ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮತ್ತೊಬ್ಬ ಎಎಸ್‌ಐ ಸಾವು

Last Updated 21 ಜುಲೈ 2020, 19:56 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಎಎಸ್ಐಯೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದು, ಅವರಿಗೆ ಕೊರೊನಾ ತಗುಲಿರುವುದು ಮಂಗಳವಾರ ದೃಢಪಟ್ಟಿದೆ.

ಲಾಕ್‌ಡೌನ್ ಹಾಗೂ ಇತರೆ ದಿನಗಳಲ್ಲಿ ಕೆಲಸ ಮಾಡಿದ್ದ ಎಎಸ್‌ಐ, ಅನಾರೋಗ್ಯದಿಂದ ಬಳಲಿ ತೀರಿಕೊಂಡಿದ್ದರು. ಗಂಟಲಿನ ದ್ರವ ಸಂಗ್ರಹಿಸಿದ್ದ ವೈದ್ಯರು, ಪರೀಕ್ಷೆಗೆ ಕಳುಹಿಸಿದ್ದರು.

ಇದರ ಬೆನ್ನಲ್ಲೇ ಅಗ್ನಿಶಾಮಕ ದಳದ 8 ಸಿಬ್ಬಂದಿಯಲ್ಲಿ ಮಂಗಳವಾರ ಕೋವಿಡ್‌ ದೃಢಪಟ್ಟಿದೆ. ದಕ್ಷಿಣ ವಿಭಾಗದ 6 ಹಾಗೂ ಜಯನಗರದ ಅಗ್ನಿಶಾಮಕ ದಳದ ಕಚೇರಿಯ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಿಬ್ಬಂದಿಯೊಬ್ಬರ ಪತ್ನಿಗೂ ಸೋಂಕು ತಗುಲಿರುವುದು ವರದಿಯಿಂದ ಗೊತ್ತಾಗಿದೆ.

ಕಮಿಷನರ್ ವರದಿ ನೆಗೆಟಿವ್: ತಮ್ಮ ಕಾರು ಚಾಲಕನಿಗೆ ಸೋಂಕು ದೃಢಪಟ್ಟಿದ್ದರಿಂದ ಕೊರೊನಾ ಪರೀಕ್ಷೆ ಮಾಡಿಸಿದ್ದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ವರದಿ ನೆಗೆಟಿವ್ ಬಂದಿದೆ.

ಹೋಂ ಕ್ವಾರಂಟೈನ್‌ನಲ್ಲಿದ್ದ ಭಾಸ್ಕರ್ ರಾವ್ ಎರಡು ದಿನಗಳ ಹಿಂದೆ ಗಂಟಲು ದ್ರವದ ಪರೀಕ್ಷೆ‌ ಮಾಡಿಸಿದ್ದರು. ಮಂಗಳವಾರ ಬೆಳಿಗ್ಗೆ ವರದಿ ಬಂದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮರದಲ್ಲಿ ಮೃತದೇಹ ಪತ್ತೆ

ಹೆಸರಘಟ್ಟ ಕೆರೆ ದಡದಲ್ಲಿರುವ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಾಗರಾಜು (56) ಎಂಬುವರ ಮೃತದೇಹ ಮಂಗಳವಾರ ಪತ್ತೆಯಾಗಿದೆ.

ದೊಡ್ಡಬಳ್ಳಾಪುರದ ನಿವಾಸಿಯಾದ ನಾಗರಾಜು, ಕೆಲ ದಿನದಿಂದ ನಾಪತ್ತೆಯಾಗಿದ್ದರು. ಆ ಸಂಬಂಧ ದೊಡ್ಡಬಳ್ಳಾಪುರ ಠಾಣೆಯಲ್ಲಿ ಸಂಬಂಧಿಕರು ದೂರು ದಾಖಲಿಸಿದ್ದರು. ನಾಗರಾಜು ಅವರ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ನಾಗರಾಜು ಅವರ ಸಾವಿನ ಬಗ್ಗೆ ಸಂಬಂಧಿಕರು ನೀಡಿರುವ ದೂರು ಆಧರಿಸಿ ಸೋಲದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.

‘ನಾಗರಾಜು ಅವರ ಮಗ ಬೆಂಗಳೂರಿನಲ್ಲಿ ನೆಲೆಸಿದ್ದ. ಮಗನಲ್ಲಿ ಕೊರೊನಾ ಸೋಂಕು ಕಾಣಿಸಿತ್ತು. ಆತನನ್ನು ನೋಡಿಕೊಳ್ಳಲು ನಾಗರಾಜು ಅವರ ಪತ್ನಿ ಬೆಂಗಳೂರಿಗೆ ಬಂದು ವಾಪಸು ಊರಿಗೆ ಹೋಗಿದ್ದರು. ಪತ್ನಿಗೂ ಕೊರೊನಾ ತಗುಲಿತ್ತು. ಅವರನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು’ ಎಂದು ಸೋಲದೇವನಹಳ್ಳಿ ಪೊಲೀಸರು ಹೇಳಿದರು.

‘ಮನೆ ಇದ್ದ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿತ್ತು. ನಾಗರಾಜು ಮತ್ತು ಅವರ ಇನ್ನೊಬ್ಬ ಮಗನನ್ನು ಕ್ವಾರಂಟೈನ್ ಮಾಡಲಾಗಿತ್ತು. ನಾಗರಾಜು ಅವರ ಕುಟುಂಬದವರಿಂದಲೇ ತೊಂದರೆಯಾಯಿತು ಎಂದು ಸ್ಥಳೀಯರು ಅವಮಾನಿಸಲಾರಂಭಿಸಿದ್ದರು. ಮಾನಸಿಕವಾಗಿ ಕಿರುಕುಳ ನೀಡಲಾರಂಭಿಸಿದ್ದರು. ಅದರಿಂದ ಬೇಸತ್ತ ನಾಗರಾಜು, ಮನೆ ಬಿಟ್ಟು ಹೋಗಿದ್ದರು’ ಎಂದೂ ವಿವರಿಸಿದರು.

‘ಮೃತದೇಹದವನ್ನು ಸಪ್ತಗಿರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಂಟಲಿನ ದ್ರವ ಸಂಗ್ರಹಿಸಿರುವ ವೈದ್ಯರು, ಕೊರೊನಾ ಪರೀಕ್ಷೆಗೆ ಕಳುಹಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಕೊರೊನಾ ಸೋಂಕಿತ ಆತ್ಮಹತ್ಯೆ

ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ನೊಂದಿದ್ದರು ಎನ್ನಲಾದ 54 ವರ್ಷದ ವ್ಯಕ್ತಿಯೊಬ್ಬರು, ಬ್ಲೇಡ್‌ನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಎಂ.ಎಸ್.ರಾಮಯ್ಯ ನಗರ ನಿವಾಸಿಯಾಗಿದ್ದ ವ್ಯಕ್ತಿ, ಅವಿವಾಹಿತರಾಗಿದ್ದರು. ಸಹೋದರನ ಜತೆ ವಾಸವಿದ್ದರು. ಯಶವಂತಪುರದಲ್ಲಿ ಬೀಡಾ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಸಹೋದರನಿಗೆ ಸೋಂಕು ತಗುಲಿತ್ತು’ ಎಂದು ಸದಾಶಿವನಗರ ಪೊಲೀಸರು ಹೇಳಿದರು.

‘ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಿಗೆ ಪಾಸಿಟಿವ್ ಇರುವುದಾಗಿ ಸೋಮವಾರ ರಾತ್ರಿ ವರದಿ ಬಂದಿತ್ತು. ಈ ಬಗ್ಗೆ ತಿಳಿಯುತ್ತಿದ್ದಂತೆ ವ್ಯಕ್ತಿ, ಮನೆಯ ಟೆರೆಸ್‌ನಲ್ಲೇ ಬ್ಲೇಡ್‌ನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಸಂಬಂಧಿಯೊಬ್ಬರು ಮನೆಗೆ ಬಂದಿದ್ದಾಗಲೇ ವಿಷಯ ಗೊತ್ತಾಗಿದೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT