ಬೆಂಗಳೂರು: ‘ಹಿಂದೂ ಧರ್ಮದ ರಕ್ಷಣೆಗಾಗಿ ಪ್ರಸ್ತುತ ಹೋರಾಟ ನಡೆಸುವ ಪರಿಸ್ಥಿತಿ ಬಂದಿದೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಜಯನಗರ ಮಹಿಳಾ ಸಮಾಜ ವತಿಯಿಂದ ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ ಅಷಾಢ ಶುಕ್ರವಾರ ಅಂಗವಾಗಿ ಆಯೋಜಿಸಿದ್ದ ಲಲಿತ ಸಹಸ್ರನಾಮ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಧರ್ಮ ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಎಲ್ಲರೂ ಒಂದೇ ಕುಟುಂಬವೆಂದು ಭಾವಿಸಿ, ಜೀವಿಸುವ ಧರ್ಮ ಎಂದರೆ ಅದು ಹಿಂದೂ ಧರ್ಮ’ ಎಂದು ಪ್ರತಿಪಾದಿಸಿದರು.
ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಸ್ವಾತಂತ್ರ್ಯ ದೊರೆತ ನಂತರ ರಾಜ್ಯದ ಮೊಟ್ಟ ಮೊದಲ ಸುಸಜ್ಜಿತ ನಗರ ಜಯನಗರ. ಮೈಸೂರು ರಾಜಸಂಸ್ಥಾನಕ್ಕೂ ಜಯನಗರ ಕ್ಷೇತ್ರಕ್ಕೆ ಅವಿನಾಭಾವ ಸಂಬಂಧ ಇದೆ. ಪ್ರಜಾಪ್ರಭುತ್ವ ಆಡಳಿತ ಇದ್ದರೂ ನಾಡಿನ ಜನರ ಒಳಿತಿಗಾಗಿ ರಾಜಮನೆತನವು ತನ್ನ ಸೇವೆ ಹಾಗೂ ಹೋರಾಟ ನಡೆಸಲಿದೆ’ ಎಂದು ಹೇಳಿದರು.
ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಸಮಾಜದಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಮನೆ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೂ ಶ್ರಮಿಸುತ್ತಾಳೆ. ಮನೆ, ಕುಟುಂಬ ಮತ್ತು ಸಂಬಂಧಿಕರ ಶ್ರೇಯಸ್ಸು ಬಯಸುವ ಹೆಣ್ಣು, ಎಲ್ಲರ ಒಳಿತಿಗಾಗಿ ಲಲಿತ ಸಹಸ್ರನಾಮ ಪೂಜೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.
ಜಯನಗರ ಕ್ಷೇತ್ರದ ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ‘ಎಲ್ಲರ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಲಭಿಸಲೆಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಅಂದಾಜು 3 ಸಾವಿರ ಮಹಿಳೆಯರು ಪಾಲ್ಗೊಂಡಿದ್ದರು. ಪಾಲಿಕೆ ಮಾಜಿ ಸದಸ್ಯರಾದ ಸೋಮಶೇಖರ್, ನಾಗರತ್ನ ರಾಮಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.