ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಗಳ್ಳರಿಗೆ ಪೊಲೀಸರ ಶ್ರೀರಕ್ಷೆ: ಮರಿತಿಬ್ಬೇಗೌಡ ಆರೋಪ

Last Updated 28 ಮಾರ್ಚ್ 2022, 20:17 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಪೊಲೀಸ್‌ ಅಧಿಕಾರಿಗಳು ಭೂಗಳ್ಳರ ಜತೆ ನೇರವಾಗಿ ಶಾಮೀಲಾಗಿದ್ದು, ಜಮೀನು ಕಬಳಿಸಲು ನೆರವು ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಆರೋಪಿಸಿದರು.

ನಗರದ ದೇವರಚಿಕ್ಕನಹಳ್ಳಿಯಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ (ಐಒಸಿ) ಪೆಟ್ರೋಲ್‌ ಬಂಕ್‌ಗೆ ಹಂಚಿಕೆ ಮಾಡಿದ್ದ ನಿವೇಶನವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿರುವ ಕುರಿತು ಸೋಮವಾರ ಸದನದಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ಅವರು, ‘ಬೊಮ್ಮನಹಳ್ಳಿಯಲ್ಲಿ ಪೊಲೀಸರು ಮತ್ತು ಭೂಗಳ್ಳರು ಸೇರಿಕೊಂಡು ತಮ್ಮದೇ ‘ರಿಪಬ್ಲಿಕ್‌’ ಕಟ್ಟಿಕೊಂಡಿದ್ದಾರೆ’ ಎಂದರು.

‘ಐಒಸಿಗೆ ಹಂಚಿಕೆಯಾಗಿದ್ದ ಜಮೀನನ್ನು ಖಾಸಗಿಯವರು ಕಬಳಿಸಿದ್ದಾರೆ. ಅವರಿಗೆ ಪೊಲೀಸರು ನೆರವು ನೀಡುತ್ತಾರೆ. ಬೊಮ್ಮನಹಳ್ಳಿ ಪೊಲೀಸ್‌ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್‌ ಮಹೇಶ್‌ ಕನಕಗಿರಿ, ಎಸಿಪಿ ಪವನ್‌, ಡಿಸಿಪಿ ಶ್ರೀನಾಥ್‌ ಜೋಶಿ ಭೂಗಳ್ಳರ ಜತೆ ನಂಟು ಹೊಂದಿದ್ದಾರೆ. ಇಂತಹ ಹತ್ತಾರು ಪ್ರಕರಣಗಳಲ್ಲಿ ಭೂಗಳ್ಳರಿಗೆ ಬೆಂಬಲ ನೀಡಿದ್ದಾರೆ. ಬಿಡಿಎ ಆಸ್ತಿಗಳು, ಸಾರ್ವಜನಿಕರ ಖಾಸಗಿ ನಿವೇಶನಗಳನ್ನು ಕಬಳಿಸಲು ನೆರವಾಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ದೇವರಚಿಕ್ಕನಹಳ್ಳಿಯ ಸರ್ವೆ ನಂಬರ್‌ 44ರಲ್ಲಿ ಬಿಡಿಎ 1990ರಲ್ಲಿ ಜಮೀನು ಸ್ವಾಧೀನಪಡಿಸಿಕೊಂಡಿತ್ತು. 2019ರಲ್ಲಿ ಅದರ ವಿರುದ್ಧ ದಾವೆ ಹೂಡಲಾಗಿದೆ. ಬಿಡಿಎ ಆಸ್ತಿಗಳು ಖಾಸಗಿಯವರ ಪಾಲಾಗುವುದರಲ್ಲಿ ಅಧಿಕಾರಿಗಳ ಪಾತ್ರವೂ ಇರುವುದಕ್ಕೆ ಇದು ಸಾಕ್ಷಿ’ ಎಂದು ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ದೂರಿದರು.

‘ಐಒಸಿಗೆ ಹಂಚಿಕೆ ಮಾಡಿದ್ದ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿ, ಧ್ವಂಸ ಮಾಡಿರುವ ಪ್ರಕರಣದಲ್ಲಿ ತನಿಖೆ ನಡೆಸಿ ಸುನೀಲ್‌ ಕುಮಾರ್‌ ಎಂಬಾತನನ್ನು ಬಂಧಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿಯನ್ನೂ ಸಲ್ಲಿಸಲಾಗಿದೆ. ಸದರಿ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದೆ. ಪೊಲೀಸರು ಭೂಗಳ್ಳರ ಜತೆ ಶಾಮೀಲಾಗಿರುವ ಆರೋಪದ ಕುರಿತು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT