ಶುಕ್ರವಾರ, ಏಪ್ರಿಲ್ 16, 2021
23 °C
ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯ ಅಭಿಮತ

‘ರಾಷ್ಟ್ರಗೀತೆ ಅರ್ಥವಾದಲ್ಲಿ ಮರಾಠರನ್ನು ದೂಷಿಸುವುದಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಷ್ಟ್ರಗೀತೆಯನ್ನು ಅರ್ಥ ಮಾಡಿಕೊಳ್ಳದವರು ಇಲ್ಲಿರುವ ಮರಾಠರನ್ನು ದೂಷಿಸುತ್ತಿದ್ದಾರೆ. ನಮ್ಮನ್ನು ಹೊರಗಿನವರು ಎಂದು ಕರೆದಾಗ ಮನಸ್ಸಿಗೆ ನೋವಾಗುತ್ತದೆ’ ಎಂದು ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯ ಬೇಸರ
ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ ‘ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕರ್ನಾಟಕದ ಮೂಲ ನಿವಾಸಿಗಳು ಮರಾಠಿಗರು. ವಿರೋಧಿಸುವವರು ಇತಿಹಾಸವನ್ನು ಓದಿ ತಿಳಿದುಕೊಳ್ಳಬೇಕು. ನಾವು ಈ ದೇಶ, ರಾಜ್ಯಕ್ಕೆ ದುಡಿದಿದ್ದೇವೆ. ಬೆಂಗಳೂರನ್ನು ಕಟ್ಟಿದ್ದೇವೆ. ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ಕನ್ನಡ ಸಂಘಟನೆಗಳು ಕರ್ನಾಟಕದ ಮರಾಠರನ್ನು ಹೊರಗಡೆಯವರು ಎನ್ನಬಾರದು. ನಾವು ಇಲ್ಲಿನ ಮೂಲ ನಿವಾಸಿಗಳು. ಬೆಳಗಾವಿಯಲ್ಲಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯವರ ಮನಸ್ಸನ್ನು ಪರಿವರ್ತಿಸಬೇಕು. ಮಹಾಜನ್ ವರದಿ ಅನುಷ್ಠಾನವಾಗಬೇಕು. ಈ ಸಂಬಂಧ ಬೆಂಗಳೂರಿನಲ್ಲಿ ಒಂದು ದಿನ ಧರಣಿ ಮಾಡಲು ತೀರ್ಮಾನ ಮಾಡಿದ್ದೇನೆ’ ಎಂದು ತಿಳಿಸಿದರು.

ಇಲ್ಲಿನ ಮರಾಠಿಗರು ಕನ್ನಡಿಗರು: ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ‘ಕರ್ನಾಟಕದಲ್ಲಿರುವ ಮರಾಠಿಗರು ಕನ್ನಡಿಗರು. ಉತ್ತರ ಕರ್ನಾಟಕದ ಅನೇಕ ಭಾಗ, ಮೈಸೂರು ಸೇರಿದಂತೆ ಹಲವೆಡೆ ಮರಾಠಿಗರು ಇದ್ದಾರೆ. ಅವರ ಆಡುಭಾಷೆ ಮರಾಠಿ ಆದರೂ ಮೂಲ ಕರ್ನಾಟಕ. ಈ ನಾಡನ್ನು ಕಟ್ಟಲು ಎಲ್ಲ ಸಮಾಜಗಳೂ ಕೊಡುಗೆ ನೀಡಿವೆ. ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಮಂಡಳಿಗಳಿವೆ. ಅದೇ ರೀತಿ, ಇಲ್ಲಿನ ಮರಾಠಿಗರಿಗೂ ಸರ್ಕಾರವು ಮಂಡಳಿ ಸ್ಥಾಪಿಸಿದೆ. ಶಿವಾಜಿ ಮಹಾರಾಜರ ವಿಚಾರಧಾರೆ ಅನುಸಾರ ರಾಷ್ಟ್ರೀಯ ಸಂಘಟನೆಗಳು ಕೆಲಸ ಮಾಡುತ್ತಿದೆ. ಅವರ ವಿಚಾರಧಾರೆಯನ್ನು ಇನ್ನಷ್ಟು ಪ್ರಚಾರ ಮಾಡಬೇಕಿದೆ’ ಎಂದು ತಿಳಿಸಿದರು.  

ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಮಾತನಾಡಿ, ‘ಸ್ವಾತಂತ್ರದ ರುಚಿಯನ್ನು ಭಾರತೀಯರಿಗೆ ಮೊಟ್ಟ ಮೊದಲು ಪರಿಚಯಿಸಿದ್ದು ಶಿವಾಜಿ. ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು