ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.48 ಕೋಟಿ ಮೌಲ್ಯದ ವಸ್ತು ವಶ

ಆಗ್ನೇಯ ವಿಭಾಗದ ವಿವಿಧ ಠಾಣೆಗಳ ಪೊಲೀಸರ ಕಾರ್ಯಾಚರಣೆ l 71 ಆರೋಪಿಗಳ ಬಂಧನ
Last Updated 19 ಆಗಸ್ಟ್ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಆಗ್ನೇಯ ವಿಭಾಗದ ವಿವಿಧ ಠಾಣೆಗಳ ಪೊಲೀಸರು 130 ಪ್ರಕರಣಗಳನ್ನು ಭೇದಿಸಿ, ರಾಜ್ಯ ಮತ್ತು ಅಂತರರಾಜ್ಯದ 71 ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ₹ 1.48 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರಿಂದ 1 ಕೆ.ಜಿ 218 ಗ್ರಾಂ ತೂಕದ ಚಿನ್ನಾಭರಣ ಮತ್ತು ವಜ್ರದ ಹರಳಿರುವ ನೆಕ್ಲೇಸ್‌, 3 ಕೆ.ಜಿ ಬೆಳ್ಳಿಯ ವಸ್ತುಗಳು, 77 ಮೊಬೈಲ್‌ಗಳು, 18 ಲ್ಯಾಪ್‌ಟಾಪ್‌ಗಳು, 62 ಕೆ.ಜಿ ಗಾಂಜಾ, 18 ಎಲ್‌ಎಸ್‌ಡಿ ಸ್ಟಿಪ್ಸ್‌ಗಳು, 22 ಕೆ.ಜಿ ತಾಮ್ರದ ತಂತಿ, 76 ದ್ವಿಚಕ್ರ ವಾಹನಗಳು, ಎರಡು ತ್ರಿಚಕ್ರ ವಾಹನ, 4 ನಾಲ್ಕು ಚಕ್ರದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೋರಮಂಗಲ ಠಾಣೆಯ ಪೊಲೀಸರು 32 ಪ್ರಕರಣಗಳನ್ನು ಭೇದಿಸಿದರೆ, ಮಡಿವಾಳ 24, ಆಡುಗೋಡಿ 18, ಸುದ್ದಗುಂಟೆಪಾಳ್ಯ 10, ಮೈಕೊ‌ ಲೇಔಟ್‌ 7, ಬೀಗೂರು 7, ಬೊಮ್ಮನಹಳ್ಳಿ 2, ಎಲೆಕ್ಟ್ರಾನಿಕ್ಸ್‌ ಸಿಟಿ 7, ಪರಪ್ಪನಅಗ್ರಹಾರ 4, ತಿಲಕ್ ನಗರ 8, ಎಚ್ಎಸ್‌ಆರ್‌ ಲೇಔಟ್‌ 6 ಮತ್ತು ಬಂಡೆಪಾಳ್ಯ ಠಾಣೆಯ ಪೊಲೀಸರು 4 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

ಅಂಗಡಿಗಳಿಗೆ ಕನ್ನ ಕೊರೆದು ಕಳವು ಮಾಡಿದ ಆರು ಪ್ರಕರಣಗಳಿಗೆ ಸಂಬಂಧಿಸಿ ಸಯ್ಯದ್‌ ಇಬ್ರಾಹಿಂ ಮತ್ತು ವಾಸಿಂ ಅಕ್ರಂ ಎಂಬಿಬ್ಬರನ್ನು ಬಂಧಿಸಿರುವ ಕೋರಮಂಗಲ ಪೊಲೀಸರು, ಇವರಿಂದ ₹ 8 ಲಕ್ಷ ಮೌಲ್ಯದ 270 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ವಿಶ್ವಾಸ್‌ ಎಂಬಾತನನ್ನು ಬಂಧಿಸಿ ಒಂಬತ್ತು ದರೋಡೆ ಪ್ರಕರಣ ಭೇದಿಸಿ, ₹ 15 ಲಕ್ಷ ಮೌಲ್ಯದ 501 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಸಲ್ಮಾನ್‌, ಸುಲ್ತಾನ್‌, ಇಮ್ತಿಯಾಜ್‌ ಎಂಬವರನ್ನು ಬಂಧಿಸಿರುವ ಇದೇ ಠಾಣೆಯ ಪೊಲೀಸರು, ₹ 4.71 ಲಕ್ಷ ಮೌಲ್ಯದ 17 ಮೊಬೈಲ್‌, 18 ಗ್ರಾಂ ತೂಕದ ಚಿನ್ನದ ಸರ, ಲ್ಯಾಪ್‌ಟಾಪ್‌, 3 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ದಯಾನಂದ ಮತ್ತು ಮಧುಸೂದನ್‌ ಎಂಬವರನ್ನು ಬಂಧಿಸಿ ₹ 15 ಸಾವಿರ ಮೌಲ್ಯದ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಮಹಮ್ಮದ್‌ ಹ್ಯಾರಿಸ್‌ ಎಂಬಾತನನ್ನು ಬಂಧಿಸಿ ₹ 2.20 ಲಕ್ಷ ಮೌಲ್ಯದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ 5 ಮಂದಿಯನ್ನು ಬಂಧಿಸಿ 35 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮಡಿವಾಳ ಠಾಣೆಯ ಪೊಲೀಸರು ಸುಜಿತ್‌, ಪ್ರವೀಣ್‌ಕುಮಾರ್‌, ಪ್ರವೀಣ್‌ ಎಂಬುವವರನ್ನು ಬಂಧಿಸಿ ₹ 6.20 ಲಕ್ಷ ಮೌಲ್ಯದ ಒಂಬತ್ತು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ರವಿ ಎಂಬಾತನನ್ನು ಬಂಧಿಸಿ ₹ 8 ಲಕ್ಷ ಮೌಲ್ಯದ ನಾಲ್ಕು ಚಕ್ರದ ವಾಹನಗಳು, ಫಯಾಜ್‌ ಖಾನ್‌, ಸತೀಶ್‌ ಎಂಬುವವರನ್ನು ಬಂಧಿಸಿ ₹ 14 ಲಕ್ಷ ಮೌಲ್ಯದ 13 ಬೈಕ್‌ ವಶಪಡಿಸಿಕೊಂಡಿದ್ದಾರೆ.

ಆಡುಗೋಡಿ ಠಾಣೆಯ ಪೊಲೀಸರು ಅನೂಪ್‌ ಮತ್ತು ರೋಷನ್‌ ಎಂಬುವವರನ್ನು ಬಂಧಿಸಿ ₹ 17 ಸಾವಿರ ಮೌಲ್ಯದ ಮೊಬೈಲ್‌, ಅಪ್ಪು ಎಂಬಾತನನ್ನು ವಶಕ್ಕೆ ಪಡೆದುಕೊಂಡು ₹ 1.20 ಲಕ್ಷ ಮೌಲ್ಯದ 3 ಕೆ.ಜಿ ಬೆಳ್ಳಿ ಆಭರಣ, ಲ್ಯಾಪ್‌ಟಾಪ್‌, ಕ್ಯಾಮೆರಾ ವಶಪಡಿಸಿಕೊಂಡಿದ್ದಾರೆ. ಸಯ್ಯದ್‌ ಇರ್ಫಾನ್‌ ಎಂಬಾತನನ್ನು ಬಂಧಿಸಿ ₹ 1. 50 ಲಕ್ಷ ಮೌಲ್ಯದ 3 ಬೈಕ್‌, ಆಲಿ ಬಾಷಾ, ಚಂದ್ರಕಾಂತ್, ಕುಮಾರ್‌ ಎಂಬಾತನ್ನು ಬಂಧಿಸಿ ₹ 3 ಲಕ್ಷ ಮೌಲ್ಯದ ಆರು ಬೈಕ್‌ ಜಪ್ತಿ ಮಾಡಿದ್ದಾರೆ.

ಮಾದಕವಸ್ತುಗಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿರುವ ಸುದ್ದಗುಂಟೆಪಾಳ್ಯ ಠಾಣೆಯ ಪೊಲೀಸರು ₹ 6.60 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡರೆ, ಮೈಕೋ ಲೇಔಟ್‌ ಪೊಲೀಸರು ಕಾರ್ತಿಕ್‌ ಎಂಬಾತನನ್ನು ಬಂಧಿಸಿ ಆರು ದ್ವಿಚಕ್ರ ವಾಹನ, ಒಂದು ತ್ರಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಬೊಮ್ಮನಹಳ್ಳಿ ಪೊಲೀಸರು ಗೀತಾ ಎಂಬಾಕೆಯನ್ನು ಬಂಧಿಸಿ 64 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ವೀರಮಣಿ ಮತ್ತು ಧನುಷ್‌ ಎಂಬುವವರನ್ನು ಬಂಧಿಸಿರುವ ಬೇಗೂರು ಠಾಣೆಯ ಪೊಲೀಸರು, ಆರೋಪಿಗಳಿಂದ 20 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಅಶೋಕ್‌ ಎಂಬಾತನನ್ನು ಬಂಧಿಸಿ ನಾಲ್ಕು ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.

ಮೊಬೈಲ್‌ ಪಿಕ್‌ ಪಾಕೆಟ್‌ ಮಾಡುತ್ತಿದ್ದವನನ್ನು ಬಂಧಿಸಿರುವ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ₹ 80 ಸಾವಿರ ಮೌಲ್ಯದ ಎಂಟು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ರಫೀಕ್‌, ಗೋವಿಂದಸ್ವಾಮಿ, ಸುಬ್ರಮಣಿ ಎಂಬವರನ್ನು ಬಂಧಿಸಿ ₹ 30 ಮೌಲ್ಯದ ಕೇಬಲ್‌ ವಶಪಡಿಸಿಕೊಂಡಿದ್ದಾರೆ. ಪೆರಿಯಾರ್‌ ಸ್ವಾಮಿ ಎಂಬಾತನನ್ನು ಬಂಧಿಸಿರುವ ಪರಪ್ಪನಅಗ್ರಹಾರ ಪೊಲೀಸರು ₹ 3 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌ ವಶಪಡಿಸಿಕೊಂಡಿದ್ದಾರೆ. ವೇಲು ಎಂಬಾತನನ್ನು ಬಂಧಿಸಿ 90 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ತಿಲಕನಗರ ಪೊಲೀಸರು ಧೀರಜ್‌ ಮತ್ತು ದರ್ಶನ್‌ ಎಂಬಿಬ್ಬರನ್ನು ಬಂಧಿಸಿ ಎಂಟು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT