ಭಾನುವಾರ, ಜನವರಿ 19, 2020
23 °C

ಪ್ರಧಾನಿ ಸ್ವಾಗತಕ್ಕೆ ‘ಹೊಸ ಡಾಂಬರ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಬರುವ ಕೆಲ ಗಂಟೆಗಳ ಮುನ್ನವೇ ರಾಜಭವನ ರಸ್ತೆಗೆ ತರಾತುರಿಯಲ್ಲಿ ಹೊಸ ಡಾಂಬರ್‌ ಹಾಕಿ ಸಿದ್ಧಪಡಿಸಲಾಯಿತು.

ತುಮಕೂರಿನಿಂದ ನಗರಕ್ಕೆ ಬಂದು ಡಿಆರ್‌ಡಿಒ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಜಭವನದಲ್ಲಿ ವಾಸ್ತವ್ಯ ಹೂಡಲು ಪ್ರಧಾನಿಯವರ ವೇಳಾಪಟ್ಟಿ ಸಿದ್ಧಪಡಿಸಲಾಗಿತ್ತು. ಅವರ ವಾಹನ ಸಂಚರಿಸುವ ರಸ್ತೆಗಳೆಲ್ಲೆಲ್ಲ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಜೊತೆಗೆ ರಸ್ತೆಯನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳುವಂತೆ ಭದ್ರತಾ ಸಿಬ್ಬಂದಿ, ನಗರದ ಅಧಿಕಾರಿಗಳಿಗೆ ಸೂಚಿಸಿದ್ದರು.

ಕಬ್ಬನ್ ರಸ್ತೆಗೆ ಹೊಂದಿಕೊಂಡು ರಾಜಭವನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಗ್ಗುಗಳು ಬಿದ್ದಿದ್ದವು. ಅಲ್ಲಲ್ಲಿ ಡಾಂಬರ್‌ ಕಿತ್ತು ಹೋಗಿತ್ತು. ಅದೇ ರಸ್ತೆಯಲ್ಲಿ ಪ್ರಧಾನಿ ವಾಹನ ಹೋಗುತ್ತದೆಂಬ ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಗುರುವಾರ ಬೆಳಿಗ್ಗೆಯೇ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿ ರಸ್ತೆಗೆ ಡಾಂಬರ್ ಹಾಕಿಸಿದರು.

ಅದನ್ನು ಕಂಡ ಜನ, ‘ತಿಂಗಳಿಗೆ ಒಮ್ಮೆಯಾದರೂ ಪ್ರಧಾನಿ ನಗರಕ್ಕೆ ಬಂದು ಹೋದರೆ, ಎಲ್ಲ ರಸ್ತೆಗಳು ಅಭಿವೃದ್ಧಿ ಆಗುತ್ತವೆ’ ಎಂದರು. 

ಮೋದಿ ಭೇಟಿ ವಿರೋಧಿಸಿ ತಲೆಬೋಳಿಸಿಕೊಂಡ ರೈತರು
ಕೆ.ಆರ್.ಪುರ:
ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ವಿರೋಧಿಸಿ ಇಲ್ಲಿನ ರೈತರು ಗುರುವಾರ ತಲೆ ಬೋಳಿಸಿ
ಕೊಂಡು ಪ್ರತಿಭಟನೆ ನಡೆಸಿದರು.

ಕೆ.ಆರ್.ಪುರ ಬಸ್ ನಿಲ್ದಾಣದಲ್ಲಿ ರತ್ನ ಭಾರತ ರೈತ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ್ ನೇತೃತ್ವದಲ್ಲಿ ಮೂವರು ತಲೆ ಬೋಳಿಸಿಕೊಂಡರು.

‘ಮೋದಿ ಅವರು ರೈತರಿಗೆ ನೀಡಿರುವ ಕೊಡುಗೆ ಶೂನ್ಯ. ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸದೆ ಕರ್ನಾಟಕದ ರೈತರನ್ನು ಮೋದಿ ನಿರ್ಲಕ್ಷಿಸಿದರು’ ಎಂದು ಲಕ್ಷ್ಮಣ್ ದೂರಿದರು.

‘ಪ್ರವಾಹದ ವೇಳೆ ರೈತರ ಸಂಕಷ್ಟ ಅಲಿಸಲಿಲ್ಲ. ರೈತರ ಆತ್ಮಹತ್ಯೆ ತಡೆಯಲು ಯೋಜನೆ ರೂಪಿಸಲಿಲ್ಲ. ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು, ಆದರೆ ಮಾಡಲಿಲ್ಲ’ ಎಂದು ಆರೋಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು