ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಮಯ ರಸ್ತೆ; ಸಂಚಾರ ಕಷ್ಟ!

ದತ್ತಾತ್ರೇಯ ವಾರ್ಡ್‌ನಲ್ಲಿ ಹದಗೆಟ್ಟ ರಸ್ತೆಗಳು, ಜಲಮಂಡಳಿ–ಪಾಲಿಕೆ ವಿರುದ್ಧ ಆಕ್ರೋಶ
Last Updated 6 ಅಕ್ಟೋಬರ್ 2019, 20:09 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದ ಪೈಪ್‌ಲೈನ್‌ ರಸ್ತೆಯಲ್ಲಿ ಸಾಲು ಸಾಲು ಗುಂಡಿಗಳು ವಾಹನ ಸವಾರರನ್ನು ಸ್ವಾಗತಿಸುತ್ತವೆ. ಒಂದೊಂದು ರಸ್ತೆಯನ್ನೂ ಇಲ್ಲಿ ಮೂರು ಬಾರಿ ಅಗೆಯಲಾಗಿದೆ. ಆದರೆ, ದುರಸ್ತಿ ಕಾರ್ಯ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ದೂಳಿನ ಸಮಸ್ಯೆ ಹೆಚ್ಚಾಗಿ ಜನ ಉಸಿರಾಟದ ತೊಂದರೆಯಿಂದ ಬಳ ಲುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ಜಲಮಂಡಳಿಯ ಒಳಚರಂಡಿ ಪೈಪ್‌ಲೈನ್‌–ನೀರಿನ ಪೈಪ್‌ಲೈನ್‌ ಹಾಗೂ ಬೆಸ್ಕಾಂನ ಕೇಬಲ್‌ ಅಳವಡಿಸಲು ರಸ್ತೆಯನ್ನು ಅಗೆಯಲಾಗಿದೆ. ಏಳು ತಿಂಗಳುಗಳಿಂದ ರಸ್ತೆಗಳು ಇದೇ ದುಸ್ಥಿತಿ ಯಲ್ಲಿದ್ದರೂ, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ಮಲ್ಲೇಶ್ವರದ ದತ್ತಾತ್ರೇಯ ವಾರ್ಡ್‌ನಲ್ಲಿರುವ ಈ ರಸ್ತೆಗಳು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರತಿನಿಧಿಸುವ ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

‘ವಿನಾಯಕ ವೃತ್ತದಿಂದ ಗುಟ್ಟಹಳ್ಳಿ ರಸ್ತೆಯವರೆಗೆ ಗುಂಡಿ ಅಗೆಯಲಾಗಿದ್ದು, ನಂತರ ದುರಸ್ತಿಯನ್ನೂ ಮಾಡಲಾಗಿದೆ. ಆದರೆ, ದುರಸ್ತಿ ಕಾರ್ಯ ಸಮರ್ಪಕವಾಗಿ ಆಗಿಲ್ಲ. ಅಲ್ಲಲ್ಲಿ ಗುಂಡಿಗಳು ಹಾಗೆಯೇ ಇವೆ. ರಸ್ತೆ ಬದಿಯಲ್ಲಿ ಜಲ್ಲಿಕಲ್ಲುಗಳನ್ನು ಹಾಕಿ ಬಿಡಲಾಗಿದೆ. ಅವು ರಸ್ತೆಯ ಮೇಲೆ ಹರಡಿಕೊಂಡಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ’ ಎಂದು ವಾಹನ ಸವಾರ ಎಂ.ಎಸ್. ವೆಂಕಟೇಶ್‌ ಹೇಳಿದರು.

‘ದತ್ತಾತ್ರೇಯ ದೇವಸ್ಥಾನದ ಅಕ್ಕ–ಪಕ್ಕ ರಸ್ತೆಗಳು ಹದಗೆಟ್ಟಿವೆ. ವಿವಿಧ ಕಾಮ ಗಾರಿಗಾಗಿ ರಸ್ತೆ ಅಗೆಯಲಾಗಿದೆ. ಮಳೆ ಬಂದರೆ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಬಿಸಿಲಿನಲ್ಲಿ ದೂಳು ಉಂಟಾಗುತ್ತಿದೆ. ಮಕ್ಕಳನ್ನು ಸ್ಕೂಟರ್‌ ನಲ್ಲಿ ಕರೆದುಕೊಂಡು ಹೋಗುವುದಕ್ಕೆ ಭಯವಾಗುತ್ತದೆ’ ಎಂದು ದತ್ತಾತ್ರೇಯ ದೇವಸ್ಥಾನ ವಾರ್ಡ್‌ನ ಪಂಕಜಾ ಅಳಲು ತೋಡಿ ಕೊಂಡರು.

‘ಹದಗೆಟ್ಟ ರಸ್ತೆಯ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ಅಗೆದಿರು ವುದರಿಂದ ಆರು ತಿಂಗಳಿನಿಂದ ವ್ಯಾಪಾರವೇ ಆಗುತ್ತಿಲ್ಲ. ಸಿಹಿ ತಿಂಡಿಯ ಮೇಲೆ ದೂಳು ಬೀಳುತ್ತಿರುವುದರಿಂದ ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ’ ಎಂದು ಇಲ್ಲಿನ ಬೇಕರಿಯೊಂದರ ಮಾಲೀಕ ಚಂದ್ರಶೇಖರ್‌ ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು, ಶಾಸಕ ದಿನೇಶ್‌ ಗುಂಡೂರಾವ್‌ ಅವ ರನ್ನು ಸಂಪರ್ಕಿಸಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

‘ಕಾಮಗಾರಿ ಮುಗಿದ ಬಳಿಕ ರಸ್ತೆ ದುರಸ್ತಿ’
‘ನಮ್ಮ ವಾರ್ಡ್‌ನಲ್ಲಿ ಜಲಮಂಡಳಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಬೆಸ್ಕಾಂನವರೂ ಕೇಬಲ್‌ ಹಾಕಿದ್ದಾರೆ. ಈಗ ಆಪ್ಟಿಕಲ್‌ ಫೈಬರ್ ಕೇಬಲ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಎಲ್ಲ ಕಾಮಗಾರಿ ಮುಗಿದ ನಂತರ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದು ದತ್ತಾತ್ರೇಯ ದೇವಸ್ಥಾನ ವಾರ್ಡ್‌ನ ಪಾಲಿಕೆ ಸದಸ್ಯ ಆರ್‌.ಎಸ್‌. ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೇಳು ತಿಂಗಳಿನಿಂದ ಕಾಮಗಾರಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿರುವುದು ನನ್ನ ಗಮನಕ್ಕೂ ಬಂದಿದೆ. ಜಲಮಂಡಳಿಯವರು ದುರಸ್ತಿ ಕಾರ್ಯ ಕೈಗೊಳ್ಳಲು ಸಿದ್ಧವಿದ್ದಾರೆ. ಮಳೆ ಬಂದರೆ ಮತ್ತೆ ರಸ್ತೆಗಳು ಹಾಳಾಗುತ್ತವೆ. ಆದರೆ, ಕಾಮಗಾರಿ ಪೂರ್ಣಗೊಂಡ ರಸ್ತೆಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ’ ಎಂದು ಅವರು ವಿವರಿಸಿದರು.

‘ಒಮ್ಮೆ ಕಾಂಕ್ರೀಟ್‌ ಹಾಕಿದ ನಂತರ, ಆರು ತಿಂಗಳವರೆಗೆ ಆ ರಸ್ತೆಯನ್ನು ಅಗೆಯಲು ಬಿಡಬಾರದು ಎಂಬ ನಿಯಮ ರೂಪಿಸಲಾಗಿದೆ. ಎಲ್ಲ ವಿಭಾಗಗಳ ನಡುವೆ ಪರಸ್ಪರ ಸಮನ್ವಯ ತಂದು, ಮುಂದಿನ ವಾರದಿಂದ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದು ಸತ್ಯನಾರಾಯಣ ಭರವಸೆ ನೀಡಿದರು.

*
ನನಗೀಗ 75 ವರ್ಷ. ಈ ರಸ್ತೆಯಲ್ಲಿ ಓಡಾಡಲು ತೊಂದರೆಯಾಗುತ್ತಿದೆ. ರಸ್ತೆಯಿಂದ ಉಂಟಾಗುತ್ತಿರುವ ದೂಳಿನಿಂದ ನಾನು ಆಸ್ತಮಾದಿಂದ ಬಳಲುವಂತಾಗಿದೆ.
-ಗಿರಿಧರ್‌, ದತ್ತಾತ್ರೇಯ ವಾರ್ಡ್‌ ನಿವಾಸಿ

*
ಒಂದು ಕಾಮಗಾರಿ ಮುಗಿದ ನಂತರ ಮತ್ತೊಂದು ಕಾಮಗಾರಿ ನಡೆಸಲಿ. ಇಲ್ಲಿ ಎಲ್ಲ ರಸ್ತೆಯಲ್ಲಿ ಏಕಕಾಲದಲ್ಲಿ ಕಾಮಗಾರಿ ನಡೆಯುತ್ತಿದೆ. ಸಂಚಾರ ದಟ್ಟಣೆಯೇ ತಲೆನೋವಾಗಿದೆ.
-ಕೃಷ್ಣಯ್ಯ, ವೈಯಾಲಿಕಾವಲ್‌ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT