ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಕಾರ್ಯಕರ್ತರ ವಿರೋಧ

ಬಂಡೀಪುರ ಅಭಯಾರಣ್ಯ: ರಾತ್ರಿ ವಾಹನ ಸಂಚಾರ ನಿಷೇಧ ತೆರವು– ಇಂದು ಸಭೆ
Last Updated 5 ಮಾರ್ಚ್ 2018, 20:01 IST
ಅಕ್ಷರ ಗಾತ್ರ

ಬೆಂಗಳೂರು: ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ತೆರವುಗೊಳಿಸುವ ಸಂಬಂಧ ಕೇಂದ್ರ ಹೆದ್ದಾರಿ ಸಚಿವಾಲಯ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ವತಿಯಿಂದ ಇದೇ 6ರಂದು (ಮಂಗಳವಾರ) ಸಭೆ ಕರೆಯಲಾಗಿದೆ.

ನಗರದ ಅರಣ್ಯ ಭವನದಲ್ಲಿ ನಡೆಯುವ ಈ ಸಭೆಯಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಸಭೆಗೆ ಪರಿಸರ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ರಾಜ್ಯ ಹೈಕೋರ್ಟ್‌ನ ಆದೇಶದ ಮೇರೆಗೆ ನಿಷೇಧ ಜಾರಿಯಾದ ಬಳಿಕ ಇಲ್ಲಿ ವನ್ಯಜೀವಿಗಳ ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದರೂ ಈ ನಿಷೇಧ ತೆರವುಗೊಳಿಸುವಂತೆ ಕೇರಳದ ಕೆಲವರು ಹಾಗೂ ರಾಜ್ಯದ ಕೆಲ ಶಾಸಕರು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಪರಿಸರ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೂ ನಿಷೇಧಕ್ಕೆ ಬೆಂಬಲ ಸೂಚಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ. ಬಂಡೀಪುರ ಅಭಯಾರಣ್ಯ ಪಕ್ಕದಲ್ಲೇ ಇರುವ ಮಧುಮಲೈ ವನ್ಯಜೀವಿಧಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 67ರಲ್ಲೂ ತಮಿಳುನಾಡು ಸರ್ಕಾರ ರಾತ್ರಿ ವೇಳೆ ವಾಹನ ಸಂಚಾರವನ್ನು ನಿಷೇಧಿಸಿದೆ.

‘ನಿಷೇಧ ತೆರವುಗೊಳಿಸುವ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿರುವ ಮೊಹಮದ್‌ ಅಲಿ ಎಂಬುವರ ವಿರುದ್ಧ ಆನೆ ಮರಿ ಬೇಟೆ, ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳು ತಮಿಳುನಾಡಿನ ಗೋಡಲೂರಿನಲ್ಲಿ ದಾಖಲಾಗಿವೆ. ಅಂತಹವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿರುವುದು ಅನುಮಾನಗಳಿಗೆ ಕಾರಣವಾಗಿದೆ’ ಎಂದು ಪರಿಸರ ಕಾರ್ಯಕರ್ತರು ಹೇಳಿದ್ದಾರೆ.

ಈ ವಿಷಯದಲ್ಲಿ ಯಥಾಸ್ಥಿತಿಯನ್ನು ಕಾಪಾಡಬೇಕು. ಸಾಧ್ಯವಾದರೆ ರಾತ್ರಿ ಸಂಚಾರ ನಿಷೇಧವನ್ನು ಸಂಜೆ 6 ಗಂಟೆಯಿಂದಲೇ ಜಾರಿಗೊಳಿಸಬೇಕು ಎಂದು ವನ್ಯಜೀವಿ ತಜ್ಞರ ಸಮಿತಿ ಸಲಹೆ ನೀಡಿದೆ.

ಕರ್ನಾಟಕ ಮತ್ತು ಕೇರಳದ ಮುಖ್ಯಮಂತ್ರಿಗಳ ನಡುವೆ ಈವರೆಗೆ ಐದು ಸಭೆಗಳು ನಡೆದಿವೆ. ನಿಷೇಧ ಹಿಂತೆಗೆದುಕೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಈ ಹಿಂದೆ ಸ್ಪಷ್ಟಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT