ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳ ಸುರಕ್ಷೆ ‘ನೇತ್ರಾ’: 3,000 ಸ್ಥಳದಲ್ಲಿ 7,000 ಸಿಸಿಟಿವಿ ಕ್ಯಾಮೆರಾ

l ನಿರ್ಭಯಾ ನಿಧಿ ಯೋಜನೆ l ₹ 496.57 ಕೋಟಿ ಅಂದಾಜು ವೆಚ್ಚ l ಹನಿವೆಲ್‌ ಆಟೊಮೇಷನ್ ಇಂಡಿಯಾ ನಿರ್ವಹಣೆ
Last Updated 28 ನವೆಂಬರ್ 2022, 19:55 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅಪರಾಧ ಕೃತ್ಯ ನಿಯಂತ್ರಿಸಲು ಹಾಗೂ ಮಹಿಳೆ–ಮಕ್ಕಳ ಸುರಕ್ಷತೆ ಕಾಪಾಡಲು ‘ಸ್ಮಾರ್ಟ್’ ಆಗುತ್ತಿರುವ ಪೊಲೀಸರು, ‘ನೇತ್ರಾ’ ಹೆಸರಿನಲ್ಲಿ ಆಧುನಿಕ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಣ್ಗಾವಲಿರಿಸಲು ಸಿದ್ಧರಾಗಿದ್ದಾರೆ.

‘ಸುರಕ್ಷಿತ ನಗರ’ ಘೋಷವಾಕ್ಯದೊಂದಿಗೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಕೇಂದ್ರ ಸರ್ಕಾರವು ನಿರ್ಭಯಾ ನಿಧಿ ಯೋಜನೆ ರೂಪಿಸಿದೆ. ಯೋಜನೆಯಡಿ ಅನುದಾನ ಪಡೆದಿರುವ ಬೆಂಗಳೂರು ಪೊಲೀಸರು, ನಗರದ 3,000 ಸ್ಥಳಗಳಲ್ಲಿ 7,000 ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕೆಲಸ ಆರಂಭಿಸಿದ್ದಾರೆ.

ಮುಖಚಹರೆ, ವಾಹನಗಳ ನೋಂದಣಿ ಸಂಖ್ಯೆ ಸಮೇತ ದೃಶ್ಯಗಳನ್ನು ಸ್ಪಷ್ಟವಾಗಿ ಸೆರೆಹಿಡಿಯಬಲ್ಲ ಸಾಮರ್ಥ್ಯ ಹೊಂದಿರುವ ಕ್ಯಾಮೆರಾಗಳು, ಎಎನ್‌ಪಿಆರ್ (ಸ್ವಯಂಪ್ರೇರಿತ ವಾಹನಗಳ ನೋಂದಣಿ ಸಂಖ್ಯೆ ಗುರುತಿಸುವ) ಸೌಲಭ್ಯವನ್ನೂ ಒಳಗೊಂಡಿವೆ. ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಪೊಲೀಸ್ ಇಲಾಖೆಗೆ, ಕ್ಯಾಮೆರಾಗಳು ಸಿಬ್ಬಂದಿಯ ಬಲ ತುಂಬಲಿವೆ.

ಕ್ಯಾಮೆರಾ ಅಳವಡಿಕೆ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಟೆಂಡರ್ ಮೂಲಕ ಹನಿವೆಲ್ ಆಟೊಮೇಷನ್ ಇಂಡಿಯಾ ಕಂಪನಿಗೆ ವಹಿಸಲಾಗಿದೆ. ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗ, ಬಸ್‌ ನಿಲ್ದಾಣ, ತಂಗುದಾಣ, ಸಾರ್ವಜನಿಕ ಸ್ಥಳ, ಮೈದಾನ, ಧಾರ್ಮಿಕ ಕೇಂದ್ರಗಳು... ಹೀಗೆ ಹಲವು ಸ್ಥಳಗಳಲ್ಲಿ ಪ್ರತ್ಯೇಕ ಕಂಬಗಳಲ್ಲಿ ‘ನೇತ್ರಾ’ ಕ್ಯಾಮೆರಾ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ.

ಯುವತಿಯರನ್ನು ಚುಡಾಯಿಸುವುದು, ಅಪಹರಣ, ಸರಗಳವು, ಕಳ್ಳತನ.... ಹೀಗೆ ರಸ್ತೆಯಲ್ಲಿ ನಡೆಯಬಹುದಾದ ಎಲ್ಲ ಅಪರಾಧಗಳ ಮೇಲೂ ‘ನೇತ್ರಾ’ ಕಣ್ಣಿಡಲಿದೆ.

‘ಬೆಂಗಳೂರಿನಲ್ಲಿ ಜನಸಂಖ್ಯೆ ಬೆಳೆಯುತ್ತಿದೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಸುರಕ್ಷತೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ, ನಿರ್ಭಯಾ ಯೋಜನೆಯಡಿ ನಗರದ ಹಲವೆಡೆ ‘ನೇತ್ರಾ’ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಈ ಕ್ಯಾಮೆರಾಗಳು, ನಗರದ ಸುರಕ್ಷತೆಗೆ ಮತ್ತಷ್ಟು ನೆರವಾಗಲಿವೆ’ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಮಾಂಡೊ ಕೇಂದ್ರದಿಂದ ನಿಗಾ: ಬೆಂಗಳೂರು ಕಮಿಷನರ್ ಕಚೇರಿ ಕಟ್ಟಡದಲ್ಲಿರುವ ಕಮಾಂಡೊ ಕೇಂದ್ರದ ಸಿಬ್ಬಂದಿ, ‘ನೇತ್ರಾ’ ಕ್ಯಾಮೆರಾ ಮೂಲಕ ಆಯಾ ಸ್ಥಳಗಳ ಮೇಲೆ ನಿರಂತರವಾಗಿ ನಿಗಾ ವಹಿಸಲಿದ್ದಾರೆ. ಕ್ಯಾಮೆರಾ ಚಾಲನೆ ಹಾಗೂ ಅದರಿಂದ ಪತ್ತೆಯಾದ ಪ್ರಕರಣಗಳ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಿ, ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಿದ್ದಾರೆ.

‘₹496.57 ಕೋಟಿ ವೆಚ್ಚದಲ್ಲಿ ಎರಡು ವರ್ಷಗಳ ಅವಧಿಯೊಳಗೆ ನಗರದ 3,000 ಸ್ಥಳಗಳಲ್ಲಿ 7,000 ಕ್ಯಾಮೆರಾ ಅಳವಡಿಸಲು ಗುತ್ತಿಗೆ ನೀಡಲಾಗಿದೆ. ಈಗಾಗಲೇ ನಗರದಲ್ಲಿ ಸುಮಾರು 1,500 ಕ್ಯಾಮೆರಾ ಅಳವಡಿಸಲಾಗಿದ್ದು, ಉಳಿದ ಕ್ಯಾಮೆರಾಗಳ ಅಳವಡಿಕೆ ಕೆಲಸ ಮುಂದುವರಿದಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದರು.

‘ಕ್ಯಾಮೆರಾಗಳನ್ನು ಕಮಾಂಡೊ ಕೇಂದ್ರಕ್ಕೆ ಜೋಡಿಸಲಾಗಿದೆ. ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯಗಳನ್ನು ಕಮಾಂಡೊ ಕೇಂದ್ರದಲ್ಲಿ ನೋಡಬಹುದಾಗಿದೆ. ಇಂಥ ದೃಶ್ಯಗಳನ್ನು ಗಮನಿಸಲಿರುವ ಕೇಂದ್ರದ ಸಿಬ್ಬಂದಿ, ಏನಾದರೂ ಅಹಿತಕರ ಘಟನೆಗಳು ಹಾಗೂ ಅಪರಾಧಗಳು ನಡೆದರೆ ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡಲಿದ್ದಾರೆ. ಜೊತೆಗೆ, ಗಸ್ತು ಸಿಬ್ಬಂದಿಗೂ ಸೂಚನೆ ನೀಡಿ ತ್ವರಿತವಾಗಿ ಸ್ಥಳಕ್ಕೆ ಕಳುಹಿಸಲಿದ್ದಾರೆ’ ಎಂದು ತಿಳಿಸಿದರು.

ಸುರಕ್ಷಾ ಆ್ಯಪ್‌ ಅಭಿವೃದ್ಧಿ: ‘ಮಹಿಳೆಯರ ಸುರಕ್ಷತೆಗಾಗಿ ಈಗಾಗಲೇ ‘ಸುರಕ್ಷಾ’ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಇದೇ ಆ್ಯಪ್‌ನಲ್ಲಿ ಮತ್ತಷ್ಟು ಆಯ್ಕೆಗಳನ್ನು ಸೇರಿಸಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಆ್ಯಪ್ ಅಥವಾ ನಿಯಂತ್ರಣ ಸಂಖ್ಯೆ 100, 112ರ ಮೂಲಕ ಸಹಾಯ ಕೋರುವ ಮಹಿಳೆಯರ ಸ್ಥಳಗಳನ್ನು ‘ನೇತ್ರಾ’ ಕ್ಯಾಮೆರಾ ಮೂಲಕ ನೋಡುವ ವ್ಯವಸ್ಥೆ ಇರಲಿದೆ’ ಎಂದು ಕಮಾಂಡೊ ಕೇಂದ್ರದ ಅಧಿಕಾರಿಯೊಬ್ಬರು ಹೇಳಿದರು.

‘ಕದ್ದ ವಾಹನಗಳ ಮಾಹಿತಿಯನ್ನು ನೋಂದಣಿ ಫಲಕ ಸಮೇತ ಸೆರೆ ಹಿಡಿಯಬಲ್ಲ ಸಾಮರ್ಥ್ಯ ‘ನೇತ್ರಾ’ ಕ್ಯಾಮೆರಾಗಳಿಗೆ ಇದೆ. ಈಗಾಗಲೇ ಕೆಲ ಕ್ಯಾಮೆರಾಗಳ ಕಾರ್ಯಾಚರಣೆ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಕ್ಯಾಮೆರಾಗಳು ಹಂತ ಹಂತವಾಗಿ ಕಾರ್ಯಾಚರಣೆ ಆರಂಭಿಸಲಿವೆ’ ಎಂದು ತಿಳಿಸಿದರು.\

‘ಐಪಿಎಸ್’ ಜಟಾಪಟಿಗೆ ಕಾರಣವಾಗಿದ್ದ ಟೆಂಡರ್

ನಿರ್ಭಯಾ ನಿಧಿ ಯೋಜನೆಯಡಿ ‘ಸುರಕ್ಷ ನಗರ’ ಕೆಲಸದ ಟೆಂಡರ್ ವಿಚಾರವಾಗಿ ನಗರದ ಹಿಂದಿನ ಹೆಚ್ಚುವರಿ ಪೊಲೀಸ್ ಕಮಿಷನರ್ (ಆಡಳಿತ) ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಇಲಾಖೆಯ ಹಿಂದಿನ ಕಾರ್ಯದರ್ಶಿ ಡಿ. ರೂಪಾ ನಡುವೆ ಜಟಾಪಟಿ ನಡೆದಿತ್ತು. ಇದರಿಂದಾಗಿ ಟೆಂಡರ್ ಸಹ ರದ್ದಾಗಿ, ಅಂದಿನ ಕಮಿಷನರ್ ಕಮಲ್ ಪಂತ್ ನೇತೃತ್ವದಲ್ಲಿ ತನಿಖೆಯೂ ನಡೆದಿತ್ತು.

‘ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್ ಪ್ರಕ್ರಿಯೆಯಲ್ಲಿ ಡಿ.ರೂಪಾ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಹೇಮಂತ್‌ ನಿಂಬಾಳ್ಕರ್, ಮುಖ್ಯ ಕಾರ್ಯದರ್ಶಿ ಅವರಿಗೆ2021ರ ಡಿ.7ರಂದು ಪತ್ರ ಬರೆದಿದ್ದರು. ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಡಿ. ರೂಪಾ, ‘ಸರ್ಕಾರದ ಹಣ ಉಳಿಸಲು ಯತ್ನಿಸಿದ್ದಕ್ಕೆ ದುಷ್ಟರ ಕೂಟ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಜನರ ಹಿತಾಸಕ್ತಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದ್ದರು.

ಇದಾಗಿ ಹಲವು ತಿಂಗಳ ನಂತರ ಮರು ಟೆಂಡರ್ ಪ್ರಕ್ರಿಯೆ ನಡೆಸಿ, ಕ್ಯಾಮೆರಾ ಅಳವಡಿಸುವ ಗುತ್ತಿಗೆಯನ್ನು ಹನಿವೆಲ್ ಆಟೊಮೇಷನ್ ಇಂಡಿಯಾ ಕಂಪನಿಗೆ ನೀಡಲಾಗಿದೆ.

‘ಕ್ಯಾಮೆರಾವನ್ನೇ ಕದ್ದೊಯ್ಯುವ ಭಯ’

‘ನೇತ್ರಾ’ ಸಿಸಿಟಿವಿ ಕ್ಯಾಮೆರಾಗಳು ಆಧುನಿಕ ಉ‍ಪಕರಣ ಹಾಗೂ ಬ್ಯಾಟರಿ ಆಧರಿತವಾಗಿ ಕಾರ್ಯನಿರ್ವಹಿಸಲಿವೆ. ಬ್ಯಾಟರಿ ಆಸೆಗಾಗಿ ಕ್ಯಾಮೆರಾವನ್ನು ಕಳ್ಳರು ಕದ್ದೊಯ್ಯುವ ಭಯವೂ ಇದೆ’ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ಸಂಚಾರ ಸಿಗ್ನಲ್ ಹಾಗೂ ಇತರೆಡೆ ಅಳವಡಿಸುವ ಕ್ಯಾಮೆರಾಗಳ ಬ್ಯಾಟರಿಗಳನ್ನು ಕಳ್ಳರು ಕದ್ದೊಯ್ದಿರುವ ಪ್ರಕರಣಗಳು ಈಗಾಗಲೇ ವರದಿ ಆಗಿವೆ. ಹೀಗಾಗಿ, ನೇತ್ರಾ ಕ್ಯಾಮೆರಾಗಳನ್ನು ಗಸ್ತು ಸಿಬ್ಬಂದಿ ಆಗಾಗ ಗಮನಿಸುತ್ತಿರಬೇಕು. ಕ್ಯಾಮೆರಾ ಕದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ, ಕೃತ್ಯ ಎಸಗಲು ಸಂಚು ರೂಪಿಸುವವರಿಗೂ ಎಚ್ಚರಿಕೆ ರವಾನಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT