ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ಇನ್‌| ಹಸಿವಿನಿಂದ ಬಳಲಿದವರಿಗೆ ಆಹಾರ: ಬಡವರ ಬವಣೆಗಳಿಗೆ ಪರಿಹಾರ

ಕೊರೊನಾ ಸಂಕಷ್ಟದ ನಡುವೆಯೂ ‘ದಾಸರಹಳ್ಳಿ ಜನರ ದಾಸ’ನಂತೆ ದುಡಿದ ಶಾಸಕ ಮಂಜುನಾಥ್‌
Last Updated 9 ಮೇ 2020, 20:20 IST
ಅಕ್ಷರ ಗಾತ್ರ

ಬೆಂಗಳೂರು: ದುಡಿಯುವ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ವಿಧಾನಸಭಾ ಕ್ಷೇತ್ರ ದಾಸರಹಳ್ಳಿ. ಏಷ್ಯಾದ ಅತಿದೊಡ್ಡ ಕೈಗಾರಿಕಾ ನೆಲೆಗಳಲ್ಲೊಂದಾದ ಪೀಣ್ಯ ಕೈಗಾರಿಕಾ ಪ್ರದೇಶವನ್ನು ಒಳಗೊಂಡ ಈ ಕ್ಷೇತ್ರದ ಜನರ ಬದುಕು ಲಾಕ್‌ಡೌನ್‌ ಸಂದರ್ಭದಲ್ಲಿ ಹೈರಾಣಾಗಿದೆ. ಅತ್ತ ಕೆಲಸವಿಲ್ಲದೆ, ಇತ್ತ ಕೈಯಲ್ಲಿ ಕಾಸೂ ಇಲ್ಲದೇ ಒಪ್ಪೊತ್ತಿನ ಊಟಕ್ಕೂ ಸಮಸ್ಯೆ ಎದುರಿಸುತ್ತಿರುವ ಇಲ್ಲಿನ ನಿವಾಸಿಗಳ ಬವಣೆ ನೀಗಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ ಇಲ್ಲಿನ ಶಾಸಕ ಆರ್‌.ಮಂಜುನಾಥ್‌.

ಸಂಕಷ್ಟದ ಸಮಯದಲ್ಲಿ ಸರ್ಕಾರದ ನೆರವಿಗೆ ಕಾಯದೇ, ತಮ್ಮ ಬೆಂಬಲಿಗರು ಹಾಗೂ ಸ್ಥಳೀಯ ಮುಖಂಡರನ್ನು ಒಗ್ಗೂಡಿಸಿಕೊಂಡು ಜನಸೇವೆಯಲ್ಲಿ ತೊಡಗಿದ್ದಾರೆ ಮಂಜುನಾಥ್‌. ನಿರಾಶ್ರಿತರಿಗೆ, ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಒದಗಿಸಲು ಗಲ್ಲಿ ಗಲ್ಲಿಯಲ್ಲಿ ಕ್ಯಾಂಟೀನ್‌ಗಳನ್ನು ಆರಂಭಿಸಿ, ಬಡಬಗ್ಗರಿಗೆ ಉಚಿತ ಆಹಾರ ಮತ್ತು ದಿನಸಿ ಸಾಮಗ್ರಿಗಳ ಕಿಟ್‌ ಹಂಚುವ ಕಾಯಕದಲ್ಲಿ ತೊಡಗಿರುವ ಮಂಜುನಾಥ್‌, ‘ಪ್ರಜಾವಾಣಿ’ ವತಿಯಿಂದ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನರ ಅಹವಾಲು ಆಲಿಸಿದರು.

ಕುಡಿಯುವ ನೀರಿನ ಬವಣೆ, ಮಳೆ ಬಂದಾಗ ರಾಜಕಾಲುವೆ ಉಕ್ಕಿ ಹರಿದು ಸೃಷ್ಟಿಯಾಗುತ್ತಿರುವ ಸಮಸ್ಯೆ, ಒಳಚರಂಡಿ ಹಾಗೂ ಕುಡಿಯುವ ನೀರಿನ ಕೊಳವೆ ಅಳವಡಿಸಿದ ಬಳಿಕ ದುರಸ್ತಿಗೊಳ್ಳದ ರಸ್ತೆ... ಹೀಗೆ ಹತ್ತು ಹಲವು ಅಳಲುಗಳನ್ನು ತಾಳ್ಮೆಯಿಂದ ಆಲಿಸಿ, ಅವುಗಳನ್ನು ಕಾಲಮಿತಿಯೊಳಗೆ ಬಗೆಹರಿಸುವ ಭರವಸೆ ನೀಡಿದರು.

ಹಸಿದವರ ನೋವಿಗೆ ಸ್ಪಂದಿಸುವುದರ ಜೊತೆಗೆ, ಅವರಿಗೆ ಆಹಾರ– ದಿನಸಿ ಸಾಮಗ್ರಿಗಳ ಕಿಟ್‌ ನೀಡುವ ಆಶ್ವಾಸನೆ ನೀಡಿದರು. ಪಡಿತರ ಚೀಟಿ ಇಲ್ಲದ ಕಾರಣಕ್ಕೆ ಸರ್ಕಾರದಿಂದ ಸಿಗುವ ಅಕ್ಕಿ, ಬೇಳೆಕಾಳುಗಳಿಂದ ವಂಚಿತರಾದವರ ಸಮಸ್ಯೆಗೆ ಪರಿಹಾರ ಒದಗಿಸುವ ವಾಗ್ದಾನ ಮಾಡಿದರು.

ಕರೆ ಮಾಡಿ ಸಮಸ್ಯೆ ಹೇಳಿಕೊಂಡ ಪ್ರತಿಯೊಬ್ಬರ ದೂರವಾಣಿ ಸಂಖ್ಯೆಯನ್ನು ಸ್ವತಃ ಬರೆದುಕೊಂಡ ಶಾಸಕರು ಅವುಗಳನ್ನು ಬಗೆಹರಿಸಲು ಒಂದೆರಡು ದಿನಗಳಲ್ಲೇ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.

ಶಾಶ್ವತ ಕಾಮಗಾರಿ: ಕ್ಷೇತ್ರದ ಬಹುತೇಕ ಪ್ರದೇಶಗಳು ಕಂದಾಯ ಗ್ರಾಮಗಳಾಗಿದ್ದವು. ಅವು ಬಿಬಿಎಂಪಿ ವ್ಯಾಪ್ತಿಗೆ ಸೇರಿ 10 ವರ್ಷ ಕಳೆದ ಬಳಿಕವೂ ಒಳಚರಂಡಿ ಸಂಪರ್ಕ ಹಾಗೂ ಕಾವೇರಿ ನೀರಿನ ಸಂಪರ್ಕ ಇರಲಿಲ್ಲ. ನಾನು ಶಾಸಕನಾದ ತಕ್ಷಣವೇ ಮೊದಲು ಒಳಚರಂಡಿ ಕೊಳವೆ ವಾರ್ಗ ಹಾಗೂ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಶಾಶ್ವತ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗಿದೆ. ಈ ಕೊಳವೆ ಅಳವಡಿಸಲು ಅಗೆದ ರಸ್ತೆಗಳನ್ನು ದುರಸ್ತಿಪಡಿಸುವುದಕ್ಕೂ ಅನುದಾನ ಬಿಡುಗಡೆಯಾಗಿತ್ತು. ಕಾಮಗಾರಿ ಆರಂಭಿಸುವಷ್ಟರಲ್ಲಿ ಕೋವಿಡ್‌ 19 ಹಾವಳಿ ಕಾಣಿಸಿಕೊಂಡಿದ್ದರಿಂದ ಕಾರ್ಮಿಕರ ಕೊರತೆಯಿಂದಾಗಿ ಕಾಮಗಾರಿ ಕೊಂಚ ವಿಳಂಬವಾಯಿತು. ಈಗಾಗಲೇ ಕೆಲವು ಕಾಮಗಾರಿಗಳನ್ನು ಆರಂಭಿಸಲಾಗಿದೆ. ಲಾಕ್‌ಡೌನ್‌ ತೆರವಾದ ಬಳಿಕ ಆದಷ್ಟು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಮಂಜುನಾಥ್‌ ವಿವರಿಸಿದರು.

ಕಚೇರಿ ಬಾಗಿಲು ಸದಾ ತೆರೆದಿರುತ್ತದೆ: ‘ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ ಇರುವ ತಮ್ಮ ಶಾಸಕರ ಕಚೇರಿಯ ಬಾಗಿಲು ಜನಸಾಮಾನ್ಯರಿಗಾಗಿ ಸದಾ ತೆರೆದೇ ಇರುತ್ತದೆ. ಏನೇ ಸಮಸ್ಯೆ ಇದ್ದರೂ ಜನ ಅಲ್ಲಿಗೆ ಬಂದು ತಮ್ಮನ್ನು ಮುಕ್ತವಾಗಿ ಭೇಟಿ ಆಗಬಹುದು. ಯಾವುದೇ ಪಕ್ಷಭೇದ ಮಾಡದೇ ಎಲ್ಲರ ಸಮಸ್ಯೆ ಬಗೆಹರಿಸಲು ನನ್ನಿಂದಾದ ಪ್ರಯತ್ನ ಮಾಡುತ್ತೇನೆ’ ಎಂದು ಮಂಜುನಾಥ್‌ ತಿಳಿಸಿದರು.

‘ಅನ್ನ ಬಡಿಸಿದವರಿಗೂ ಊಟಕ್ಕೆ ತತ್ವಾರ’

‘ನಾನೊಬ್ಬ ಹೋಟೆಲ್‌ ಕಾರ್ಮಿಕ. ನೂರಾರು ಮಂದಿಗೆ ನಿತ್ಯ ಅನ್ನ ಬಡಿಸಿದ ಕೈ ನನ್ನದು. ಈಗ ನನ್ನ ಕುಟುಂಬಕ್ಕೆ ತುತ್ತು ಅನ್ನ ಹೊಂದಿಸಲಾಗದ ಸ್ಥಿತಿಯಲ್ಲಿದ್ದೇನೆ’ ಎಂದು ರಾಜೀವ ಗಾಂಧಿ ನಗರದ ರಂಗಸ್ವಾಮಿ ನೋವು ತೋಡಿಕೊಂಡರು.

‘ಲಾಕ್‌ಡೌನ್‌ ಜಾರಿಯಾದ ಬಳಿಕ ಹೋಟೆಲ್‌ಗಳು ಮುಚ್ಚಿವೆ. ಇನ್ನು ಯಾವಾಗ ಶುರುವಾಗುತ್ತದೋ ತಿಳಿಯದು. ಮುಖ್ಯಮಂತ್ರಿಯವರು ಬೇರೆ ಬೇರೆ ವರ್ಗಗಳ ಕಾರ್ಮಿಕರಿಗೆ ಇತ್ತೀಚೆಗೆ ಪರಿಹಾರದ ಪ್ಯಾಕೇಜ್‌ ಘೋಷಿಸಿದರು. ನಮ್ಮನ್ನು ಮರೆತೇ ಬಿಟ್ಟರು. ನಮ್ಮ ಸಮಸ್ಯೆಗಳಿಗೆ ನೀವಾದರೂ ಪರಿಹಾರ ಒದಗಿಸಿ’ ಎಂದು ಅವರು ಅಂಗಲಾಚಿದರು.

ಅವರ ನೋವಿಗೆ ಸ್ಪಂದಿಸಿದ ಮಂಜುನಾಥ್‌, ‘ಖಂಡಿತಾ ನಿಮ್ಮ ಸಮಸ್ಯೆ ಅರ್ಥವಾಗುತ್ತದೆ. ಹೋಟೆಲ್‌ ಕಾರ್ಮಿಕರ ಸಮಸ್ಯೆಯನ್ನೂ ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ’ ಎಂದರು.

ರಂಗಸ್ವಾಮಿ ತಮ್ಮ ಕ್ಷೇತ್ರದ ಮತದಾರರಲ್ಲದಿದ್ದರೂ ಅವರಿಗೂ ಆಹಾರ ಕಿಟ್‌ ಒದಗಿಸುವುದಾಗಿ ಮಂಜುನಾಥ್‌ ಭರವಸೆ ನೀಡಿದರು.


ಕಷ್ಟಕಾದಲ್ಲಿ ಕೇಳದೆಯೇ ನೆರವಾದಿರಿ

‘ಲಾಕ್‌ಡೌನ್‌ ಸಂದರ್ಭದಲ್ಲಿ ನಮ್ಮ ಪರಿಸ್ಥಿತಿ ಯಾರಿಗೂ ಬೇಡ. ಇಂತಹ ಕಷ್ಟ ಕಾಲದಲ್ಲಿ ನಾವು ಕೇಳಿದಿದ್ದರೂ ನಮ್ಮಂಥಹ ಮಧ್ಯಮವರ್ಗದವರ ಮನೆ ಬಾಗಿಲಿಗೆ ಧವಸ ಧಾನ್ಯ ತಲುಪಿಸಿ ನೆರವಾಗಿದ್ದೀರಿ. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು’

ಕಾನ್ಶಿರಾಂನಗರದ ಶೋಭಾ ಅವರು ಶಾಸಕ ಮಂಜುನಾಥ್‌ ಅವರ ನೆರವನ್ನು ಕೊಂಡಾಡಿದ್ದು ಹೀಗೆ.

ಈ ಕರೆಗೆ ಸಂಕೋಚದಿಂದಲೇ ಉತ್ತರಿಸಿದ ಮಂಜುನಾಥ್‌, ‘ನೀವು ನನ್ನನ್ನು ಗೆಲ್ಲಿಸಿದ್ದೀರಿ. ಇದು ಸಹಾಯ ಅಲ್ಲ. ನನ್ನ ಕರ್ತವ್ಯ. ಇನ್ನು ಮುಂದೆಯೂ ಪಕ್ಷಭೇದ ಮಾಡದೇ ನಿಮ್ಮಂಥವರ ನೆರವಿಗಾಗಿ ಸದಾ ದುಡಿಯುತ್ತೇನೆ’ ಎಂದು ಭರವಸೆ ನೀಡಿದರು.

ಕಷ್ಟ ಕಾಲದಲ್ಲಿ ಅಕ್ಕಿ ಬೇಳೆಕಾಳು ಕೊಟ್ಟಿದ್ದಕ್ಕೆ ಚಿಕ್ಕಬಾಣಾವರದ ನರಸೇಗೌಡರೂ ಕೃತಜ್ಞತೆ ಸಲ್ಲಿಸಿದರು. ಅಕ್ಕಿ ಜೊತೆ ತರಕಾರಿಯನ್ನೂ ನೀಡಿದ್ದಕ್ಕೆ ತೋಟದಕೊಡದಹಳ್ಳಿಯ ಸಿದ್ದಗಂಗಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಗಣಪತಿ ನಗರ ಪ್ರದೇಶದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಕ್ಕೆ ಹಿರಿಯ ನಾಗರಿಕ ಎಂ.ಪ್ರಕಾಶ್‌ ಅವರು ಕೃತಜ್ಞತೆ ಅರ್ಪಿಸಿದರು. ನೀರಿನ ಬವಣೆ ನೀಗಿಸುವಂತೆ ಅವರು ಕೋರಿದರು.


ಅನುದಾನದ ಕೊರತೆ ನಡುವೆಯೂ ಅವಿರತ ಸೇವೆ

’ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ₹750 ಕೋಟಿಗೂ ಹೆಚ್ಚು ಅನುದಾನ ಮಂಜೂರು ಮಾಡಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ದಿನಗಳಲ್ಲಿ ಈ ಅನುದಾನ ಕಿತ್ತುಕೊಂಡು ಕೇವಲ ₹26 ಕೋಟಿ ನೀಡಿತು. ಆದರೂ ಧೃತಿಗೆಡದ ಅಭಿವೃದ್ಧಿ ಕಾರ್ಯ ಮುಂದುವರಿಸಿದ್ದೇನೆ’ ಎನ್ನುತ್ತಾರೆ ಆರ್. ಮಂಜುನಾಥ್.

‘ಕ್ಷೇತ್ರದಲ್ಲಿ ಯಾವ ಕೆಲಸವೂ ಆಗಿರಲಿಲ್ಲ. ಒಳಚರಂಡಿ, ರಸ್ತೆಗಳು ಇರಲಿಲ್ಲ. 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಇರಲಿಲ್ಲ. ಜನ ನನ್ನನ್ನು ಈ ಬಾರಿ ಆಶೀರ್ವದಿಸಿದ್ದಾರೆ. ಕ್ಷೇತ್ರದ ಸಮಸ್ಯೆಗಳನ್ನು ಸವಾಲಾಗಿ ತೆಗೆದುಕೊಂಡು ಅನುದಾನ ಮಂಜೂರು ಮಾಡಿಸಿದ್ದೆ. ಅನೇಕ ಕಾಮಗಾರಿಗಳನ್ನೂ ಪ್ರಾರಂಭ ಮಾಡಿಸಿದ್ದೆ. ಆದರೆ, ಬಿಜೆಪಿ ಸರ್ಕಾರ ರಾಜಕೀಯ ದ್ವೇಷ ಸಾಧಿಸಿದೆ. ಹಾಗಾಗಿ ಅಂದುಕೊಂಡಷ್ಟು ವೇಗದಲ್ಲಿ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಹೇಳಿದರು.

‘ಪೀಣ್ಯ ಕೈಗಾರಿಕಾ ಪ್ರದೇಶದ ಶೇ 80ರಷ್ಟು ಭಾಗ ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ, 8,500 ಕಾರ್ಖಾನೆಗಳಿವೆ. ನೆಲಮಂಗಲದಿಂದ ಹಿಡಿದು, ಬೀದರ್, ಮಂಗಳೂರಿನವರೆಗಿನ ಜನ ಇಲ್ಲಿದ್ದಾರೆ. ಇಂತಹ ದ್ವೇಷದ ಕಾರಣದಿಂದ ಕ್ಷೇತ್ರದ ನಿವಾಸಿಗಳಿಗೆ ಸಮಸ್ಯೆ ಎದುರಾಗಿದೆ. ಈ ಪ್ರದೇಶದ ರಸ್ತೆ ವಿಸ್ತರಣೆ ಮತ್ತು ಉದ್ಯಾನ ಅಭಿವೃದ್ಧಿ, ಕೆರೆ ಅಭಿವೃದ್ಧಿಗಳು ಕಾಮಗಾರಿಗಳು ಕುಂಠಿತವಾಗುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಕ್ಷೇತ್ರದಲ್ಲಿ ರಾಜಕಾಲುವೆ ನಿರ್ಮಾಣ ಮತ್ತು ದುರಸ್ತಿಗಾಗಿಯೇ ₹132 ಕೋಟಿ ಅನುದಾನ ಮಂಜೂರು ಮಾಡಿದ್ದರು. ಆದರೆ, ಅದನ್ನೂ ಕಡಿತಗೊಳಿಸಿ ₹32 ಕೋಟಿ ಮಾತ್ರ ಮಂಜೂರು ಮಾಡಿದ್ದಾರೆ’ ಎಂದರು.

ಕೆರೆ ಅನುದಾನವನ್ನೂ ಕಿತ್ತುಕೊಂಡರು: ಬಾಣವಾರ ಕೆರೆ ಅಭಿವೃದ್ಧಿಗೆ ₹ 30 ಕೋಟಿ, ಗಾಣಗೇರಹಳ್ಳಿ ಕೆರೆಗೆ ₹ 13 ಕೋಟಿ, ಅಬ್ಬಿಗೆರೆ ಹಾಗೂ ಪೀಣ್ಯ ಹೊಸ ಕೆರೆ ಮತ್ತು ಹಳೆ ಕೆರೆಗಳ ದುರಸ್ತಿಗೆ ತಲಾ ₹ 10 ಕೋಟಿ, ಮಲ್ಲಸಂದ್ರ, ಚೊಕ್ಕಸಂದ್ರ ಹಾಗೂ ಬಸ್ಸಪ್ಪನಕಟ್ಟೆ ಕೆರೆಗಳ ಅಭಿವೃದ್ಧಿಗೆ ತಲಾ ₹ 5 ಕೋಟಿ, ಬಾಗಲಕುಂಟೆ ಕೆರೆಗೆ ₹ 3 ಕೋಟಿ ಮಂಜೂರಾಗಿತ್ತು. ಆ ಅನುದಾನವನ್ನೂ ಈಗಿನ ಸರ್ಕಾರ ಕಿತ್ತುಕೊಂಡಿದೆ ಎಂದು ಆರೋಪಿಸಿದರು.

ಎಲ್ಲವೂ ಕಂದಾಯ ಭೂಮಿ!

ದಾಸರಹಳ್ಳಿ ಕ್ಷೇತ್ರದಲ್ಲಿ ಸುಮಾರು ಎಂಟು ಲಕ್ಷ ಜನಸಂಖ್ಯೆ ಇದೆ. ಇವರಲ್ಲಿ 4.75 ಲಕ್ಷ ಮತದಾರರು. ಹೊಸದಾಗಿ ಸೇರ್ಪಡೆಯಾಗಿರುವ ಈ ಕ್ಷೇತ್ರದಲ್ಲಿ ಕಂದಾಯ ಭೂಮಿಗಳೇ ಹೆಚ್ಚು. ಗದ್ದೆ, ಹೊಲಗಳೇ ಜಾಸ್ತಿ. ವಲಸೆ ಕಾರ್ಮಿಕರೇ ಇಲ್ಲಿ ಹೆಚ್ಚಿದ್ದಾರೆ. ಹೀಗಾಗಿ, ಲಾಕ್‌ಡೌನ್‌ ಸಂದರ್ಭದಲ್ಲಿ ಹೆಚ್ಚು ಸಂಕಷ್ಟಕ್ಕೆ ಈಡಾದ ಪ್ರದೇಶ ಇದು. ಆದರೆ, ಇದು ಹೆಚ್ಚು ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ವಹಿಸಿದ ಮಂಜುನಾಥ್, ಕ್ಷೇತ್ರದ ಪೂರ್ತಿ ಹಗಲು ರಾತ್ರಿ ಸಂಚರಿಸಿ ತರಕಾರಿ–ದಿನಸಿ, ಆಹಾರ ಪೊಟ್ಟಣ ಹಂಚುವ ಮೂಲಕ ಸಂತ್ರಸ್ತರಿಗೆ ನೆರವು ನೀಡಿದ್ದಾರೆ.

ತಿಂಗಳಿಗೆ ₹140 ಕೋಟಿ ಜಿಎಸ್‌ಟಿ

‘ಪೀಣ್ಯ ಕೈಗಾರಿಕಾ ಪ್ರದೇಶದಿಂದ ತಿಂಗಳಿಗೆ ₹140 ಕೋಟಿ ಜಿಎಸ್‌ಟಿ ಪಾವತಿಸಲಾಗುತ್ತದೆ. ವರ್ಷಕ್ಕೆ ಬಿಬಿಎಂಪಿಗೆ ₹160 ಕೋಟಿ ಆಸ್ತಿ ತೆರಿಗೆ ಕಟ್ಟಲಾಗುತ್ತದೆ. ಆದರೆ, ಇಂತಹ ಕ್ಷೇತ್ರದ ಬಗ್ಗೆಯೇ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿಯೂ ಸರ್ಕಾರದ ವತಿಯಿಂದ ಕ್ಷೇತ್ರಕ್ಕೆ ಒಂದೇ ಒಂದು ದಿನಸಿ ಕಿಟ್‌ ಅಥವಾ ಆಹಾರದ ಕಿಟ್‌ ವಿತರಿಸಿಲ್ಲ’ ಎಂದು ಮಂಜುನಾಥ್ ಕಿಡಿಕಾರಿದರು.

45 ದಿನಗಳಿಂದ ಹಗಲಿರುಳು ಕೆಲಸ

‘ಸರ್ಕಾರ ನಿರ್ಲಕ್ಷ್ಯ ತೋರಿದರೂ, ನನ್ನ ಕ್ಷೇತ್ರದ ಜನರಿಗೆ ನಾನು ನೆರವಿಗೆ ನಿಲ್ಲುತ್ತೇನೆ’ ಎನ್ನುವ ಮಂಜುನಾಥ್, ಲಾಕ್‌ಡೌನ್‌ ಸಂದರ್ಭದಲ್ಲಿ 45 ದಿನಗಳಿಂದ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.

‘ಕ್ಷೇತ್ರದಲ್ಲಿ ವಲಸೆ ಕಾರ್ಮಿಕರೇ ಹೆಚ್ಚಿದ್ದಾರೆ. ಸುಮಾರು 3 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಾರೆ. ವಲಸೆ ಕಾರ್ಮಿಕರು, ಸಂತ್ರಸ್ತರಿಗಾಗಿ ಸ್ಥಳೀಯ ಮುಖಂಡರ ಜೊತೆ ಸೇರಿ 75 ಸಾವಿರ ದಿನಸಿ ಕಿಟ್‌ ವಿತರಿಸಲಾಗಿದೆ’ ಎಂದು ಅವರು ತಿಳಿಸಿದರು.

ಆರ್. ಮಂಜುನಾಥ್ ವೈಯಕ್ತಿಕವಾಗಿ 15 ಸಾವಿರ ಕಿಟ್‌ ವಿತರಿಸಿದ್ದರೆ, ಮುಖಂಡರಾದ ಕೆ.ಸಿ. ವೆಂಕಟೇಶ್, ಪ್ರಕಾಶ್, ಎಂ. ಜಗದೀಶ್‌, ಮುನಿಸ್ವಾಮಪ್ಪ, ಚರಣ್‌ಗೌಡ, ಪ್ರಕಾಶ್‌ ರುದ್ರೇಗೌಡ, ಗಂಗಾಧರ, ತಮ್ಮಣ್ಣ ಮತ್ತಿತರರು ಸೇರಿ ಒಟ್ಟು 60 ಸಾವಿರಕ್ಕೂ ಹೆಚ್ಚು ದಿನಸಿ ಕಿಟ್‌ ವಿತರಿಸಿದ್ದಾರೆ. ಕಾಂಗ್ರೆಸ್‌ ಮುಖಂಡ ಲೋಕೇಶ್‌ ಗೌಡ ಅವರೂ ಬಡವರಿಗೆ ನೆರವಾಗುವ ಈ ಕಾರ್ಯದಲ್ಲಿ ಶಾಸಕರ ಜೊತೆ ಕೈಜೋಡಿಸಿದ್ದಾರೆ.

36 ಕ್ಯಾಂಟೀನ್‌: ನಿತ್ಯ 42 ಸಾವಿರ ಮಂದಿಗೆ ಊಟ

ಕ್ಷೇತ್ರದಲ್ಲಿ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಹಾಗೂ ಆರ್. ಮಂಜುನಾಥ್ ಅಭಿಮಾನಿಗಳ ಸಂಘದ ವತಿಯಿಂದ ಕ್ಷೇತ್ರದಲ್ಲಿ 36 ಕಡೆ ಕ್ಯಾಂಟೀನ್‌ ನಡೆಸಲಾಗುತ್ತಿದೆ. ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಈ ಕ್ಯಾಂಟೀನ್‌ಗಳಲ್ಲಿ ನಿತ್ಯ 42 ಸಾವಿರ ಜನರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

45 ದಿನಗಳಿಂದ ಹಗಲಿರುಳು ಕೆಲಸ

‘ಸರ್ಕಾರ ನಿರ್ಲಕ್ಷ್ಯ ತೋರಿದರೂ, ನನ್ನ ಕ್ಷೇತ್ರದ ಜನರಿಗೆ ನಾನು ನೆರವಿಗೆ ನಿಲ್ಲುತ್ತೇನೆ’ ಎನ್ನುವ ಮಂಜುನಾಥ್, ಲಾಕ್‌ಡೌನ್‌ ಸಂದರ್ಭದಲ್ಲಿ 45 ದಿನಗಳಿಂದ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.

‘ಕ್ಷೇತ್ರದಲ್ಲಿ ವಲಸೆ ಕಾರ್ಮಿಕರೇ ಹೆಚ್ಚಿದ್ದಾರೆ. ಸುಮಾರು 3 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಾರೆ. ವಲಸೆ ಕಾರ್ಮಿಕರು, ಸಂತ್ರಸ್ತರಿಗಾಗಿ ಸ್ಥಳೀಯ ಮುಖಂಡರ ಜೊತೆ ಸೇರಿ 75 ಸಾವಿರ ದಿನಸಿ ಕಿಟ್‌ ವಿತರಿಸಲಾಗಿದೆ’ ಎಂದು ಅವರು ತಿಳಿಸಿದರು.

ಆರ್. ಮಂಜುನಾಥ್ ವೈಯಕ್ತಿಕವಾಗಿ 15 ಸಾವಿರ ಕಿಟ್‌ ವಿತರಿಸಿದ್ದರೆ, ಮುಖಂಡರಾದ ಕೆ.ಸಿ. ವೆಂಕಟೇಶ್, ಪ್ರಕಾಶ್, ಎಂ. ಜಗದೀಶ್‌, ಮುನಿಸ್ವಾಮಪ್ಪ, ಚರಣ್‌ಗೌಡ, ಪ್ರಕಾಶ್‌ ರುದ್ರೇಗೌಡ, ಗಂಗಾಧರ, ತಮ್ಮಣ್ಣ ಮತ್ತಿತರರು ಸೇರಿ ಒಟ್ಟು 60 ಸಾವಿರಕ್ಕೂ ಹೆಚ್ಚು ದಿನಸಿ ಕಿಟ್‌ ವಿತರಿಸಿದ್ದಾರೆ. ಕಾಂಗ್ರೆಸ್‌ ಮುಖಂಡ ಲೋಕೇಶ್‌ ಗೌಡ ಅವರೂ ಬಡವರಿಗೆ ನೆರವಾಗುವ ಈ ಕಾರ್ಯದಲ್ಲಿ ಶಾಸಕರ ಜೊತೆ ಕೈಜೋಡಿಸಿದ್ದಾರೆ.

36 ಕ್ಯಾಂಟೀನ್‌: ನಿತ್ಯ 42 ಸಾವಿರ ಮಂದಿಗೆ ಊಟ

ಕ್ಷೇತ್ರದಲ್ಲಿ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಹಾಗೂ ಆರ್. ಮಂಜುನಾಥ್ ಅಭಿಮಾನಿಗಳ ಸಂಘದ ವತಿಯಿಂದ ಕ್ಷೇತ್ರದಲ್ಲಿ 36 ಕಡೆ ಕ್ಯಾಂಟೀನ್‌ ನಡೆಸಲಾಗುತ್ತಿದೆ. ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಈ ಕ್ಯಾಂಟೀನ್‌ಗಳಲ್ಲಿ ನಿತ್ಯ 42 ಸಾವಿರ ಜನರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಮುಖಗವಸು, ಸ್ಯಾನಿಟೈಸರ್ ವಿತರಣೆ

ಸಾವಿರಾರು ಮುಖಗವಸು ಮತ್ತು ಸ್ಯಾನಿಟೈಸರ್‌ಗಳನ್ನು ವಲಸೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಮಂಜುನಾಥ್ ಹಂಚಿದ್ದಾರೆ. ಸ್ವಂತ ಖರ್ಚಿನಲ್ಲಿ ಕ್ಷೇತ್ರದ ತುಂಬಾ ಔಷಧ ಸಿಂಪಡಿಸಲು ಕ್ರಮ ತೆಗೆದುಕೊಂಡಿದ್ದಾರೆ. ಅಗತ್ಯವಿರುವವರಿಗೆ ಔಷಧಿ, ಮಾತ್ರೆಗಳನ್ನು ವಿತರಿಸಿದ್ದಾರೆ.

ಫೋನ್‌ನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಶಾಸಕರ ಉತ್ತರ

l ನಮ್ಮ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಮಳೆ ಬಂದಾಗ ಚರಂಡಿಗಳೆಲ್ಲ ತುಂಬಿ ಕೊಳಚೆ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ.

ಸಿದ್ದಗಂಗಯ್ಯ, ಚಿಕ್ಕಸಂದ್ರ

ಶಾಸಕ ಮಂಜುನಾಥ್‌: 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಕಲ್ಪಿಸುವ ಯೋಜನೆಯ ಕಾಮಗಾರಿಗಳು ನಡೆಯುತ್ತಿದೆ. ನನ್ನ ಕ್ಷೇತ್ರದಲ್ಲಿ ಏಳು ಹಳ್ಳಿಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಈ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದೆ. ಲಾಕ್‌ಡೌನ್‌ ಮುಗಿದ ನಂತರ ದುರಸ್ತಿ ಮಾಡಲಾಗುವುದು

l ರಸ್ತೆಗಳು ಹದಗೆಟ್ಟಿವೆ. ಎಂಜಿನಿಯರ್‌ಗೆ ಫೋಟೊ ಕಳಿಸಿದರೂ ಪ್ರಯೋಜನವಾಗಿಲ್ಲ.

ನರಸಿಂಹಮೂರ್ತಿ ಎಎಸ್‌ಸಿ ಲೇಔಟ್, ಕಮಲಾ, ಗಣಪತಿನಗರ

ಶಾಸಕರು: ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಗಿದೆ. ಪೂಜೆಯನ್ನು ಕೂಡ ಮಾಡಲಾಗಿತ್ತು. ಲಾಕ್‌ಡೌನ್‌ ಕಾರಣ ಎರಡು ತಿಂಗಳಿಂದ ಯಾವುದೇ ಕಾಮಗಾರಿ ಕೈಗೊಳ್ಳಲು ಆಗಿಲ್ಲ. ಲಾಕ್‌ಡೌನ್‌ ಮುಗಿದ ಬಳಿಕ ಕೆಲಸ ಆರಂಭಿಸಲಾಗುವುದು

l ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ 10 ತಿಂಗಳಾಯಿತು. ಕಚೇರಿಯಿಂದ ಕಚೇರಿಗೆ ಅಲೆದಾಡುವುದೇ ಆಗಿದೆ. ಕಾರ್ಡ್‌ ಇರದ ಕಾರಣ ಪಡಿತರವೂ ಸಿಕ್ಕಿಲ್ಲ

‍‍ಪಾರ್ವತಿ ಚಿಕ್ಕಬಾಣಾವರ, ದೇವಾಡಿಗ, ಹೊಂಬಕ್ಕ, ಸೌಭಾಗ್ಯ...

ಶಾಸಕರು: ಅರ್ಹರೆಲ್ಲರಿಗೂ ನಾನು ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಡುತ್ತೇನೆ. ನಿಮಗೆ ಕರೆ ಮಾಡುತ್ತೇನೆ. ಸೋಮವಾರ ನನ್ನ ಕಚೇರಿಗೆ ಬನ್ನಿ. ಪಡಿತರ ಚೀಟಿ ಒದಗಿಸಲು ವ್ಯವಸ್ಥೆ ಮಾಡುತ್ತೇನೆ.

l ಅಂಜನಾದ್ರಿ ನಗರದಲ್ಲಿ ಒಳಚರಂಡಿ ಕೊಳವೆ ಒಡೆದುಹೋಗಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ.

ನಾಗರಾಜ, ಚಿಕ್ಕಬಾಣಾವರ, ಮಂಜುಳಾ, ಮುನೇಶ್ವರನಗರ

ಶಾಸಕರು: ಅನುದಾನದ ಕೊರತೆ ಇರುವುದರಿಂದ ಕೆಲವು ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಲಾಕ್‌ಡೌನ್‌ ಅವಧಿ ಮುಗಿದ ನಂತರ ಕೆಲಸ ಪ್ರಾರಂಭ ಮಾಡಲಾಗುವುದು

l ಮಾತ್ರೆ, ಔಷಧಿಗೆ ದಿನಕ್ಕೆ ₹500 ಆಗುತ್ತದೆ. ಅಷ್ಟು ದುಡ್ಡು ನಮ್ಮ ಬಳಿ ಇಲ್ಲ. ಔಷಧಿ ಇಲ್ಲದೆ ಅನಾರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಮಗ ಮನೋರೋಗದಿಂದ ಬಳಲುತ್ತಿದ್ದಾನೆ. ಸಹಾಯ ಮಾಡಿ.

ಶಾಸಕರು: ಲಾಕ್‌ಡೌನ್‌ ಸಮಯದಲ್ಲಿ ಉಚಿತವಾಗಿ ಔಷಧಿ, ಮಾತ್ರೆ ಕೂಡ ಹಂಚಲಾಗಿದೆ. ನೀವು ಔಷಧಿ ಖರೀದಿಸಿದ ಬಿಲ್‌ ತಂದುಕೊಡಿ. ನಾನು ವ್ಯವಸ್ಥೆ ಮಾಡುತ್ತೇನೆ.

l ಕುಡಿಯುವ ನೀರು ಸರಿಯಾಗಿ ಪೂರೈಸುತ್ತಿಲ್ಲ. ವಾಟರ್‌ಮನ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮಳೆ ಬಂದಾಗ ಚರಂಡಿಯೆಲ್ಲ ತುಂಬಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತದೆ

ಮಾರೇಗೌಡ ಭುವನೇಶ್ವರಿ ನಗರ, ಎಂ. ಪ್ರಕಾಶ್ ಗಣಪತಿ ನಗರ

ಶಾಸಕರು: ಸಂಬಂಧಪಟ್ಟ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಕರೆಸಿ ಮಾತನಾಡುತ್ತೇನೆ. ಸಮರ್ಪಕವಾಗಿ ನೀರು ಪೂರೈಸುವಂತೆ ವಾಟರ್‌ಮನ್‌ಗೂ ಸೂಚನೆ ನೀಡುತ್ತೇನೆ.

l ಕೊಳಚೆ ನೀರು ಎಲ್ಲೆಂದರಲ್ಲಿ ಹರಿದು ಸ್ವಚ್ಛತೆ ಕೊರತೆ ಉಂಟಾಗಿದೆ. ಇಡೀ ಪ್ರದೇಶಕ್ಕೆ ಔಷಧಿ ಹೊಡೆಸಿಕೊಡಿ.

ಧನಲಕ್ಷ್ಮಿ ಚಿಕ್ಕಸಂದ್ರ, ಭಾಗ್ಯ ಚಿಕ್ಕಬಾಣಾವರ

ಶಾಸಕರು: ಸಂಬಂಧಪಟ್ಟ ಎಂಜಿನಿಯರ್‌ಗೆ ಕರೆಸಿ, ಆ ಪ್ರದೇಶ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. ಔಷಧಿ ಹೊಡೆಯುವ ಸಲುವಾಗಿ ಸ್ವಂತ ಟ್ರ್ಯಾಕ್ಟರ್‌ ಇಟ್ಟುಕೊಂಡಿದ್ದೇನೆ. ಅದನ್ನೇ
ಕಳುಹಿಸಿಕೊಡುತ್ತೇನೆ

l ನಾವು ರಾಜಗೋಪಾಲನಗರ ವಾರ್ಡ್‌ನ ಕೊನೆಯ ಭಾಗದಲ್ಲಿದ್ದೇವೆ. ಪಕ್ಕದಲ್ಲಿ ಕೊಟ್ಟಿಗೆಪಾಳ್ಯ ವಾರ್ಡ್‌ ಇದೆ. ಪಾಲಿಕೆಯ ಯಾವ ಸದಸ್ಯರೂ ನಮ್ಮ ಸಮಸ್ಯೆಗೆ
ಸ್ಪಂದಿಸುತ್ತಿಲ್ಲ. ನಮ್ಮ ಪ್ರದೇಶದ ಬಹಳಷ್ಟು ಜನರಿಗೆ ಪಡಿತರ ಚೀಟಿ ಇಲ್ಲ.

ವೆಂಕಟೇಶ್ ಜಿ.ವಿ., ರಾಜಗೋಪಾಲನಗರ

ಶಾಸಕರು: ವಾರ್ಡ್‌ಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸುತ್ತೇನೆ. ನಿಮ್ಮ ಪ್ರದೇಶದಲ್ಲಿ ಯಾರಿಗೆ ಪಡಿತರ ಚೀಟಿ ಇಲ್ಲದವರ ಪಟ್ಟಿ ಮಾಡಿ ನನಗೆ ಕೊಡಿ. ಕಾರ್ಡ್‌ ಕೊಡುವ ವ್ಯವಸ್ಥೆ ಮಾಡುತ್ತೇನೆ.

l ಲಾಕ್‌ಡೌನ್‌ ಸಂದರ್ಭದಲ್ಲಿ ದುಡಿಮೆ ಇಲ್ಲದೆ ಕಂಗಾಲಾಗಿದ್ದೇವೆ. ಮುಂದೆ ಶಾಲೆಗಳು ಪ್ರಾರಂಭವಾದರೆ ಹೆಚ್ಚು ಶುಲ್ಕ ಭರಿಸಲು ಕಷ್ಟವಾಗುತ್ತದೆ. ಶಾಲೆಯವರ ಜೊತೆ ಮಾತಾಡಿ ಶುಲ್ಕ ಕಡಿಮೆ ಮಾಡಿಸಿ.

ಶಾಂತಕುಮಾರ್, ದಾಸರಹಳ್ಳಿ

ಶಾಸಕರು: ಕಾರ್ಮಿಕರ ಕಷ್ಟದ ಅರಿವು ಇದೆ. ಶುಲ್ಕ ಹೆಚ್ಚಾದರೆ ಕಟ್ಟುವುದು ಕಷ್ಟವಾಗುತ್ತದೆ. ಈ ಕುರಿತು ನನ್ನ ಕ್ಷೇತ್ರದ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರ ಜೊತೆ ಮಾತನಾಡುತ್ತೇನೆ.

l ಗಂಗಾ ಇಂಟರ್‌ನ್ಯಾಷನ್‌ ಸ್ಕೂಲ್ ಹತ್ತಿರ ರಾಜಕಾಲುವೆ ಸಂಪೂರ್ಣ ಹದಗೆಟ್ಟು ಹೋಗಿದೆ. ಮಳೆ ಬಂದರೆ ಮನೆಯೊಳಗೆ ನೀರು ಬರುತ್ತದೆ. ರಾಜಕಾಲುವೆ ದುರಸ್ತಿ ಮಾಡಿಸಿ.

ಎಂ.ಎಸ್. ನಾಗರಾಜ ರುಕ್ಮಿಣಿ ನಗರ, ಕೃಷ್ಣ ದ್ವಾರಕಾನಗರ

ಶಾಸಕರು: ಕ್ಷೇತ್ರದ ರಾಜಕಾಲುವೆ ದುರಸ್ತಿಗಾಗಿ ಎಚ್‌.ಡಿ.
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹132 ಕೋಟಿ ಅನುದಾನ ಘೋಷಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಬಂದ ನಂತರ ಅನುದಾನ ಹಿಂಪಡೆಯಿತು. ಟೆಂಡರ್‌ ಎಲ್ಲ ಕರೆದ ನಂತರ ಕಾಮಗಾರಿ ಸ್ಥಗಿತಗೊಂಡಿದೆ. ಆದರೂ, ದುರಸ್ತಿ ಮಾಡಿಸಲು ಪರ್ಯಾಯ ವ್ಯವಸ್ಥೆ ಮಾಡುತ್ತೇನೆ.

l ಕೆರೆ ರಸ್ತೆಯಿಂದ ಸುಂಕದಕಟ್ಟೆಯವರೆಗೆ ಬೀದಿದೀಪ ಉರಿಯುತ್ತಿಲ್ಲ. ರಾತ್ರಿ ವೇಳೆ ಸಂಚರಿಸಲು ತುಂಬಾ ಸಮಸ್ಯೆಯಾಗುತ್ತದೆ

ಬೈರಹನುಮೇಗೌಡ, ಕೆರೆ ರಸ್ತೆ.

ಶಾಸಕರು: ಹೊಸ ಬೀದಿದೀಪ ಅಳವಡಿಸಲು ಟೆಂಡರ್‌ ಆಗಿದೆ. ಲಾಕ್‌ಡೌನ್‌ ಮುಗಿದ ನಂತರ ಅಳವಡಿಸುವ ಕಾರ್ಯ ಪ್ರಾರಂಭವಾಗಲಿದೆ.

l ಚೊಕ್ಕಸಂದ್ರ ದೇವಸ್ಥಾನ ಹಿಂದಿನ ರಸ್ತೆಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಕಸ ವಿಲೇವಾರಿ ಮಾಡಿ ನಾಲ್ಕು ತಿಂಗಳಾಗಿವೆ.

ಅರುಣ್‌ ಚೊಕ್ಕಸಂದ್ರ

ಶಾಸಕರು: ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಸೂಚನೆ ನೀಡುತ್ತೇನೆ.

l ನಮ್ಮ ಪ್ರದೇಶಕ್ಕೆ ಹಾಲು, ದಿನಸಿ ಅಥವಾ ತರಕಾರಿಯನ್ನು ಯಾರೂ ತಂದುಕೊಟ್ಟಿಲ್ಲ. ನೀವಾದರೂ ಸಹಾಯ ಮಾಡಿ

ದೀಪಕ್‌, ಮಯೂರ ನಗರ

ಶಾಸಕರು: ಕ್ಷೇತ್ರದ ಎಲ್ಲ ಕಡೆಗೆ ಓಡಾಡಿ, ತರಕಾರಿ, ಆಹಾರ ಪೊಟ್ಟಣ ಹಂಚಿದ್ದೇನೆ. ಹೆಗ್ಗನಹಳ್ಳಿ ವಾರ್ಡ್‌ನಲ್ಲಿ ಕೂಡ ತರಕಾರಿ ವಿತರಿಸಲಾಗಿದೆ. ನಿಮ್ಮ ವಿಳಾಸ ಪಡೆದು, ದಿನಸಿ–ತರಕಾರಿ ನೀಡುವ ವ್ಯವಸ್ಥೆ ಮಾಡಲಾಗುವುದು.

***

ನಾನು ಜನ ಸೇವೆ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಜನರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಬಂದವನು. ಸರ್ಕಾರದಿಂದ ಸಹಾಯ ಸಿಗುತ್ತದೋ ಇಲ್ಲವೋ ಕಾಯುತ್ತಾ ಕೂರಲು ಇದು ಸಮಯವಲ್ಲ. ಬಡವರಿಗೆ ನನ್ನ ಕೈಯಿಂದಾದಷ್ಟು ತುರ್ತು ಸಹಾಯ ಮಾಡಿದ್ದೇನೆ. ನಾನು ಮಾಡುತ್ತಿರುವ ಕೆಲಸ ನೋಡಿ ಅನೇಕ ದಾನಿಗಳೂ ಬಡವರ ಸೇವೆಗೆ ನನ್ನೊಂದಿಗೆ ಕೈಜೋಡಿಸಿದ್ದಾರೆ

– ಆರ್.ಮಂಜುನಾಥ್, ದಾಸರಹಳ್ಳಿ ಕ್ಷೇತ್ರದ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT