ಬೆಂಗಳೂರು: ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಅನುದಾನ ಮೀಸಲಿಡಬೇಕು ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ ಆಗ್ರಹಿಸಿದ್ದಾರೆ.
‘ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಆದರೂ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಭಾರತವನ್ನು ಜ್ಞಾನ ಕೇಂದ್ರಿತ ರಾಷ್ಟ್ರವನ್ನಾಗಿ ಮಾಡುವ ಕನಸಿಗೆ ಪ್ರಬಲ ಸವಾಲುಗಳಿವೆ. ‘ಸರ್ಕಾರಿ ಶಾಲೆಗಳ ದುಃಸ್ಥಿತಿಯು ಅತ್ಯಂತ ಆಘಾತಕಾರಿ’ ಎಂದು ನ್ಯಾಯ ಪೀಠವು ಅವಲೋಕನ ಮಾಡಿದೆ. ಸಮಾಜಕ್ಕೆ ಎಚ್ಚರಿಕೆಯ ಸಂದೇಶವಾಗಿದೆ. ಶಾಲಾ ಶಿಕ್ಷಣ ಸಮಾಜ ನಿರ್ಮಾಣದ ಆಧಾರ ಸ್ತಂಭ. ಅದರ ಬಗ್ಗೆ ಎಲ್ಲ ವರ್ಗಗಳು ಕಾಳಜಿ ವಹಿಸಿ ಪೋಷಿಸಬೇಕು’ ಎಂದು ಹೇಳಿದ್ದಾರೆ.
‘ಶಾಲಾ ದತ್ತು ಯೋಜನೆ ಅವಶ್ಯ. ನಾನು ಶಿಕ್ಷಣ ಇಲಾಖೆ ಸಲಹೆಗಾರನಾಗಿದ್ದ ಅವಧಿಯಲ್ಲಿ ಎರಡು ಸಾವಿರ ಸರ್ಕಾರಿ ಶಾಲೆಗಳನ್ನು ದಾನಿಗಳು ದತ್ತು ಪಡೆದುಕೊಂಡಿದ್ದರು. ಕೋವಿಡ್‌ನಿಂದ ಈ ಯೋಜನೆಗೆ ಹಿನ್ನಡೆ ಆಗಿತ್ತು. ಈ ಯೋಜನೆ ಮತ್ತೆ ಮುಂದುವರಿಯಬೇಕು. ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ 30 ಸಾವಿರ ಶಾಲೆಗಳ ನಿರ್ಮಾಣ ಹಾಗೂ ದುರಸ್ತಿಗೆ ಪ್ರಸಕ್ತ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡುವಂತೆ ಕೋರಿದ್ದೇನೆ. ಮುಖ್ಯಮಂತ್ರಿಯೂ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.