ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

36 ಸಾವಿರ ಮರಗಳಿಗೆ ಕೊಡಲಿ: ಕಡಿಯಬೇಡಿ, ಬೇರೆಡೆ ನೆಡಿ ಎಂದ ಪರಿಸರ ಪ್ರೇಮಿಗಳು

Last Updated 14 ಜುಲೈ 2022, 6:25 IST
ಅಕ್ಷರ ಗಾತ್ರ

ಬೆಂಗಳೂರು:ಪರಿಸರಕ್ಕೆ ಬಹಳಷ್ಟು ಮಾರಕವಾಗಿರುವ ಹಾಗೂ ರೈತರಿಗೆ ಹಲವು ರೀತಿಯಲ್ಲಿ ತೊಂದರೆ ನೀಡುತ್ತಿರುವ ಪೆರಿಫೆರಲ್ ಹೊರವರ್ತುಲ ರಸ್ತೆ ಯೋಜನೆಯನ್ನು ಕೈಬಿಡಬಹುದಾಗಿದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟರು.

ಪೆರಿಫೆರಲ್ ಹೊರವರ್ತುಲ ರಸ್ತೆ ಯೋಜನೆ ಬಗ್ಗೆ ಪರಿಸರ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬುಧವಾರ ಅಭಿಪ್ರಾಯ ಸಂಗ್ರಹಕ್ಕೆ ಯಲಹಂಕದಲ್ಲಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳು ರೈತರು ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲಿ ಅವರನ್ನು ದೂರವಿಟ್ಟು ಸಭೆ ನಡೆಸುತ್ತಿರುವುದು ಸರಿಯಲ್ಲ ಎಂದರು.

ನಗರದ ವಾಹನದಟ್ಟಣೆ ನಿವಾರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುತ್ತಿರುವ 73.50 ಕಿ.ಮೀ ಪೆರಿಫೆರಲ್ ಹೊರವರ್ತುಲ ರಸ್ತೆ ಯೋಜನೆಗೆ 36 ಸಾವಿರಕ್ಕೂ ಹೆಚ್ಚು ಮರಗಳನ್ನು ತೆರವು ಮಾಡಬೇಕು. ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಆರು ಕೆರೆಗಳ ವ್ಯಾಪ್ತಿಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ಬಿಡಿಎ ಮತ್ತು ಮಾಲಿನ್ಯ ಮಂಡಳಿ ಅಧಿಕಾರಿಗಳು ವಿವರಿಸಿದರು.

ಯೋಜನೆ ಪ್ರಕಾರ, ಈ ರಸ್ತೆ ನಿರ್ಮಾಣದ ಪ್ರದೇಶದಲ್ಲಿ 36,824 ಮರಗಳಿವೆ. ಇದರಲ್ಲಿ 14,306 ಮರಗಳು ನೆಡುತೋಪಾಗಿವೆ. 13,542 ಮರಗಳು ನೀಲಗಿರಿ, 10,138 ಮರಗಳು ಇತರೆ ಜಾತಿಯದ್ದಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಿಸರಪ್ರೇಮಿಗಳು, ‘ಪರಿಸರಕ್ಕೆ ಮಾರಕವಾಗಿರುವ ಈ ಯೋಜನೆ ಅಗತ್ಯವಿದೆಯೇ ಎಂಬುದನ್ನು ಮತ್ತೆ ಆಲೋಚಿಸಬೇಕಾಗಿದೆ. ಮರಗಳನ್ನು ಕಡಿಯಬೇಡಿ. ಬೇರೆಡೆ ನೆಡಬೇಕು. ಅಲ್ಲದೆ ನೀವು ಹೇಳಿರುವ ಸಂಖ್ಯೆಗಳನ್ನು ಮತ್ತೆ ಪರಿಶೀಲಿಸಬೇಕಾಗಿದೆ. ಇದರ ವಾಸ್ತವ ವರದಿಯನ್ನು ಸಾರ್ವಜನಿಕರಿಗೆ ಸಿಗುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.

‘ರೈತರಿಗೆ ಮಾರಕವಾಗದಂತೆ ಕ್ರಮ ಕೈಗೊಳ್ಳಬೇಕು. 36 ಸಾವಿರ ಮರಗಳನ್ನು ಕಡಿಯಬೇಕಾಗಿರುವುದರಿಂದ ಈ ಬಗ್ಗೆ ನಗರದ ಕೇಂದ್ರ ಭಾಗದಲ್ಲಿ ಮತ್ತೆ ಸಭೆ ನಡೆಸಿ. ರಸ್ತೆ ವಿರುದ್ಧ ರೈತರು ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ಅವರನ್ನು ಹೊರತುಪಡಿಸಿ ಸಭೆ ಮಾಡುವುದು ಸರಿಯಲ್ಲ. ಎಲ್ಲರ ಜೊತೆ ಸಭೆ ನಡೆಸಿ ಯೋಜನೆಯ ಎಲ್ಲ ವಿವರಗಳನ್ನು ನೀಡಿ ಮುಂದುವರಿಯಿರಿ’ ಎಂದು ಪರಿಸರ ರಕ್ಷಣೆ ಹೋರಾಟಗಾರ ವಿಜಯ್‌ ನಿಶಾಂತ್‌ ಆಗ್ರಹಿಸಿದರು.

ಮುಖ್ಯಮಂತ್ರಿ ಭೇಟಿಯ ಭರವಸೆ
ಮುಂದಿನ ನಾಲ್ಕೈದು ದಿನಗಳಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಿ, ಮಾತುಕತೆ ನಡೆಸಲು ಅನುವು ಮಾಡಿಕೊಡಲಾಗುತ್ತದೆ ಎಂಬ ಜಿಲ್ಲಾಡಳಿತದ ಭರವಸೆಯಿಂದ ಪಿ.ಆರ್‌.ಆರ್‌. ಭೂಸ್ವಾಧೀನ ರೈತರ ಹೋರಾಟ ಸಮಿತಿ ಸದಸ್ಯರು ನಡೆಸುತ್ತಿದ್ದ ಹೋರಾಟವನ್ನು ಬುಧವಾರ ಕೈಬಿಟ್ಟಿದ್ದಾರೆ.

‘ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನಮ್ಮ ಬೇಡಿಕೆ ಈಡೇರಿಸಲು ಮನವಿ ಮಾಡಿಕೊಳ್ಳುತ್ತೇವೆ’ ಎಂದು ಸಮಿತಿ ಸದಸ್ಯ ರಘು ತಿಳಿಸಿದರು.

ಪೆರಿಫೆರಲ್‌ ಹೊರವರ್ತುಲ ರಸ್ತೆ ಯೋಜನೆ ಭೂಸ್ವಾಧೀನಕ್ಕೆ ‘2013ರ ಭೂ-ಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆ ಪ್ರಕಾರ ಪರಿಹಾರ ನೀಡಬೇಕು. ಇಲ್ಲವೇ ಯೋಜನೆ ರದ್ದುಗೊಳಿಸಿ ಎನ್‌ಒಸಿ ನೀಡಲು ಆಗ್ರಹಿಸಿ ಮಂಗಳವಾರ ಬಿಡಿಎ ಮುಂದೆ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸರು, ಆಡುಗೋಡಿ ಸಿಎಆರ್ ಮೈದಾನದಲ್ಲಿ ಇರಿಸಿದ್ದರು. ಅಲ್ಲಿಯೂ ರೈತರು ಪ್ರತಿಭಟನೆ ನಡೆಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT