ಪೊಲೀಸ್ ಬಲೆಗೆ ಬಿತ್ತು ಹನಿಟ್ರ್ಯಾಪ್ ಗ್ಯಾಂಗ್

7
ಪೊಲೀಸ್, ವರದಿಗಾರನ ಸೋಗಿನಲ್ಲಿ ಸುಲಿಗೆ

ಪೊಲೀಸ್ ಬಲೆಗೆ ಬಿತ್ತು ಹನಿಟ್ರ್ಯಾಪ್ ಗ್ಯಾಂಗ್

Published:
Updated:

ಬೆಂಗಳೂರು: ಫೇಸ್‌ಬುಕ್‌ ಮೂಲಕ ಹಣವಂತರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ಅವರಿಂದ ಸುಲಿಗೆ ಮಾಡುತ್ತಿದ್ದ ಮಹಿಳೆ ನೇತೃತ್ವದ ಗ್ಯಾಂಗ್ ಸೋಲದೇವನಹಳ್ಳಿ ಪೊಲೀಸರ ಬಲೆಗೆ ಬಿದ್ದಿದೆ.

‘ಚಿಕ್ಕಬಾಣಾವರದ ಅರ್ಪಿತಾ, ಆಕೆಯ ಪ್ರಿಯಕರ ಪವನ್ ಯಾದವ್ ಹಾಗೂ ಸಿದ್ಧಾರ್ಥ ಅಲಿಯಾಸ್ ತೀರ್ಥ ಎಂಬುವರನ್ನು ಗುರುವಾರ ರಾತ್ರಿ ಬಂಧಿಸಿದ್ದೇವೆ. ಇವರ ವಿರುದ್ಧ ತುರುವೆಕೆರೆಯ ದಿನಸಿ ಅಂಗಡಿ ಮಾಲೀಕರೊಬ್ಬರು ಆ.8ರಂದು ದೂರು ಕೊಟ್ಟಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಚಹಾಕ್ಕೆ ಕರೆದಳು: ‘ಅರ್ಪಿತಾ ಕೂಡ ತುರುವೆಕೆರೆಯವಳು. ಹೀಗಾಗಿ, ಹಲವು ವರ್ಷಗಳಿಂದ ಆಕೆಯ ಪರಿಚಯವಿತ್ತು. ಜು.28ರಂದು ಅಂಗಡಿಗೆ ಸಾಮಾನು ತೆಗೆದುಕೊಂಡು ಹೋಗಲೆಂದು ಬೆಂಗಳೂರಿಗೆ ಬಂದಿದ್ದೆ. ಈ ವೇಳೆ ಕರೆ ಮಾಡಿದ್ದ ಅರ್ಪಿತಾ, ‘ನಿಮಗೆ ₹ 5 ಸಾವಿರ ಕೊಡುವುದಿದೆ. ಮನೆ ಹತ್ತಿರ ಬಂದು ಹಣ ಪಡೆದುಕೊಂಡು ಹೋಗಿ’ ಎಂದಳು. ಅಂತೆಯೇ ರಾತ್ರಿ 10.30ರ ಸುಮಾರಿಗೆ ಚಿಕ್ಕಬಾಣಾವರಕ್ಕೆ ತೆರಳಿದ್ದೆ’ ಎಂದು ಫಿರ್ಯಾದಿಯು ದೂರಿನಲ್ಲಿ ವಿವರಿಸಿದ್ದಾರೆ.

‘ಅರ್ಪಿತಾಳ ಮನೆ ಹತ್ತಿರ ಹೋದಾಗ, ‘ಚಹಾ ಕುಡಿದು ಹೋಗುವಿರಂತೆ. ಮನೆಗೆ ಬನ್ನಿ’ ಎಂದು ಬಲವಂತವಾಗಿ ಒಳಗೆ ಕರೆದುಕೊಂಡು ಹೋದಳು. ಬಳಿಕ ನನ್ನನ್ನು ಮಂಚದ ಮೇಲೆ ಕೂರಿಸಿ ಬಾಗಿಲು ಹಾಕಿಕೊಂಡಳು.’

‘ಈ ವೇಳೆ ಮನೆಗೆ ನುಗ್ಗಿದ ಒಬ್ಬಾತ ತನ್ನನ್ನು ಪೊಲೀಸ್ ಎಂದು ಪರಿಚಯಿಸಿಕೊಂಡ. ‘ನೀವಿಬ್ಬರು ಯಾರು, ಏನು ಮಾಡುತ್ತಿದ್ದೀರಾ? ಅನೈತಿಕ ಚಟುವಟಿಕೆ ನಡೆಸುತ್ತಿರುವ ಆರೋಪದಡಿ ನಿಮ್ಮನ್ನು ಬಂಧಿಸುತ್ತೇನೆ’ ಎಂದು ಬೆದರಿಸಿದ. ಇದೇ ಸಮಯದಲ್ಲೇ ಇನ್ನೊಬ್ಬ ಬಂದು, ‘ನಾನು ಸುದ್ದಿ ವಾಹಿನಿಯೊಂದರ ವರದಿಗಾರ’ ಎಂದ. ಬಳಿಕ ಇಬ್ಬರೂ ಸೇರಿ ಸುಮಾರು ಅರ್ಧ ತಾಸು ನನ್ನನ್ನು ಕೋಣೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿದರು.’

‘ಚಿನ್ನದ ಸರ ಹಾಗೂ ಉಂಗುರ ಬಿಚ್ಚಿಕೊಂಡ ಅವರು, ಎಟಿಎಂ ಕಾರ್ಡ್ ಪಡೆದು ₹ 55 ಸಾವಿರ ಡ್ರಾ ಮಾಡಿಕೊಂಡರು. ವಿಷಯ ಬಹಿರಂಗಪಡಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಹೇಳಿ ಮಧ್ಯರಾತ್ರಿ ಮನೆಯಿಂದ ಕಳುಹಿಸಿದ್ದರು. ಇಷ್ಟಾದರೂ ಮೂರ್ನಾಲ್ಕು ದಿನಗಳಿಂದ ಪದೇ ಪದೇ ಕರೆ ಮಾಡಿ, ‘ನೀನು ಅರ್ಪಿತಾ ಜತೆಗಿರುವ ಫೋಟೊ ಹಾಗೂ ವಿಡಿಯೊಗಳು ನಮ್ಮ ಬಳಿ ಇವೆ. ₹ 1 ಲಕ್ಷ ಕೊಡದಿದ್ದರೆ ಅವುಗಳನ್ನು ಪತ್ನಿ–ಮಕ್ಕಳಿಗೆ ತಲುಪಿಸುತ್ತೇವೆ. ಸಾಮಾಜಿಕ ಜಾಲತಾಣಗಳಿಗೂ ಹಾಕಿ ಮರ್ಯಾದೆ ತೆಗೆಯುತ್ತೇವೆ’ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಹೀಗಾಗಿ, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಫಿರ್ಯಾದಿ ಮನವಿ ಮಾಡಿದ್ದರು. 

ಕರೆ ಮಾಡಿಸಿದ ಪೊಲೀಸರು: ದೂರುದಾರರಿಂದಲೇ ಆರೋಪಿಗಳಿಗೆ ಕರೆ ಮಾಡಿಸಿದ ಪೊಲೀಸರು, ‘ಹಣ ಕೊಡುತ್ತೇವೆ. ಗಣಪತಿನಗರ ವೃತ್ತದಲ್ಲಿರುವ ಆಲದ ಮರದ ಬಳಿ ಬನ್ನಿ’ ಎಂದು ಹೇಳಿಸಿದ್ದರು. ಅಂತೆಯೇ ರಾತ್ರಿ 9 ಗಂಟೆ ಸುಮಾರಿಗೆ ಅಲ್ಲಿಗೆ ಬಂದ ತೀರ್ಥ ಹಾಗೂ ಪವನ್ ಅವರನ್ನು ಮಫ್ತಿಯಲ್ಲಿದ್ದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
**
ಇದೇ ಕಾಯಕ; ಐದು ಪ್ರಕರಣ ಪತ್ತೆ 
‘ತನ್ನ 17ನೇ ವಯಸ್ಸಿನಲ್ಲೇ ಸಂಬಂಧಿ ಯುವಕನನ್ನು ವಿವಾಹವಾಗಿದ್ದ ಅರ್ಪಿತಾ, ಮೂರು ವರ್ಷಗಳ ಬಳಿಕ ಪತಿಯನ್ನು ತೊರೆದು ಬೆಂಗಳೂರಿಗೆ ಬಂದಳು. ಇಲ್ಲಿ ಆಕೆಗೆ ಪವನ್‌ ಜತೆ ಪ್ರೇಮವಾಯಿತು. ಇಬ್ಬರೂ ಒಂದೇ ಮನೆಯಲ್ಲಿ ನೆಲೆಸಿದ್ದರು. ಸುಲಭವಾಗಿ ಹಣ ಗಳಿಸಲು ಹನಿಟ್ರ್ಯಾಪ್ ದಂಧೆಗೆ ಇಳಿದಿದ್ದರು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚೆಂದದ ಯುವತಿಯ ಫೋಟೊವನ್ನು ಫೇಸ್‌ಬುಕ್‌ ಪ್ರೊಫೈಲ್‌ಗೆ ಹಾಕಿದ್ದ ಅರ್ಪಿತಾ, ಪರಿಚಯ ಇಲ್ಲದವರಿಗೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಳು. ಆಕೆಯ ಸ್ನೇಹವನ್ನು ಒಪ್ಪಿಕೊಂಡರೆ, ಮೊಬೈಲ್ ಸಂಖ್ಯೆ ಪಡೆದು ಸಲುಗೆಯಿಂದ ಮಾತನಾಡಿಸುತ್ತಿದ್ದಳು. 2–3 ಭೇಟಿಯ ಬಳಿಕ ಅವರನ್ನು ಮನೆಗೇ ಆಹ್ವಾನಿಸುತ್ತಿದ್ದಳು. ಈ ವೇಳೆ ಉಳಿದಿಬ್ಬರು ಪೊಲೀಸ್ ಹಾಗೂ ವರದಿಗಾರನ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದರು. ಈ ಗ್ಯಾಂಗ್ ಇದೇ ರೀತಿ ಐದು ಮಂದಿಯಿಂದ ಸುಲಿಗೆ ಮಾಡಿದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 16

  Happy
 • 2

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !