ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಕಾಬಂದಿಯಲ್ಲಿ ಸಿಕ್ಕಿಬಿದ್ದ 499 ಮಂದಿ: ರಾತ್ರಿ ಗಸ್ತು ತಿರುಗಿದ ಕಮಿಷನರ್

500ಕ್ಕೂ ಹೆಚ್ಚು ವಾಹನಗಳ ಜಪ್ತಿ * ವಾರಕ್ಕೊಮ್ಮೆ ಕಾರ್ಯಾಚರಣೆ ಕಡ್ಡಾಯ
Last Updated 28 ಜುಲೈ 2019, 20:19 IST
ಅಕ್ಷರ ಗಾತ್ರ

ಬೆಂಗಳೂರು: ಇಷ್ಟು ದಿನ ಸರದಿಯಂತೆ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು, ಶನಿವಾರ ರಾತ್ರಿ ಸಾಮೂಹಿಕವಾಗಿ ರಸ್ತೆಗೆ ಇಳಿದು ಚುರುಕಿನ ಕಾರ್ಯಾಚರಣೆ ನಡೆಸಿದರು.

ನಗರದ ಹಲವೆಡೆ ನಾಕಾಬಂದಿ ಹಾಕಿದ್ದ ಪೊಲೀಸರು, ದಾಖಲೆ ಇಲ್ಲದ 500ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದರು. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 499 ಮಂದಿಯನ್ನು ವಶಕ್ಕೆ ಪಡೆದರು.

ಸರಗಳವು, ವಾಹನ ಕಳವು ಅಪರಾಧಗಳು ಹೆಚ್ಚಾಗುತ್ತಿದ್ದು, ಇಂಥ ಕೃತ್ಯ ಎಸಗುವ ದುಷ್ಕರ್ಮಿಗಳು ರಾತ್ರಿಯಿಡಿ ನಗರದಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಅವರನ್ನು ಪತ್ತೆ ಮಾಡಲು ಪೊಲೀಸರು ಈ ಕಾರ್ಯಾಚರಣೆ ನಡೆಸಿದರು.

ಡಿಸಿಪಿಗಳ ಸಭೆ ಕರೆದಿದ್ದ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್, ‘ಅಪರಾಧಗಳು ಹೆಚ್ಚಾಗುತ್ತಿದ್ದು, ನೀವೆಲ್ಲ ಏನು ಮಾಡುತ್ತಿದ್ದೀರಾ. ರಾತ್ರಿ ಗಸ್ತು ಬಿಗಿಗೊಳಿಸಿ ಕಾರ್ಯಾಚರಣೆ ನಡೆಸಿ, ನಾನೇ ಖುದ್ದು ಬಂದು ಪರಿಶೀಲಿಸುತ್ತೇನೆ’ ಎಂದು ಸೂಚನೆ ನೀಡಿದ್ದರು.

ಅದರಂತೆ ಶನಿವಾರ ರಾತ್ರಿ ಗಸ್ತು ತಿರುಗಿದ ಪೊಲೀಸರು, ತಮ್ಮ ಠಾಣೆ ವ್ಯಾಪ್ತಿಯಲ್ಲಿ ನಾಕಾಬಂದಿ ಹಾಕಿದ್ದರು. ಅಲೋಕ್‌ಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿಸಿಪಿಗಳು, ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು, ಪ್ರೊಬೇಷನರಿ ಪಿಎಸ್‌ಐಗಳು ಹಾಗೂ ಸಿಬ್ಬಂದಿ ಗಸ್ತಿನಲ್ಲಿದ್ದರು.

‘ರಾತ್ರಿ ಹೊತ್ತು ಆಗುವ ಅಪರಾಧಗಳು ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕಲು ಈ ಕಾರ್ಯಾಚರಣೆ ನಡೆಸಲಾಯಿತು. ವಾರಕ್ಕೊಮ್ಮೆ ಇಂಥ ಕಾರ್ಯಾಚರಣೆ ನಡೆಸುವುದು ಕಡ್ಡಾಯವೆಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಕಮಿಷನರ್ ಅಲೋಕ್‌ಕುಮಾರ್‌ ತಿಳಿಸಿದರು.

ಪೊಲೀಸರ ನಿರ್ಲಕ್ಷ್ಯಕ್ಕೆ ಗರಂ: ನಾಕಾಬಂದಿ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಅಲೋಕ್‌ಕುಮಾರ್, ಕಾಟಾಚಾರಕ್ಕಾಗಿ ಬೈಕ್‌ಗಳನ್ನು ತಪಾಸಣೆ ಮಾಡುತ್ತಿದ್ದ ಪೊಲೀಸರ ವರ್ತನೆಯನ್ನು ಕಂಡು ಗರಂ ಆದರು.

‘ಇದೇನಾ ನಿಮ್ಮ ರಾತ್ರಿ ಗಸ್ತು. ಇಂಥ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ’ ಎಂದು ಬಿಸಿ ಮುಟ್ಟಿಸಿದರು.

ನಂತರ, ಖುದ್ದು ವಾಹನಗಳನ್ನು ತಡೆದು ದಾಖಲೆಗಳ ಪರಿಶೀಲನೆ ನಡೆಸಿದರು. ಅನುಮಾನ ಬಂದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕಳುಹಿಸಿದರು. ಮದ್ಯ ಕುಡಿದು ಬೈಕ್‌ ಓಡಿಸುತ್ತಿದ್ದವರನ್ನು ಹಾಗೂ ಅತಿ ವೇಗದಿಂದ ಜಾಲಿ ರೈಡ್ ಮಾಡುತ್ತಿದ್ದ ಯುವಕ–ಯುವತಿಯರನ್ನು ತಡೆದು ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿದರು.

ಠಾಣೆಗೂ ಭೇಟಿ: ಗಸ್ತಿನ ವೇಳೆಯಲ್ಲೇ ಹೆಬ್ಬಾಳ, ಮಲ್ಲೇಶ್ವರ, ಬಾಣಸವಾಡಿ, ಕಮರ್ಷಿಯಲ್ ಸ್ಟ್ರೀಟ್ ಹಾಗೂ ಸುತ್ತಮುತ್ತಲ ಠಾಣೆಗಳಿಗೂ ಅಲೋಕ್‌ಕುಮಾರ್ ದಿಢೀರ್ ಭೇಟಿ ನೀಡಿದರು. ಠಾಣೆಯಲ್ಲಿದ್ದ ಸಿಬ್ಬಂದಿ ವರ್ತನೆ ಕಂಡು ಗರಂ ಆದರು.

‘ರಾತ್ರಿಠಾಣೆಗೆ ಬಂದು ಕಾಟಾಚಾರಕ್ಕೆ ಕೆಲಸ ಮಾಡುವುದಲ್ಲ. ಕಷ್ಟದಲ್ಲಿರುವ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ, ಗಸ್ತಿನಲ್ಲಿರುವ ಸಿಬ್ಬಂದಿಗೆ ಮಾಹಿತಿ ನೀಡಿ ಸಹಾಯ ಮಾಡಬೇಕು. ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ವರ್ತಿಸುವುದಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಸಾರ್ವಜನಿಕರಿಗೆ ತಿಳಿವಳಿಕೆ: ರಾತ್ರಿ ಗಸ್ತಿನಲ್ಲಿದ್ದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್, ಕೆ.ಜಿ. ನಗರ ಠಾಣೆ ವ್ಯಾಪ್ತಿಯ ಭವಾನಿ ನಗರದ ಕೊಳಚೆ ಪ್ರದೇಶದಲ್ಲಿ ಸಾರ್ವಜನಿಕರ ಸಭೆ ನಡೆಸಿದರು. ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿ, ಅಪರಾಧಗಳ ತಡೆಗಾಗಿ ಪೊಲೀಸರ ಜೊತೆ ಕೈಜೋಡಿಸುವಂತೆ ಕೋರಿದರು.

‘ಟ್ವೀಟ್‌’ ಬಳಿಕ ಬೈಕ್ ವಾಪಸ್‌ ಕೊಟ್ಟರು
‘ದಾಖಲೆ ತೋರಿಸಿದರೂ ಪೊಲೀಸರು ನನ್ನ ಬೈಕ್ ಜಪ್ತಿ ಮಾಡಿದ್ದಾರೆ’ ಎಂದು ಆರೋಪಿಸಿ ಬಾಲ್ ಎಂಬುವರು ಕಮಿಷನರ್ ಅವರಿಗೆ ಟ್ವೀಟ್‌ ಮೂಲಕ ದೂರು ನೀಡುತ್ತಿದ್ದಂತೆ, ಪೊಲೀಸರು ಬೈಕ್‌ ವಾಪಸ್‌ ಕೊಟ್ಟಿದ್ದಾರೆ.

‘ನಿಮ್ಮ ಕಾರ್ಯಾಚರಣೆ ಒಳ್ಳೆಯದು. ಆದರೆ, ಅಮಾಯಕರಿಗೆ ತೊಂದರೆ ಆಗುತ್ತಿದೆ. ನನಗೂ ಅದರ ಅನುಭವವಾಯಿತು. ದಾಸರಹಳ್ಳಿ ಬಳಿ ರಾತ್ರಿ 10 ಗಂಟೆ ಸುಮಾರಿಗೆ ಬೈಕ್ ತಡೆದಿದ್ದ ಪೊಲೀಸರು, ಜೆರಾಕ್ಸ್ ದಾಖಲೆ ತೋರಿಸಿದರೂ ಅಸಲಿ ದಾಖಲೆ ನೀಡುವಂತೆ ಹೇಳಿದ್ದರು. ಡಿಜಿ ಲಾಕರ್‌ನಲ್ಲಿದ್ದ ದಾಖಲೆ ತೋರಿಸಿದರೂ ಬಿಡಲಿಲ್ಲ. ಮನೆಗೆ ಹೋಗಿ ದಾಖಲೆ ತರುವಷ್ಟರಲ್ಲೇ ಬೈಕ್‌ ಜಪ್ತಿ ಮಾಡಿಕೊಂಡು ಹೋಗಿದ್ದಾರೆ’ ಎಂದು ಬಾಲ್‌ ಟ್ವೀಟ್‌ನಲ್ಲಿ ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ಕಮಿಷನರ್ ಅಲೋಕ್‌ಕುಮಾರ್, ‘ಇದು ಆಗಿದ್ದು ಎಲ್ಲಿ? ಸೂಕ್ತ ದಾಖಲೆಗಳನ್ನು ನೀಡಿ ಕ್ರಮ ಕೈಗೊಳ್ಳುತ್ತೇನೆ’ ಎಂದಿದ್ದರು. ಮರು ಟ್ವೀಟ್‌ ಮಾಡಿದ್ದ ಬಾಲ್, ಸಂಪೂರ್ಣ ಮಾಹಿತಿ ನೀಡಿದ್ದರು.

ಭಾನುವಾರ ಬೆಳಿಗ್ಗೆ ಪೀಣ್ಯ ಠಾಣೆಗೆ ಬಾಲ್ ಅವರನ್ನು ಕರೆಸಿಕೊಂಡ ಪೊಲೀಸರು, ದಾಖಲೆಗಳನ್ನು ಪರಿಶೀಲನೆ ನಡೆಸಿ ಬೈಕ್ ವಾಪಸ್ ಕೊಟ್ಟಿದ್ದಾರೆ.

ಟ್ವೀಟ್‌ನಲ್ಲಿ ಕಂಡಿದ್ದು...

ಸಾರೈಬಟ್ಟಿ: ಡಾನ್ಸ್ ಬಾರ್, ಜೂಜಾಟ ಸ್ಥಳಗಳ ಮೇಲೂ ದಾಳಿ ಮಾಡಿ. ಬಹುತೇಕ ಕಳ್ಳರು ಸಿಕ್ಕಿಬೀಳುತ್ತಾರೆ.

–ಅಲೋಕ್‌ಕುಮಾರ್: ನಿಜವೇ.

ವಿಶಾಲ್ ಅರೋರಾ: ಕಾಮಾಕ್ಷಿ ಪಾಳ್ಯ, ಶಿವಾಜಿನಗರ, ಗೋರಿಪಾಳ್ಯ, ಓಕಳಿಪುರ ಹಾಗೂ ತಿಮ್ಮೇನಹಳ್ಳಿಯಲ್ಲಿ ಹೆಚ್ಚಿನ ಕಾರ್ಯಾಚರಣೆ ಮಾಡಿ.

– ಅಲೋಕ್‌ಕುಮಾರ್: ಆಯ್ತು, ಮಾಡುತ್ತೇವೆ

* ಎಚ್‌.ಡಿ.ನಾಗರಾಜ್‌: ಅಪಾಯಕಾರಿ ಹಾಗೂ ಅತಿ ವೇಗವಾಗಿ ನಿರ್ಲಕ್ಷ್ಯದಿಂದ ಬೈಕ್ ಓಡಿಸುವವರ ವಿರುದ್ಧ ಕಾರ್ಯಾಚರಣೆ ನಡೆಸಿ.

– ಅಲೋಕ್‌ಕುಮಾರ್: ಸದ್ಯದಲ್ಲೇ ಮಾಡುತ್ತೇವೆ.

***
1,169 ಚಾಲಕರ ವಿರುದ್ಧ ಪ್ರಕರಣ
ಬೆಂಗಳೂರು:
ನಗರದೆಲ್ಲೆಡೆ ಶನಿವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, 1,169 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಕುಡಿದು ವಾಹನ ಚಲಾಯಿ ಸುವವರು ಹೆಚ್ಚಾಗುತ್ತಿದ್ದಾರೆ. ಅಂಥ ಚಾಲಕರಪತ್ತೆಗಾಗಿ ನಗರದಲ್ಲಿ ನಾಕಾ ಬಂದಿ ಹಾಕಿ ತಪಾಸಣೆ ನಡೆಸಲಾಯಿತು. ಸಿಕ್ಕಿಬಿದ್ದ ಚಾಲಕರಿಗೆ ನೋಟಿಸ್ ನೀಡಿ ವಾಹನ ಜಪ್ತಿ ಮಾಡಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಹರಿಶೇಖರನ್ ಹೇಳಿದರು.

‘ಆಟೊಗಳನ್ನೂ ತಡೆದು ತಪಾಸಣೆ ನಡೆಸಲಾಯಿತು. 63 ಆಟೊಗಳಲ್ಲಿ ಚಾಲಕರ ಗುರುತಿನ ವಿವರದ ಕಾರ್ಡ್ ಇರಲಿಲ್ಲ. ಆ ಆಟೊಗಳ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು, ಜಪ್ತಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT