ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಚೀಲಕ್ಕೆ ತೆರಬೇಕಾದೀತು ದಂಡ

ಮಾರಾಟ ಮಳಿಗೆಗಳಿಗೆ ದಿಢೀರ್‌ ದಾಳಿ ಆರಂಭಿಸಿದ ಬಿಬಿಎಂಪಿ l 600 ಕೆ.ಜಿ ಪ್ಲಾಸ್ಟಿಕ್ ಜಪ್ತಿ
Last Updated 15 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ನೀವು ಪ್ಲಾಸ್ಟಿಕ್ ಕೈ ಚೀಲಗಳನ್ನು ಬಳಸುತ್ತೀರಾ. ಹಾಗಿದ್ದರೆ ದಂಡ ತೆರಬೇಕಾದೀತು ಎಚ್ಚರ.

ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ತಡೆಯಲು ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.ಅನಿರೀಕ್ಷಿತ ತಪಾಸಣೆ ನಡೆಸಲಿರುವ ಪಾಲಿಕೆ ಅಧಿಕಾರಿಗಳು ಪ್ಲಾಸ್ಟಿಕ್ ಮಾರಾಟ ಮಾಡುವವರು ಮಾತ್ರವಲ್ಲ, ಬಳಕೆದಾರರಿಗೂ ದಂಡ ವಿಧಿಸಲಿದ್ದಾರೆ.

ಪ್ಲಾಸ್ಟಿಕ್‌ ಬಳಕೆದಾರರ ಮೇಲೆ ಪಾಲಿಕೆ ಆ.1ರಿಂದ ದಂಡ ಪ್ರಯೋಗ ಆರಂಭಿಸಲಿದೆ. ಅದಕ್ಕೂ ಮುನ್ನ ಅಂಗಡಿ ಮಳಿಗೆಗಳಿಗೆ ದಿಢೀರ್‌ ದಾಳಿ ನಡೆಸಿ ಎಚ್ಚರಿಕೆ ನೀಡುವ ಕೆಲಸವನ್ನು ಬಿಬಿಎಂಪಿ ಅಧಿಕಾರಿಗಳು ಮಾಡಲಿದ್ದಾರೆ. ನಗರದ ಪ್ರಮುಖ ಮಾರುಕಟ್ಟೆ ಮತ್ತು ಕಾಂಪ್ಲೆಕ್ಸ್‌ಗಳಿಗೆ ಮೇಯರ್ ಗಂಗಾಂಬಿಕೆ ನೇತೃತ್ವದಲ್ಲಿ ಅಧಿಕಾರಿಗಳು ಸೋಮವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯಶವಂತಪುರ ಎಪಿಎಂಸಿ ಯಾರ್ಡ್‌ನಲ್ಲಿಗಜಾನನ ಪ್ರಾವಿಜನ್ ಸ್ಟೋರ್, ಬೃಂದಾವನ ಟ್ರೇಡರ್ಸ್, ರಾಘವೇಂದ್ರ ಪ್ಲಾಸ್ಟಿಕ್ಸ್, ವರಲಕ್ಷ್ಮೀ ಟ್ರೇಡರ್ಸ್‌ ಸೇರಿ 40 ಮಳಿಗೆಗಳ ಮೇಲೆ ದಾಳಿ ನಡೆಸಿ 150 ಕೆ.ಜಿ ಪ್ಲಾಸ್ಟಿಕ್ ಜಪ್ತಿ ಮಾಡಲಾಯಿತು.

ಜಯನಗರ ಮಾರುಕಟ್ಟೆ, ಶಿವಾಜಿನಗರದ ರಸೆಲ್ ಮಾರುಕಟ್ಟೆ, ಶಾಂತಿನಗರದ ಜಾನ್ಸನ್ ಮಾರುಕಟ್ಟೆ ಮತ್ತು ಆಸ್ಟಿನ್ ಟೌನ್‌ನಲ್ಲಿರುವ ಬಿಡಿಎ ಕಾಂಪ್ಲೆಕ್ಸ್, ವಿಜಯನಗರ ಮಾರುಕಟ್ಟೆ ಹಾಗೂ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ಗಳಲ್ಲೂ ತಪಾಸಣೆ ನಡೆಸಲಾಯಿತು. ನಿಷೇಧಿತ ಪ್ಲಾಸ್ಟಿಕ್‌ ಹಾಳೆ, ಚಮಚ, ತಟ್ಟೆ ಪಾಲಿಥೀನ್ ಚೀಲಗಳನ್ನೂ ವಶಕ್ಕೆ ಪಡೆಯಲಾಯಿತು.

‘ಪ್ಲಾಸ್ಟಿಕ್‌ನಿಂದ ತಯಾರಾಗುವ ಯಾವುದೇ ಉತ್ಪನ್ನಗಳನ್ನು ಬಳಕೆ ಮಾಡುವಂತಿಲ್ಲ. ಪ್ಲಾಸ್ಟಿಕ್ ಕವರ್ ಬದಲು ಬಟ್ಟೆ ಹಾಗೂ ಪೇಪರ್ ಬ್ಯಾಗ್‌ಗಳನ್ನು ಬಳಸಬೇಕು’ ಎಂದು ಮೇಯರ್ ಎಚ್ಚರಿಕೆ ನೀಡಿದರು.

‘ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡುವ ಉದ್ದೇಶದಿಂದ ನಗರದೆಲ್ಲೆಡೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪಾಲಿಕೆ ಆರೋಗ್ಯಾಧಿಕಾರಿಗಳು ಇದೇ ರೀತಿ ಒಂದು ವಾರ ಎಲ್ಲ ವಾರ್ಡ್‌ಗಳಲ್ಲಿ ದಾಳಿ ನಡೆಸಲಿದ್ದಾರೆ. ಒಂದು ವಾರದ ಬಳಿಕ ಪ್ಲಾಸ್ಟಿಕ್ ಬಳಕೆ ಮಾಡಿದರೆ ದಂಡ ವಿಧಿಸಲಿದ್ದಾರೆ. ಎರಡನೇ ಬಾರಿ ಪ್ಲಾಸ್ಟಿಕ್ ವ್ಯಾಪಾರದಲ್ಲಿ ಸಿಕ್ಕಿಬಿದ್ದರೆ ಮಳಿಗೆಗಳ ಪರವಾನಗಿ ರದ್ದುಗೊಳಿಸಲಾಗುವುದು’ ಎಂದು ಹೇಳಿದರು.

ಪ್ಲಾಸ್ಟಿಕ್ ತಯಾರಿಕಾ ಘಟಕಗಳ ಮೇಲೆ ಆಗಾಗ ದಾಳಿ ನಡೆಸಿದರೂ ಹೊರ ರಾಜ್ಯಗಳಿಂದ ಪ್ಲಾಸ್ಟಿಕ್ ಚೀಲಗಳು ಪೂರೈಕೆಯಾಗುತ್ತಿವೆ. ಚಿಲ್ಲರೆ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಚೀಲಗಳ ವ್ಯಾಪಾರವನ್ನು ಸಂಪೂರ್ಣ ನಿಲ್ಲಿಸಿದರೆ ಹೊರ ರಾಜ್ಯದಿಂದ ಬರುವ ಪ್ಲಾಸ್ಟಿಕ್‌ಗೆ ತಾನಾಗಿಯೇ ಬೇಡಿಕೆ ಕಡಿಮೆಯಾಗಲಿದೆ ಎಂಬುದು ಬಿಬಿಎಂಪಿ ಲೆಕ್ಕಾಚಾರ. ‍‍

ಸಿಗದ ಪ್ಲಾಸ್ಟಿಕ್: ಮೇಯರ್ ಗರಂ

ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿದಾಗ ಅಲ್ಲಿನ ಯಾವುದೇ ಅಂಗಡಿಯಲ್ಲಿ ಪ್ಲಾಸ್ಟಿಕ್ ಕೈ ಚೀಲಗಳು ಸಿಗಲಿಲ್ಲ.

‘ಭಾನುವಾರ ಭೇಟಿ ನೀಡಿದ್ದಾಗ ಪ್ಲಾಸ್ಟಿಕ್ ಕವರ್‌ಗಳು ಇದ್ದವು. ಮರು ದಿನವೇ ಯಾವ ಅಂಗಡಿಯಲ್ಲಿ ಪ್ಲಾಸ್ಟಿಕ್ ಇಲ್ಲ ಎಂದರೆ ನಂಬಲು ಆಗುತ್ತಿಲ್ಲ. ನಾವು ಬರುವ ಬಗ್ಗೆ ಅಂಗಡಿ ಮಾಲೀಕರಿಗೆ ಇಲ್ಲಿನ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ವಿಶೇಷ ಆಯುಕ್ತ ರಂದೀಪ್ ಅವರಿಗೆ ಮೇಯರ್ ಸೂಚನೆ ನೀಡಿದರು.

ವ್ಯಾಪಾರಿಗಳ ಜೊತೆ ಶುಕ್ರವಾರ ಸಭೆ

‘ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ತಡೆಯುವ ಉದ್ದೇಶದಿಂದ ಪ್ಲಾಸ್ಟಿಕ್ ಸಾಮಗ್ರಿ ವಿತರಕರು, ಪ್ಯಾಕರ್‌ಗಳು ಹಾಗೂ ಸಗಟು ವ್ಯಾಪಾರಿಗಳ ಜತೆ ಶುಕ್ರವಾರ ಪುರಭವನದಲ್ಲಿ ಸಭೆ ನಡೆಸಲಿದ್ದೇವೆ. ಪ್ಲಾಸ್ಟಿಕ್ ಮಾರಾಟ ಮಾಡದಂತೆ ಅವರಲ್ಲಿ ಮನವಿ ಮಾಡುತ್ತೇವೆ. ಪ್ಲಾಸ್ಟಿಕ್‌ ನಿಷೇಧದ ಕುರಿತು ಜಾರಿಯಲ್ಲಿರುವ ನಿಯಮಗಳ ಬಗ್ಗೆಯೂ ತಿಳಿವಳಿಕೆಯನ್ನೂ ನೀಡಲಿದ್ದೇವೆ’ ಎಂದು ಮೇಯರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT