ಚರ್ಚೆಗೆ ಗ್ರಾಸವಾದ ಡಿವೈಎಸ್ಪಿ ಪತ್ರ

7

ಚರ್ಚೆಗೆ ಗ್ರಾಸವಾದ ಡಿವೈಎಸ್ಪಿ ಪತ್ರ

Published:
Updated:

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಡಿವೈಎಸ್ಪಿಯೊಬ್ಬರು ಡಿಜಿಪಿ ನೀಲಮಣಿ ಎನ್‌.ರಾಜು ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಇಲಾಖಾ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

‘ಡಿಜಿಪಿಯವರನ್ನು ಭೇಟಿಯಾಗಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೀಗಾಗಿ, ನೋವನ್ನು ಈ ಪತ್ರದ ಮುಖೇನ ಅವರಿಗೆ ಮುಟ್ಟಿಸುತ್ತಿದ್ದೇನೆ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಅದರ ಸಾರಾಂಶ ಹೀಗಿದೆ..

‘ನನ್ನ 12 ವರ್ಷದ ಮಗಳಿಗೆ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದ ಸಂದರ್ಭದಲ್ಲಿ, ಅವಳನ್ನು ನಾನೇ ತರಬೇತಿ ಶಿಬಿರಕ್ಕೆ ಕರೆದುಕೊಂಡು ಹೋಗಬೇಕಿತ್ತು. ಅದಕ್ಕಾಗಿ 9 ದಿನಗಳ ಮುಂಚೆಯೇ ರಜೆಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ಅಧಿಕಾರಿಗಳು ರಜೆ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಹೀಗಾಗಿ, ಅವರಿಗೆ ಮೌಖಿಕವಾಗಿ ತಿಳಿಸಿ ಒಂದು ದಿನ ರಜೆ ಹಾಕಿ ಮಗಳನ್ನು ಶಿಬಿರಕ್ಕೆ ಬಿಟ್ಟು ಬಂದಿದ್ದೆ.’

‘ಮಂಜೂರಾಗದಿದ್ದರೂ ರಜೆ ಹಾಕಿದ್ದು ಉದ್ಧಟತನ, ನಿಷ್ಕಾಳಜಿತನ, ಇಲಾಖೆಗೆ ತೋರಿದ ಅಗೌರವ ಎಂದು ನನ್ನ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಯಿತು. ಆದರೆ, ಅದೇ ದಿನ ನನ್ನ ಸಹೋದ್ಯೋಗಿಯೊಬ್ಬರು ಯಾವುದೇ ಅರ್ಜಿ ಸಲ್ಲಿಸದೆ ರಜೆ ಹಾಕಿ ಹಿರಿಯ ಅಧಿಕಾರಿಯೊಬ್ಬರ ವೈಯಕ್ತಿಕ ಕೆಲಸಕ್ಕೆ ಹೋದರು. ಅದು ನಿಯಮಬದ್ಧ ಹಾಗೂ ಪ್ರಶಂಸನೀಯ ಕರ್ತವ್ಯವೇ? ಈ ರೀತಿಯ ತಾರತಮ್ಯ ತೋರುತ್ತಿರುವುದು ಇಲಾಖೆಯ ದುರಂತವೇ ಸರಿ.’

‘ಸಿಸಿಬಿ ಎಸಿಪಿಯೊಬ್ಬರನ್ನು ಇಲಾಖಾ ವಿಚಾರಣಾ ವಿಭಾಗಕ್ಕೆ ವರ್ಗಾವಣೆ ಮಾಡಿ ಸರ್ಕಾರ ಇತ್ತೀಚೆಗೆ ಆದೇಶಿಸಿತ್ತು. ಆ ವ್ಯಕ್ತಿ ಮೂರು ತಿಂಗಳಾದರೂ ಅಲ್ಲಿಗೆ ಹೋಗಿ ವರದಿ ಮಾಡಿಕೊಳ್ಳಲಿಲ್ಲ. ಕೊನೆಗೆ, ಆತನಿಗೆ ಹಿಂದಿನ ಹುದ್ದೆಯಲ್ಲೇ ಮುಂದುವರಿಸಲಾಯಿತು. ಇದು ಅಶಿಸ್ತು, ಉದ್ಧಟತನ, ಇಲಾಖೆಗೆ ತೋರಿದ ಅಗೌರವ ಎನಿಸಲಿಲ್ಲ.’

‘ಅಧಿಕಾರಿಗಳ ಕಿರುಕುಳ ತಾಳಲಾರದೆ ಸ್ನೇಹಿತ ಎಂ.ಕೆ.ಗಣಪತಿ 2016 ಸೆ.7ರಂದು ಆತ್ಮಹತ್ಯೆ ಮಾಡಿಕೊಂಡರು. ಆದರೆ, ಅವರ ವಿರುದ್ಧದ ಆರೋಪಕ್ಕೆ ಇಲಾಖೆ ಮರುದಿನ (ಸೆ.8ರಂದು) ಕ್ಲೀನ್ ಚಿಟ್‍ ನೀಡಿತ್ತು. ಒಂದು ದಿನ ಮುಂಚಿತವಾಗಿ ಆ ಆದೇಶ ಹೊರಡಿಸಿದ್ದರೆ ಗಣಪತಿ ಬದುಕುಳಿಯುತ್ತಿದ್ದರು. ಅಂತೆಯೇ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಪ್ರಕರಣದಲ್ಲೂ ಪ್ರಾಮಾಣಿಕ ತನಿಖೆ ನಡೆಸಲಿಲ್ಲ.’

‘ನೀವು (ಡಿಜಿಪಿ) ಇಲಾಖೆಯ ಮುಖ್ಯಸ್ಥರ ಸ್ಥಾನ ವಹಿಸಿಕೊಂಡು ಅರ್ಧ ವರ್ಷವೇ ಕಳೆಯಿತು. ಈವರೆಗೂ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕುಂದುಕೊರತೆ ಕೇಳುವ ಕೆಲಸವನ್ನು ಮಾಡಿಲ್ಲ. ನಾವೇ ಕಚೇರಿಗೆ ಬಂದರೂ ಮಾತನಾಡಿಸುವ ಸೌಜನ್ಯವೂ ನಿಮಗಿಲ್ಲ. ಸಮಸ್ಯೆ ಹೇಳಿಕೊಳ್ಳುವುದು ನಮ್ಮ ಹಕ್ಕಾಗಿರುವಂತೆಯೇ, ಅವುಗಳನ್ನು ಪರಿಹರಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.’

‘ನಮ್ಮ ಕಷ್ಟಗಳನ್ನು ಹೇಗೆ ಅರ್ಥ ಮಾಡಿಸಬೇಕೆಂಬುದು ಗೊತ್ತಾಗುತ್ತಿಲ್ಲ. ಇಂಥ ವಾತಾವರಣವಿರುವ ಕಾರಣಕ್ಕೇ ರಾಜಾನುಕುಂಟೆಯ ಕಾನ್‌ಸ್ಟೆಬಲ್ ಬಂದೂಕು ಹಿಡಿದು ಮೇಲಾಧಿಕಾರಿ ವಿರುದ್ಧ ತಿರುಗಿಬಿದ್ದಿದ್ದರು. ಅಂಥ ಪರಿಸ್ಥಿತಿಗೆ ಯಾವುದೇ ಅಧಿಕಾರಿ/ಸಿಬ್ಬಂದಿಯನ್ನು ನೂಕಬೇಡಿ.’

‘ಅಷ್ಟೊಂದು ಮನವಿಗಳನ್ನು ಕೊಟ್ಟರೂ ನೀವು ಏಕೆ ಸ್ಪಂದಿಸಲಿಲ್ಲ ಎಂಬ ಕುತೂಹಲದಿಂದ ಕಚೇರಿ ಸಿಬ್ಬಂದಿಯನ್ನು ವಿಚಾರಿಸಿದಾಗ, ಕನ್ನಡದಲ್ಲಿ ಬರುವ ಪತ್ರಗಳನ್ನು ನೀವು ಓದುವುದಿಲ್ಲವೆಂದು ತಿಳಿಯಿತು. ಹೀಗಾದರೆ, ನಾವೇನು ಮಾಡಬೇಕು ನೀವೇ ಹೇಳಿ’ ಎಂದೂ ಅಧಿಕಾರಿ ಪತ್ರದಲ್ಲಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಡಿಜಿಪಿಗೆ ಕರೆ ಮಾಡಿದಾಗ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !