ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂದರೆ ‘ಮಹದೇವ’ನೇ ಗತಿ

ಮಹದೇವಪುರ ಕುಂದಲಹಳ್ಳಿಯಲ್ಲಿ ಕುಂಟುತ್ತಾ ಸಾಗಿರುವ ಕೆಳಸೇತುವೆ ಕಾಮಗಾರಿ
Last Updated 25 ಅಕ್ಟೋಬರ್ 2019, 6:25 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಡೆ ಕೆಸರು, ಮತ್ತೊಂದು ಕಡೆ ಸಂಚಾರ ದಟ್ಟಣೆ. ಈ ರಸ್ತೆಯಲ್ಲಿ ನೀವು ಹೋಗುವಾಗ ಮಳೆ ಬಂದರಂತೂ ನಿಮ್ಮನ್ನು ‘ಮಹದೇವ’ನೇ ಕಾಪಾಡಬೇಕು.

ಮಹದೇವಪುರ ವಿಧಾನಸಭಾ ಕ್ಷೇತ್ರದ ದೊಡ್ಡನೆಕ್ಕುಂದಿ ವಾರ್ಡ್‌ ವ್ಯಾಪ್ತಿಯಲ್ಲಿ ಬರುವ ಕುಂದಲಹಳ್ಳಿ ಗೇಟ್‌ ಬಳಿ ಒಂದು ವರ್ಷದಿಂದ ಕೆಳಸೇತುವೆ ಕಾಮಗಾರಿ ನಡೆಯುತ್ತಿದೆ. ತೀರಾ ನಿಧಾನಗತಿಯಲ್ಲಿ ಸಾಗಿರುವ ಈ ಕಾಮಗಾರಿಯಿಂದ ಸ್ಥಳೀಯರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

‘ದೊಡ್ಡನೆಕ್ಕುಂದಿ ವಾರ್ಡ್‌ನ ಪ್ರಮುಖ ಜಂಕ್ಷನ್‌ ಇದು. ರಸ್ತೆಯ ಒಂದು ಬದಿಯಲ್ಲಿ ಒಂದು ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಇನ್ನೊಂದು ಬದಿಯಲ್ಲಿ ಗುಂಡಿ ತೆಗೆಯಲಾಗಿದೆ. ಪಾದಚಾರಿಗಳು ಓಡಾಡಲೂ ಜಾಗ ಬಿಟ್ಟಿಲ್ಲ. ಇದರಿಂದ ಬಹಳಷ್ಟು ತೊಂದರೆಯಾಗಿದೆ’ ಎಂದು ಪಾದಚಾರಿ ಬಿ.ಕೆ. ವರುಣ್‌ ಹೇಳಿದರು.

‘ಮಳೆ ಬಂದರೆ ಗುಂಡಿಯಲ್ಲಿ ನೀರು ತುಂಬಿಕೊಳ್ಳುತ್ತದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ವೃದ್ಧರು, ಮಕ್ಕಳು ಜಾರಿ ಬೀಳುತ್ತಿದ್ದಾರೆ. ಅವರ ಸುರಕ್ಷತೆಗೆ ಕ್ರಮಗಳನ್ನಾದರೂ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ವ್ಯಾಪಾರ–ವಹಿವಾಟಿಗೆ ತೊಂದರೆಯಾಗಿದೆ. ಅಂಡರ್‌ಪಾಸ್‌ ನಿರ್ಮಾಣಕ್ಕೆ ವಿರೋಧವಿಲ್ಲ. ಆದರೆ, ಕಾಮಗಾರಿಯನ್ನು ನಿಗದಿತ ಗಡುವಿನೊಳಗೆ ಮುಗಿಸಬೇಕು. ವ್ಯಾಪಾರವಿಲ್ಲದೆ ಹಲವು ಮಳಿಗೆಗಳು ಬಾಗಿಲು ಮುಚ್ಚಿವೆ’ ಎಂದು ವರ್ತಕರೊಬ್ಬರು ಹೇಳಿದರು.

ಪ್ರತಿಭಟಿಸಲೇಬೇಕು: ‘ಮಹದೇವಪುರ ಕ್ಷೇತ್ರದ ಎಲ್ಲ ವಾರ್ಡ್‌ನಲ್ಲಿಯೂ ಇದೇ ಸ್ಥಿತಿ ಇದೆ. ಪ್ರತಿಭಟನೆ ಮಾಡಿದಾಗ ಮಾತ್ರ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮಾಡುತ್ತಾರೆ ಅಥವಾ ಕಾಮಗಾರಿ ಚುರುಕುಗೊಳಿಸುತ್ತಾರೆ. ಒಂದು ವಾರದ ನಂತರ ಮತ್ತೆ ಅದೇ ಪರಿಸ್ಥಿತಿ ಇರುತ್ತದೆ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಚುನಾವಣೆಯ ಸಮಯದಲ್ಲಷ್ಟೇ ಜನರ ನೆನಪು ಆಗುತ್ತದೆ. ಉಳಿದ ಸಮಯದಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಜನರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಸಮಸ್ಯೆ ಹೇಳಿದರೆ ದರ್ಪದ ಮಾತನಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಈ ಕೆಳಸೇತುವೆ ಕಾಮಗಾರಿಯನ್ನು ಚುರುಕುಗೊಳಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಿದೆವು. ಬಿಬಿಎಂಪಿ ಅಧಿಕಾರಿಗಳು ಆರು ತಿಂಗಳೊಳಗೆ ಮುಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ, ಕಾಮಗಾರಿ ಸಾಗುತ್ತಿರುವ ರೀತಿ ನೋಡಿದರೆ ವರ್ಷವಾದರೂ ಮುಗಿಯುವ ಲಕ್ಷಣವಿಲ್ಲ’ ಎಂದು ಸ್ಥಳೀಯರಾದ ಕೆ.ಪಿ. ಬಸವರಾಜ್ ಹೇಳಿದರು.

"ಕಾಮಗಾರಿ 6 ತಿಂಗಳೋ, ವರ್ಷವೋ ಎಂದು ಸಮಯವನ್ನಾದರೂ ನಿಗದಿ ಮಾಡಬೇಕು. ಗುಂಡಿ ತೋಡುತ್ತಾರೆ. ತುಂಬಿಕೊಳ್ಳುವ ನೀರು ಹೊರ ಹಾಕುತ್ತಾರೆ. ಇದೇ ಕಾಮಗಾರಿ ಆಗಿಬಿಟ್ಟಿದೆ"

-ಭಾಸ್ಕರ್‌, ದೊಡ್ಡನೆಕ್ಕುಂದಿ ನಿವಾಸಿ

***

'ವಾಣಿಜ್ಯ ಮಳಿಗೆಗಳ ಎದುರಿನಲ್ಲಿಯೇ ಕಾಮಗಾರಿ ನಡೆಯುತ್ತಿದೆ. ಹಲವರು ಬಾಗಿಲು ಮುಚ್ಚಿಕೊಂಡು ಹೋಗಿದ್ದಾರೆ. ವಹಿವಾಟು ಪ್ರಮಾಣ ಶೇ 50ರಷ್ಟು ಕಡಿಮೆಯಾಗಿದೆ'

-ಹಮೀದ್‌, ವ್ಯಾಪಾರಿ

‘ಮಾಹಿತಿ ಕೊಡಲ್ಲ, ಏನಾದರೂ ಬರೆದುಕೊಳ್ಳಿ’

ಕೆಳಸೇತುವೆ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ, ಇದಕ್ಕೆ ತಗುಲುತ್ತಿರುವ ವೆಚ್ಚ ಎಷ್ಟು ಎಂಬ ಬಗ್ಗೆ ಈ ವಲಯದ ಎಂಜಿನಿಯರ್‌ ಒಬ್ಬರನ್ನು ಪ್ರಶ್ನಿಸಿದರೆ, ‘ಯಾವ ಕಾಮಗಾರಿಯ ಬಗ್ಗೆಯೂ ಮಾಧ್ಯಮದವರ ಜೊತೆ ಮಾತನಾಡಬಾರದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಾನು ಮಾಹಿತಿ ನೀಡುವುದಿಲ್ಲ. ನೀವು ಏನಾದರೂ ಬರೆದುಕೊಳ್ಳಿ’ ಎಂದು ಉತ್ತರಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅನಿಲ್‌ಕುಮಾರ್ ಅವರಿಗೆ ಕರೆ ಮಾಡಿದರೂ, ಅವರು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT