ನಿವೃತ್ತ ಐಜಿಪಿ ಮನೆಗೇ ಕನ್ನ: ಸಿಕ್ಕ ಡಕಾಯಿತರು

7

ನಿವೃತ್ತ ಐಜಿಪಿ ಮನೆಗೇ ಕನ್ನ: ಸಿಕ್ಕ ಡಕಾಯಿತರು

Published:
Updated:

ಬೆಂಗಳೂರು: ಸಾರ್ವಜನಿಕರ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಆರೋಪದಡಿ ಇತ್ತೀಚೆಗೆ ರಾಮಮೂರ್ತಿನಗರ ಪೊಲೀಸರಿಗೆ ಸಿಕ್ಕಿಬಿದ್ದಿರುವ ಡಕಾಯಿತರ ಪೈಕಿ ಮೂವರು, ನಿವೃತ್ತ ಐಜಿಪಿ ಎಂ.ವಿ.ಮೂರ್ತಿ ಅವರ ಮನೆಗೂ ಕನ್ನ ಹಾಕಿ 1,190 ಗ್ರಾಂ ಚಿನ್ನ ದೋಚಿದ್ದರು ಎಂಬ ಸಂಗತಿ ವಿಚಾರಣೆಯಿಂದ ಗೊತ್ತಾಗಿದೆ.‌

ಮೂರ್ತಿ ಅವರು ಕುಟುಂಬದ ಜತೆ ಎಚ್‌ಎಸ್‌ಆರ್‌ ಲೇಔಟ್ ನಾಲ್ಕನೇ ಹಂತದಲ್ಲಿ ನೆಲೆಸಿದ್ದಾರೆ. ಜೂನ್ 11ರಂದು ಆ ಕುಟುಂಬ ಮುಳಬಾಗಿಲಿಗೆ ಹೋಗಿದ್ದಾಗ ಕಳ್ಳತನ ನಡೆದಿತ್ತು. ಜೂನ್ 14ರಂದು ಅವರು ಮನೆಗೆ ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಮೂರ್ತಿ ಅವರ ಮನೆ ಹಾಗೂ ಆ ರಸ್ತೆಯಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಇರದ ಕಾರಣ, ಎಚ್‌ಎಸ್‌ಆರ್ ಲೇಔಟ್‌ ಪೊಲೀಸರಿಗೆ ಕಳ್ಳರ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.

ಜುಲೈ 26ರ ರಾತ್ರಿ ರಾಮಮೂರ್ತಿನಗರ ಠಾಣೆ ಪಿಎಸ್‌ಐ ಮೆಲ್ವಿನ್ ಫ್ರಾನ್ಸಿಸ್ ನೇತೃತ್ವದ ತಂಡವು ನಾಲ್ವರು ಸುಲಿಗೆಕೋರರನ್ನು ವಶಕ್ಕೆ ಪಡೆಯಿತು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಎಚ್‌ಎಸ್‌ಆರ್ ಲೇಔಟ್‌ನ ಮನೆಯೊಂದರಲ್ಲೂ ಕಳವು ಮಾಡಿದ್ದಾಗಿ ಆರೋಪಿಗಳು ಹೇಳಿಕೆ ಕೊಟ್ಟರು. ಮನೆ ತೋರಿಸುವಂತೆ ಕರೆದುಕೊಂಡು ಹೋದಾಗ, ಅವರು ನಿವೃತ್ತ ಐಜಿಪಿ ಮನೆ ಮುಂದೆ ಹೋಗಿ ನಿಂತಿದ್ದಾರೆ.

‘ಆರು ಮಂದಿಯ ಗ್ಯಾಂಗ್, ಕೆ.ಚನ್ನಸಂದ್ರ ಸಮೀಪದ ರಾಂಪುರ ಕೆರೆ ಬಳಿ ಬೈಕ್ ಹಾಗೂ ಕಾರುಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿತ್ತು. ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಯ ತಂಡವು ಅಮರೇಶ್, ಬಾಬು, ದುಷ್ಯಂತ್ ಹಾಗೂ ನಾಗೇಶಗೌಡ ಎಂಬುವರನ್ನು ಹಿಡಿದುಕೊಂಡಿತು. ಈ ವೇಳೆ ನೆಲಮಂಗಲದ ಜಯಂತ್ ಹಾಗೂ ಗುರು ತಪ್ಪಿಸಿಕೊಂಡರು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಂಧಿತರಿಂದ ಸ್ವಿಫ್ಟ್ ಡಿಸೈರ್ ಕಾರು, ಲಾಂಗು–ಮಚ್ಚುಗಳು, ಖಾರದ ಪುಡಿ ಪೊಟ್ಟಣವನ್ನು ಜಪ್ತಿ ಮಾಡಿದೆವು. ಬಾಬು ಹೊರತುಪಡಿಸಿ ಉಳಿದವರೆಲ್ಲ ಐಜಿಪಿ ಮನೆ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ. ನ್ಯಾಯಾಧೀಶರ ಸೂಚನೆಯಂತೆ ಬಂಧಿತರನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಅವರನ್ನು ವಶಕ್ಕೆ ಪಡೆದು ಆಭರಣ ಜಪ್ತಿ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಜೈಲಿನಲ್ಲಿ ಪರಿಚಯ: ವಿಜಯಪುರದ ಅಮರೇಶ್, ಎರಡೂವರೆ ವರ್ಷದ ಹಿಂದೆ ನಗರಕ್ಕೆ ಬಂದು ಗಾರೆ ಕೆಲಸ ಮಾಡಿಕೊಂಡಿದ್ದ. ಈತನ ವಿರುದ್ಧ ದರೋಡೆ, ಡಕಾಯಿತಿ, ಕಳ್ಳತನ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಏಳು ಪ್ರಕರಣಗಳು ದಾಖಲಾಗಿವೆ.

ವರ್ಷದ ಹಿಂದೆ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ಅಮರೇಶ್‌ಗೆ, ಅಲ್ಲಿ ಇತರೆ ಆರೋಪಿಗಳ ಪರಿಚಯವಾಗಿತ್ತು. ಜೈಲಿನಲ್ಲೇ ಗ್ಯಾಂಗ್ ಕಟ್ಟಿಕೊಂಡ ಅವರು, ಬಿಡುಗಡೆ ಬಳಿಕ ತಮ್ಮ ಕಾರ್ಯಾಚರಣೆ ಹೇಗಿರಬೇಕು ಎಂಬ ಬಗ್ಗೆ ಅಲ್ಲೇ ಸಂಚು ರೂಪಿಸಿಕೊಂಡಿದ್ದರು. ಬಳಿಕ ಹಂತ ಹಂತವಾಗಿ ಒಬ್ಬೊಬ್ಬರೇ ಜಾಮೀನಿನ ಮೇಲೆ ಬಿಡುಗಡೆಯಾದರು. ಮೇ ಕೊನೆ ವಾರದಲ್ಲಿ ಅಮರೇಶ್ ಸಹ ಜೈಲಿನಿಂದ ಹೊರ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.
**
ಮನೆಗೆ ನುಗ್ಗಿದ್ದು ಅಮರೇಶ್ 
‘ಹಗಲು ವೇಳೆ ಪ್ರತಿಷ್ಠಿತ ರಸ್ತೆಗಳಲ್ಲಿ ಓಡಾಡುತ್ತಿದ್ದ ಆರೋಪಿಗಳು, ಅಂಗಳದಲ್ಲಿ ಕಸ ಹಾಗೂ ದಿನಪತ್ರಿಕೆಗಳು ಬಿದ್ದಿರುವಂಥ ಮನೆಗಳನ್ನು ಗುರುತಿಸುತ್ತಿದ್ದರು. ಹೆಚ್ಚು ಕಸವಿದ್ದರೆ ಮನೆಯಲ್ಲಿ ಯಾರೂ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತಿದ್ದ ಅವರು, ರಾತ್ರಿವರೆಗೂ ಅಲ್ಲೇ ಕಾದು ಕಳ್ಳತನ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

‘ಅಂತೆಯೇ ಜೂನ್ 13ರಂದು ಐವರು ಮೂರ್ತಿ ಅವರ ಮನೆ ಹತ್ತಿರ ಹೋಗಿದ್ದರು. ಅಮರೇಶ್ ಕಾಂಪೌಂಡ್ ಜಿಗಿದು ಒಳಹೋದರೆ, ಉಳಿದವರು ಹೊರಗೆ ನಿಂತು ಕಾಯುತ್ತಿದ್ದರು. ಎಷ್ಟೇ ಪ್ರಯತ್ನಿಸಿದರೂ ಮುಂಬಾಗಿಲ ಬೀಗ ಮುರಿಯಲು ಸಾಧ್ಯವಾಗಿರಲಿಲ್ಲ. ಕೊನೆಗೆ ಆತ ಹಾರೆಯಿಂದ ಹಿಂಬಾಗಿಲು ಮೀಟಿ ಒಳನುಗ್ಗಿದ್ದ. ಆಭರಣ ದೋಚಿದ ಬಳಿಕ ಅಲ್ಮೆರಾ ಬೀಳಿಸಿ ಹೊರನಡೆದಿದ್ದ. ಕದ್ದ ಮಾಲನ್ನು ಕೆಲ ಚಿನ್ನಾಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿರುವುದಾಗಿ ಹೇಳಿದ್ದಾರೆ. ಆ ಬಗ್ಗೆ ತನಿಖೆಯಾಗಬೇಕಿದೆ’ ಎಂದು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !