀಂದ್ರ ಕಲಾಕ್ಷೇತ್ರ!: ‘ಪರ್ವ’ ನಾಟಕ ಪ್ರದರ್ಶನ

‘ಪರ್ವ’ ಪ್ರದರ್ಶನಕ್ಕೆ ನಗರದ ಜನತೆಯಿಂದ ಉತ್ತಮ ಪ್ರತಿಕ್ರಿಯೆ
Last Updated 23 ಅಕ್ಟೋಬರ್ 2021, 16:30 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಂಗಾಯಣ ಪ್ರಸ್ತುತಪಡಿಸಿದ ‘ಪರ್ವ’ ನಾಟಕದ ಪ್ರದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಚಾಲನೆ ದೊರೆತಿದ್ದು,ನಗರದ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಎರಡು ವರ್ಷಗಳ ಬಳಿಕ ರವೀಂದ್ರ ಕಲಾಕ್ಷೇತ್ರದ ಎಲ್ಲ ಆಸನಗಳು ಭರ್ತಿಯಾದದ್ದು ವಿಶೇಷ.

ಕನ್ನಡ ರಂಗಭೂಮಿಯ ಇತಿಹಾಸದಲ್ಲಿಯೇ ವಿಶಿಷ್ಟ ಪ್ರಯತ್ನ ಎನ್ನಲಾದ 8 ಗಂಟೆಯಷ್ಟು ಸುದೀರ್ಘ ಅವಧಿಯ ನಾಟಕ ಪ್ರದರ್ಶನಕ್ಕೆ ಸಾಹಿತಿ ಎಸ್.ಎಲ್.ಭೈರಪ್ಪ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಚಾಲನೆ ನೀಡಿದರು.

ಬೆಳಿಗ್ಗೆ 10 ಗಂಟೆಯಿಂದಮೂಡಿ ಬಂದ ‘ಪರ್ವ’ದ ದೃಶ್ಯಗಳು ಪ್ರೇಕ್ಷಕರನ್ನು ಕುರ್ಚಿಯಲ್ಲೇ ಬಂಧಿಸಿದವು. ಆರಂಭದಲ್ಲೇ ಕಂಡು ಬಂದ ಧೃತರಾಷ್ಟ್ರ ಭೀಮನನ್ನು ಕೊಲ್ಲುವ ದೃಶ್ಯ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿತು. ಈ ಸಮಯದಲ್ಲಿ ಮೂಡಿ ಬಂದ ಬೆಳಕಿನ ವಿನ್ಯಾಸ ನೋಡುಗರನ್ನು ಆರಂಭದಲ್ಲಿಯೇ ಸೆಳೆಯುವಲ್ಲಿ ಯಶಸ್ವಿಯಾಯಿತು.

ಗಾಂಧಾರಿಯ ಮನಸ್ಸಿನ ತುಮುಲಗಳು, ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿದ್ದರ ನಿಜವಾದ ಕಾರಣ ಹೇಳುವ ಸನ್ನಿವೇಶಗಳು ಮನೋಜ್ಞವಾಗಿ ಮೂಡಿ ಬಂದವು. ಕುಂತಿಯು ತನ್ನ ನೆನಪಿನ ಸುರುಳಿಗಳನ್ನು ಬಿಚ್ಚಿಡುವಾಗ ಒಂದೇ ಅವಧಿಯಲ್ಲಿ ಎರಡು, ಮೂರು ದೃಶ್ಯಗಳನ್ನು ಒಪ್ಪವಾಗಿ ಜೋಡಿಸಿ, ತೋರಿಸಿದ ನಿರ್ದೇಶಕರ ಜಾಣ್ಮೆಗೆ ಪ್ರೇಕ್ಷಕರು ತಲೆದೂಗಿದರು.

ದುರ್ಯೋಧನ ಪ್ರೇಕ್ಷಕರ ಸಮೂಹದೊಳಗೆ ನುಗ್ಗುವುದು, ಗಾಂಧಾರಿ ಕನ್ನಡಿ ಮುಂದೆ ಮಾತನಾಡುವುದು ಸೇರಿದಂತೆ ನಾಟಕದ ಕೊನೆಯ ದೃಶ್ಯಗಳು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿದವು. ನಾಟಕ ಮುಗಿಯುತ್ತಿದ್ದಂತೆ ನಟ, ನಟಿಯರು ಎಲ್ಲರಿಗೂ ಕೈ ಮುಗಿಯುತ್ತ ಕಲಾಮಂದಿರದ ಮುಖ್ಯದ್ವಾರದಿಂದ ನಿರ್ಗಮಿಸುತ್ತಿದ್ದಂತೆ, ಪ್ರೇಕ್ಷಕರು ಎದ್ದುನಿಂತು ಕರತಾಡನ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT