ಬುಧವಾರ, ಅಕ್ಟೋಬರ್ 21, 2020
25 °C

ನಗರದಲ್ಲಿ ಬರೀ 1655 ಗುಂಡಿ: ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ನಗರದ ರಸ್ತೆಗಳಲ್ಲಿ ನಿಮಗೆ ಮಾರಿಗೆ ಒಂದರಂತೆ ಗುಂಡಿಗಳು ಕಾಣಿಸುತ್ತಿರಬಹುದು. ಆದರೆ, ಬಿಬಿಎಂಪಿ ಪ್ರಕಾರ ನಗರದಲ್ಲಿ ಮುಚ್ಚಲು ಬಾಕಿ ಇರುವುದು ಬರೀ 1,655 ಗುಂಡಿಗಳು!

‘ಪ್ರತಿದಿನವೂ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯುತ್ತಲೇ ಇರುತ್ತದೆ. ನಗರದ ಹೊರವಲಯಗಳಲ್ಲಿ ಹಗಲು ಹಾಗೂ ರಾತ್ರಿ ಗುಂಡಿ ಮುಚ್ಚುತ್ತೇವೆ. ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ಸಂಚಾರ ದಟ್ಟಣೆ ಹೆಚ್ಚು ಇರುವುದರಿಂದ, ರಾತ್ರಿ ವೇಳೆ ಮಾತ್ರ ಗುಂಡಿಗಳನ್ನು ಮುಚ್ಚುತ್ತೇವೆ’ ಎನ್ನುತ್ತಾರೆ ಬಿಬಿಎಂಪಿಯ ರಸ್ತೆ ಮೂಲ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಸೋಮಶೇಖರ್‌.

ಆದರೆ, ನಗರದ ರಸ್ತೆಗಳ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ನಗರದ ಬಹುತೇಕ ಕಡೆ ರಸ್ತೆಗಳು ಗುಂಡಿಮಯವಾಗಿವೆ.

‘ಚಾಮರಾಜಪೇಟೆಯಿಂದ ಮೆಜೆಸ್ಟಿಕ್‌ ಸಂಪರ್ಕಿಸುವ ಗೂಡ್‌ಶೆಡ್‌ ರಸ್ತೆಯೊಂದರಲ್ಲೇ ನೀವು ನೂರಾರು ಗುಂಡಿಗಳನ್ನು ಕಾಣಬಹುದು. ಇಡೀ ರಸ್ತೆಯೇ ಕಿತ್ತುಹೋಗಿದೆ. ಈ ರಸ್ತೆಯಲ್ಲಿ ವಾಹನಗಳು ಆಮೆಗತಿಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಬಾಲಗಂಗಾಧರನಾಥ ಮೇಲ್ಸೇತುವೆಯಿಂದ ಚಾಮರಾಜಪೇಟೆ ಕಡೆಗೆ ಹೋಗುವ ರಸ್ತೆಗೆ ಇಳಿಯುವ ಜಾಗದಲ್ಲಿ ರಾಯನ್‌ ಸರ್ಕಲ್‌ ಬಳಿ ಭಾರಿ ಗುಂಡಿ ಇದೆ’ ಎಂದು ದೂರುತ್ತಾರೆ ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರು.

‘ಮೆಜೆಸ್ಟಿಕ್‌ ಬಸವೇಶ್ವರ ನಗರದ ಕಡೆಗೆ ಹೋಗುವ ರಸ್ತೆಯೂ ಗುಂಡಿಮಯವಾಗಿದೆ. ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ವಾರಿಯರ್‌ ಬೇಕರಿ ಬಳಿ ರಸ್ತೆ ಗುಂಡಿ ಬಿದ್ದಿದೆ. ಇಲ್ಲಿ ವಾರದ ಹಿಂದಷ್ಟೇ ಇಬ್ಬರು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದರು’ ಎಂದು ಮಹಾಗಣಪತಿ ನಗರ ನಿವಾಸಿ ಸುಧೀರ್‌ ತಿಳಿಸಿದರು.

ನಗರದ ಕೇಂದ್ರ ಪ್ರದೇಶವಾದ ಮೆಜೆಸ್ಟಿಕ್‌ ಕೆಂಪೇಗೌಡ ಬಸ್‌ನಿಲ್ದಾಣವನ್ನು ಸಂಪರ್ಕಿಸುವ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿವೆ. ಬೇರೆ ಪ್ರದೇಶಗಳಿಂದ ಈ ನಗರಕ್ಕೆ ಬಂದಿಳಿಯುವ ಪ್ರಯಾಣಿಕರನ್ನು ಗುಂಡಿಮಯ ರಸ್ತೆಗಳೇ ಸ್ವಾಗತಿಸುತ್ತವೆ.  ಗುಂಡಿಗಳನ್ನು ಈಜಿಪುರವನ್ನು ಸಂಪರ್ಕಿಸುವ 80 ಅಡಿ ರಸ್ತೆಯೂ ಗುಂಡಿಮಯವಾಗಿದೆ.

‘ಸಣ್ಣ ಮಳೆಯಾದರೂ ನಗರದ ರಸ್ತೆಗಳು ಗುಂಡಿಮಯವಾಗುತ್ತದೆ. ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರವಾಹನ ಸವಾರರು ಇಂತಹ ರಸ್ತೆಗಳಲ್ಲಿ ಪ್ರಯಾಣಿಸುವುದೇ ದುಸ್ತರ ಎಂಬ ಸ್ಥಿತಿ ನಿರ್ಮಾಣವಾಗುತ್ತದೆ. ರಸ್ತೆ ಗುಂಡಿಯಿಂದಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡ ಬಳಿಕವೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ’ ಎಂದು ದೂರುತ್ತಾರೆ ಸಿಟಿಜನ್ಸ್‌ ಆ್ಯಕ್ಷನ್ ಫೋರಂ ಅಧ್ಯಕ್ಷ ಡಿ.ಎಸ್‌.ರಾಜಶೇಖರ್‌.

‘ರಸ್ತೆ ಗುಂಡಿ ಮುಚ್ಚುವುದಕ್ಕೆ ಬಿಬಿಎಂಪಿ ವೈಜ್ಞಾನಿಕ ವಿಧಾನ ಅನುಸರಿಸುತ್ತಿಲ್ಲ. ಮಳೆಬರುವಾಗಲೂ ಗುಂಡಿ ಮುಚ್ಚುವಂತಹ ತಂತ್ರಜ್ಞಾನ ಲಭ್ಯವಿದೆ.  ಈ ಸಮಸ್ಯೆಗೆ ಹೇಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಬಿಬಿಎಂಪಿಯವರಿಗೆ ತಿಳಿಸಿಕೊಟ್ಟಿದ್ದಾರೆ. ಆದರೂ ಈ ಸಮಸ್ಯೆಯಿಂದ ಸಾರ್ವಜನಿಕರಿಗೆ ಏಕೆ ಮುಕ್ತಿ ಸಿಗುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆ’ ಎಂದರು.

ನಿತ್ಯ 125 ಗುಂಡಿ ಮುಚ್ಚುವ ಪೈಥಾನ್‌

ಬಿಬಿಎಂಪಿಯು ಸಣ್ಣ ಗಾತ್ರದ ಗುಂಡಿಗಳನ್ನು ಮುಚ್ಚುವ ಸಲುವಾಗಿಯೇ ಎರಡು ಪೈಥಾನ್‌ ಯಂತ್ರಗಳನ್ನು ಖರೀದಿಸಿದೆ. ಈ ಯಂತ್ರಗಳು ಗುಂಡಿ ಮುಚ್ಚಿದ್ದಕ್ಕೆ ಪ್ರತಿ ಕಿ.ಮೀಗೆ ₹ 1.12 ಲಕ್ಷ ಮೊತ್ತವನ್ನು ಪಾಲಿಕೆ ನೀಡುತ್ತದೆ. ಈ ಯಂತ್ರವು ದಿನವೊಂದಕ್ಕೆ ಸರಾಸರಿ 125 ಗುಂಡಿಗಳನ್ನು ಮುಚ್ಚುವ ಸಾಮರ್ಥ್ಯ ಹೊಂದಿದೆ. ಕೆಲವೊಮ್ಮೆ ಗುಂಡಿ ಮುಚ್ಚಬೇಕಾದ ಸ್ಥಳಕ್ಕೆ ತಲುಪಲು ಸಮಯ ತಗಲುತ್ತದೆ. ಅಂತಹ ಸಂದರ್ಭದಲ್ಲಿ ಈ ಯಂತ್ರವು ಮುಚ್ಚುವ ಗುಂಡಿಗಳ ಪ್ರಮಾಣ ಕಡಿಮೆಯಾಗುತ್ತದೆ ಎನ್ನುತ್ತಾರೆ ಮುಖ್ಯ ಎಂಜಿನಿಯರ್‌ ಸೋಮಶೇಖರ್‌.

ರಸ್ತೆ ಮೂಲಸೌಕರ್ಯ ವಿಭಾಗವು ಕಳೆದ ಏಪ್ರಿಲ್‌ವರೆಗೆ ಮುಖ್ಯ ರಸ್ತೆಗಳಲ್ಲಿ 3273 ಗುಂಡಿಗಳನ್ನು ಗುರುತಿಸಿತ್ತು. ಈ ಪೈಕಿ ಇದುವರೆಗೆ 2977 ಗುಂಡಿಗಳನ್ನು ದುರಸ್ತಿಗೊಳಿಸಿದೆ. ಇನ್ನೂ 296 ಗುಂಡಿಗಳು ಹಾಗೆಯೇ ಇವೆ. ಎರಡು ಪೈಥಾನ್‌ ಯಂತ್ರಗಳು ದಿನಕ್ಕೆ 150 ಗುಂಡಿಗಳನ್ನು ಮುಚ್ಚುತ್ತವೆ ಎಂದು ಭಾವಿಸಿದರೂ 10 ದಿನಗಳಲ್ಲಿ 1500ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಬಹುದು. ಈ ಯಂತ್ರವನ್ನು ಬಳಸಿ ಕನಿಷ್ಠಪಕ್ಷ ಮುಖ್ಯರಸ್ತೆಗಳ ಗುಂಡಿಗಳನ್ನಾದರೂ ಒಂದೇ ತಿಂಗಳಿನಲ್ಲಿ ಮುಚ್ಚಬಹುದಿತ್ತು.

ದೊಡ್ಡ ಗಾತ್ರದ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಈ ಯಂತ್ರವನ್ನು ಬಳಸುವುದಿಲ್ಲ. ಅಂತಹ ಗುಂಡಿಗಳನ್ನು ಮಾನವಶ್ರಮವನ್ನು ಬಳಸಿಯೇ ಮುಚ್ಚಲಾಗುತ್ತದೆ. ರಸ್ತೆಯ ಮೇಲ್ಪದರ ಉದ್ದಕ್ಕೂ ಕಿತ್ತು ಹೋಗಿದ್ದರೆ ಅದಕ್ಕೆ ಡಾಂಬರೀಕರಣ ಮಾಡಲಾಗುತ್ತದೆ. ಆದರೂ ಬಹುತೇಕ ಎಲ್ಲ ರಸ್ತೆಗಳಲ್ಲೂ ಪದೇ ಪದೇ ಗುಂಡಿಗಳು ಕಾಣಿಸಿಕೊಳ್ಳುತ್ತಿವೆ.
ಅಂಕಿ ಅಂಶ

15,446

ನಗರದಲ್ಲಿ ಕಳೆದ ಏಪ್ರಿಲ್‌ನಿಂದ ಸೆ.17ರವರೆಗೆ ಬಿಬಿಎಂಪಿ ಅಧಿಕಾರಿಗಳು ಗುರುತಿಸಿದ ಗುಂಡಿ

13,791

ಮುಚ್ಚಿರುವ ಗುಂಡಿ

 

ಎಲ್ಲೆಲ್ಲಿ ಎಷ್ಟು ಗುಂಡಿ?

ವಲಯ; ಗುರುತಿಸಿದ್ದ ಗುಂಡಿ (2018ರ ಏಪ್ರಿಲ್‌ ಬಳಿಕ); ಮುಚ್ಚಿರುವುದು (ಸೆ 17ರವರೆಗೆ); ಬಾಕಿ

ಪೂರ್ವ; 1888; 1790; 98

ಪಶ್ಚಿಮ; 544; 466; 78

ದಕ್ಷಿಣ; 2751; 2469; 282

ಬೊಮ್ಮನಹಳ್ಳಿ; 1352; 1140; 212

ದಾಸರಹಳ್ಳಿ; 1388; 1198; 190

ಮಹದೇವಪುರ; 891; 684; 207

ರಾಜರಾಜೇಶ್ವರಿನಗರ; 955; 889; 66

ಯಲಹಂಕ; 2404; 2178; 226

ಮಾಹಿತಿ: ಬಿಬಿಎಂಪಿ

* ರಸ್ತೆ ಗುಂಡಿ ಮುಚ್ಚುವ ಕೆಲಸ ನಿತ್ಯವೂ ನಡೆಯುತ್ತಿದೆ.  ನಗರದ ಎಲ್ಲ ಗುಂಡಿಗಳನ್ನೂ ಶೀಘ್ರವೇ ಮುಚ್ಚುತ್ತೇವೆ
– ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆ ಆಯುಕ್ತ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು