ಬೆಂಗಳೂರು: ತುಂಗಾನಗರ ಮುಖ್ಯರಸ್ತೆಯಲ್ಲಿರುವ ‘ಶ್ರೀ ಮಂಜುನಾಥ್ ಕೇಕ್ ಕಾರ್ನರ್ಸ್ ಸ್ವೀಟ್ಸ್’ ಬೇಕರಿಗೆ ನುಗ್ಗಿ ಗಲಾಟೆ ಮಾಡಿ ಮಾಲೀಕರಿಗೆ ಜೀವ ಬೆದರಿಕೆಯೊಡ್ಡಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆಟೊ ಚಾಲಕರಾದ ಬಸವರಾಜ್ (33) ಹಾಗೂ ಭರತ್ (25) ಬಂಧಿತರು. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಆರೋಪಿಯೊಬ್ಬ ಇತ್ತೀಚೆಗೆ ಬೇಕರಿಗೆ ಹೋಗಿದ್ದ. ಪಫ್ಸ್ ಖರೀದಿ ವಿಚಾರವಾಗಿ ಮಾಲೀಕನ ಜೊತೆ ಗಲಾಟೆ ಮಾಡಿದ್ದ. ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಆರೋಪಿ ಹಾಗೂ ಮಾಲೀಕ, ಪರಸ್ಪರ ಬೈದಾಡಿಕೊಂಡಿದ್ದರು.’
‘ಕೋಪದಲ್ಲಿ ಹೊರಟು ಹೋಗಿದ್ದ ಆರೋಪಿ, ಆಗಸ್ಟ್ 16ರಂದು ತನ್ನ ಸ್ನೇಹಿತರ ಜೊತೆ ಬೇಕರಿಗೆ ಬಂದು ಗಲಾಟೆ ಮಾಡಿದ್ದ. ಎಲ್ಲ ಆರೋಪಿಗಳು ಸೇರಿ, ಬೇಕರಿ ಮಾಲೀಕ ಚಂದ್ರಶೇಖರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದರು. ಬೇಕರಿ ವಸ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದರು. ಕಬ್ಬಿಣದ ರಾಡ್‌ನಿಂದ ಬೇಕರಿ ಗಾಜಿನ ವಸ್ತುಗಳನ್ನು ಒಡೆದಿದ್ದರು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.