ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಮಧ್ಯಾಹ್ನದೊಳಗೆ 43 ಗುಂಡಿಗಳ ಭರ್ತಿಗೆ ಹೈಕೋರ್ಟ್ ಖಡಕ್ ಆದೇಶ

Last Updated 23 ಅಕ್ಟೋಬರ್ 2018, 7:08 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರಿನ ರಸ್ತೆ ಗುಂಡಿಗಳನ್ನು ಭರ್ತಿ ಮಾಡುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳಿಗೆ ಒಂಚೂರೂ ಕಾಳಜಿಯಿಲ್ಲ, ಅವರ ತಲೆಯಲ್ಲಿ ಸ್ಪಷ್ಟ ಕಾರ್ಯ ಯೋಜನೆಗಳೇ ಇಲ್ಲ" ಎಂದು ಹೈಕೋರ್ಟ್ ಕಿಡಿ ಕಾರಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳ ಭರ್ತಿ ಕುರಿತಂತೆ ಕೋರಮಂಗಲದ ವಿಜಯನ್ ಮೆನನ್ ಹಾಗೂ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಎಸ್.ಆರ್.ಅನೂರಾಧ, "ಈ ಹಿಂದಿನ ವಿಚಾರಣೆ ವೇಳೆ ಕೋರ್ಟ್ ಗಮನಕ್ಕೆ ತರಲಾಗಿದ್ದ 43 ಗುಂಡಿಗಳ ಭರ್ತಿ ಇನ್ನೂ ಆಗಿಲ್ಲ" ಎಂದು ನ್ಯಾಯಪೀಠದ ಗಮನ ಸೆಳೆದರು.

ಇದಕ್ಕೆ ಗರಂ ಆದ ದಿನೇಶ್ ಮಾಹೇಶ್ವರಿ, "ಬಿಬಿಎಂಪಿ ಅಧಿಕಾರಿಗಳಿಗೆ ನಾಚಿಕೆ ಆಗಬೇಕು. ಸಾರ್ವಜನಿಕ ಕೆಲಸಗಳನ್ನು ಮಾಡಿ ಮುಗಿಸುವ ಸ್ಪಷ್ಟತೆ, ನಿಖರತೆ ಅವರಿಗೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಇಂದೇ ಮಧ್ಯಾಹ್ನ 1:30ರ ಒಳಗೆ ಅರ್ಜಿದಾರರು ಹೇಳಿರುವ ಗುಂಡಿಗಳನ್ನು ಭರ್ತಿ ಮಾಡಿ ಕೋರ್ಟ್‌ಗೆ ವರದಿ ಒಪ್ಪಿಸಬೇಕು" ಎಂದು ಬಿಬಿಎಂಪಿ ಪರ ವಕೀಲ ವಿ‌.ಶ್ರೀನಿಧಿ ಅವರಿಗೆ ಖಡಕ್ ತಾಕೀತು ಮಾಡಿದರು.

ಇದೇ ವೇಳೆ ಅನೂರಾಧ ಅವರು, "ಗುಂಡಿ ಭರ್ತಿಗಳ ದೂರು ಸ್ವೀಕರಿಸಲು ರೂಪಿಸಲಾಗಿರುವ ಆ್ಯಪ್ ಹೇಗೆ ಕಾರ್ಯ ನಿರ್ವಹಿಸುತ್ತಿದೆ, ಆ್ಯಪ್ ಮುಖಾಂತರ ದಾಖಲಾದ ದೂರುಗಳ ಪರಿಶೀಲನೆಗೆ ಏನು ಮಾಡಲಾಗುತ್ತಿದೆ, ಎಷ್ಟು ಪ್ರಕರಣ ಬಗೆಹರಿಸಲಾಗಿದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಅರಿವಿಲ್ಲ" ಎಂದು ಆಕ್ಷೇಪಿಸಿದರು.

ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು, "ಒಂದೊಂದು ಗುಂಡಿಯನ್ನೂ ಮುಚ್ಚಿದ್ದೀರಾ ಎಂದು ಕೋರ್ಟೇಕೇಳಬೇಕೇ, ನಿಮ್ಮ ಅಧಿಕಾರಿಗಳಿಗೆ ಇನಿತೂ ಗಂಭೀರತೆ ಇಲ್ಲ. ಬರಿ ಕಾಲಹರಣ ಮಾಡುತ್ತಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಇನ್ನು ಮುಂದೆ ಪ್ರತಿ ಶನಿವಾರ ವಿಶೇಷ ಕಲಾಪದ ಮೂಲಕ ನಡೆಸಲಾಗುವುದು. ನೀವು ಮೈ ಕೊಡವಿಕೊಂಡು ಕೆಲಸ ಮಾಡಬೇಕು‌" ಎಂದು ಬಿಬಿಎಂಪಿಗೆ ಎಚ್ಚರಿಸಿದರು.

ಬೆಂಗಳೂರು ಜಲಮಂಡಳಿ ಪರ ಹಾಜರಿದ್ದ ಹಿರಿಯ ವಕೀಲ ಡಿ.ಎಲ್‌.ಎನ್.ರಾವ್ ಅವರು, "ಅರ್ಜಿದಾರರು ದೂರುತ್ತಿರುವ 43ರಸ್ತೆಗಳ ಗುಂಡಿ ಭರ್ತಿಗೆ ಜಲಮಂಡಳಿ ಅಲ್ಲಲ್ಲಿ ರಸ್ತೆ ಅಗೆದಿರುವುದೇ ಕಾರಣ ಎಂದು ಬಿಬಿಎಂಪಿ ಹೇಳಿರುವುದು ನಿಜ‌. ಆದರೆ, ನಾವು ರಸ್ತೆ ಮಧ್ಯದ ಗುಂಡಿಗಳಿಗೆ ಜವಾಬ್ದಾರರಲ್ಲ. ಏನಿದ್ದರೂ ರಸ್ತೆಗಳ ಇಕ್ಕೆಲದಲ್ಲಿ ಮಾತ್ರ ಗುಂಡಿ ತೋಡುತ್ತೇವೆ‌. ಸಾಮಾನ್ಯವಾಗಿ ರಸ್ತೆಯ ಒಂದು ಬದಿ ಕುಡಿಯುವ ನೀರಿನ ಹಾಗೂ ಮತ್ತೊಂದು ಬದಿ ಚರಂಡಿ ಪೈಪ್ ಲೈನ್ ಇರುತ್ತವೆ. ದಶಕಗಳಷ್ಟು ಹಳೆಯದಾದ ಚರಂಡಿ ಪೈಪ್ ಲೈನ್ಗಳನ್ನು ಬದಲಾಯಿಸಲಾಗುತ್ತಿದೆ" ಎಂದು ವಿವರಿಸಿದರು.

ಇದಕ್ಕೆ ನ್ಯಾಯಪೀಠ, "ಗುಂಡಿಗಳಿಗೆ ಬಿಬಿಎಂಪಿಯಷ್ಟೇ ಜಲಮಂಡಳಿಯೂ ಹೊಣೆಗಾರ" ಎಂದು ಹೇಳಿತು.

ಹಿರಿಯ ವಕೀಲ ಆದಿತ್ಯ ಸೋಂಧಿ ಹಾಜರಾಗಿ, "ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಮತ್ತು ಬೆಳವಣಿಗೆ ಕುರಿತ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಸಮನ್ವಯ ಸಮಿತಿಯ ಸಭೆ ಇಂದು (ಅ.23) ನಡೆಯಲಿದೆ" ಎಂದು ತಿಳಿಸಿದರು.

ವಿಚಾರಣೆಯನ್ನು ಇಂದು ಮಧ್ಯಾಹ್ನ 1:30ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT