ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಕಿನ್ಯಾ ಮುಖಾಮುಖಿ ಇಂದು

ಇಂಟರ್ ಕಾಂಟಿನೆಂಟಲ್ ಕಪ್‌ ಫುಟ್‌ಬಾಲ್ ಟೂರ್ನಿ ಫೈನಲ್‌
Last Updated 9 ಜೂನ್ 2018, 19:30 IST
ಅಕ್ಷರ ಗಾತ್ರ

ಮುಂಬೈ: ಇಂಟರ್‌ ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ಕಿನ್ಯಾ ತಂಡಗಳು ಭಾನುವಾರ ಸೆಣಸಲಿವೆ. ಮುಂಬೈ ಫುಟ್‌ಬಾಲ್ ಅರೆನಾದ ಕ್ರೀಡಾಂಗಣದಲ್ಲಿ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಸುನಿಲ್ ಚೆಟ್ರಿ ಬಳಗಕ್ಕೆ ಕಿನ್ಯಾ ತಂಡ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ.

ನೂರು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಖ್ಯಾತಿ ಹೊಂದಿರುವ ಸುನಿಲ್ ಚೆಟ್ರಿ ಈ ಟೂರ್ನಿಯಲ್ಲಿ ಇಲ್ಲಿಯ ವರೆಗೆ ಉತ್ತಮ ಸಾಧನೆ ಮಾಡಿದ್ದಾರೆ. ತೈಪೆ ವಿರುದ್ಧ ಹ್ಯಾಟ್ರಿಕ್ ಗೋಲು ಗಳಿಸಿರುವ ಅವರು ಮೂರು ಪಂದ್ಯಗಳಲ್ಲಿ ಒಟ್ಟು ಆರು ಬಾರಿ ಚೆಂಡನ್ನು ಗುರಿ ಸೇರಿಸಿದ್ದಾರೆ. ಹೀಗಾಗಿ ಪಂದ್ಯದಲ್ಲಿ ಎಲ್ಲರ ಚಿತ್ರ ಅವರತ್ತ ಹರಿಯುವ ಸಾಧ್ಯತೆ ಇದೆ.‌

ಮುಂದಿನ ಜನವರಿಯಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್‌ ಟೂರ್ನಿಗೆ ಸಿದ್ಧತೆ ನಡೆಸಲು ಈ ಟೂರ್ನಿಯಲ್ಲಿ ಭಾರತಕ್ಕೆ ಉತ್ತಮ ಅವಕಾಶ ಒದಗಿತ್ತು. ಫೈನಲ್‌ನಲ್ಲಿ ಜಯ ಸಾಧಿಸಿದರೆ ತಂಡದ ವಿಶ್ವಾಸ ಹೆಚ್ಚಲಿದೆ.

ಲೀಗ್ ಹಂತದ ಪಂದ್ಯದಲ್ಲಿ ಭಾರತ ತಂಡ ಕಿನ್ಯಾವನ್ನು 3–0ಯಿಂದ ಮಣಿಸಿತ್ತು. ಅದು ಚೆಟ್ರಿ ಅವರ ನೂರನೇ ಪಂದ್ಯ ಆಗಿತ್ತು. 68ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿದ್ದ ಚೆಟ್ರಿ 90+2ನೇ ನಿಮಿಷದಲ್ಲಿ ಮೋಹಕ ಗೋಲಿನೊಂದಿಗೆ ಪ್ರೇಕ್ಷಕರನ್ನು ರೋಮಾಂಚಗೊಳಿಸಿದ್ದರು.

ಅವರ ಆಟವನ್ನು ಸವಿಯಲು ಭಾನುವಾರವೂ ಪ್ರೇಕ್ಷಕರು ಮುಗಿ ಬೀಳುವ ಸಾಧ್ಯತೆ ಇದೆ. ಅಭಿಮಾನಿಗಳ ಮುಂದೆ ಭರ್ಜರಿ ಜಯ ಗಳಿಸಿ ಪ್ರಶಸ್ತಿ ಗೆಲ್ಲುವ ಲೆಕ್ಕಾಚಾರದೊಂದಿಗೆ ಚೆಟ್ರಿ ಪಡೆಯವರು ಕಣಕ್ಕೆ ಇಳಿಯಲಿದ್ದಾರೆ.

ಸುಲಭವಾಗಿ ಪರಿಗಣಿಸುವಂತಿಲ್ಲ: ಭಾರತ ತಂಡದ ಕೋಚ್‌ ಸ್ಟೀಫನ್ ಕಾನ್‌ಸ್ಟಂಟೈನ್ ಕಿನ್ಯಾವನ್ನು ಲಘುವಾಗಿ ಪರಿಗಣಿಸಿಲ್ಲ. ನ್ಯೂಜಿಲೆಂಡ್‌ ವಿರುದ್ಧ 2–1ರಿಂದ ಮತ್ತು ತೈಪೆ ಎದುರು 4–0ಯಿಂದ ಗೆದ್ದಿರುವ ಆ ತಂಡ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ.

ಚೆಟ್ರಿ ಮತ್ತು ಜೆಜೆ ಲಾಲ್‌ ಪೆಕ್ಲುವಾ ಅವರನ್ನು ಒಳಗೊಂಡ ಫಾರ್ವರ್ಡ್ ಆಟಗಾರರನ್ನು ನಿಯಂತ್ರಿಸುವುದು ಕಿನ್ಯಾಗೆ ದೊಡ್ಡ ಸವಾಲಾಗಲಿದೆ. ಉದಾಂತ ಸಿಂಗ್‌, ಅನಿರುದ್ಧ್ ತಾಪ, ಪ್ರಣಯ್‌ ಹಲ್ದರ್‌ ಮತ್ತು ಹಾಲಿಚರಣ್ ಜರ್ಜರಿ ಅವರನ್ನು ಒಳಗೊಂಡ ಭಾರತದ ಮಿಡ್‌ಫೀಲ್ಡ್‌ ವಿಭಾಗವೂ ಬಲಿಷ್ಠವಾಗಿದೆ. ರಕ್ಷಣಾ ವಿಭಾಗಕ್ಕೆ ಸಂದೇಶ್ ಜಿಂಗಾನ ಮತ್ತು ಪ್ರೀತಂ ಕೊತಾಲ್ ಅವರ ಬಲವಿದೆ. ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಗೋಲ್‌ಕೀಪರ್ ಗುರುಪ್ರೀತ್‌ ಸಿಂಗ್ ಸಂಧು ಭಾನುವಾರ ಕಣಕ್ಕೆ ಇಳಿಯಲಿದ್ದಾರೆ. ಇದು ಚೆಟ್ರಿ
ಬಳಗದ ಆತ್ಮವಿಶ್ವಾಸವನ್ನು ಇಮ್ಮಡಿ
ಗೊಳಿಸಿದೆ.

ಪಂದ್ಯ ಆರಂಭ: ರಾತ್ರಿ 8.00

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT