ತಿಂಗಳುಗಟ್ಟಲೇ ಗಣೇಶ ಕೂರಿಸುವಂತಿಲ್ಲ

7
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಬಂಧ *ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ

ತಿಂಗಳುಗಟ್ಟಲೇ ಗಣೇಶ ಕೂರಿಸುವಂತಿಲ್ಲ

Published:
Updated:
Deccan Herald

ಬೆಂಗಳೂರು: ಇನ್ನು ಮುಂದೆ ಗಣೇಶ ಮೂರ್ತಿಯನ್ನು ತಿಂಗಳುಗಟ್ಟಲೇ ಕೂರಿಸಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವಂತಿಲ್ಲ! ಈ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಮಂಡಳಿ ಎಚ್ಚರಿಕೆ ನೀಡಿದೆ.

ಈ ವರ್ಷ ಸೆಪ್ಟೆಂಬರ್‌ 13ರಂದು ಗಣೇಶ ಚತುರ್ಥಿ ಇದೆ.

‘ಎಲ್ಲರೂ ಸೆಪ್ಟೆಂಬರ್‌ ತಿಂಗಳಲ್ಲಿಯೇ ಗಣೇಶ ಕೂರಿಸಿ ಒಂದು ತಿಂಗಳ ಒಳಗೆ ವಿಸರ್ಜಿಸಬೇಕು. ಅಕ್ಟೋಬರ್‌ನಲ್ಲಿ ಯಾರಾದರೂ ಗಣೇಶ ಕೂರಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕಲ್ಯಾಣಿಗಳಲ್ಲಿ ವಿಸರ್ಜಿಸಿದ ಗಣೇಶಗಳನ್ನು ತೆರವು ಮಾಡಿ, ಸ್ವಚ್ಛಗೊಳಿಸಬೇಕಿರುತ್ತದೆ. ಹಾಗಾಗಿ ಹಬ್ಬ ಮುಗಿದ ತಿಂಗಳ ನಂತರ ಸಾರ್ವಜನಿಕ ಗಣೇಶ ಕೂರಿಸಲು ಸ್ಥಳೀಯ ಸಂಸ್ಥೆಗಳು ಅನುಮತಿ ನೀಡಬಾರದು. ಈ ಬಗ್ಗೆ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸೂಚಿಸಲಾಗಿದೆ’ ಎಂದು ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳನ್ನೂ ನಿಷೇಧಿಸಲಾಗಿದೆ. ಉಳಿದಿರುವ ಪಿಒಪಿ ಮೂರ್ತಿಗಳನ್ನು ವಿಲೇವಾರಿ ಮಾಡಬೇಕು. ಪಿಒಪಿ ವಿಗ್ರಹಗಳನ್ನು ತಯಾರಿಸಲು ಅವಕಾಶ ನೀಡಬಾರದು ಹಾಗೂ ಯಾವುದೇ ಜಲಮೂಲಗಳಲ್ಲಿ ಅವುಗಳನ್ನು ವಿಸರ್ಜಿಸಲು ಬಿಡಬಾರದು ಎಂದು ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದೆ.

ಹಸಿ ಕಸ ಪ್ರತ್ಯೇಕಿಸಿ: ಮೊಬೈಲ್‌ ಟ್ಯಾಂಕರ್‌ಗಳಲ್ಲಿ ಅಥವಾ ಕಲ್ಯಾಣಿಗಳಲ್ಲಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿಸರ್ಜಸುವ ಸಂದರ್ಭಗಳಲ್ಲಿ ಹಸಿ ಕಸವನ್ನು (ಹೂವು, ಹಣ್ಣು, ಬಾಳೆಗಿಡ, ಮಾವಿನ ತೋರಣ ಇತ್ಯಾದಿಗಳು) ಪ್ರತ್ಯೇಕಿಸಬೇಕು ಎಂದು ಸೂಚಿಸಿದೆ. ಜೊತೆಗೆ ವಾರ್ಡ್‌ ಮಟ್ಟದಲ್ಲಿ ಪೊಲೀಸರ ಸಹಯೋಗದೊಂದಿಗೆ ಸಮಿತಿಗಳನ್ನು ರಚಿಸಿ ಗಣೇಶ ಮೂರ್ತಿಗಳ ಸೂಕ್ತ ರೀತಿಯ ವಿಲೇವಾರಿಗೆ ಕ್ರಮವಹಿಸಬೇಕು ಎಂದಿದೆ.

ಮಣ್ಣಿನ ವಿಗ್ರಹಕ್ಕೆ 5 ಅಡಿ ಮಿತಿ: ಮಂಡಳಿ ಸೂಚನೆ
ಗರಿಷ್ಠ 5 ಅಡಿ ಎತ್ತರದ ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಲು ಅನುಮತಿ ನೀಡಬೇಕು. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ, ಪೊಲೀಸ್‌ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಮಂಡಳಿ ಸೂಚಿಸಿದೆ. 

ಗಣೇಶ ಮೂರ್ತಿ ವಿಸರ್ಜನೆಗೆ ತೊಡಕಾಗಲಿದೆ ಎಂಬ ಕಾರಣದಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಗಣೇಶ ವಿಗ್ರಹದ ಎತ್ತರಕ್ಕೆ 2017ರಲ್ಲೇ ನಿರ್ಬಂಧ ವಿಧಿಸಿತ್ತು. ಇದಕ್ಕೆ ಗಣೇಶ ಉತ್ಸವ ಸಮಿತಿಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಮಂಡಳಿಯ ಎಚ್ಚರಿಕೆ ಲೆಕ್ಕಿಸದೇ ಅನೇಕ ಸಂಘ ಸಂಸ್ಥೆಗಳು 5 ಅಡಿಗಿಂತ ಹೆಚ್ಚು ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದವು. 

‘ಮಣ್ಣಿನ ಮೂರ್ತಿಗಳನ್ನು ವಿಸರ್ಜನೆ ಮಾಡುವಾಗ ಹೆಚ್ಚು ತ್ಯಾಜ್ಯ ಉಂಟಾಗುತ್ತಿದೆ. ಇದರಿಂದಾಗಿ ಜಲಮೂಲಗಳಿಗೆ ಹಾನಿಯಾಗುತ್ತಿದೆ. ಹೀಗಾಗಿ ಎತ್ತರವನ್ನು 5 ಅಡಿಗೆ ಸೀಮಿತಗೊಳಿಸಿದ್ದೇವೆ’ ಎಂದು ಮಂಡಳಿ ಹೇಳಿದೆ. ಬಿಬಿಎಂಪಿ ಆಯುಕ್ತರು ಹಾಗೂ  ಜಿಲ್ಲಾಧಿಕಾರಿಗಳು ಈ ನಿರ್ಬಂಧ ಜಾರಿಗೊಳಿಸಲು ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕೆಂದೂ ಸೂಚಿಸಿದೆ.

*
ಪಿಒಪಿ ಗಣೇಶ ಕೂರಿಸಿದರೆ ಕ್ರಮಕೈಗೊಳ್ಳುವುದಿಲ್ಲ ಎನ್ನುವ ಮನೋಭಾವ ಹೋಗಬೇಕು. ಈ ಬಾರಿ ಎಷ್ಟು ಪ್ರಕರಣ ದಾಖಲಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯುತ್ತೇವೆ.
-ಲಕ್ಷ್ಮಣ್‌, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !