ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ: ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಬೇಟೆಗಾರರು

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ: ಲಾಕ್‌ಡೌನ್‌ ಬಳಿಕ ಹೆಚ್ಚುತ್ತಿದೆ ಕಳ್ಳಬೇಟೆ
Last Updated 18 ಏಪ್ರಿಲ್ 2020, 2:18 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ 19 ರೋಗ ನಿಯಂತ್ರಣದ ಸಲುವಾಗಿ ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸಿನ ಕಾಡುಗಳಲ್ಲಿ ವನ್ಯಜೀವಿಗಳ ಬೇಟೆ ಪ್ರಮಾಣ ಹೆಚ್ಚುತ್ತಿದೆ.

ರಾತ್ರಿ ವೇಳೆ ಇಬ್ಬರು ಕಳ್ಳಬೇಟೆಗಾರರು ಕೋವಿ ಹೆಗಲಿಗೇರಿಸಿಕೊಂಡು ಇಬ್ಬರು ಶಿಕಾರಿಗೆ ಹೋದ ದೃಶ್ಯ ರಾಗಿಹಳ್ಳಿ ಗ್ರಾಮ ಪಂಚಾಯಿತಿಯ ಜೈಪುರ ದೊಡ್ಡಿ ಬಳಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಬುಧವಾರ ರಾತ್ರಿ ಸೆರೆಯಾಗಿದೆ.

ಹಾರೋಹಳ್ಳಿ ವಲಯದ ವ್ಯಾಪ್ತಿಯಲ್ಲಿ ದಾಖಲಾಗಿರುವ ಈ ದೃಶ್ಯವನ್ನು ವನ್ಯಜೀವಿ ಕಾರ್ಯಕರ್ತರೊಬ್ಬರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

‘ಬೇಸಿಗೆ ಕಾಲದಲ್ಲಿ ಕಾಳ್ಗಿಚ್ಚು ಪ್ರಕರಣಗಳು ಕಾಣಿಸಿಕೊಳ್ಳುವುದು ಹೆಚ್ಚು. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ಹತೋಟಿ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಾರೆ. ಇಂತಹ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಉರುಳು ಇಟ್ಟು ಅವುಗಳನ್ನು ಹಿಡಿದು ಕೊಲ್ಲುತ್ತಾರೆ. ಕಾಡಿನಲ್ಲಿ ಹಾಗೂ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಕಂಡು ಬರುತ್ತಿವೆ’ ಎಂದು ಬನ್ನೇರುಘಟ್ಟ ನೇಚರ್‌ ಕನ್ಸರ್ವೇಷನ್‌ ಟ್ರಸ್ಟ್‌ನ ಭಾನುಪ್ರಕಾಶ್ ಹೇಳಿದರು.

ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಪ್ರಶಾಂತ್‌, ‘ನಾನು ಈ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ್ದೇನೆ. ರಾತ್ರಿ ಕೋವಿ ಹಿಡಿದು ಅಡ್ಡಾಡುವುದನ್ನು ನೋಡಿದರೆ ಅವರ ಉದ್ದೇಶ ಕಳ್ಳಬೇಟೆ ಎಂಬುದು ಸ್ಪಷ್ಟ. ವಿಡಿಯೊದಲ್ಲಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳುತ್ತೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಗಿಹಳ್ಳಿ ಹಾಗೂ ಶಿವನಹಳ್ಳಿ ಪ್ರದೇಶದಲ್ಲಿ ರಾಷ್ಟ್ರೀಯ ಉದ್ಯಾನದ ಹೊರಗಡೆಯೂ ಕಾಡುಗಳಿವೆ. ಇಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚು ಇದೆ. ಇಂತಹ ಪ್ರದೇಶದಲ್ಲಿ ಕಳ್ಳಬೇಟೆ ಹೆಚ್ಚು’ ಎಂದರು.

‘ಕೆಲಸದ ಸಲುವಾಗಿ ಬೆಂಗಳೂರು ನಗರಕ್ಕೆ ತೆರಳಿದ್ದ ನೂರಾರು ಮಂದಿ ಲಾಕ್‌ಡೌನ್‌ ಬಳಿಕ ಊರಿಗೆ ಮರಳಿದ್ದಾರೆ. ಮನೆಯಲ್ಲಿ ಕುಳಿತು ಬೇಸರಗೊಂಡ ಅನೇಕರು ಶಿಕಾರಿಗೆ ಹೋಗುತ್ತಿದ್ದಾರೆ. ನಮ್ಮ ಇಲಾಖೆಯೂ ಇಂತಹವರ ಮೇಲೆ ಕಣ್ಣಿಟ್ಟಿದೆ’ ಎಂದು ತಿಳಿಸಿದರು.

‘ವನ್ಯಜೀವಿ ರಕ್ಷಣಾ ಕಾಯ್ದೆ ಪ್ರಕಾರ ಅನುಸೂಚಿ 1ರಲ್ಲಿ ಬರುವ ಪ್ರಾಣಿಗಳನ್ನು ರಾಷ್ಟ್ರೀಯ ಉದ್ಯಾನದ ಒಳಗೆ ಬೇಟೆಯಾಡಿದವರನ್ನು ಗರಿಷ್ಠ ಏಳು ವರ್ಷಗಳು ಜೈಲುವಾಸ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಉದ್ಯಾನದ ಹೊರಗೆ ಬೇಟಿಯಾಡಿದವರಿಗೂ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ’ ಎಂದು ಅವರು ನೆನಪಿಸಿದರು.

ಅರಣ್ಯ ಇಲಾಖೆ ವೀಕ್ಷಕರ ಸಂಬಂಧಿ?

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿರುವ ವ್ಯಕ್ತಿ ಅರಣ್ಯ ಇಲಾಖೆ ವೀಕ್ಷಕರೊಬ್ಬರ ಸಂಬಂಧಿ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಫ್‌, ‘ಈ ವಿಚಾರ ಗೊತ್ತಿಲ್ಲ. ಕಳ್ಳಬೇಟೆಯಲ್ಲಿ ತೊಡಗುವವರು ಯಾರೇ ಆಗಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

**

ಕಳ್ಳಬೇಟೆ ನಡೆಸುವ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಅರಣ್ಯ ಇಲಾಖೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡರೆ ಮಾತ್ರ ಕಳ್ಳಬೇಟೆಗೆ ನಿಯಂತ್ರಣಕ್ಕೆ ಬರಲು ಸಾಧ್ಯ.
-ಭಾನುಪ್ರಕಾಶ್,ಬನ್ನೇರುಘಟ್ಟ ನೇಚರ್‌ ಕನ್ಸರ್ವೇಷನ್‌ ಟ್ರಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT