ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗಿ ಬಂದೋಬಸ್ತ್; ಖಾಕಿ ಕಣ್ಗಾವಲು

ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಪೊಲೀಸ್‌ ಕಮಿಷನರ್‌ l ಎಲ್ಲಾ ಜಿಲ್ಲೆಗಳಿಗೂ ಎಚ್ಚರಿಕೆಯ ಸಂದೇಶ ರವಾನೆ
Last Updated 17 ಆಗಸ್ಟ್ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ಉಗ್ರರು ನುಸುಳಿರುವ ಶಂಕೆ ವ್ಯಕ್ತಪಡಿಸಿ, ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಗುಪ್ತಚರ ಮೂಲಗಳು ಸೂಚನೆ ನೀಡಿದ ಬೆನ್ನಲ್ಲೇ ನಗರದಾದ್ಯಂತ ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಆಡಳಿತ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಹೈಕೋರ್ಟ್‌, ಮಾರುಕಟ್ಟೆಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಡಲಾಗಿದೆ.

ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಿ ತಕ್ಷಣ ತಪಾಸಣೆ ನಡೆಸುವಂತೆ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಆ ಮೂಲಕ, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಉಗ್ರರ ದಾಳಿ ಬಗ್ಗೆ ಈ ಹಿಂದಿನಿಂದಲೂ ಗುಪ್ತಚರ ಸಂಸ್ಥೆ ಆಗಾಗ ಎಚ್ಚರಿಕೆ ನೀಡುತ್ತಲೇ ಬಂದಿದೆ. ಆದರೆ, ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿರುವ ಹಿನ್ನೆಲೆಯಲ್ಲಿ, ಗುಪ್ತಚರ ಮೂಲಗಳು ಈ ಬಾರಿ ನೀಡಿರುವ ಎಚ್ಚರಿಕೆ ಮಹತ್ವ ಪಡೆದುಕೊಂಡಿದೆ.

ಉಗ್ರರ ದಾಳಿ ಸಾಧ್ಯತೆ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಯಿಂದ ಶುಕ್ರವಾರ ಸಂಜೆ ರಾಜ್ಯ ಗೃಹ ಇಲಾಖೆಗೂ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಿಗೂ ಈ ಸೂಚನೆ ರವಾನಿಸಲಾಗಿದೆ. ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಬಿಗಿ ಭದ್ರತೆಯೊಂದಿಗೆ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

‘ಗುಪ್ತಚರ ದಳ ಮತ್ತು ಗೃಹ ಸಚಿವಾಲಯ ನೀಡಿದ ಮಾಹಿತಿ ಅನ್ವಯ ಕಟ್ಟೆಚ್ಚರ ವಹಿಸಲಾಗಿದೆ. ಭದ್ರತೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಕ್ರಮ ವಹಿಸಲಾಗಿದೆ. ‌‌ಹಿಂದೆಂದಿಗಿಂತಲೂ ಈ ಬಾರಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ’ ಎಂದು ಉನ್ನತ ಪೊಲೀಸ್‌ ಮೂಲಗಳು ಹೇಳಿವೆ.

ಈ ಮಧ್ಯೆ, ನಗರದಲ್ಲಿ ಕೈಗೊಂಡಿರುವ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲು ಹೆಚ್ಚುವರಿ ಪೊಲೀಸ್‌ ಕಮಿಷನರ್‌ಗಳು ಮತ್ತು ಎಲ್ಲ ವಿಭಾಗಗಳ ಡಿಸಿಪಿಗಳ ತುರ್ತು ಸಭೆ ಕರೆದ ಪೊಲೀಸ್‌ ಕಮಿಷನರ್‌ ಭಾಸ್ಕರ್ ರಾವ್‌, ಭದ್ರತಾ ವ್ಯವಸ್ಥೆ ಏರ್ಪಡಿಸುವ ಮಾಹಿತಿ ಸೋರಿಕೆಯಾದ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ಹಿರಿಯ ಅಧಿಕಾರಿಗಳ ಜೊತೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಕಮಿಷನರ್‌ ಚರ್ಚೆ ನಡೆಸಿದರು. ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಸ್ತುಗಳು ಪತ್ತೆಯಾದರೆ ತಕ್ಷಣ ತಪಾಸಣೆ ನಡೆಸಬೇಕು. ಜನ ಯಾವುದೇ ಕಾರಣಕ್ಕೂ ಭೀತಿಗೆ ಒಳಗಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಬೇಕು’ ಎಂದು ಸಭೆಯಲ್ಲಿ ಕಮಿಷನರ್‌ ಸಲಹೆ ನೀಡಿದರು.

‘ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಮಾರುವೇಷದಲ್ಲಿ ಪೊಲೀಸ್‌ ಸಿಬ್ಬಂದಿ ಓಡಾಡಬೇಕು. ಅನುಮಾನ ಬಂದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. ವಸ್ತುಗಳು ಪತ್ತೆಯಾದರೆ ನಿಗಾ ವಹಿಸಬೇಕು’ ಎಂದೂ ಅವರು ಸೂಚಿಸಿದ್ದಾರೆ.

(ನಗರದಲ್ಲಿ ಹೈ ಅಲರ್ಟ್‌ ಘೋಷಿಸಿದ್ದರಿಂದ ಭಾರತೀಯ ವಾಯಸೇನೆಯ ವಿಶೇಷ ಭದ್ರತಾ ಘಟಕವಾದ ‘ಗರುಡ ಕಮಾಂಡೊ’ ಪಡೆಯ ಸಿಬ್ಬಂದಿ ವಿಧಾನಸೌಧದ ಮುಂಭಾಗದಲ್ಲಿ ಶನಿವಾರ ಪಥಸಂಚನ ನಡೆಸಿದರು –ಪ್ರಜಾವಾಣಿ ಚಿತ್ರ)

'ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಿ’

‘ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ನಿಭಾಯಿಸಲು ಸರ್ವಸನ್ನದ್ಧರಾಗಿರಬೇಕು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಭಾಸ್ಕರ್‌ ರಾವ್‌ ಸೂಚಿಸಿದ್ದಾರೆ.

‘ಈ ಉದ್ದೇಶದಿಂದ ಅಧಿಕಾರಿಗಳಿಗೆ ಮೆಮೊ ಮೂಲಕ ಸಂದೇಶ ನೀಡಿದ್ದೆ. ಆದರೆ, ಇಂಥ ಸೂಕ್ಷ್ಮ ಸಂದೇಶಗಳು ಬಹಿರಂಗವಾದರೆ ಜನ ಆತಂಕಕ್ಕೆ ಒಳಗಾಗುವುದು ಸಹಜ. ಇದಕ್ಕೆ ಪೊಲೀಸ್‌ ಅಧಿಕಾರಿಗಳು ಕಾರಣ ಆಗಬಾರದು’ ಎಂದು ಸಲಹೆ ನೀಡಿದ ಅವರು, ‘ಯಾವುದೇ ಘಟನೆ ನಡೆದರೂ ನಾವೇ ಹೊಣೆಯಾಗಬೇಕು. ಈ ಎಚ್ಚರಿಕೆ ನಮ್ಮಲ್ಲಿರಬೇಕು’ ಎಂದು ಅವರು ಹೇಳಿದ್ದಾರೆ.

‘ಆಯಾ ವಿಭಾಗದವರು, ತಮ್ಮ ವ್ಯಾಪ್ತಿಯ ಭದ್ರತಾ ವ್ಯವಸ್ಥೆಯನ್ನು ಆಗಾಗ ಪರಿಶೀಲಿಸುತ್ತಿರಬೇಕು. ಸದ್ಯ ಎರಡು ದಿನಗಳ ಮಟ್ಟಿಗೆ ಬಿಗಿ ಭದ್ರತೆ ಮುಂದುವರಿಯಲಿದೆ. ಇಂಥ ಸೂಚನೆಗಳನ್ನು ಕೇಂದ್ರ ಗುಪ್ತಚರ ಮೂಲಗಳು ಆಗಾಗ ನೀಡುತ್ತಿರುತ್ತವೆ. ಹೀಗಾಗಿ ಭದ್ರತ ಬಗ್ಗೆ ನಿರ್ಲಕ್ಷ್ಯ ತೋರದೆ ಸದಾ ಜಾಗೃತರಾಗಿರಬೇಕು’ ಎಂದು ಅವರು ತಿಳಿಸಿದ್ದಾರೆ.

‘ಮೆಮೊ’ ಸೋರಿಕೆಯಿಂದ ಆತಂಕ

ಭದ್ರತಾ ವ್ಯವಸ್ಥೆ ಬಿಗಿಗೊಳಿಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಶುಕ್ರವಾರ ಸಂಜೆ ಪೊಲೀಸ್‌ ಕಮಿನರ್‌ ನೀಡಿದ್ದ ಮೆಮೊ ಸೋರಿಕೆಯಾಗಿ, ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಕಮಿಷನರ್‌, ‘ಭದ್ರತೆಗೆ ಸಂಬಂಧಪಟ್ಟ ಈ ರೀತಿಯ ಯಾವುದೇ ವಿಷಯಗಳು ಮುಂದಿನ ದಿನಗಳಲ್ಲಿ ಸೋರಿಕೆ ಆಗದಂತೆ ಎಚ್ಚರ ವಹಿಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬಸ್ ನಿಲ್ದಾಣಗಳಲ್ಲಿ ಕಟ್ಟೆಚ್ಚರ

ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಗಳಿಗೆ ಬರುವ ಎಲ್ಲಾ ಪ್ರಯಾಣಿಕರ ಬ್ಯಾಗ್‌ಗಳನ್ನು ತಪಾಸಣೆ ನಡೆಸಲು ಕೆಎಸ್‌ಆರ್‌ಟಿಸಿ ಕ್ರಮ ಕೈಗೊಂಡಿದೆ.

‘ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ದಿನದ 24 ಗಂಟೆಯೂ ಹೆಚ್ಚಿನ ಭದ್ರತೆ ವಹಿಸಬೇಕು. ಪೊಲೀಸರ ನೆರವು ಪಡೆದು ನಿಲ್ದಾಣಗಳಲ್ಲಿ ಆಗಾಗ ತಪಾಸಣೆ ನಡೆಸಬೇಕು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಎಲ್ಲಾ ವಿಭಾಗೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಸಂಚರಿಸುವ ಬಸ್‌ಗಳಿಗೆ ಹತ್ತುವ ಪ್ರಯಾಣಿಕರ ಬ್ಯಾಗ್‌ಗಳನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಬೇಕು. ಘಟಕಗಳು ಮತ್ತು ಬಸ್‌ಗಳಲ್ಲಿ ಇರುವ ಇಂಧನ ಟ್ಯಾಂಕ್‌ಗಳ ಭದ್ರತೆಗೆ ಕ್ರಮ ಕೈಗೊಳ್ಳಬೇಕು. ಸಿಸಿಟಿವಿ ಕ್ಯಾಮರಗಳು ಸುಸ್ಥಿತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT