ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ‘ಐಸಿಟಿ ಲ್ಯಾಬ್‌’ ಶಕ್ತಿ

ಸ್ಮಾರ್ಟ್‌ ಯೋಜನೆಯಲ್ಲಿ ‘ಬಿಬಿಎಂಪಿ ಶಿಕ್ಷಣ’ಕ್ಕೆ ಶೇ 2ರಷ್ಟು ವೆಚ್ಚ; ಎರಡು ಕಟ್ಟಡ ನಿರ್ಮಾಣದ ಗುರಿ
Last Updated 25 ಆಗಸ್ಟ್ 2022, 22:50 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಮಾರ್ಟ್‌ ಸಿಟಿ’ ಯೋಜನೆಯಲ್ಲಿ ಬಿಬಿಎಂಪಿಯ ಶಾಲೆಗಳೂ ಹೈಟೆಕ್‌ ಸೌಲಭ್ಯ ಪಡೆದುಕೊಳ್ಳುವಲ್ಲಿ ಯಶ ಸಾಧಿಸಿವೆ. ಕಂಪ್ಯೂಟರ್‌ ಪ್ರಯೋಗಾಲಯದ ಸಮಸ್ಯೆ ಏಳು ಶಾಲೆಗಳಲ್ಲಿ ನೀಗಿದೆ. ‘ಸ್ಮಾರ್ಟ್‌ ಸಿಟಿ’ ಯೋಜನೆಯಲ್ಲಿ ಹಲವು ಕ್ಷೇತ್ರಗಳಿಗೆ ಹಣ ವಿನಿಯೋಗಿಸಲಾಗುತ್ತಿದ್ದು, ಶಿಕ್ಷಣ ಕ್ಷೇತ್ರದ ಸೌಲಭ್ಯಗಳಿಗಾಗಿ ಸುಮಾರು ₹20 ಕೋಟಿಯನ್ನು ಮಾತ್ರ ವೆಚ್ಚಮಾಡಲಾಗುತ್ತಿದೆ.

ಬಿಬಿಎಂಪಿಯ 65 ಶಾಲೆಗಳಲ್ಲಿ ‘ಸ್ಮಾರ್ಟ್‌ ಡಿಜಿಟಲ್‌ ಕ್ಲಾಸ್‌ ರೂಂ’ ಸ್ಥಾಪಿಸಲಾಗಿದೆ. ಈ ಮೂಲಕ ಅನಿಮೇಷನ್‌ ಸಾಫ್ಟ್‌ವೇರ್‌ ಹಾಗೂ ಕ್ರೋಮ್‌ ನೋಟ್‌ಬುಕ್‌ಗಳೊಂದಿಗೆ ಇಂಟಿಗ್ರೇಟೆಡ್‌ ಕಂಪ್ಯೂಟರ್‌ ಪ್ರೊಜೆಕ್ಟರ್‌ಗಳನ್ನು ಒದಗಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಇರುವುದರಿಂದ ಸುಮಾರು 15 ಸಾವಿರ ವಿದ್ಯಾರ್ಥಿಗಳು ಉನ್ನತ ವಿಷಯಗಳನ್ನು ಅರಿಯಲು ‘ಇಂಟರ‍್ಯಾಕ್ಟಿವ್‌ ಲರ್ನಿಂಗ್‌‘ ಸೌಲಭ್ಯ ಪಡೆದಿದ್ದಾರೆ.

ಇದರ ಜೊತೆಯಲ್ಲಿ ಏಳು ಶಾಲೆಗಳಲ್ಲಿ ಇನ್‌ಫರ್ಮೇಷನ್ ಆ್ಯಂಡ್‌ ಕಮ್ಯುನಿಕೇಷನ್ ಟೆಕ್ನಾಲಜಿ (ಐಸಿಟಿ) ಲ್ಯಾಬ್‌ಗಳನ್ನು ಅಳವಡಿಸಲಾಗಿದೆ. ಈ ಐಸಿಟಿ ಲ್ಯಾಬ್‌ನಲ್ಲಿ ಪ್ರೊಜೆಕ್ಟರ್‌, ಆಪ್ಟಿಕಲ್‌ ಸಿಸ್ಟಮ್ಸ್‌ನೊಂದಿಗೆ ಬೋರ್ಡ್‌ ಅನ್ನು ಟಚ್‌ ಪ್ಯಾನೆಲ್‌ ಆಗಿ ಮಾರ್ಪಡಿಸಲಾಗಿದೆ. ಈ ಲ್ಯಾಬ್‌ನಲ್ಲಿ 20 ಲ್ಯಾಪ್‌ಟಾಪ್‌ಗಳೂ ಇದ್ದು, ಆ ಮೂಲಕ ಎಲ್ಲ ರೀತಿಯ ಹೈಟೆಕ್‌ ವ್ಯವಸ್ಥೆಯನ್ನು ಬಿಬಿಎಂಪಿ ಶಾಲೆಗಳ ಮಕ್ಕಳಿಗೆ ಒದಗಿಸಲಾಗಿದೆ.

ಕಟ್ಟಡ ಪೂರ್ಣವಾಗಿಲ್ಲ: ಪಾದರಾಯನಪುರ ಹಾಗೂ ಪುಲಕೇಶಿನಗರದಲ್ಲಿ ಬಿಬಿಎಂಪಿ
ಶಾಲೆಗಳಿಗೆ ಹೊಸ ಹೈಟೆಕ್‌ ಕಟ್ಟಡವನ್ನು ಸುಮಾರು ₹ 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಕಟ್ಟಡಗಳು ಇನ್ನೂ ನಿರ್ಮಾಣ ಹಂತದಲ್ಲೇ ಇದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಬಳಕೆಗೆ
ಮುಕ್ತವಾಗುವ ನಿರೀಕ್ಷೆ ಇದೆ.

ಅಂಗನವಾಡಿಯಲ್ಲಿ ಚಿಲಿಪಿಲಿ: ನಗರದಲ್ಲಿರುವ 220 ಅಂಗನವಾಡಿಗಳಲ್ಲೂ ಸ್ಮಾರ್ಟ್‌ ಡಿಜಿಟಲ್‌ ರೂಂಗಳನ್ನು ಸ್ಥಾಪಿಸುವ ಯೋಜನೆ ಇದು. ಟಚ್‌ ಪ್ಯಾನೆಲ್‌ ಮೂಲಕ ಚಿಲಿಪಿಲಿ ಸಾಫ್ಟ್‌ವೇರ್‌ ಒದಗಿಸಲಾಗಿದ್ದು, 3ರಿಂದ 6 ವರ್ಷದೊಳಗಿನ ಸುಮಾರು 9 ಸಾವಿರ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸುವ ಯೋಜನೆ ಇದು.‌ ಈ ಯೋಜನೆ ಇನ್ನೂ ಅನುಷ್ಠಾನ ಹಂತದಲ್ಲಿದೆ.

ಸಂಚಾರ ಪೊಲೀಸರಿಗೆ ‘ಕ್ಯಾಮೆರಾ ಶಕ್ತಿ’

ನಗರದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ನಿಯಂತ್ರಿಸಲು ಸಂಚಾರ ಪೊಲೀಸರಿಗೆ ‘ಸ್ಮಾರ್ಟ್‌ ಸಿಟಿ’ ಯೋಜನೆಯಲ್ಲಿ ‘ಕ್ಯಾಮೆರಾ ಶಕ್ತಿ’ ನೀಡಲಾಗಿದೆ. ‘ಸ್ಮಾರ್ಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌’ನಲ್ಲಿ ಹಲವು ಬಗೆಯ ಉಪಕರಣಗಳನ್ನು ಒದಗಿಸಲಾಗಿದೆ. ಜಂಕ್ಷನ್‌, ಸಿಗ್ನಲ್‌ ಹಾಗೂ ರಸ್ತೆಗಳಲ್ಲಿ ಕ್ಯಾಮೆರಾ ಅಳವಡಿಸುವ ಜೊತೆಗೆ ಪೊಲೀಸರು ಧರಿಸಿಕೊಳ್ಳುವ ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಈ ಮೂಲಕ ನಿಯಮಗಳನ್ನು ಉಲ್ಲಂಘಿಸುವವರಿಗೆ ದಾಖಲೆಯನ್ನೂ ಒದಗಿಸಲಾಗುತ್ತಿದೆ.

ಸ್ವಯಂಚಾಲಿತವಾಗಿ ವಾಹನಗಳ ಸಂಖ್ಯಾಫಲಕದ ಚಿತ್ರಗಳನ್ನು ಸೆರೆಹಿಡಿಯುವ ಕ್ಯಾಮೆರಾಗಳನ್ನು ನಗರದ 20 ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದೆ. ಇವುಗಳೆಲ್ಲವೂ ‘ಇಂಟಿಗ್ರೇಟೆಡ್‌ ಕಮ್ಯಾಂಡ್‌ ಕಂಟ್ರೋಲ್‌ ಸೆಂಟರ್‌’ನೊಂದಿಗೆ ಸಂಪರ್ಕ ಸಾಧಿಸಲಿವೆ. ಇದರಿಂದ ಅಪಘಾತದ ಸಂದರ್ಭದಲ್ಲೂ ತುರ್ತು ಚಿಕಿತ್ಸೆಯನ್ನು ವೇಗವಾಗಿ ಒದಗಿಸುವ ಗುರಿ ಹೊಂದಲಾಗಿದೆ.

ಡೇ ಕೇರ್‌

‘ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಕ್ಕಳ ಡೇಕೇರ್‌ ಸೆಂಟರ್‌ ಅನ್ನೂ ‘ಸ್ಮಾರ್ಟ್‌ ಸಿಟಿ’ ಒದಗಿಸಿದೆ. ಮಹಿಳೆಯರು ಮಕ್ಕಳನ್ನು ಇಲ್ಲಿ ಬಿಟ್ಟು ಕೆಲಸಕ್ಕೆ ಹೋಗಬಹುದು. ಮೂಲಸೌಲಭ್ಯ ಸೇರಿ ಮಕ್ಕಳಸ್ನೇಹಿ ಪೀಠೋಪಕರಣ, ಆಟಿಕೆ ಹಾಗೂ ವಿಶ್ರಾಂತಿ ಪ್ರದೇಶವನ್ನು ಒಳಗೊಂಡಿದೆ‌. ಶುಚಿತ್ವ ಹಾಗೂ ಸುರಕ್ಷತೆಯ ಎಲ್ಲ ಸೌಲಭ್ಯಗಳನ್ನು
ಈ ಡೇ ಕೇರ್‌ ಒಳಗೊಂಡಿದೆ. ವಿಧಾನಸೌಧದ ಬಳಿ ಬಹುಮಹಡಿ ಕಟ್ಟಡದ ಆವರಣದಲ್ಲಿ ‘ಡೇ ಕೇರ್‌’ ಸ್ಥಾಪಿಸಲಾಗಿದೆ ಎಂದು ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ತಿಳಿಸಿದರು.
ಎಲ್ಲೆಲ್ಲಿ ಐಸಿಟಿ ಲ್ಯಾಬ್‌

ಬಿಬಿಎಂಪಿಯ ಸಂಯುಕ್ತ ಪಿಯು ಕಾಲೇಜ್‌, ಹೇರೋಹಳ್ಳಿ;ಪಿಯು ಕಾಲೇಜ್‌, ಕಸ್ತೂರಬಾ ನಗರ; ಪ್ರೌಢಶಾಲೆ, ಗಂಗಾನಗರ; ಪಿಯು ಕಾಲೇಜ್‌, ಕ್ಲೀವ್‌ಲ್ಯಾಂಡ್‌ ಟೌನ್‌, ಬಾಲಕಿಯರ ಪಿಯು ಕಾಲೇಜ್‌, ಡಿಸ್ಪೆನ್ಸರಿ ರಸ್ತೆ, ಮಹಿಳೆಯರ ಪದವಿ ಕಾಲೇಜ್‌, ಬೈರವೇಶ್ವರನಗರ, ಬಾಲಕಿಯರ ಪ್ರೌಢಶಾಲೆ, ಜೋಗುಪಾಳ್ಯ

ಪಾಲಿಕೆ ಶಾಲೆ

15,000 ಮಕ್ಕಳಿಗೆ ‘ಡಿಜಿಟಲ್‌’ ಸೌಲಭ್ಯ

65 ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌, ಇಂಟಿಗ್ರೇಟೆಡ್‌ ಕಂಪ್ಯೂಟರ್‌ ಪ್ರೊಜೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT