ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಡುತ್ತಲೇ ಕಸ ಹೆಕ್ಕಿದ ನಾಗರಿಕರು; 12 ಗಂಟೆಗಳಲ್ಲಿ 33 ಟನ್ ಬಾಟಲಿ ರಾಶಿ

ಪ್ಲಾಸ್ಟಿಕ್‌ ಮುಕ್ತ ಬೆಂಗಳೂರಿಗಾಗಿ ‘ಪ್ಲಾಗ್‌ರನ್‌’ * 7 ಸಾವಿರಕ್ಕೂ ಅಧಿಕ ಮಂದಿ ಭಾಗಿ
Last Updated 2 ಅಕ್ಟೋಬರ್ 2018, 19:11 IST
ಅಕ್ಷರ ಗಾತ್ರ

ಬೆಂಗಳೂರು: ಕೇಸರಿ ಬಣ್ಣದ ನಿಲುವಂಗಿ ಹಾಗೂ ಬಗಲಲ್ಲೊಂದು ಬಟ್ಟೆಯ ಬ್ಯಾಗ್‌ ಧರಿಸಿದ್ದ ಸ್ವಯಂ ಸೇವಕರ ಪಡೆ ಮಂಗಳವಾರ ಬೀದಿಗಿಳಿಯಿತು. ಪ್ರಮುಖ ರಸ್ತೆಗಳಲ್ಲಿ ಓಡುತ್ತಲೇ ಪ್ಲಾಸ್ಟಿಕ್‌ ಕಸಗಳನ್ನು ಸಂಗ್ರಹಿಸಿದ ಸ್ವಯಂಸೇವಕರು ಸಾರ್ವಜನಿಕರಲ್ಲಿ ‘ಪ್ಲಾಸ್ಟಿಕ್‌ ಮುಕ್ತ’ ನಗರವನ್ನು ನಿರ್ಮಿಸುವ ಜಾಗೃತಿ ಮೂಡಿಸಿದರು.

ಗಾಂಧಿ ಜಯಂತಿ ಪ್ರಯುಕ್ತ ಬಿಬಿಎಂಪಿಯು, ನಮ್ಮ ನಿಮ್ಮ ಸೈಕಲ್ ಫೌಂಡೇಶನ್, ಲೆಟ್ಸ್ ಬಿ ದಿ ಚೇಂಜ್, ಗೋ ನೇಟಿವ್‌ ಹಾಗೂ ಯುನೈಟೆಡ್‌ ವೇ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ‘ಪ್ಲಾಗ್ ರನ್‌’ ಅಭಿಯಾನಕ್ಕೆ ನಗರದಾದ್ಯಂತ ನಾಗರಿಕರು ಸ್ಪಂದಿಸಿದರು. ನಗರದ 54 ಸ್ಥಳಗಳಲ್ಲಿ ನಡೆದ ಈ ಅಭಿಯಾನದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ಬೆಳಗ್ಗಿನ ಜಾಗಿಂಗ್‌ಗೆ ಬಂದ ಅನೇಕರು ಸ್ವಯಂಸ್ಫೂರ್ತಿಯಿಂದ ಕಸ ಹೆಕ್ಕಿದರು.

ಮಹಾತ್ಮ ಗಾಂಧಿ ರಸ್ತೆ ಬಳಿಯಲ್ಲಿರುವ ಗಾಂಧೀಜಿ ಪ್ರತಿಮೆಗೆ ಹಾರಾರ್ಪಣೆ ನಡೆಸಿದ ಬಳಿಕ ಮೇಯರ್ ಗಂಗಾಂಬಿಕೆ‘ಪ್ಲಾಗ್‌ ರನ್‌’ಗೆ ಚಾಲನೆ ನೀಡಿದರು. ಗಂಗಾಂಬಿಕೆ, ಉಪಮೇಯರ್‌ ಮೇಯರ್‌ ರಮೀಳಾ ಉಮಾಶಂಕರ್‌, ನಿಕಟಪೂರ್ವ ಮೇಯರ್‌ ಸಂಪತ್‌ರಾಜ್‌, ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌ ಹಾಗೂ ನಗರ ಪೊಲೀಸ್‌ ಕಮಿಷನರ್‌ ಸುನೀಲ್‌ ಕುಮಾರ್‌ ಅವರು ಬಗಲಲ್ಲಿ ಬ್ಯಾಗ್‌ ಹಾಕಿಕೊಂಡು ಕಸ ಹೆಕ್ಕಿದರು.

‘ಈ ಅಭಿಯಾನಕ್ಕೆ 7ಸಾವಿರ ಮಂದಿ ಹೆಸರು ನೋಂದಾಯಿಸಿದ್ದರು. ಇಂದು ಅದಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ನಮ್ಮ ನಿರೀಕ್ಷೆಗೂ ಮೀರಿ ಜನ ಸ್ಪಂದಿಸಿದ್ದಾರೆ’ ಎಂದು ಮಂಜುನಾಥ್‌ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇರೆ ಬೇರೆ ವಾರ್ಡ್‌ಗಳಲ್ಲಿ ಪ್ಲಾಗ್‌ ರನ್‌ ನಡೆದಿದೆ. ಅಲ್ಲೆಲ್ಲ ಸಂಗ್ರಹವಾದ ಪ್ಲಾಸ್ಟಿಕ್‌ ಬಾಟಲಿಗಳನ್ನು ಪಾಲಿಕೆಯ ಜ್‌ಕುಮಾರ್ ಗಾಜಿನ ಮನೆಯ ಬಳಿಯ ವಿಲೇವಾರಿ ಕೇಂದ್ರಕ್ಕೆ ತಂದು ವೈಜ್ಞಾನಿಕವಾಗಿ ವಿಲೇ ಮಾಡಲಿದ್ದೇವೆ’ ಎಂದರು.

ದೇಶದಲ್ಲಿ ಮೊದಲ ಬಾರಿ ನಡೆದ ಈ ಕಾರ್ಯಕ್ರಮವನ್ನು ಗಿನ್ನಿಸ್‌ ದಾಖಲೆಗೂ ಸೇರ್ಪಡೆಗೊಳಿಸುವ ಪ್ರಯತ್ನವನ್ನು ಬಿಬಿಎಂಪಿ ನಡೆಸಿದೆ.

‘ಗಿನ್ನೆಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆಯ ಅಧಿಕಾರಿಗಳು ಈ ಕಾರ್ಯಕ್ರಮವನ್ನು ದಾಖಲಿಸಿಕೊಂಡಿದ್ದಾರೆ’ ಎಂದು ಅವರು ತಿಳಿಸಿದರು.

**

ಪ್ರಯತ್ನಕ್ಕೆ ಸಿಕ್ಕಿರುವ ಜನ ಬೆಂಬಲದಿಂದ ಉತ್ತೇಜಿತರಾಗಿದ್ದೇವೆ. ವರ್ಷದಲ್ಲಿ ಕನಿಷ್ಠ ಪಕ್ಷ ಮೂರು ತಿಂಗಳಿಗೊಮ್ಮೆಯಾದರೂ ಪ್ರಮುಖ ದಿನಗಳಲ್ಲಿ ಈ ಕಾರ್ಯಕ್ರಮ ನಡೆಸಲಿದ್ದೇವೆ.

ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT