ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಕ್ಷರಸ್ಥ ಕನ್ನಡಿಗನಿಗೂ ವಿವೇಕವಿದೆ’: ಬರಗೂರು ರಾಮಚಂದ್ರಪ್ಪ

Last Updated 14 ಮಾರ್ಚ್ 2022, 16:27 IST
ಅಕ್ಷರ ಗಾತ್ರ

ಬೆಂಗಳೂರು: ‘ಅನಕ್ಷರಸ್ಥ ಕನ್ನಡಿಗನಿಗೂ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ವಿವೇಕವಿದೆ. ಕರ್ನಾಟಕವನ್ನು ಕನ್ನಡೀಕರಣಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ಚಿಂತಿಸುವುದೇ ಕನ್ನಡದ ವಿವೇಕ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ‘ಕನ್ನಡ ವಿವೇಕ’ದ ಕುರಿತು ಮಾತನಾಡಿದರು.

‘ಕನ್ನಡ ವಿವೇಕಕ್ಕೆ ದೊಡ್ಡ ಪರಂಪರೆ ಇದೆ. ಕನ್ನಡ ಭಾಷಿಕ ವಿವೇಕವು ಸಂವಿಧಾನದ ಆಶಯಗಳಿಗೆ ವಿರೋಧವಾಗದಂತೆ ಒಡಮೂಡಬೇಕು. ಕನ್ನಡಿಗರು ಭಾವೋದ್ರೇಕದ ಬದಲು ವಿವೇಕ ಪ್ರದರ್ಶಿಸಬೇಕು. ಆಳಲು ಬಂದ ಎಲ್ಲರನ್ನೂ ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ’ ಎಂದರು.

‘ರಾಜ್ಯದಲ್ಲಿ ನೂರಾರು ಉರ್ದು ಶಾಲೆಗಳಿವೆ. ಅಲ್ಲಿ ಅಗತ್ಯವಿರುವಷ್ಟು ಕನ್ನಡ ಶಿಕ್ಷಕರೇ ಇಲ್ಲ. ಶಿಕ್ಷಕರನ್ನು ನೇಮಿಸದಿದ್ದರೆ ಆ ಮಕ್ಕಳು ಕನ್ನಡ ಕಲಿಯುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ.ಹನೀಫ್‌, ‘ಶಾಲೆ–ಕಾಲೇಜುಗಳಲ್ಲಿ ವಿಧಿಸಿದ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಶಿರವಸ್ತ್ರ ಹಾಕಿಕೊಂಡು ಕೂರದಿದ್ದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ. ಹಿಜಾಬ್‌ ಸೇರಿದಂತೆ ಇನ್ನಿತರ ವಿಷಯಗಳನ್ನು ರಾಜಕಾರಣಿಗಳು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ವಿಷಯಗಳ ಕುರಿತು ಪ್ರತಿಷ್ಠಾನ ಜಾಗೃತಿ ಮೂಡಿಸಲಿದೆ’ ಎಂದು ತಿಳಿಸಿದರು.

ಸಾಹಿತಿ ದ್ವಾರನಕುಂಟೆ ಪಾತಣ್ಣ, ‘ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷವೂ ಉತ್ತಮ ಸಾಹಿತ್ಯ ಕೃತಿಯೊಂದನ್ನು ಆಯ್ಕೆ ಮಾಡಿ ₹25 ಸಾವಿರ ಬಹುಮಾನ ನೀಡಲಾಗುತ್ತದೆ. ವರ್ಷದಲ್ಲಿ ನಾಲ್ಕು ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದರು.

ಸುಧಾ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಹಾಗೂ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯ ರಘುನಾಥ ಚ.ಹ., ಕವಯತ್ರಿ ಡಾ.ಎಚ್‌.ಎಲ್‌.ಪುಷ್ಪ, ಪ್ರತಿಷ್ಠಾನದ ಕಾರ್ಯದರ್ಶಿ ಈರೇಗೌಡ ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT