ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತದೆಡೆ ಸಾಗಿದ ಸಂತ: ಅಂತಿಮ ದರ್ಶನ ಪಡೆದ ಜನಸಾಗರ

ನ್ಯಾಷನಲ್‌ ಕಾಲೇಜು: ವಿಶ್ವೇಶತೀರ್ಥರ
Last Updated 29 ಡಿಸೆಂಬರ್ 2019, 23:01 IST
ಅಕ್ಷರ ಗಾತ್ರ

ಬೆಂಗಳೂರು: ‘ದೂರದಿಂದಲೇ ವಿಶ್ವೇಶ ತೀರ್ಥ ಸ್ವಾಮೀಜಿಯ ಅಂತಿಮ ದರ್ಶನ ಭಾಗ್ಯ ಸಿಕ್ಕರೂ ಸಾಕು... ಕೃತಾರ್ಥರಾದಂತೆ’ ಎಂಬ ಭಾವದಲ್ಲಿ ಸಾವಿರಾರು ಜನ ನ್ಯಾಷನಲ್‌ ಕಾಲೇಜು ಮೈದಾನದತ್ತ ಭಾನುವಾರ ಹೆಜ್ಜೆ ಹಾಕಿದರು. ‘ಭಕ್ತಿಯ ಯಜಮಾನ’ನನ್ನು ಕಳೆದುಕೊಂಡ ದುಃಖ ಅವರಲ್ಲಿ ಮನೆ ಮಾಡಿತ್ತು.

ಗಂಟೆಗಟ್ಟಲೆ ಸರದಿಯಲ್ಲಿ ನಿಂತವರ ತುಟಿಗಳು ‘ಹರಿ ಸರ್ವೋತ್ತಮ, ವಾಯುಜೀವೋತ್ತಮ’ ಮಂತ್ರ ಪಠಿಸುತ್ತಿದ್ದವು. ಎಲ್ಲರ ಕಣ್ಣಾಲಿಗಳಲ್ಲಿ ತುಂಬಿದ್ದ ನೀರು, ಸ್ವಾಮೀಜಿ ಮೇಲೆ ಅವರಿಗಿದ್ದ ಭಕ್ತಿ ಮತ್ತು ಗೌರವವನ್ನು ಪ್ರತಿಬಿಂಬಿಸುತ್ತಿತ್ತು.

ವಿಶ್ವೇಶತೀರ್ಥರ ಪಾರ್ಥಿವ ಶರೀರವನ್ನು ಮಧ್ಯಾಹ್ನ ನ್ಯಾಷನಲ್‌ ಕಾಲೇಜು ಮೈದಾನಕ್ಕೆ ತರಲಾಗುತ್ತದೆ ಎಂಬ ಮಾಹಿತಿ ಇದ್ದರೂ, ಭಕ್ತರು ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದರು. ಶ್ರೀಗಳ ಪಾರ್ಥಿವ ಶರೀರ ಬರುತ್ತಿದ್ದಂತೆ ನೂಕು ನುಗ್ಗಲು ಉಂಟಾದರೂ, ಸಾರ್ವಜನಿಕರು ಸಂಯಮದಿಂದ ವರ್ತಿಸಿದರು. ಮನದಲ್ಲಿ ದುಃಖ ಮಡುಗಟ್ಟಿದ್ದರೂ ಕೊನೆಯ ಬಾರಿಗೆ ಶ್ರೀಗಳನ್ನು ಕಣ್ತುಂಬಿಕೊಂಡರೆ ಸಾಕು ಎಂಬ ಭಾವ ಅವರಲ್ಲಿತ್ತು. ಮಕ್ಕಳಷ್ಟೇ ಅಲ್ಲದೆ, 80–90 ವರ್ಷದ ವೃದ್ಧರೂ ಗಂಟೆಗಟ್ಟಲೇ ಸರದಿಯಲ್ಲಿ ನಿಂತರು.

‘ಶ್ರೀಗಳು ಸದಾ ಚಟುವಟಿಕೆಯಿಂದ ಇರುತ್ತಿದ್ದರು. ಅವರ ಉತ್ಸಾಹ ನೋಡಿದರೆ ಅವರು ಇನ್ನೂ 20 ವರ್ಷಗಳವರೆಗೆ ಬದುಕುತ್ತಾರೆ ಎಂಬ ನಿರೀಕ್ಷೆ ಇತ್ತು. ಅವರ ಅಗಲಿಕೆ ನೋವು ತಂದಿದೆ’ ಎಂದು ಭಕ್ತ ಮಂಜುನಾಥ ಭಟ್‌ ಕಣ್ಣೀರಾದರು.

ಶ್ರೀಗಳ ಪಾರ್ಥಿವ ಶರೀರದ ಎದುರು ಹೆಚ್ಚು ಹೊತ್ತು ನಿಲ್ಲಲು ಕೆಲವು ಭಕ್ತರಿಗೆ ಸಾಧ್ಯವಾಗಲಿಲ್ಲ. ಸಾಲಿನಿಂದ ಬದಿಗೆ ಬಂದು, ಅಲ್ಲಿಯೇ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದರು. ಹಲವರು ತಮ್ಮ ಅಂಗಿ ಮತ್ತು ಬನಿಯನ್‌ ತೆಗೆದು ಶ್ರೀಗಳಿಗೆ ಗೌರವ ತೋರಿದರು. ಸಾರ್ವಜನಿಕ ದರ್ಶನದ ಅವಧಿಯನ್ನು ಅರ್ಧ ತಾಸು ವಿಸ್ತರಿಸಲಾಯಿತಾದರೂ, ಭಕ್ತರ ಸಾಲು ಕರಗಲಿಲ್ಲ. ಮತ್ತಷ್ಟು ಮಂದಿ ಮೈದಾನದತ್ತ ಬರುತ್ತಲೇ ಇದ್ದರು. ಶ್ರೀಗಳ ಪಾರ್ಥಿವ ಶರೀರವಿದ್ದ ವಾಹನ ಮೈದಾನದಿಂದ ಹೋಗುತ್ತಿದ್ದ ಸಂದರ್ಭದಲ್ಲಿಯೂ ಸಾವಿರಾರು ಜನ ಮೈದಾನದ ಸುತ್ತ ಸೇರಿದ್ದು, ಅವರ ಮೇಲೆ ಜನ ಹೊಂದಿದ್ದ ಭಕ್ತಿ–ಗೌರವಕ್ಕೆ ಸಾಕ್ಷಿಯಾಗಿತ್ತು.

ಗಣ್ಯರಿಂದ ನಮನ: ಶ್ರೀಗಳ ಪಾರ್ಥಿವ ಶರೀರವನ್ನು ಇಡಲಾಗಿದ್ದ ವೇದಿಕೆಯು ಮೊದಲು ಗಣ್ಯರಿಂದ ತುಂಬಿ ಹೋಗಿತ್ತು.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುಳಸಿ ಹಾರ ಹಾಕಿ ನಮನ ಸಲ್ಲಿಸಿದರು. ಅವರ ಸಚಿವ ಸಂಪುಟದ ಹಲವು ಸದಸ್ಯರು ಶ್ರೀಗಳ ಅಂತಿಮ ದರ್ಶನ ಪಡೆದರು. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ‘ಶತಮಾನದ ಸಂತ’ನಿಗೆ ಅಂತಿಮ ನಮನ ಸಲ್ಲಿಸಿದರು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು, ಬೇಲಿಮಠದ ಶಿವರುದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು, ಚಲನಚಿತ್ರ ಕಲಾವಿದರು ಮತ್ತು ವಿವಿಧ ಪಕ್ಷಗಳ ಮುಖಂಡರು ಶ್ರೀಗಳ ಅಂತಿಮ ದರ್ಶನ ಪಡೆದರು. ಶ್ರೀಗಳ ಕುರಿತ ಅಭಿಮಾನದ ನುಡಿಗಳನ್ನುಹಲವರು ಹಂಚಿಕೊಂಡರು.

ವಿದ್ಯಾಪೀಠದಲ್ಲಿ ವಿಶ್ವೇಶ ತೀರ್ಥರ ಬೃಂದಾವನಕ್ಕೆ ನಮಸ್ಕರಿಸುತ್ತಿರುವ ದೃಶ್ಯ
ವಿದ್ಯಾಪೀಠದಲ್ಲಿ ವಿಶ್ವೇಶ ತೀರ್ಥರ ಬೃಂದಾವನಕ್ಕೆ ನಮಸ್ಕರಿಸುತ್ತಿರುವ ದೃಶ್ಯ

ಪೇಜಾವರರ ಪರ್ಯಾಯದ ಅವಧಿಯಲ್ಲಿ ಕನಕ ಮಂಟಪ
ಉಡುಪಿಯ ಶ್ರೀಕೃಷ್ಣ ಕನಕದಾಸರ ಭಕ್ತಿಗೊಲಿದು ಪಶ್ಚಿಮಾಭಿಮುಖಿಯಾದ ಎಂಬುದು ಪ್ರತೀತಿ. ಶ್ರೀಕೃಷ್ಣ ಮಠದ ಕನಕನ ಕಿಂಡಿ ಈ ಐತಿಹ್ಯವನ್ನು ಸಾರುತ್ತಿದೆ. ಪೇಜಾವರಶ್ರೀ ಪರ್ಯಾಯ ಪೀಠವನ್ನು ಅಲಂಕರಿಸಿದ್ದ ಅವಧಿಯಲ್ಲಿ ಉಡುಪಿಯ ರಥಬೀದಿಯಲ್ಲಿ ಕನಕ ಮಂಟಪವನ್ನು ನಿರ್ಮಿಸಲಾಗಿದೆ.

‘ಕನಕ ಮಂಟಪ ನಿರ್ಮಾಣದಲ್ಲಿ ವಿಶ್ವೇಶತೀರ್ಥರು ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಪರ್ಯಾಯದ ಅವಧಿಯಲ್ಲಿ ಮುತುವರ್ಜಿ ವಹಿಸಿ ಈ ಕಾರ್ಯವನ್ನು ನೆರವೇರಿಸಿದ್ದರು. ರಾಷ್ಟ್ರೀಯ ಕನಕ ಜಯಂತಿಯನ್ನು ಆಚರಿಸಿದ್ದರು’ ಎಂದು ಪ್ರೊ.ಬಿ.ಕೆ.ರವಿ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT