ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಗುಂಡಿ: ಪ್ರತಿ ಚದರ ಮೀಟರ್‌ ಗುಂಡಿ ಮುಚ್ಚಲು ₹ 551

ಕಾಮಗಾರಿ ಒಪ್ಪಂದ ವಿವರ ಸಲ್ಲಿಕೆ
Last Updated 6 ಜೂನ್ 2022, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಮಳೆಗಾಲ ಆರಂಭವಾಗಿದ್ದು, ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗಿ. ಸಮಸ್ಯೆಗಳನ್ನು ಹೊತ್ತು ಮತ್ತೆ ಮತ್ತೆ ಕೋರ್ಟ್‌ಗೆ ಬರಬೇಡಿ’ ಎಂದು ಅಮೆರಿಕನ್ ರೋಡ್ ಟೆಕ್ನಾಲಜೀಸ್ ಸಂಸ್ಥೆ (ಎಆರ್‌ಟಿಸಿ) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ತಾಕೀತು ಮಾಡಿರುವ ಹೈಕೋರ್ಟ್‌, ರಸ್ತೆ ಗುಂಡಿ ಮುಚ್ಚಿದ ಕಾರ್ಯಪ್ರಗತಿ ವರದಿಯನ್ನು ಹತ್ತು ದಿನಗಳಲ್ಲಿ ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿದೆ.

'ನಗರ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಕೋರಿ ವಿಜಯನ್ ಮೆನನ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಎಆರ್‌ಟಿಸಿ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ, ‘ಪೈಥಾನ್ ಯಂತ್ರದಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಚದರ ಮೀಟರ್‌ಗೆ ₹ 551 ದರ ನಮೂದಿಸಲಾಗಿದೆ‘ ಎಂದು ಪ್ರಮಾಣ ಪತ್ರ ಸಲ್ಲಿಸಿದರು.ಇದಕ್ಕೆ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ, ‘ಎಆರ್‌ಟಿಸಿ ನಮೂದಿಸಿರುವ ದರಕ್ಕೆ ಕಾಮಗಾರಿ ನೀಡಲು ಮುಖ್ಯ ಆಯುಕ್ತರು ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು.

ವರದಿ ಸಲ್ಲಿಕೆ:ಚೀಫ್ ಎಂಜಿನಿಯರ್ ಪ್ರಹ್ಲಾದ್ ಅವರು ಕಂಪನಿಯ ನಿರ್ದೇಶಕರ ಮೇಲೆ ದೈಹಿಕ ಹಲ್ಲೆ ನಡೆಸಿದ ಬಗ್ಗೆ ಮುಖ್ಯ ಆಯುಕ್ತರಿಗೆ ದೂರು ನೀಡಿರುವ ಮಾಹಿತಿಯನ್ನು ಜಯ್ನಾ ಕೊಠಾರಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ‍ಪರಿಶೀಲಿಸಿದ ನ್ಯಾಯಪೀಠ,‘ಎಆರ್‌ಟಿಸಿ ನಡೆಸುವ ಕಾಮಗಾರಿಯ ಮೇಲುಸ್ತುವಾರಿಯನ್ನು ಪ್ರಹ್ಲಾದ್ ಮಾಡುವಂತಿಲ್ಲ. ಬೇರೊಬ್ಬ ಮುಖ್ಯ ಎಂಜಿನಿಯರ್‌ಗೆ ಈ ಜವಾಬ್ದಾರಿ ವಹಿಸಬೇಕು‘ ಎಂದು ನಿರ್ದೇಶಿಸಿತು.

ಇದಕ್ಕೆ ಸ್ಪಷ್ಟನೆ ನೀಡಿದ ಶ್ರೀನಿಧಿ, ‘ಈಗಾಗಲೇ ಪ್ರಹ್ಲಾದ್ ಅವರನ್ನು ಬದಲಾಯಿಸಿ ಬೇರೊಬ್ಬ ಮುಖ್ಯ ಎಂಜಿನಿಯರ್ ನಿಯೋಜಿಸಲಾಗಿದೆ. ಪ್ರಹ್ಲಾದ್ ವಿರುದ್ಧದ ದೂರಿನ ಬಗ್ಗೆ ಹಿರಿಯ ಐಎಎಸ್ ಅಧಿಕಾರಿಯಿಂದ ತನಿಖೆಗೆ ಆದೇಶಿಸಲಾಗಿದೆ’ ಎಂದು ತಿಳಿಸಿದರು.ವಿಚಾರಣೆಯನ್ನು ಇದೇ 22 ಕ್ಕೆ ಮುಂದೂಡಲಾಗಿದೆ.

2020 ಗುಂಡಿ ಇನ್ನೂ ಬಾಕಿ
ಜೂನ್ 6ರೊಳಗೆ ನಗರದ ರಸ್ತೆಗಳೆಲ್ಲವೂ ಗುಂಡಿ ಮುಕ್ತ ಆಗಲಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನೀಡಿದ್ದ ಭರವಸೆ ಹುಸಿಗೊಂಡಿದೆ.

ನಗರದಲ್ಲಿ 10,608 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದ್ದು, ಒಂದು ವಾರದಲ್ಲಿ ಅವುಗಳನ್ನು ಮುಚ್ಚಲಾಗುವುದು ಎಂದು ಕಳೆದ ವಾರ ಅವರು ಭರವಸೆ ನೀಡಿದ್ದರು. ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಇನ್ನೂ 2020 ಗುಂಡಿಗಳು ಮುಚ್ಚಲು ಬಾಕಿ ಉಳಿದುಕೊಂಡಿವೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಾ.ಹರೀಶ್‌ಕುಮಾರ್, ‘ಗುಂಡಿ ಮುಚ್ಚುವ ಕೆಲಸವನ್ನು ರಾತ್ರಿ ವೇಳೆ ನಡೆಸಲಾಗುತ್ತಿದೆ. ಪ್ರತಿದಿನ ರಾತ್ರಿ ಮಳೆ ಸುರಿಯುತ್ತಿರುವುದರಿಂದ ಕೆಲಸಕ್ಕೆ ಅಡ್ಡಿಯಾಗಿದೆ. ಬುಧವಾರದ ವೇಳೆಗೆ ಬಾಕಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT