ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಷಕರ ಪಾತ್ರವನ್ನೂ ನಿರ್ವಹಿಸಿ: BBMP ಶಿಕ್ಷಕರಿಗೆ ತುಷಾರ್‌ ಗಿರಿನಾಥ್‌ ಕಿವಿಮಾತು

Published : 5 ಸೆಪ್ಟೆಂಬರ್ 2024, 16:05 IST
Last Updated : 5 ಸೆಪ್ಟೆಂಬರ್ 2024, 16:05 IST
ಫಾಲೋ ಮಾಡಿ
Comments

ಬೆಂಗಳೂರು: ‘ಬಿಬಿಎಂಪಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಪೋಷಕರ ಪಾತ್ರವನ್ನೂ ನಿರ್ವಹಿಸಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಬಿಬಿಎಂಪಿ ಶಿಕ್ಷಣ ಇಲಾಖೆ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಾಲಿಕೆ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂದು ಪೋಷಕರು ಮಕ್ಕಳನ್ನು ಕಳುಹಿಸುತ್ತಾರೆ. ಹೆಚ್ಚಿನ ಶಿಕ್ಷಣ ಪಡೆಯದ ಪೋಷಕರೂ ಇದ್ದಾರೆ. ಹೀಗಾಗಿ ಶಿಕ್ಷಕರು ಬೋಧನೆ ಹಾಗೂ ಪೋಷಣೆಯ ಎರಡೂ ಜವಾಬ್ದಾರಿ ಹೊರಬೇಕು’ ಎಂದರು.

‘ಪೋಷಕರಂತೆ ಶಿಕ್ಷಕರಲ್ಲೂ ಭಾವನೆ ಇರಬೇಕು. ಸಣ್ಣಪುಟ್ಟ ತಪ್ಪುಗಳನ್ನು ಕ್ಷಮಿಸಬೇಕು. ಆದರೆ, ಶಿಸ್ತು ಪಾಲನೆಯಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಇರಬಾರದು. ಮಕ್ಕಳಿಗೆ ಕಿವಿಮಾತು ಹೇಳಿ ಅವರನ್ನು ಸರಿದಾರಿಯಲ್ಲಿ ನಡೆಸಬೇಕು’ ಎಂದು ಹೇಳಿದರು.

ಪಾಲಿಕೆಯ ಶಾಲೆ– ಕಾಲೇಜುಗಳಲ್ಲಿ ಈ ವರ್ಷ 23,322 ಮಕ್ಕಳು ಪ್ರವೇಶ ಪಡೆದುಕೊಂಡಿದ್ದಾರೆ. ಕಳೆದ ಎಲ್ಲ ವರ್ಷಗಳಿಗೆ ಹೋಲಿಸಿದರೆ ಇದು ಹೆಚ್ಚಾಗಿದೆ ಎಂದು ಬಿಬಿಎಂಪಿ ಶಿಕ್ಷಣ ಇಲಾಖೆಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್‌ ತಿಳಿಸಿದರು.

2023–24ನೇ ಸಾಲಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಸ್ಸೆಸ್ಸೆಲ್ಸಿಯ 73 ವಿದ್ಯಾರ್ಥಿಗಳಿಗೆ ತಲಾ ₹25 ಸಾವಿರ, ದ್ವಿತೀಯ ಪಿಯುಸಿಯ 227 ವಿದ್ಯಾರ್ಥಿಗಳಿಗೆ ತಲಾ ₹35 ಸಾವಿರ ಹಾಗೂ ಪದವಿಯ ಆರು ವಿದ್ಯಾರ್ಥಿಗಳಿಗೆ ತಲಾ ₹50 ಸಾವಿರ ಪ್ರೋತ್ಸಾಹಧನ ನೀಡಲಾಯಿತು.

ವೇತನ ಹೆಚ್ಚಳದ ಭರವಸೆ: ‘ವ್ಯವಸ್ಥೆ ಬೇರೆ ಆಗಿರುವುದರಿಂದ ವೇತನ ನೀಡುವುದರಲ್ಲಿ ಸಮಸ್ಯೆ ಆಗಿದೆ. ವೇತನ ಹೆಚ್ಚಳದ ಬಗ್ಗೆಯೂ ಕೆಲವು ಪ್ರಕ್ರಿಯೆಗಳನ್ನು ನಡೆಸಬೇಕಿದೆ. ವರ್ಷಕ್ಕೆ ಒಂದುಬಾರಿ ವೇತನ ಹೆಚ್ಚಿಸಲೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತುಷಾರ್‌ ಗಿರಿನಾಥ್ ಭರವಸೆ ನೀಡಿದರು.

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆದ ಪುರಭವನದ ಮುಂದೆ ‘ವೇತನ ಬಿಡುಗಡೆ ಹಾಗೂ ಹೆಚ್ಚಳದಲ್ಲಿ ಸಮಸ್ಯೆಯಾಗಿದೆ’ ಎಂದು ಆರೋಪಿಸಿ ಶಿಕ್ಷಕರು ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್‌ ಗಿರಿನಾಥ್‌, ‘ಬಿಬಿಎಂಪಿ ಇದೀಗ ಎಸ್‌ಡಿಎಂಸಿ ಮೂಲಕ ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಕೆಲವು ತೊಂದರೆಗಳಿದ್ದು, ಅವುಗಳನ್ನು ಶೀಘ್ರ ಪರಿಹರಿಸಲಾಗುತ್ತದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT