ಶನಿವಾರ, ಮಾರ್ಚ್ 25, 2023
30 °C
ಪ್ರಜಾವಾಣಿ-CUPA ಸಹಯೋಗ

ಪಟಾಕಿ ಸಿಡಿಸುವ ಮುನ್ನ ‘ಮೂಕ’ ವೇದನೆಗೂ ಕಿವಿಗೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ದೀ‍ಪಾವಳಿ ಹಬ್ಬವೆಂದರೆ ಮನೆ ಮನೆಗಳಲ್ಲೂ ಸಡಗರ ಸಂಭ್ರಮ. ಈ ಬೆಳಕಿನ ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿ ಸದ್ದು ಜನರಿಗೆ ಖುಷಿ ನೀಡಬಹುದು. ಆದರೆ, ಇದು ಮೂಕ ಜೀವಿಗಳ ನೆಮ್ಮದಿಯನ್ನೇ ಕಸಿದುಕೊಳ್ಳಲಿದೆ. ಪಟಾಕಿ ಹಚ್ಚಿ ಸಡಗರ ಪಡುವ ಮುನ್ನ ಅದರ ಸದ್ದಿನಿಂದಾಗಿ ಮುದ್ದು ಜೀವಿಗಳು ಅನುಭವಿಸುವ ವೇದನೆಯ ಕಲ್ಪನೆ ನಮ್ಮಲ್ಲಿರಬೇಕು ಎನ್ನುತ್ತಾರೆ ಪ್ರಾಣಿ ಪ್ರಿಯರು.

‘ಪಟಾಕಿ ಸದ್ದಿಗೆ ಕೆಲ ನಾಯಿಗಳು ಎಷ್ಟರ ಮಟ್ಟಿಗೆ ಕಂಗಾಲಾಗುತ್ತವೆ ಎಂದರೆ, ಅವು ಯಾವುದಾದರೂ ಮೂಲೆಗೆ ಓಡಿ ಬಾಲ ಮುದುರಿ ಕುಳಿತು ಬಿಡುತ್ತದೆ. ಅಡಗಿ ಕುಳಿತ ಜಾಗದಿಂದ ನಾಲ್ಕೈದು ದಿನ ಆಚೆಗೇ ಬರುವುದಿಲ್ಲ. ಪಟಾಕಿ ಸದ್ದಿಗೆ ಬೆದರಿ ಮೋರಿಗಳಡಿ ಸೇರಿದ ಬೀದಿನಾಯಿಗಳು ಅನೇಕ ದಿನ ಅಲ್ಲಿಂದ ಕದಲದಿರುವ ಉದಾಹರಣೆಗಳೂ ಇವೆ. ಸಾಕು ನಾಯಿಗಳು ಕೂಡಾ ಕಪಾಟುಗಳ ಮೂಲೆಯಲ್ಲಿ, ಸೋಫಾದಡಿಯಲ್ಲಿ ಅಡಗಿಕೊಳ್ಳುವುದನ್ನು ನೋಡಬ ಹುದು. ಕೆಲವು ನಾಯಿಗಳು ಎಷ್ಟರಮಟ್ಟಿಗೆ ಬೆದರುತ್ತವೆ ಎಂದರೆ, ಅವು ಮತ್ತೆ ಹಿಂದೆ ತಾವಿದ್ದ ತಾಣಗಳಿಗೆ ಮರಳುವುದಕ್ಕೇ ಹಿಂಜರಿಯುತ್ತವೆ. ಇನ್ನು ಕೆಲವು ನಾಯಿಗಳಂತೂ ತೀರಾ ಕ್ರೂರ ವರ್ತನೆ ತೋರುತ್ತವೆ. ಕೆಲವು ನಾಯಿಗಳು ಪಟಾಕಿ ಸದ್ದಿಗೆ ಒಗ್ಗಿಕೊಳ್ಳುವುದೂ ಉಂಟು’ ಎನ್ನುತ್ತಾರೆ ಕ್ಯೂಪಾ ಸಂಸ್ಥೆಯ ಟ್ರಸ್ಟಿ ಶೀಲಾ ರಾವ್‌.

‘ನಾಯಿಗಳಿಗೆ ವಿಶೇಷ ಶ್ರವಣ ಶಕ್ತಿ ಇದೆ. ಸಣ್ಣ ಸದ್ದು ಕೂಡಾ ಅವುಗ ಳಿಗೆ ಸ್ಪಷ್ಟವಾಗಿ ಕೇಳಿಸುತ್ತದೆ. ಈ ಕಾರಣದಿಂದಾಗಿಯೇ ನಾಯಿಗಳು ರಾತ್ರಿಯೆಲ್ಲಾ ಬೊಗಳು ವುದನ್ನು ನೋಡಿರಬಹುದು. ಇಂತಹ ಸೂಕ್ಷ್ಮ ಶ್ರವಣ ಶಕ್ತಿ ಹೊಂದಿರುವ ನಾಯಿಗಳ ಮೇಲೆ ಪಟಾಕಿಯಿಂದ ಉಂಟಾಗುವ ಭಾರಿ ಸದ್ದು ಎಷ್ಟರಮಟ್ಟಿಗೆ ಪರಿಣಾಮ ಬೀರಬಲ್ಲುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದು ಅವರು ವಿವರಿಸಿದರು.

‘ದೀಪಾವಳಿ ಸಂದರ್ಭದಲ್ಲಿ ಹೆಚ್ಚು ಸದ್ದು ಮಾಡುವ ಪಟಾಕಿಗಳನ್ನು ಸಿಡಿಸದೇ ಇದ್ದರೆ ಒಳ್ಳೆಯದು. ದೀಪಾವಳಿ ಎಂದರೆ ಬೆಳಕಿನ ಹಬ್ಬ. ಭಾರಿ ಸದ್ದು ಮಾಡುವ ಪಟಾಕಿ ಬದಲು ಸದ್ದೇ ಮಾಡದ ನೆಲಚಕ್ರ, ಹೂಕುಂಡದಂತಹ ಪಟಾಕಿ ಬಳಸಬಹುದು. ಇದರಿಂದ ಮೂಕಜೀವಿಗಳಿಗೆ ಅಷ್ಟಾಗಿ ಹಾನಿ ಉಂಟಾಗದು. ಇಂತಹ ಪಟಾಕಿ ಸಿಡಿಸುವ ಮುನ್ನವೂ ಸುತ್ತ ಮುತ್ತ ಮೂಕಜೀವಿಗಳಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

‘ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ. ನಮ್ಮ ಸಡಗರವು ಇತರ ಜೀವಿಗಳ ಕಳವಳಕ್ಕೆ ಕಾರಣವಾಗದಿರಲಿ ಎಂಬುದಷ್ಟೇ ನಮ್ಮ ಕಳಕಳಿ. ಈ ಕೋರಿಕೆಯು ಯಾವುದೇ ಧರ್ಮದ ವಿರುದ್ಧವಲ್ಲ. ಯಾವುದೇ ಧರ್ಮವೂ ಮೂಕಜೀವಿಗಳಿಗೆ ನೋವುಂಟು ಮಾಡುವುದನ್ನು ಸಹಿಸದು’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ– ಕ್ಯೂಪಾ ಅಭಿಯಾನಕ್ಕೆ ಕೈಜೋಡಿಸಿ

ಬೀದಿ ಪ್ರಾಣಿಗಳನ್ನು ದ್ವೇಷಿಸುವ ಜನರ ದೃಷ್ಟಿಕೋನ ಬದಲಾಯಿಸುವ ಉದ್ದೇಶದಿಂದ ಹಾಗೂ ಬೀದಿ ನಾಯಿಗಳ ಬಗ್ಗೆ ಕಾಳಜಿ ವಹಿಸುವ ಜನರು ಮತ್ತು ಸಂಸ್ಥೆಗಳ ಜೊತೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ‘ಪ್ರಜಾವಾಣಿ’ಯು ಕ್ಯೂಪಾ ಸಂಸ್ಥೆ ಜೊತೆ ಸೇರಿ ಅಭಿಯಾನ ಆರಂಭಿಸಿದೆ.

ಮೂಕ ಪ್ರಾಣಿಗಳ ಬದುಕಿನಲ್ಲೂ ಭರವಸೆ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ತಾವೂ ಕೈಜೋಡಿಸಬಹುದು. ಸ್ವಯಂಸೇವಕರಾಗುವ ಮೂಲಕ ಬೀದಿ ಪ್ರಾಣಿಗಳ ರಕ್ಷಿಸಲು, ಆರೈಕೆ ಮಾಡಲು ಹಾಗೂ ಅವುಗಳ ಮೇಲಾಗುವ ದೌರ್ಜನ್ಯ ತಪ್ಪಿಸಲು ನೆರವಾಗಬಹುದು. ಬೀದಿಪಾಲಾದ ಪ್ರಾಣಿಗಳನ್ನು ದತ್ತು ಪಡೆದು ಸಾಕಬಹುದು. ಬೀದಿ ಪ್ರಾಣಿ ಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಬಯಸುವಿರಾದರೆ, ಇಲ್ಲಿರುವ ಕೊಂಡಿಯನ್ನು bit.ly/PVCUPA ಕ್ಲಿಕ್ಕಿಸಿ ನೋಂದಾಯಿಸಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು