ಶುಕ್ರವಾರ, ನವೆಂಬರ್ 22, 2019
27 °C
ವಿಚಾರವಾದಿಗಳ ವೇದಿಕೆಯ ಕಾರ್ಯಕ್ರಮದಲ್ಲಿ ಕಲೈ ಸೆಲ್ವಿ ಅಭಿಮತ

‘ಹಿಂದಿ ಹೇರಿಕೆ ವಿರುದ್ಧ ಹೋರಾಡಿದ್ದ ಪೆರಿಯಾರ್‌’

Published:
Updated:
Prajavani

ಬೆಂಗಳೂರು: ‘ಸ್ವಾತಂತ್ರ್ಯ ಪೂರ್ವದಲ್ಲಿಯೇ ಪೆರಿಯಾರ್‌ ರಾಮಸ್ವಾಮಿ ಅವರು ಹಿಂದಿ ಹೇರಿಕೆ ವಿರುದ್ಧ ಹೋರಾಡಿದ್ದರು’ ಎಂದು ವಿಚಾರವಾದಿ ಕಲೈ ಸೆಲ್ವಿ ಹೇಳಿದರು. 

ವಿಚಾರವಾದಿಗಳ ವೇದಿಕೆ ವತಿಯಿಂದ ರಾಮಸ್ವಾಮಿ ಪೆರಿಯಾರ್ ಅವರ 140 ನೇ ಜಯಂತಿ ಅಂಗವಾಗಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಭೆ ಅಥವಾ ಅಧಿವೇಶನಗಳಲ್ಲಿ ಎಲ್ಲ ಸದಸ್ಯರು ಹಿಂದಿಯಲ್ಲಿ ಮಾತನಾಡುತ್ತಿದ್ದರೆ, ಪೆರಿಯಾರ್‌ ರಾಮಸ್ವಾಮಿ ತಮಿಳಿನಲ್ಲಿ ಮಾತನಾಡುತ್ತಿದ್ದರು’ ಎಂದರು. 

‘ಪ್ರಸ್ತುತ ಏಕ ದೇಶ, ಏಕ ಭಾಷೆ ಮತ್ತು ಏಕ ಚುನಾವಣೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೇ ರೀತಿ, ದೇಶದಾದ್ಯಂತ ಏಕ ಜಾತಿ ಎಂದು ಘೋಷಿಸಲು ಸಾಧ್ಯವಿದೆಯೇ’ ಎಂದು ಅವರು ಪ್ರಶ್ನಿಸಿದರು. 

ಚಿಂತಕಿ ಬಿ.ಟಿ. ಲಲಿತಾ ನಾಯಕ್‌, ‘ಎಲ್ಲರಿಗೂ ದೇವಾಲಯಗಳಿಗೆ ಪ್ರವೇಶ ನೀಡಬೇಕು, ಬಾಲ್ಯವಿವಾಹ ರದ್ದು ಮಾಡಬೇಕು, ವಿಧವಾ ವಿವಾಹಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಬಂಡಾಯವೆದ್ದು ಹೋರಾಡಿದವರು ಪೆರಿಯಾರ್‌ ರಾಮಸ್ವಾಮಿ. ಅವರು ಏಕಾಏಕಿ ವಿಚಾರವಾದಿಯಾಗಲಿಲ್ಲ. ಅವರಲ್ಲಿದ್ದ ಆಕ್ರೋಶವೇ ಅವರನ್ನು ವಿಚಾರವಂತನನ್ನಾಗಿ ಮಾಡಿತು’ ಎಂದರು.

ಲಲಿತಾ ನಾಯಕ್ ಸೇರಿದಂತೆ ಪ್ರಾಧ್ಯಾಪಕಿ ಸಮತಾ ದೇಶ ಮಾನೆ, ರಿಪಬ್ಲಿಕ್ ಸೇನೆ ಅಧ್ಯಕ್ಷ ಜಿಗಣಿ ಶಂಕರ್ ಹಾಗೂ ಮಾನವ ಬಂಧುತ್ವ ವೇದಿಕೆ ಸಂಚಾಲಕ ರವೀಂದ್ರ ನಾಯ್ಕರ್ ಅವರಿಗೆ ಪೆರಿಯಾರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ ₹10 ಸಾವಿರ ನಗದು ಒಳಗೊಂಡಿದೆ.

ಪ್ರತಿಕ್ರಿಯಿಸಿ (+)